ಬೀಟೈಮ್ಸ್ ಚಿತ್ರದರ್ಗ: ಜಿಲ್ಲಾ ವಕ್ಸ್ ಬೋರ್ಡ್ ಸಮಿತಿ ಒಂದು ಮಹತ್ವದ ಸಂಸ್ಥೆಯಾಗಿದ್ದು ಇದು ಸಾಮಾಜಿಕ ಸೇವಾ ವಲಯದ ಸಂಸ್ಥೆಯಾಗಿದೆ. ಜಿಲ್ಲೆಯ ಎಲ್ಲಾ ಮಸೀದಿಗಳು, ದರ್ಗಾ, ಇತರೆ ಸಂಸ್ಥೆಗಳ ಮೌಲ್ವಿಗಳು, ಗುರುಗಳು, ಸಮಾಜದ ಮುಖಂಡರು ನನ್ನ ಮೇಲೆ ನಂಬಿಕೆ, ವಿಶ್ವಾಸವಿಟ್ಟು ಅಧ್ಯಕ್ಷರ ಹುದ್ದೆಗೆ ನೇಮಕ ಮಾಡಲು ನೆರವಾದರೆ ಈ ಜನರ ಋಣ ತೀರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಜಿಲ್ಲಾ ಬಡಗಿನೌಕರರ ಸಂಘದ ಅಧ್ಯಕ್ಷ ಎ.ಜಾಕೀರ್ಹುಸೇನ್ ಭರವಸೆ ನೀಡಿದರು.
ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ವಕ್ಸ್ ಬೊರ್ಡ್ನ ಚಿತ್ರದುರ್ಗಜಿಲ್ಲಾ ಸಮಿತಿಗೆ ಅತೀ ಶೀಘ್ರದಲ್ಲೇ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದ್ದು, ಈ ಹುದ್ದೆಗೆ ಹಲವರು ಆಕಾಂಕ್ಷಿಗಳು ಇದ್ದಾರೆ. ನಾನು ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ಚಿತ್ರದುರ್ಗದಲ್ಲಿ ಸಾಮಾಜಿಕ ಸೇವಾಕ್ಷೇತ್ರದಲ್ಲಿ ತೊಡಗಿಸಿಕೊಂಡು ಬಂದಿದ್ದೇನೆ.
ಬಡವ,ಕಾರ್ಮಿಕ ವರ್ಗದ ಶ್ರೇಯಸ್ಸಿಗೆ ಶ್ರಮಿಸಿದ್ದೇನೆ
ವಿಶೇಷವಾಗಿ ಕೂಲಿಕಾರ್ಮಿಕರು, ವಿವಿಧವರ್ಗಗಳ ಕಾರ್ಮಿಕರಸಂಘಟನೆಗಳು, ಜನಪರಸಂಘಟನೆಗಳು ಇತ್ಯಾದಿ ಸಂಘ ಸಂಸ್ಥೆಗಳಲ್ಲಿ ಸುಧೀರ್ಘವಾಗಿ ಕಾರ್ಯನಿರ್ವಹಿ ಸಿಕೊಂಡು ಬಂದಿದ್ದು, ಸಾವಿರಾರು ಬಡವರು, ಕಾರ್ಮಿಕರು ಇತರೆ ವರ್ಗದ ಜನರ ಶ್ರೇಯಸ್ಸಿಗೆ ಶ್ರಮಿಸಿದ್ದೇನೆ ಎಂದರು.
ಕಳೆದ ಹಲವು ದಶಕಗಳಿಂದ ನಾನು ಸಾಮಾಜಿಕ ಕ್ಷೇತ್ರದಲ್ಲಿ ಗುರ್ತಿಸಿಕೊಂಡಿರುವ ಕಾರಣ ಮುಸ್ಲಿಂ ಸಮಾಜದ ಹಲವಾರು ಮುಖಂಡರು, ಧಾರ್ಮಿಕ ನಾಯಕರು,ವಿವಿಧ ಜನಪರ ಹೋರಾಟಗಾರರ ಒತ್ತಾಸೆಯಂತೆ ಈ ಹುದ್ದೆಗೆ ಆಕಾಂಕ್ಷಿಯಾಗಿದ್ದೇನೆ. ಜಿಲ್ಲೆಯಲ್ಲಿರುವ ಬಹುತೇಕ ಎಲ್ಲಾ ವರ್ಗದ ಜನರ ಜತೆಗೆ ಒಡನಾಟವನ್ನಿಟ್ಟುಕೊಂಡು ಬಂದಿರುತ್ತೇನೆ. ಈ ಹಿಂದೆ ಆಜಾದ್ ನಗರ ಅಂಜುಮಾನ್ ಮಸೀದಿ ಆಡಳಿತ ಮಂಡಳಿಗೆ ನಿರ್ದೇಶಕನಾಗಿ ನೇಮಕಗೊಂಡಿದ್ದು ಕರ್ನಾಟಕ ಮುಸ್ಲಿಂ ಸಂಘದ ಕಾರ್ಯಾಧ್ಯಕ್ಷರಾಗಿ, ಮುಸ್ಲಿಂ ಆಫ್ ಇಂಡಿಯಾ ಸಂಘಟನೆಯ ರಾಜ್ಯಾಧ್ಯಕ್ಷನಾಗಿ ಮುಸ್ಲಿಂ ಸಮಾಜದ ಹಿತಕ್ಕಾಗಿ ಶ್ರಮಿಸಿರುತ್ತೇನೆ.
ಹಲವು ಸಂಘ ಸಂಸ್ಥೆಗಳ ಹುದ್ದೆಗಳ ನಿರ್ವಹಣೆಯ ಅನುಭವ
ಇಂಟೆಕ್ (ಕೆಪಿಸಿಸಿ)ಉಪಾಧ್ಯಕ್ಷರಾಗಿ ಐಎಂಬಿಸಿಎಫ್ಡಬ್ಲ್ಯೂ ಉಪಾಧ್ಯಕ್ಷರಾಗಿ ಚಿತ್ರದುರ್ಗ ಕಟ್ಟಡ ನಿರ್ಮಾಣ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷನಾಗಿ, ಆಜಾದ್ ನಗರ ಅಂಜುಮಾನ್ ಮಸೀದಿ ಆಡಳಿತ ಜಿಲ್ಲಾಧ್ಯಕ್ಷನಾಗಿ, ಕರ್ನಾಟಕ ಮುಸ್ಲಿಂ ಸಂಘದ ಕಾರ್ಯಾಧ್ಯಕ್ಷರಾಗಿ, ಮುಸ್ಲಿಂ ಆಫ್ ಇಂಡಿಯಾ ಸಂಘಟನೆಯ ರಾಜ್ಯಾಧ್ಯಕ್ಷನಾಗಿ, ಕಾರ್ಯನಿರ್ವಹಿಸುತ್ತಿದ್ದು ಇದರ ಜತೆಗೆ ಬೇರೆ ಬೇರೆ ಸಂಘ ಸಂಸ್ಥೆಗಳಲ್ಲಿಯೂ ಕೂಡ ಗುರುತಿಸಿಕೊಂಡಿರುತ್ತೇನೆ.
ನನ್ನ ಮುಂದಿನ ಯೋಜನೆಗಳು
ಇದೀಗ ಈ ಹುದ್ದೆಗೆ ಸರ್ಕಾರ, ಸಮಾಜ, ನನಗೆ ಅವಕಾಶಕೊಟ್ಟರೆ ಆ ಸಂಸ್ಥೆಗೆ ಘನತೆ ತರುವಂತಹ ಕೆಲಸವನ್ನು ಮಾಡುತ್ತೇನೆ. ವಕ್ಸ್ ಬೋರ್ಡ್ ಸಮಿತಿಗೆ ಆದಾಯ ಮೂಲವನ್ನು ಹೆಚ್ಚಿಸುವ ಕೆಲಸದ ಜತೆಗೆ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ವಾಣಿಜ್ಯ ಮಳಿಗೆಗಳಲ್ಲಿ ಅಲ್ಲಲ್ಲಿ ಕಂಡುಬರುತ್ತಿರುವ ಸಮಸ್ಯೆಗಳನ್ನು ಸರಿಪಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಖಾಲಿ ಇರುವ ಸಂಸ್ಥೆಯ ನಿವೇಶನಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ, ಅತಿಕಡಿಮೆ ದರದಲ್ಲಿ ಬಡವರಿಗೆ ಜೀವನ ನಡೆಸಲು ಅನುಕೂಲವಾಗುವ ರೀತಿಯಲ್ಲಿ ಹಂಚಿಕೆ ಮಾಡಲಾಗುವುದು ಎಂದರು.
ವಕ್ ಬೋರ್ಡ್ ಸಮಿತಿಗೆ ನೇಮಕ ಮಾಡಿದರೆ ಪ್ರತಿ ವಾರ ಜಿಲ್ಲೆಯ ಎಲ್ಲಾ ಮಸೀದಿಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ ಅಲ್ಲಿನ ಮುಖ್ಯಸ್ಥರ ಜತೆಗೆ ಚರ್ಚಿಸಿ ಅಲ್ಲಿ ಬೇಕಾಗಿರುವ ಕುಡಿಯುವ ನೀರು, ಚರಂಡಿ, ವಿದ್ಯುತ್, ಇತರೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ತರುವ ಪ್ರಯತ್ನ ಮಾಡುತ್ತೇನೆ. ಕೆಲವು ಕಡೆ ವಕ್ಸ್ ಬೋರ್ಡ್ ಸಮಿತಿಯ ಮಳಿಗೆಗಳು ಒಂದೇ ಕುಟುಂಬಕ್ಕೇ ಹೆಚ್ಚಿನದಾಗಿ ವಿತರಣೆಯಾಗಿರವುದು ಕಂಡುಬಂದಿದ್ದು ಈ ಅವ್ಯವಸ್ಥೆಯನ್ನು ಸರಿಪಡಿಸಿ ನ್ಯಾಯ ಸಮ್ಮತವಾಗಿ ವಿತರಣೆ ಮಾಡಲು ಪ್ರಯತ್ನ ಮಾಡುತ್ತೇನೆ ಎಂದರು.
ಮುಸ್ಲಿಂ ಸಮಾಜದ ಹಿರಿಯ ಮುಖಂಡ ಹಾಗೂ ಟಿಪ್ಪು ಅಭಿಮಾನಿಗಳ ಮಹಾವೇದಿಕೆಯ ಅಧ್ಯಕ್ಷ ಟಿಪ್ಪು ಖಾಸಿಂ ಮಾತನಾಡಿ, ಜಿಲ್ಲೆಯಲ್ಲಿ 3 ದಶಕಗಳಿಂದ ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ಎ.ಜಾಕೀರ್ ಹುಸೇನ್ ಅವರಿಗೆ ಅವಕಾಶನೀಡಿದರೆ ನಿಜಕ್ಕೂ ಸಮಾಜಕ್ಕೆ ಅನುಕೂಲವಾಗುತ್ತದೆ, ಸಮಾಜದ ಬಗ್ಗೆ ಕಾಳಜಿ ಹೊಂದಿರುವ ಖಾನ್ ಸಾಕಷ್ಟು ಮುಸ್ಲೀಂರ ಹೇಳಿಗೆಗೆ ಶ್ರಮಿಸುವುದಾಗಿ ಮುಂದೆ ಬಂದು ನಿಂತಿದ್ದಾರೆ, ಅವರಿಗೆ ಜಿಲ್ಲೆಯ ಸಮುದಾಯದ ಜನರು ಜಿಲ್ಲಾ ವಕ್ಪ್ ಬೋರ್ಡ್ ಸಮಿತಿಗೆ ಆಯ್ಕೆ ಮಾಡಿದರೆ ಬಡವರ, ದೀನ ದಲಿತರ ಪರವಾಗಿ ನಿಂತು ಹಗಲಿರುಳು ಸೇವೆ ಮಾಡುವ ಹುಮ್ಮಸಿದೆ, ಅದಕ್ಕೆ ನಿಮ್ಮೆಲ್ಲರ ಸಹಕಾರ ಬೇಕಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಸ್ಲಿಂ ಮುಖಂಡರಾದ ಬಂಡೇ ಜಬೀ, ಎಂ.ಡಿ.ಅಸ್ಲಾಂ, ಆರ್. ಕೆ.ರಿಯಾಜ್, ಅಜಾರುದ್ದೀನ್ ಮುಂತಾದವರು ಉಪಸ್ಥಿತರಿದ್ದರು.