ನವದೆಹಲಿ: ರೈತರ ನೆಪದಲ್ಲಿ ನಾಲೆಗೆ ನೀರು ಹರಿಸುವ ನೆಪದಲ್ಲಿ ತಮಿಳುನಾಡಿಗೆ ನೀರು ಹರಿಸಿದ್ದಾರೆ. ಈಗ ಸರ್ವಪಕ್ಷ ಸಭೆ ಕರೆದರೆ ಹೋಗಿ ಏನು ಮಾಡೋದು? ಸಭೆಯಲ್ಲಿ ಕೊಡುವ ಗೊಡಂಬಿ, ಬಾದಾಮಿ ತಿನ್ನಲಿಕ್ಕೆ ಹೋಗಬೇಕಿತ್ತಾ? ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಕಾವೇರಿ ಸರ್ವಪಕ್ಷ ಸಭೆಗೆ ಗೈರಾದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು; CWRC ಶಿಫಾರಸು ಹಿನ್ನಲೆ ಸರ್ವಪಕ್ಷ ಸಭೆ ಕರೆದಿದ್ದರು. ಯಾವ ವಿಚಾರ ಚರ್ಚಿಸಲು ಕರೆದಿದ್ದರು ಈ ಸಭೆಯನ್ನು? ಚರ್ಚೆಗೂ ಮುನ್ನವೇ ತಮಿಳುನಾಡಿಗೆ ನೀರು ಹರಿದು ಹೋಗಿದೆ. ಕಬಿನಿಯಿಂದ ನೀರು ಹರಿದಿದೆ ಎಂದರು ಅವರು.
ಕೆಆರ್ಎಸ್ ನಿಂದ ರೈತರ ಹೆಸರಿನಲ್ಲಿ ತಮಿಳುನಾಡಿಗೆ ನೀರು ಹರಿಸಲಾಗಿದೆ. ನೀರು ಬಿಟ್ಟು ಕಾಟಾಚಾರಕ್ಕೆ ಸರ್ವಪಕ್ಷ ಸಭೆ ಕರೆದಿದ್ದಾರೆ. ಸಭೆಯಲ್ಲಿ ಕೊಡುವ ಗೊಡಂಬಿ ಬಾದಾಮಿ ತಿನ್ನೊಕೆ ಹೋಗಬೇಕಿತ್ತಾ ನಾನು? ನೀರು ಬಿಟ್ಟಿದ್ದಕ್ಕೆ ಶಹಬ್ಬಾಸಗಿರಿ ಕೊಡಲು ಹೋಗಬೇಕಾಗಿತ್ತಾ? ಮಂಡ್ಯದಲ್ಲಿ ನಾನು ಜನತಾ ದರ್ಶನ ಮಾಡಿದರೆ ಅಧಿಕಾರಿಗಳು ಭಾಗಿಯಾಗಬಾರದು ಎಂದು ಆದೇಶ ಮಾಡಿದ್ದಾರೆ. ಅಧಿಕಾರಗಳ ಜತೆ ಸಭೆ ನಡೆಸಬಾರದು ಎಂದು ಆದೇಶದ ಮಾಡಿದ ಮೇಲೆ ನಮ್ಮಿಂದ ಏನು ಬಯಸ್ತಾರೆ ಇವರು? ಎಂದು ಕೇಂದ್ರ ಸಚಿವರು ಖಾರವಾಗಿ ಪ್ರಶ್ನಿಸಿದರು.
ಪಾಂಡವಪುರದಲ್ಲಿ ಮತ ಕೊಟ್ಟ ಜನರಿಗೆ ಧನ್ಯವಾದ ಹೇಳಬೇಕಿತ್ತು, ಹೋಗಿದ್ದೆ. ಯಾವ ಸಂದರ್ಭದಲ್ಲಿ ಯಾವ ಕಾರ್ಯಕ್ರಮಕ್ಕೆ ಹೋಗಬೇಕು ಎಂಬುದು ನನಗೆ ಗೊತ್ತಿದೆ. ಇವರ ಅನುಮತಿ ಪಡೆಯಬೇಕಾ? ಏನಕ್ಕೆ ಸಭೆ ಮಾಡಿದ್ದೀರಿ? ಏನು ನಿರ್ಧಾರ ಮಾಡಿದ್ದೀರಿ? ಸಭೆ ಮಾಡಿದ ಮೇಲೂ ಕಡಿಮೆ ಪ್ರಮಾಣದ ನೀರು ಬಿಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಕಿಡಿಕಾರಿದರು.
ಇವರು ನಮ್ಮನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎಂಬುದನ್ನು ಎಲ್ಲರೂ ಗಮನಿಸುತ್ತಿದ್ದಾರೆ. ಆಂಧ್ರ ಪ್ರದೇಶದ ವಿಶಾಖಪಟ್ಟಣಕ್ಕೆ ಹೋದರೆ ಅಲ್ಲಿನ ಮುಖ್ಯಮಂತ್ರಿಗಳು ಫೋನ್ ಮಾಡಿ ಸಹಕಾರ ಕೇಳ್ತಾರೆ. ನಾನು ರಾಜ್ಯದ ಯೋಜನೆಗಳಿಗೆ ಸಹಿ ಹಾಕಿದರೆ ಅದನ್ನು ನಿಲ್ಲಿಸಲು ಪ್ರಯತ್ನ ಮಾಡುತ್ತೀರಿ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ
ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಅವರು; ಯಾವುದೇ ಕಾರ್ಯಕ್ರಮ ಮಾಡಿದರೂ ಪ್ರಾಮಾಣಿಕವಾಗಿ ಮಾಡುತ್ತೇವೆ. ಇವರ ಥರ ಕಾನೂನು ಬಾಹಿರ ಕೆಲಸ ಮಾಡಿಲ್ಲ. ಮುಖ್ಯಮಂತ್ರಿ ಮಾಡಲು ಯಾರು ಇವರ ಹಿಂದೆ ನಿಂತರೋ ಅವರ ಬದುಕಲ್ಲೇ ಚೆಲ್ಲಾಟ ಆಡುತ್ತಿದ್ದಾರೆ. ಅವರು ಎಷ್ಟು ಶಾಪ ಹಾಕ್ತಿದ್ದಾರೆ ಗೊತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು ಕುಮಾರಸ್ವಾಮಿ ಅವರು.
ನಾನು ಕಾರ್ಪೋರೆಷನ್ ಕಸ ಎತ್ತಿದ್ದಿನಿ. ಸಿನಿಮಾ ಡಬ್ಬಾ ಹೊತ್ತಿದ್ದೀನಿ, ನಮ್ಮ ಕಾಲದಲ್ಲಿ ಸಿಡಿ ಇರಲಿಲ್ಲ. ಕಂಡ ಕಂಡ ಕಡೆ ಕೊಳ್ಳೆ ಹೊಡೆದು ಜೀವನ ಮಾಡಿಲ್ಲ. ಭಾನುವಾರವೂ ಸಭೆ ನಡೆಸಿ ನನ್ನ ವಿರುದ್ಧ ದಾಖಲೆ ಹುಡುಕುತ್ತಿದ್ದಾರೆ. ಸಣ್ಣ ಪುಟ್ಟ ಏನಾದರೂ ಸಿಗುತ್ತವಾ ಎಂದು ಹುಡುಕುತ್ತಿದಾರೆ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.