LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಾಮನ್ವೆಲ್ತ್ ಗೇಮ್ ನಲ್ಲಿ ಭಾರತಕ್ಕೆ ಕಂಚಿನ ಮುಕುಟ

ಗ್ಲಾಸ್ಗೋ : ಐಸ್‌ಕ್ರೀಮ್ ತಿನ್ನುವ ಆಸೆ..ಪುಟ್ಟ ಬಾಲಕಿಯ ಎಡಗಾಲನ್ನು ಕಿತ್ತುಕೊಂಡ ಯಮದೂತ ಲಾರಿ.. ಸಾವನ್ನೇ ಗೆದ್ದ ಹುಡುಗಿಗೆ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಕಂಚಿನ ಪದಕ..ಗ್ಲಾಸ್ಗೋ ಪೋಡಿಯಂನಲ್ಲಿ ಕರುನಾಡಿನ ರೈತನ ಮಗಳ ಕೋಲ್ಮಿಂಚು, ಭಾರತದ ಕೀರ್ತಿ ಪತಾಕೆ ಕಂಚಿನ ಮೂಲಕ. ಶಿಲ್ಪಾ ಶೈಲಾ ಹಾರಿಸಿದ್ದಾರೆ.news_1785349699_1_801.webp

ಆಕೆಯ ಮುಖದಲ್ಲಿ ಮೂಡಿದ್ದವು ವರ್ಣನೆಗೆ ನಿಲುಕದ ಭಾವತರಂಗಗಳು. ಪದಕದ  ಮೆಟ್ಟಿಲೇರಿದಾಗ ಆಕೆಯ ಕಣ್ಣಂಚಿನಲ್ಲಿ ಧಾರೆಯಾಗಿ ಸುರಿಯುತ್ತಿತ್ತು ಆನಂದಬಾಷ್ಪ. ಕೊರಳಿಗೆ ಹಾರವಾಗಿ ಮಿನುಗುತ್ತಿತ್ತು ಆಕೆ ಗೆದ್ದ ಕಂಚಿನ ಪದಕ. ಆಕೆಯ ಹೆಗಲಿನ ಮೇಲೆ ಕಂಗೊಳಿಸುತ್ತಿತ್ತು ಭಾರತದ ರಾಷ್ಟ್ರ ಧ್ವಜ. ಇವು ಕರುನಾಡಿನ ರೈತನ ಮಗಳು ಕಾಮನ್‍ವೆಲ್ತ್ ಗೇಮ್ಸ್ ನ ಪೋಡಿಯಂ ಮೇಲೆ ನಿಂತಾಗ ಕಂಡ ಅದ್ಭುತ ಕ್ಷಣಗಳು.

ಆ ಕ್ಷಣವನ್ನು ವರ್ಣಿಸಲು ಅಸಾಧ್ಯ. ಯಾಕಂದ್ರೆ ಅದು ವರ್ಣಮಾಲೆಗಳಿಗೂ ನಿಲುಕದ ಸಂತೋಷದ ಸಮಯ. ಸ್ವತಃ ಅನುಭವಿಸಿದವರಿಗೂ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗದ ಅಪರೂಪದ ಘಳಿಗೆ. ಇಂತಹ ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾದವಳು ನಮ್ಮ ಕರ್ನಾಟಕದ ಹೆಮ್ಮೆಯ ಹುಡುಗಿ..

ವ್ಯಕ್ತಿ ಪರಿಚಯ:

ಆಕೆಯ ಹೆಸರು - ಶಿಲ್ಪಾ ಶೈಲಾ. 
ಹುಟ್ಟೂರು - ಮೈಸೂರು ಜಿಲ್ಲೆಯ ಕೆ.ಆರ್.ನಗರದ ಕಂಚು ಗಾರನ ಕೊಪ್ಪಲು ಗ್ರಾಮ. 
ಗ್ಲಾಸ್ಗೋ ಕಾಮನ್‍ವೆಲ್ಸ್ ಗೇಮ್ಸ್ ನ ಪ್ಯಾರಾ ಅಥ್ಲೇಟಿಕ್ಸ್‍ನ ಮಹಿಳೆಯರ ಎಫ್-57 ವಿಭಾಗದ ಶಾಟ್‍ಪುಟ್‍ನಲ್ಲಿ ಕಂಚು ಗೆದ್ದ ಅಥ್ಲೀಟ್. 

ಹಾಗೇ ನೋಡಿದ್ರೆ ನಿಯಮಾನುಸಾರವಾಗಿಯೇ ಶಿಲ್ಪಾ ಶೈಲಾಗೆ ಒಲಿದಿರುವ ಕಂಚಿನ ಪದಕ. 7.26 ಮೀಟರ್ ದೂರ ಎಸೆದು ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಳು. ಆದ್ರೆ ನೈಜಿರಿಯಾದ ಯುಚರಿಯಾ ಇಯಾಜಿ ಸ್ಪರ್ಧೆಯಲ್ಲಿ ಅನರ್ಹಗೊಂಡಿದ್ದರಿಂದ ಶಿಲ್ಪಾಗೆ ಕಂಚಿನ ಪದಕ ಲಭಿಸಿತ್ತು. 

ಐಸ್‍ಕ್ರೀಮ್ ಆಸೆ.. ಎಡಗಾಲನ್ನೇ ಕಿತ್ತುಕೊಂಡ ಯಮದೂತ ಲಾರಿ..! 

ನಾಲ್ಕನೇ ವಯಸ್ಸಿನಲ್ಲಿ ರಸ್ತೆ ಅಪಘಾತದಲ್ಲಿ ಶಿಲ್ಪಾ ಎಡಗಾಲನ್ನು ಕಳೆದುಕೊಂಡಿದ್ದಳು. ಆದ್ರೂ ಎದೆಗುಂದಲಿಲ್ಲ. ಛಲ ಬಿಡಲಿಲ್ಲ. ಕೃತಕ ಕಾಲಿನ ಸಹಾಯದಿಂದ ಆತ್ಮವಿಶ್ವಾಸದಿಂದಲೇ  ಸಾಧನೆಯ ಹಾದಿಯಲ್ಲಿ ಹೆಜ್ಜೆ ಹಾಕಿದ್ದಳು. ಓದಿನಲ್ಲೂ ಬುದ್ಧಿವಂತೆಯಾಗಿದ್ದ ಶೈಲಾ ಡಬಲ್ ಡಿಗ್ರಿಯನ್ನು ಪಡೆದುಕೊಂಡಿದ್ದಾಳೆ. ಅಲ್ಲದೆ ಮೈಸೂರಿನಲ್ಲಿ  ಶಿಕ್ಷಕಿಯಾಗಿಯೂ ಸೇವೆ ಸಲ್ಲಿಸಿದ್ದಳು. news_1785349699_0_516.webp

ಆರಂಭದಲ್ಲಿ ಸಿಟ್ಟಿಂಗ್ ವಾಲಿಬಾಲ್ ಆಡುತ್ತಿದ್ದ ಶಿಲ್ಪಾ, ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಳು. ಬಳಿಕ ಕೋಚ್‍ಗಳ ಸಲಹೆಯಂತೆ ಶಾಟ್‍ಪುಟ್, ಜಾವೆಲಿನ್, ಡಿಸ್ಕಸ್ ತ್ರೋ ಕಡೆಗೆ ಗಮನ ಹರಿಸಿದ್ದಳು. ಹೆಚ್ಚಿನ ತರಬೇತಿಗಾಗಿ ಉದ್ಯೋಗಕ್ಕೆ ರಾಜೀನಾಮೆ ಕೊಟ್ಟು  ಬೆಂಗಳೂರಿನಲ್ಲಿ ಅಭ್ಯಾಸ ನಡೆಸುತ್ತಿದ್ದಳು. ಹಾಗೇ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ಯಾರಾ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದುಕೊಂಡಿದ್ದಳು. ಇದೀಗ ಚೊಚ್ಚಲ ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಕಂಚಿನ ನಗೆ ಬೀರಿದ್ದಾಳೆ.

"ನನ್ನ ಖುಷಿಗೆ ಇತಿಮಿತಿಯೇ ಇಲ್ಲ. ನನಗೆ ಹೇಗೆ ಅನ್ನಿಸುತ್ತಿದೆ ಎಂಬುದನ್ನು ವರ್ಣಿಸಲು ಸಾಧ್ಯವಿಲ್ಲ. ಇದು ನನ್ನ ಮೊದಲ ಕಾಮನ್‍ವೆಲ್ತ್ ಗೇಮ್ಸ್.. ಮೊದಲ ಸ್ಪರ್ಧೆಯಲ್ಲಿ ಕಂಚಿನ ಪದಕ ಸಿಕ್ಕಿದೆ. ಈ ಕ್ಷಣವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ" ಎಂದು ಶಿಲ್ಪಾ ಭಾವುಕಳಾಗಿ ಹೇಳಿದ್ದಾಳೆ. 

ನನಗೆ ಸಹಕರಿಸಿದ ಹಾಗೂ ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಪ್ಯಾರಾ ಕ್ರೀಡೆಗೆ ಪರಿಚಯಿಸಿ ನನ್ನ ಬದುಕಿನ ದಿಕ್ಕನ್ನೇ ಬದಲಾಯಿಸಿದ್ದು ಸ್ನೇಹಿತೆ ಗೀತಾ. ಅವಳ ಬೆಂಬಲ, ಪ್ರೋತ್ಸಾಹಕ್ಕೆ ಚಿರಋಣಿಯಾಗಿದ್ದೇನೆ. ಇನ್ನು, ಸÀತ್ಯಪಾಲ್ ಸರ್ ನನಗೆ ಬಹಳಷ್ಟು ಸಹಾಯ ಮಾಡಿದ್ದಾರೆ. ಹಾಗೇ ತರಬೇತುದಾರರಾದ ಎಸ್.ಡಿ.ಈಶನ್ ಸರ್, ರಾಘವೇಂದ್ರ ಸರ್ ಹಾಗೂ ಮುಖ್ಯ ತರಬೇತುದಾರರಾದ ಸತ್ಯನಾರಾಯಣ ಸರ್, ಪುಷ್ಪಾ ಮೇಡಮ್ ಅವರ ಮಾರ್ಗದರ್ಶನ, ಪ್ರೇರಣೆ, ಸ್ಪೂರ್ತಿ ನೀಡಿರುವುದನ್ನು  ಮರೆಯಲು ಸಾಧ್ಯವಿಲ್ಲ ಅಂತಾಳೆ ಶಿಲ್ಪಾ ಶೈಲಾ.

"ಅದು 1993. ಅಂಗಡಿಯಿಂದ ಐಸ್ ಕ್ರೀಮ್ ಪಡೆದು  ಮನೆಯ ಕಡೆಗೆ ಓಡುತ್ತಿದ್ದಾಗ, ಯಮದೂತನಂತೆ ಬಂದ ಲಾರಿಯೊಂದು ಆಕೆಯ ಎಡಗಾಲನ್ನು ಜಖಂಗೊಳಿಸಿತ್ತು. 
ಕಾಲನ್ನು ಕಳೆದುಕೊಂಡ ನಂತರ  ಆಕೆ ಪಡುತ್ತಿದ್ದ ನೋವು, ವೇದನೆಯನ್ನು ನಮ್ಮ ಕಣ್ಣಿಂದ ನೋಡಲು ಆಗುತ್ತಿರಲಿಲ್ಲ. ನಾಲ್ಕೈದು ವರ್ಷದ ಪುಟಾಣಿ ಬಾಲೆ ಆ ನೋವನ್ನು ಹೇಗೆ ಸಹಿಸಿಕೊಂಡಿತ್ತೋ ಗೊತ್ತಿಲ್ಲ. ಕೆಲವೊಂದು ಬಾರಿ ಅನ್ನಿಸುತ್ತಿತ್ತು. ಈ ನರಕಯಾತನೆ ಅನುಭವಿಸುವ ಬದಲು ಸಾ****ತ್ತಿದ್ದರೆ ಒಳ್ಳೆಯದಿತ್ತು ಅಂತ.  ನಾವು ರೈತರು. ಆಕೆಯ ವೈದ್ಯಕೀಯ ವೆಚ್ಚವನ್ನು ಭರಿಸಲು ಸಾಕಷ್ಟು ಪರದಾಟ ನಡೆಸಿದ್ದೇವು. ಅಲ್ಲದೆ ಶಾಲೆಗೆ ಎತ್ತಿಕೊಂಡು ಹೋಗುತ್ತಿದ್ದೇವು. ಅವಳ ಸಂಕಟ ಮನಸ್ಸಿಗೆ ಘಾಸಿಯನ್ನುಂಟು ಮಾಡುತ್ತಿತ್ತು.  ಆದರೆ ಅವಳು ನಮಗೆ ಯಾವತ್ತೂ ಭಾರ ಆಗಿರಲಿಲ್ಲ. ಹಠಮಾರಿಯಾಗಿದ್ದ ಶಿಲ್ಪಾ ತುಂಬಾ ಧೈರ್ಯವಂತೆ. ತಾನು ಅಂದುಕೊಂಡಿರುವುದನ್ನು ಸಾಧಿಸುವ ಛಲ ಆಕೆಯಲ್ಲಿತ್ತು. ಹಾಗಾಗಿಯೇ ಇವತ್ತು ಅವಳು ಈ ಮಟ್ಟಕ್ಕೆ ಏರಿದ್ದಾಳೆ" ಅಂತ ಹೆಮ್ಮೆಯಿಂದ ಹೇಳ್ತಾರೆ ಶಿಲ್ಪಾ ತಾಯಿ ಶಾಂತ. 

ಇನ್ನು ಶಿಲ್ಪಾ ಕೃತಕ ಕಾಲಿನ ನೆರವಿನಿಂದ ಅಭ್ಯಾಸ ನಡೆಸುತ್ತಿದ್ದಾಳೆ. ಎಡಗಾಲಿಗೆ ಶಕ್ತಿ ನೀಡುತ್ತಿರುವುದು ಜೈಪುರ ಫುಟ್. ಸಾಮಾನ್ಯವಾಗಿ ಪ್ಯಾರ ಅಥ್ಲೀಟ್‍ಗಳು ದುಬಾರಿ ಮೊತ್ತದ ಕೃತಕ ಕಾಲುಗಳನ್ನು ಬಳಸಿಕೊಂಡು ಸ್ಪರ್ಧೆ ಮಾಡುತ್ತಾರೆ. ಆದ್ರೆ ಆರ್ಥಿಕ ತೊಂದರೆಯಿಂದ ಶಿಲ್ಪಾಗೆ ಯಾವುದೇ ರೀತಿ ಅತ್ಯಾಧುನಿಕ ಮಾದರಿಯ ಸೌಲಭ್ಯಗಳು ಸಿಗಲಿಲ್ಲ. ಗುಣಮಟ್ಟದ ಕೃತಕ ಕಾಲನ್ನ ಪಡೆಯಲು ಸಾಧ್ಯವಾಗಲಿಲ್ಲ.  ಆದ್ರೆ ಇವತ್ತು ಜೈಪುರ ಫುಟ್‍ನಲ್ಲೇ ಅಂತಾರಾಷ್ಟ್ರೀಯ ಸ್ಪರ್ಧಿಯಾಗಿ ಹಲವು ಪದಕಗಳನ್ನು ಗೆದ್ದಿದ್ದಾಳೆ. 

ಒಟ್ಟಿನಲ್ಲಿ ಶಿಲ್ಪಾ ಶೈಲಾ ಅವರ ನೈಜ ಕಥೆ ಕೇವಲ ಕಂಚಿನ ಪದಕದ ಕಥೆಯಲ್ಲ. ಸಾವು -ನೋವನ್ನು ಗೆದ್ದ ಹೋರಾಟದ ಕಥೆ. ರೈತನ ಮಗಳಾಗಿ, ಶಿಕ್ಷಕಿಯಾಗಿ, ಪ್ಯಾರಾ ಅಥ್ಲೀಟ್ ಆಗಿ ತನ್ನ ಬದುಕನ್ನು ತಾನೇ ರೂಪಿಸಿಕೊಂಡ ಗಟ್ಟಿಗಿತ್ತಿಯ ಕಥೆ. ಕಾಲು ಕಳೆದುಕೊಂಡರೂ ಕನಸುಗಳನ್ನು ಕಳೆದುಕೊಳ್ಳಲಿಲ್ಲ. ಸೌಲಭ್ಯಗಳು ಇಲ್ಲದಿದ್ರೂ ಸಾಧಿಸುವ ಹಠ, ಛಲವನ್ನು ಕೈಬಿಡಲಿಲ್ಲ. ಶಿಲ್ಪಾ ಸಾಧನೆಗೆ ಒಂದು ಸಲಾಂ..! 

-ಸನತ್ ರೈ.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾಮನ್ವೆಲ್ತ್ ಗೇಮ್ ನಲ್ಲಿ ಭಾರತಕ್ಕೆ ಕಂಚಿನ ಮುಕುಟಮಾಲೂರು ನ್ಯಾಯಾಧೀಶೆಯ ಬೀದಿಜಗಳ? ನೊಂದವರ ಕಣ್ಣೀರು! ವಕೀಲರ ಸಂಘದಿಂದ ಹೈ ಮೆಟ್ಟಿಲುಆ.5ಕ್ಕೆ ಮುಜರಾಯಿ ದೇವಾಲಯಗಳ ಅರ್ಚಕರ,ಆಗಮಿಕರ ನೌಕರರ ಸಂಘದಿಂದ ಸಮಾವೇಶ ಅಭಿನಂದನ ಸಮಾರಂಭರಸ್ತೆ ಬದಿ ಧೂಮಪಾನಕ್ಕೆ ಕಡಿವಾಣ: ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯಾಪಾರ ಮಾಡಿ-ಶಾಸಕ ಎಸ್.ಸುರೇಶ್ ಕುಮಾರ್ಜುಲೈ 25ನ್ನು "ಯುವೋದಯ ದಿನ'ವಾಗಿ ಘೋಷಿಸಬೇಕು: ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್ ಆಗ್ರಹದಿ ನ್ಯು ಶಿಪ್ಟ್ ಬ್ರೀಜಾ ಉದ್ಘಾಟಿಸಿದ ನಟ ಮಿತ್ರಾಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ..ಸಿಂಹ ಪರ್ವದಡಿ ಲಯನ್ಸ್ ಜಿಲ್ಲಾ 317A ನೂತನ ಪದಾಧಿಕಾರಿಗಳ ಪದಗ್ರಹಣ ಜನ್ ಜಿ, ಜನ್ ಆಲ್ಫಾ ಯುವಕರು AI ಜೊತೆ ಸ್ಪರ್ಧೆಗೆ ಸಿದ್ದರಾಗಬೇಕು : ಡಾ‌ ನಿರ್ಮಲಾನಂದನಾಥ ಸ್ವಾಮೀಜಿಶ್ರದ್ದಾ ಶ್ರೀನಿವಾಸ್ ರಿಂದ ಭರತನಾಟ್ಯ ಪ್ರದರ್ಶನ