ಬೆಂಗಳೂರು: ಅಂತರ್ಜಲ ಕುಸಿತದಿಂದ ನಗರದಲ್ಲಿ ಆಗಿರುವ ನೀರಿನ ಅಭಾವ, ನೀರಿನ ಸಂರಕ್ಷಣೆ ಹಾಗೂ ಉಳಿತಾಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಜೊತೆ ಕೈಜೋಡಿಸಿ ಎಂದು ಜಲಮಂಡಳಿಯ ನೊಂದಾಯಿತ ಪ್ಲಂಬರ್ ಗಳಿಗೆ bwssb ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ಕರೆ ನೀಡಿದರು.
ಇಂದು ಜಯನಗರದ ಸರ್ ಎಂ. ವಿಶ್ವೇಶ್ವರಯ್ಯ ಮಳೆ ನೀರು ಸುಗ್ಗಿ ಕೇಂದ್ರದಲ್ಲಿ ಆಯೋಜಿಸಿದ್ದ ವಿಶೇಷ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಣ್ಣ ವಯಸ್ಸಿನಲ್ಲ ಕುಡಿಯುವ ನೀರಿಗಾಗಿ ನನ್ನ ತಾಯಿ ಪಡುತ್ತಿದ್ದ ಕಷ್ಟ ಇನ್ನು ನೆನೆಪಿದೆ. ಕೇವಲ 2 ಕೊಡ ನೀರಿನಿಂದ ಮನೆಯನ್ನು ನಿರ್ವಹಿಸುತ್ತಿದ್ದ ಕಷ್ಟದ ದಿನಗಳನ್ನು ಕಂಡಿದ್ದೇನೆ. ಇಂದು ನಗರದ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಯಾವುದೇ ಕೊರತೆ ಇಲ್ಲ. ಆದರೆ, ಜನರ ಅಜಾಗರೂಕತೆ ಹಾಗೂ ನಿರ್ಲಕ್ಷದಿಂದ ಬಹಳಷ್ಟು ಶುದ್ದ ನೀರು ಚರಂಡಿಯ ಪಾಲಾಗುತ್ತಿದೆ. 1000 ಲೀಟರ್ ನೀರನ್ನ ಬೆಂಗಳೂರಿನ ಮನೆಗಳಿಗೆ ಸರಬರಾಜು ಮಾಡಲು ಮಂಡಳಿಗೆ ಸುಮಾರು 95 ರೂಪಾಯಿಗಳ ವೆಚ್ಚವಾಗುತ್ತದೆ. ಆದರೆ ಜನರಿಗೆ ನಾವು ರಿಯಾಯಿತಿ ದರವಾದ 45 ರೂಪಾಯಿಗಳಲ್ಲಿ ನೀರನ್ನ ಒದಗಿಸುತ್ತಿದ್ದೇವೆ. ನೀರು ಅತ್ಯಮೂಲ್ಯ ವಸ್ತು ಇದರ ಸಂರಕ್ಷಣೆ ನಮ್ಮ ಪ್ರಥಮ ಆದ್ಯತೆ ಆಗಬೇಕಾಗಿದೆ ಎಂದರು.
ಪ್ಲಂಬರ್ ಗಳು ಜಲಮಂಡಳಿಯ ಮಿತ್ರರಾಗಿ ಕಾರ್ಯನಿರ್ವಹಿಸಬೇಕು. ತಾವು ಕಾರ್ಯನಿರ್ವಹಿಸುತ್ತಿರುವಂತಹ ವ್ಯಾಪ್ತಿಯಲ್ಲಿ ಇರುವಂತಹ ವಾಣಿಜ್ಯ ಕಟ್ಟಡಗಳು, ಕೈಗಾರಿಕಾ ಪ್ರದೇಶಗಳು, ರೆಸ್ಟೋರೆಂಟ್ ಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅನಗತ್ಯವಾಗಿ ನೀರು ಪೋಲಾಗುವುದನ್ನ ತಡೆಯಲು ಏರಿಯೇಟರ್ ಹಾಗೂ ಫ್ಲೋ ಕಂಟ್ರೋಲರ್ ಅಳವಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಬೇಕು. ಈಗಾಗಲೇ ನಾವು ಇವುಗಳ ಅಳವಡಿಕೆಯನ್ನು ಕಡ್ಡಾಯಗೊಳಿಸಿದ್ದೇವೆ, ಜನರು ಸ್ವಯಂ ಪ್ರೇರಿತರಾಗಿ ಅಳವಡಿಸಿಕೊಳ್ಳುವಂತೆ ಮನವೊಲಿಸುವುದರಲ್ಲಿ ನಿಮ್ಮ ಪಾತ್ರ ಹಿರಿದಾಗಿದೆ. ಇದಕ್ಕಾಗಿ ಪ್ಲಂಬರ್ಗಳು ಮಂಡಳಿ ಯ ಜೊತೆ ಕೈಜೋಡಿಸುವಂತೆ ಅಧ್ಯಕ್ಷರು ಕರೆ ನೀಡಿದರು.
ಮಳೆ ನೀರು ಕೋಯ್ಲು ಹಾಗೂ ಮರುಪೂರಣಕ್ಕೆ ಆದ್ಯತೆ ನೀಡಿ
ಮಳೆ ನೀರು ಕೋಯ್ಲು ಹಾಗೂ ಮರುಪೂರಣಕ್ಕೆ ಪ್ಲಂಬರ್ಗಳು ಆದ್ಯತೆ ನೀಡಬೇಕು. ನಿಯಮಗಳ ಅನುಸಾರ ಕಟ್ಟಡಗಳಲ್ಲಿ ಮಳೆ ನೀರು ಕೋಯ್ಲು ಹಾಗೂ ಅದನ್ನ ಅಂತರ್ಜಲ ಮರುಪೂರಣಕ್ಕೆ ಅಗತ್ಯವಿರುವ ವ್ಯವಸ್ಥೆ ಮಾಡಿಸಿಕೊಳ್ಳುವಂತೆ ಜನರ ಮನವೊಲಿಸುವುದು ಆದ್ಯತೆ ಆಗಿರಬೇಕು ಎಂದರು.
6 ಮಳೆ ನೀರು ಕೋಯ್ಲು ಕಾಮಗಾರಿಗೆ ಸೂಚನೆ
ಜಲಮಂಡಳಿಯ 11 ಸಾವಿರ ಕೊಳವೆ ಬಾವಿಗಳನ್ನು ಸುಸ್ಥಿಯಲ್ಲಿಡುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಇದಕ್ಕಾಗಿ ಕೊಳವೆ ಬಾವಿಗಳ ರಿಪೇರಿಗಳನ್ನ ಯುದ್ದೋಪಾದಿಯಲ್ಲಿ ಮಾಡಬೇಕು. ಹಾಗೆಯೇ, ಕಡಿಮೆ ನೀರು ದೊರೆಯುತ್ತಿರುವ ಕೊಳವೆ ಬಾವಿಗಳನ್ನ ಇಂಗುಗುಂಡಿಗಳನ್ನಾಗಿ ಪರಿವರ್ತಿಸುವ ಹಾಗೂ ಬತ್ತಿ ಹೋಗಿರುವ ಕೊಳವೆ ಬಾವಿಗಳನ್ನ ಅಂತರ್ಜಲ ಮರುಪೂರಣಕ್ಕೆ ಬಳಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಸೂಚಿಸಿದರು. ಮಂಡಳಿಯ ಅಧಿಕಾರಿಗಳು ಆಯಾ ಪ್ಲಂಬರ್ ಗಳ ಜೋನ್ ನಲ್ಲಿ ಕಡಿಮೆ ನೀರು ದೊರೆಯುತ್ತಿರುವ ಹಾಗೂ ಬತ್ತಿ ಹೋಗಿರುವ ಕೊಳವೆ ಬಾವಿಗಳನ್ನು ಗುರುತಿಸಿ ಪ್ಲಂಬರ್ಗಳಿಗೆ ಅದರ ಕೆಲಸವನ್ನು ವಹಿಸುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಂಡಳಿಯ ಮುಖ್ಯ ಎಂಜನಿಯರ್ ಗಳಾದ ಎಸ್.ವಿ.ವೆಂಕಟೇಶ್, ಜಯಶಂಕರ್, ಎಂಜನಿಯರ್ ಗಳು ಹಾಗೂ ಅಧಿಕಾರಿಗಳು ಇದ್ದರು.