ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆ ಮತಗಟ್ಟೆ ಅಧಿಕಾರಿಗಳಿಗೆ ಹಮ್ಮಿಕ್ಕೊಂಡಿರುವ ತರಬೇತಿಗೆ ಗೈರು ಹಾಜರಾದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಲೋಕಸಭಾ ಚುನಾವಣೆ ಹಿನ್ನೆಲೆ ಮತಗಟ್ಟೆ ಅಧಿಕಾರಿಗಳಾದ ಪ್ರಿಸೈಡಿಂಗ್ ಆಫೀಸರ್ ಹಾಗೂ ಅಸಿಸ್ಟಂಟ್ ಪ್ರಿಸೈಂಡಿಗ್ ಆಫೀಸರ್ ಗಳಿಗೆ ಇಂದು 2ನೇ ತರಬೇತಿ ನಡೆಯುತ್ತಿರುವ 3 ಸ್ಥಳಗಳಿಗೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಮತದಾನದ ದಿನ ಮತಗಟ್ಟೆಗಳ ಬಳಿ ನಡೆಯುವ ಎಲ್ಲಾ ಚಟುವಟಿಕೆಗಳ ಕುರಿತು ಮಾಸ್ಟರ್ ಟ್ರೈನರ್ ಗಳು ತರಬೇತಿಯಲ್ಲಿ ನೀಡುವ ಮಾಹಿತಿಯನ್ನು ಸರಿಯಾಗಿ ಅರಿತುಕೊಳ್ಳಬೇಕೆಂದು ತಿಳಿಸಿದರು.
ಮತದಾನದ ದಿನ ಯಾವುದೇ ಸಮಸ್ಯೆಯಾಗದಂತೆ ಎಲ್ಲಾ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡುವ ಸಮಯದಲ್ಲಿ ವಿವಿ ಪ್ಯಾಟ್, ಕಂಟ್ರೋಲ್ ಯುನಿಟ್ ಹಾಗೂ ಬ್ಯಾಲೆಟ್ ಯೂನಿಟ್ ಹೇಗೆ ಕಾರ್ಯನಿರ್ವಹಿಸಲಿದೆ, ಯಾವ ರೀತಿ ಕನೆಕ್ಷನ್ ನೀಡಬೇಕು ಎಂಬುದನ್ನು ಸರಿಯಾಗಿ ನೋಡಿಕೋಳ್ಳಬೇಕೆಂದು ಸೂಚನೆ ನೀಡಿದರು.
ಮತದಾನದ ಕುರಿತು ಹೆಚ್ಚು ಮಾಹಿತಿಗಾಗಿ ಮತಗಟ್ಟೆ ಕೈಪಿಡಿಯನ್ನು ನೀಡಲಾಗಿದೆ. ಮತಗಟ್ಟೆ ಅಧಿಕಾರಿಗಳ ಕೈಪಿಡಿಯು ಭಾರತ ಚುನಾವಣಾ ಅಯೋಗ ಹಾಗೂ ಕರ್ನಾಟಕ ಚುನಾವಣಾ ಆಯೋಗದ ವೆಬ್ ಸೈಟ್ ನಲ್ಲೂ ಲಭ್ಯವಿದ್ದು, ಅಲ್ಲಿಯೂ ಡೌನ್ಲೋಡ್ ಮಾಡಿಕೊಂಡು ವಿವರಗಳನ್ನು ಪಡೆದುಕೊಳ್ಳಬಹುದೆಂದು ತಿಳಿಸಿದರು.
ಗೈರು ಹಾಜರಾದವರಿಗೆ ಶಿಸ್ತು ಕ್ರಮ:
ಎಲ್ಲಾ ಮತಗಟ್ಟೆಯ ಪ್ರಿಸೈಡಿಂಗ್ ಆಫೀಸರ್ ಹಾಗೂ ಅಸಿಸ್ಟಂಟ್ ಪ್ರಿಸೈಂಡಿಗ್ ಆಫೀಸರ್ ಗಳು ತಪ್ಪದೆ ತರಬೇತಿಗೆ ಹಾಜರಾಗಬೇಕು. ಗೈರು ಹಾಜರಾದ ಅಧಿಕಾರಿ/ಸಿಬ್ಬಂದಿಗಳ ಮೇಲೆ ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಕಲಂ 134ರಂತೆ ಶಿಸ್ತು ಕ್ರಮ ಜರುಗಿಸಲು ಸಹಾಯಕ ಚುನಾವಣಾಧಿಕಾರಿಗಳಿಗೆ ಸೂಚಿಸಲಾಯಿತು.
ಊಟದ ವ್ಯವಸ್ಥೆ ಪರಿಶೀಲನೆ:
ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನಿಡುವ ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಊಟದ ವ್ಯವಸ್ಥೆಯನ್ನು ಪರಿಶೀಲಿಸಲಾಯಿತು. ಜೊತೆಗೆ ಮತಗಟ್ಟೆ ಅಧಿಕಾರಿಗಳು ಊಟ ಮಾಡುತ್ತಿದ್ದ ಸ್ಥಳಕ್ಕೆ ತೆರಳಿ ಊಟದ ಗುಣಮಟ್ಟದ ಕುರಿತು ಅಧಿಕಾರಿಗಳನ್ನು ವಿಚಾರಿಸಿದರು. ಸ್ಥಳದಲ್ಲಿದ್ದ ಅಧಿಕಾರಿಗಳು ಎಲ್ಲಾ ವ್ಯವಸ್ಥೆ ಸರಿಯಾಗಿರುವುದಾಗಿ ತಿಳಿಸಿದರು.
ಭೇಟಿ ನೀಡಿದ ತರಬೇತಿ ಸ್ಥಳಗಳ ವಿವರ:
1. ಹೋಮ್ ಸೈನ್ಸ್ ಕಾಲೇಜು, ಶೇಷಾದ್ರಿ ರಸ್ತೆ, ಗಾಂಧಿನಗರ.
2. ಸರ್ಕಾರಿ ಕಲಾ ಕಾಲೇಜು, ಅಂಬೇಡ್ಕರ್ ವೀಧಿ, ಶಿವಾಜಿನಗರ.
3. ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್, ವಿಟ್ಟಲ್ ಮಲ್ಯ ರಸ್ತೆ, ಶಾಂತಿನಗರ.
ಈ ವೇಳೆ ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಸೆಲ್ವಮಣಿ, ಸಹಾಯಕ ಚುನಾವಣಾಧಿಕಾರಿಗಳಾದ ಚಿದಾನಂದ ಎಸ್. ವಠಾರೆ, ಕಮಲಾ ಬಾಯಿ, ಮಮತಾ ಕುಮಾರಿ, ಮತದರಾರರ ನೋಂದಣಾಧಿಕಾರಿಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.