*ಮಾಧ್ಯಮ ಪ್ರಕಟಣೆ
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಮಂಗಳವಾರ ಇಡೀ ದಿನ ಮಳೆಯಾದ ಪರಿಣಾಮ ನಗರದ ಮಹದೇವಪುರ ವಲಯ ಹಾಗೂ ಯಲಹಂಕ ವಲಯ ವ್ಯಾಪ್ತಿಯ ಕೆಲ ಪ್ರದೇಶಗಳಲ್ಲಿ ಆಗಿದ್ದ ತೊಂದರೆಗಳನ್ನು, ಬಹುತೇಕ ಕಡೆ ಸಮಸ್ಯೆಗಳನ್ನು ನಿವಾರಿಸಲು ತುರ್ತು ಕ್ರಮವಹಿಸಲಾಗಿದೆ.
ಸಾಯಿಬಾಬ ಲೇಔಟ್:
ಮಹದೇವಪುರ ವಲಯ ಹೊರಮಾವು ಉಪವಿಭಾಗದಲ್ಲಿ ಬರುವ ಸಾಯಿಬಾಬ ಲೇಔಟ್ ಹಾಗೂ ವಡ್ಡರಪಾಳ್ಯ ದಲ್ಲಿ 180ಕ್ಕೂ ಹೆಚ್ಚು ಮನೆಗಳು ಬರಲಿವೆ. ರಾಜಕಾಲುವೆಯಲ್ಲಿ ಮಳೆ ನೀರಿನ ಹರಿವಿನ ಮಟ್ಟ ಹೆಚ್ಚಾಗಿ, ನೀರು ಹಿಮ್ಮುಖವಾಗಿ ಚಲಿಸಿರುವ ಕಾರಣ ರಾಜಕಾಲುವೆಯ ಇಕ್ಕೆಲದಲ್ಲಿರುವ ಲೇಔಟ್ ನಲ್ಲಿ ನೀರು ತುಂಬಿರುತ್ತದೆ. ಈ ಸಂಬಂಧ ಪಾಲಿಕೆ ಅಧಿಕಾರಿಗಳು 2 ದಿನದಿಂದ ಖುದ್ದು ಸ್ಥಳದಲ್ಲಿದ್ದು, ನೀರು ತೆರವುಗೊಳಿಸುವ ಕೆಲಸ ಮಾಡುತ್ತಿದ್ದಾರೆ.
ಅದರಂತೆ, ಲೇಔಟ್ ನಲ್ಲಿ ಬರುವ 9 ರಸ್ತೆಗಳ ಪೈಕಿ 5 ರಸ್ತೆಗಳಲ್ಲಿ ಸಂಪೂರ್ಣ ನೀರನ್ನು ತೆರವುಗೊಳಿಸಲಾಗಿದೆ. ಇನ್ನುಳಿದ 4 ರಸ್ತೆಗಳಲ್ಲಿರುವ ನೀರುನ್ನು ಅಗ್ನಿಶಾಮಕ ಹಾಗೂ ಪಾಲಿಕೆ ವ್ಯವಸ್ಥೆ ಮಾಡಿಕೊಂಡಿರುವ ಪಂಪ್ ಗಳ ಮೂಲಕ ನೀರುನ್ನು ಹೊರಹಾಕುತ್ತಿದ್ದು, ನಾಳೆಯೊಳಗಾಗಿ ನೀರನ್ನು ತೆರವುಗೊಳಿಸಲಾಗುವುದು.
ಸ್ಥಳೀಯ ನಿವಾಸಿಗಳಿಗೆ ಪಾಲಿಕೆ ವತಿಯಿಂದ ಕುಡಿಯುವ ನೀರು, ತಿಂಡಿ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಅದಲ್ಲದೆ ಮನೆಗಳಿಗೆ ನೀರು ನುಗ್ಗಿರುವಂತಹ ನಿವಾಸಿಗಳಿಗೆ ತಂಗಲು ಹೋಟಲ್ ವ್ಯವಸ್ಥೆ ಮಾಡಲಾಗಿದೆ.
ಸಾಯಿಬಾಬ ಲೇಔಟ್ ನಲ್ಲಿ ಇರುವ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ವಲಯ ಅಧಿಕಾರಿ/ಸಿಬ್ಬಂದಿಗಳು ಸ್ಥಳದಲ್ಲಿದ್ದು, ಇರುವ ಸಮಸ್ಯೆಯನ್ನು ಬಗೆಹರಿಸುತ್ತಿದ್ದಾರೆ. ಸಾಯಿಬಾಬ ಲೇಔಟ್ ನಲ್ಲಿ ನೀರು ನುಗ್ಗಿರುವ ಮನೆಗಳ ಸಮೀಕ್ಷೆ ನಡೆಸಿ ಅರ್ಹ ಫಲಾನುಭವಿಗಳಿಗೆ ಪರಿಹಾರ ನೀಡಲಾಗುವುದು.
ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್:
ಯಲಹಂಕ ವಲಯದ ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್ ನಲ್ಲಿ ನಿಂತಿದ್ದ ನೀರನ್ನು ಇಂದು ಮಧ್ಯಾಹ್ನ 2 ಗಂಟೆಗೆ ಸಂಪೂರ್ಣವಾಗಿ ಹೊರಹಾಕಲಾಗಿದೆ. ಇನ್ನು ಫಾತಿಮಾ ಲೇಔಟ್ ಹಾಗೂ ಇನ್ನಿತರ ಕಡೆ ನೀರು ನುಗ್ಗಿರುವ ಮನೆಗಳ ಸಮೀಕ್ಷೆ ನಡೆಸುತ್ತಿದ್ದು, ಅರ್ಹ ಫಲಾನುಭವಿಗಳಿಗೆ ಪರಿಹಾರ ನೀಡಲಾಗುವುದು.