ಬೆಂಗಳೂರು :ರಾಜ್ಯದಲ್ಲಿ ಕಲ್ಲುಗಣಿ ಮತ್ತು ಸ್ಟೋನ್ ಕ್ರಷರ್ ಗಳಿಗೆ ವಿಧಿಸಿರುವ ಕಠಿಣ ನಿಯಮಗಳನ್ನು ಸರಳಗೊಳಿಸಿ ದಂಡದ ಮೊತ್ತ ಕಡಿಮೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಮಾಡುವುದಾಗಿ ಬೆಂಗಳೂರು ಯೂನಿಯನ್ ಆಫ್ ಕರ್ನಾಟಕ ಕ್ವಾರಿ ಆಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದೆ.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಕಲ್ಲು ಗಣಿಗಾರಿಕೆ ಮತ್ತು ಸ್ಟೋನ್ ಕ್ರಷರ್ ಸಂಘದ ಅಧ್ಯಕ್ಷ ಡಿ ಸಿದ್ದರಾಜು ಮಾತನಾಡಿ, ನಮ್ಮ ಬೇಡಿಕೆ ಈಡೇರಡಿದ್ದರೆ
ಜನವರಿಯಲ್ಲಿ ಕಲ್ಲು ಗಣಿಗಾರಿಕೆ ಮತ್ತು ಸ್ಟೋನ್ ಕ್ರಷರ್ಗಳನ್ನು ಅನಿರ್ದಿಷ್ಟ ಅವಧಿಗೆ ಬಂದ್ ಮಾಡಿ ಉಗ್ರ ಹೋರಾಟ ಮಾಡಲಾಗುವುದು ಎಚ್ಚರಿಸಿದರು.
ನೆರೆ ರಾಜ್ಯಗಳಿಂದಲೂ ಸರಕಾರಿ ಕಾಮಗಾರಿಗೆ ಕಲ್ಲು ಪೂರೈಕೆಯಾಗದಂತೆ ಗಡಿಗಳಲ್ಲಿ ಕಠಿಣ ಪಹರೆ ಹಾಕುತ್ತೇವೆ. ಸರಕಾರ ಕಲ್ಲು ಗಣಿಗಾರಿಕೆ ಮೇಲೆ ದ್ವೇಷದ ತೀರ್ಮಾನ ಕೈಗೊಳ್ಳುವುದು ಸರಿಯಲ್ಲ, ಸರ್ಕಾರದ ನಡೆಯ ನಿರ್ಧಾರದ ವಿರುದ್ಧ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸಲಾಗುವುದು,” ಎಂದು ಎಚ್ಚರಿಕೆ ನೀಡಿದರು.
“ಕಲ್ಲುಗಣಿಗಾರಿಕೆ ಮೇಲೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯದ ಮೇರೆಗೆ ಹಲವು ಕಠಿಣ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ನಾವು ದಂಡ ಪಾವತಿಸಲು ಸಿದ್ದವಿದ್ದೇವೆ ಆದರೆ ಅದನ್ನೇ ಬಂಡವಾಳ ಮಾಡಿಕೊಂಡು ಐದು ಪಟ್ಟು ದಂಡದ ಮೊತ್ತವನ್ನು ವಜಾಗೊಳಿಸಿ ಹೆಕ್ಟೇರ್ಗೆ 5 ಲಕ್ಷ ರೂಪಾಯಿವರೆಗೆ ದಂಡ ವಿಧಿಸಿ ಎಂದರು.
ಪ್ರಕರಣವನ್ನು 1994ರ ಕರ್ನಾಟಕ ಮೈನರ್ ಮಿನರಲ್ ಆದಿನಾಮ ಮುಕ್ತಾಯಗೊಳಿಸಬೇಕು. ಪ್ರತಿ ವರ್ಷ ಕಲ್ಲುಗಣಿಗಾರಿಕೆಯ ಆಡಿಟ್ ನಡೆಯುತ್ತಿದ್ದು, ಗುತ್ತಿಗೆದಾರರು ಈಗಾಗಲೇ ಸರಕಾರಕ್ಕೆ ರಾಜಧನ ಪಾವತಿಸುತ್ತಾ ಬಂದಿದ್ದಾರೆ. ಹೀಗಿರುವಾಗ, ದಂಡದ ಮೊತ್ತ ಮತ್ತು ನಿಯಮಗಳನ್ನು ಸರಳೀಕರಣಗೊಳಿಸಿ ಸರಕಾರ ಉದ್ಯಮವನ್ನು ಉಳಿಸಬೇಕು,” ಎಂದು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಕಲ್ಲು ಗಣಿಗಾರಿಕೆ ಮತ್ತು ಸ್ಟೋನ್ ಕ್ರಷರ್ ಸಂಘದ ಗೌರವಾಧ್ಯಕ್ಷ ಸಂಜೀವ್ ವಿ. ಹಟ್ಟಿಹೊಳಿ, ಉಪಾಧ್ಯಕ್ಷರಾದ ಮನೋಜ್ ಶೆಟ್ಟರ್, ಎಚ್. ವಾಗೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.