ವಿಜಯಪುರ: ಪರಿಸರ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಮತ್ತು ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗೌರವಾರ್ಥ ಸಚಿವ ಎಂ ಬಿ ಪಾಟೀಲ ಅವರು ಏರ್ಪಡಿಸಿದ್ದ ವೃಕ್ಷಥಾನ್ ಹೆರಿಟೇಜ್ ರನ್ `ರನ್ ವಿಜಯಪುರ ರನ್’ ಭಾನುವಾರ ಯಶಸ್ವಿಯಾಗಿ ನಡೆಯಿತು.
21 ಕಿ.ಮೀ, 10 ಕಿ.ಮೀ, 5 ಕಿ.ಮೀ, 3.50 ಕಿಮೀ ಮತ್ತು 800 ಮೀಟರ್ ವಿಭಾಗಗಳಲ್ಲಿ ನಡೆದ ವೃಕ್ಷಥಾನ್ ಹೆರಿಟೇಜ್ ರನ್ ಕಾರ್ಯಕ್ರಮದಲ್ಲಿ ಹಲವು ಖ್ಯಾತನಾಮರು ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಜನರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಸ್ಪರ್ಧಿಸಿದ್ದವರಲ್ಲಿ `ಬರಿಗಾಲ ಓಟಗಾರ್ತಿ’ ಖ್ಯಾತಿಯ ಪ್ರೀತಿ ಮನೀಶ್, ನಟರಾದ ಮಾಸ್ಟರ್ ಕಿಶನ್ ಮತ್ತು ಗುರುನಂದನ್, ಪುಣೆಯ ಶರದ್ ಚವಾಣ್, ಕಟಪಾಡಿ ಸುಲತಾ ಕಮಾತ್, ಪ್ರಶಾಂತ್ ಹಿಪ್ಪರಗಿ, ರಾಜಿಂದರ್ ಕೌರ್, ವೆಂಕಟೇಶ ಅಡಿಗ, ಸಮೀರ್ ಜೋಶಿ, ಅನಂತರಾಮು ಮುಂತಾದವರು ಇದ್ದರು. ಉದ್ಘಾಟನೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಅವರು ಗೋಳಗುಮ್ಮಟದ ಬಳಿ ಮ್ಯಾರಥಾನ್ ಓಟಗಾರರನ್ನು ಸೇರಿಕೊಂಡು ಸುಮಾರು 3 ಕಿ.ಮೀ. ಓಡಿ ನೆರೆದವರನ್ನು ಹುರಿದುಂಬಿಸಿದರು.
ಭಾರೀ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಅವರು ವಿಜಯಪುರದ ಹಸುರೀಕರಣದ ಗುರಿಯೊಂದಿಗೆ ಪ್ರತೀವರ್ಷವೂ ಹೆರಿಟೇಜ್ ರನ್ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದ್ದಾರೆ. ಈ ಮೂಲಕ ವಿಜಯಪುರಕ್ಕೆ ಒಂದು ಬ್ರ್ಯಾಂಡ್ ಮೌಲ್ಯ ಸೃಷ್ಟಿಸುವುದು ಈ ಕಾರ್ಯಕ್ರಮದ ಆಶಯವಾಗಿದೆ.
ಇದರಂತೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾವೆದ್ ನಾಗಠಾಣ ಮತ್ತು ಈಶ್ವರ ಕಲಾಲ ಅವರು ಡ್ರೋನ್ ಕ್ಯಾಮರಾ ಬಳಸಿ ಸೃಷ್ಟಿಸಿದ್ದ ವಿಜಯಪುರದ ಪ್ರಾಚೀನ ಸ್ಮಾರಕಗಳು, ದೇವಸ್ಥಾನಗಳು, ವಿಡಿಯೋಗಳನ್ನು ಪ್ರದರ್ಶಿಸಲಾಯಿತು. ಜತೆಗೆ, ನಾನಾ ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದವು. ಹೊರಾಂಗಣದಲ್ಲಿ 15ಕ್ಕೂ ಹೆಚ್ಚು ಮಳಿಗೆಗಳಲ್ಲಿ ವಸ್ತು ಪ್ರದರ್ಶನ ಕೂಡ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಎಂ ಬಿ ಪಾಟೀಲ, “ವಿಜಯಪುರ ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಕೇವಲ ಶೇಕಡ 0.17ರಷ್ಟು ಇದ್ದ ಸಂದರ್ಭದಲ್ಲಿ ವೃಕ್ಷಥಾನ್ ಆಂದೋಲನ ಆರಂಭಿಸಲಾಯಿತು. ಇದುವರೆಗೆ ಸುಮಾರು 1.5 ಕೋಟಿ ಸಸಿಗಳನ್ನು ನೆಡಲಾಗಿದ್ದು, ಈಗ ಹಸುರಿನ ವ್ಯಾಪ್ತಿ ಶೇಕಡ 2ನ್ನು ಮುಟ್ಟಿದೆ. ಆದರೆ, ಇದು ಶೇಕಡ 30ರಿಂದ 35ರ ಪ್ರಮಾಣಕ್ಕೆ ತಲುಪಬೇಕೆಂದರೆ ನಾವು ಸಾಗಬೇಕಾದ ದಾರಿ ಇನ್ನೂ ತುಂಬಾ ಇದೆ” ಎಂದರು.
ಇಲ್ಲಿ ನಾವು ನಡೆಸುತ್ತಿರುವ ವೃಕ್ಷಥಾನ್ ಎಲ್ಲರ ಬೆಂಬಲದಿಂದ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಯಶಸ್ಸು ಕಾಣುತ್ತಿದೆ. ಮುಂದಿನ ವರ್ಷದಿಂದ ಜಿಲ್ಲೆಯ ಹಳ್ಳಿಗಳನ್ನೂ ಇದರಲ್ಲಿ ಒಳಗೊಳ್ಳಿಸಿಕೊಳ್ಳಲು ಯೋಜನೆ ರೂಪಿಸೋಣ ಎಂದರು.
ಗಿಡ, ಮರಗಳನ್ನು ಬೆಳೆಸಿ ಪರಿಸರ ಸುಸ್ಥಿರತೆ ಕಾಪಾಡಿಕೊಳ್ಳಬೇಕೆಂಬುದು ಈ ವೃಕ್ಷಥಾನ್ ಮ್ಯಾರಥಾನ್ ನ ಉದ್ದೇಶವಾಗಿದೆ. ಇದನ್ನು ತಿಳಿದು, ಪ್ರತಿಯೊಬ್ಬರೂ ಒಂದಾದರೂ ಸಸಿ ನೆಟ್ಟು ಬೆಳೆಸಿದರೆ ಉದ್ದೇಶ ಸಫಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ನಾವಿರುವ ಜಾಗದ ಸುತ್ತಲ ಪರಿಸರವನ್ನು ಬೇರೆ ಯಾರೋ ಬಂದು ಸ್ವಚ್ಛಗೊಳಿಸುತ್ತಾರೆ ಎಂಬ ಮನೋಭಾವ ಅಪಾಯಕಾರಿ. ನಾವಿರುವ ಸ್ಥಳದಲ್ಲಿನ ಉತ್ತಮ ಪರಿಸರಕ್ಕೆ ನಾವೇ ಕೊಡುಗೆ ಕೊಡಬೇಕು. ಹೀಗಾದಾಗ,ನಮಗೆಲ್ಲಾ ಆಸರೆ ನೀಡಿರುವ ಈ ಭೂಗ್ರಹದ ಪರಿಸರವನ್ನು ಕಾಪಾಡಿಕೊಳ್ಳುವುದು ಸಾಧ್ಯವಾಗುತ್ತದೆ ಎಂದು ವಿವರಿಸಿದರು.
ನಮ್ಮ ಭಾರತ ದೇಶಕ್ಕೆ ದೊಡ್ಡ ಇತಿಹಾಸ ಮತ್ತು ಪರಂಪರೆ ಇದೆ. ನಮ್ಮಲ್ಲಿ ಪ್ರವಾಸೋದ್ಯಮಕ್ಕೆ ಬೇಕಾದ ಮೂಲ ಪರಿಕರಗಳು ವಿಪುಲವಾಗಿವೆ. ಆದರೆ, ಇದುವರೆಗೆ ನಾವು ಪ್ರವಾಸಿಗರಿಗೆ ಸ್ವಚ್ಛ ಬಾತ್ ರೂಮ್, ಶೌಚಾಲಯ, ಉತ್ತಮ ರಸ್ತೆ ಸಂಪರ್ಕ, ಶುಚಿಯಾದ ಊಟೋಪಚಾರ ವ್ಯವಸ್ಥೆ ಇವುಗಳನ್ನು ಒದಗಿಸಲು ವಿಫಲವಾಗಿದ್ದೇವೆ. ಇವನ್ನು ಅಭಿವೃದ್ಧಿಪಡಿಸಿದರೆ ನಾವು ಪ್ರವಾಸೋದ್ಯಮದ ಮೂಲಕ ಅತ್ಯಂತ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಜೊತೆಗೆ ಆದಾಯ ಕೂಡ ಗಳಿಸಬಹುದು ಎಂದು ಹೇಳಿದರು.
ಮುಂದಿನ ವರ್ಷ ವೃಕ್ಷಥಾನ್ ಅನ್ನು ಡಿಸೆಂಬರ್ ಎರಡನೇ ವಾರದಲ್ಲಿ ನಡೆಸಲಾಗುವುದು ಎಂದು ಇದೇ ವೇಳೆ ಪ್ರಕಟಿಸಿದರು.
ರಾಜಾಸ್ಥಾನದಿಂದ ಬಂದಿದ್ದ ಜಲ ಭಗೀರಥ ರಾಜೇಂದ್ರ ಸಿಂಗ್ ಅವರು ವೇದಿಕೆ ಮೇಲಿದ್ದರು. ಶಾಸಕ ಬಸನಗೌಡ ಪಾಟೀಲ ಯತ್ನಾಳ, ಅನಿಲಗೌಡ ಪಾಟೀಲ, ವಿಜಯಪುರದ ಗಣ್ಯರಾದ ಪ್ರಮೋದ ದೇಶಪಾಂಡೆ, ಕಿರಣ ಬೆಟಗೇರಿ, ಡಾ.ಪ್ರವೀಣ ಬಸನಗೌಡರ, ನರೇಂದ್ರಕುಮಾರ ನಾಗಶೆಟ್ಟಿ, ಬಿ ಎಸ್ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.