
ಕೇಪ್‌ಟೌನ್ ನಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಕ್ಲಾಸಿಕ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅವರು (69 ಕೆ.ಜಿ ಕೆಳಗಿನ ವರ್ಗದಲ್ಲಿ) ಭಾರತ ರಾಷ್ಟ್ರೀಯ ಓಪನ್ ದಾಖಲೆಯನ್ನು ಮುರಿದು ವಿಶ್ವದ 4ನೇ ಸ್ಥಾನ ಗಳಿಸಿದ್ದಾರೆ.
ಕೇವಲ ಎರಡು ವರ್ಷಗಳ ತರಬೇತಿಯಲ್ಲಿ ವಿಶ್ವದ ಶ್ರೇಷ್ಠ ಪವರ್‌ಲಿಫ್ಟರ್‌ಗಳಲ್ಲಿ ಒಬ್ಬರಾಗಿ ಹೊಮ್ಮಿದ ದೀಪಾ ವೃತ್ತಿಪರ ಕ್ರೀಡಾಪಟು ಅಲ್ಲ. ಬೌದ್ಧಿಕ ವಿಕಲಚೇತ ಬೆಳೆದು ನಿಂತ ಇಬ್ಬರು ಮಕ್ಕಳ ಆರೈಕೆಗೆ ಶಕ್ತಿವಂತಳಾಗಬೇಕೆಂಬ ಉದ್ದೇಶದಿಂದ ಅವರು ಪವರ್‌ಲಿಫ್ಟಿಂಗ್ ತರಬೇತಿಯನ್ನು ಆರಂಭಿಸಿದರು. ಅದು ಅವರನ್ನು ಎತ್ತರಕ್ಕೆ ಕೊಂಡೊಯ್ಯಿತು.
ಅಕ್ಟೋಬರ್ 2023ರಲ್ಲಿ ಬೆಂಗಳೂರು ಜಿಲ್ಲಾ ಮಟ್ಟದ ಸ್ಪರ್ಧೆಯಿಂದ ಆರಂಭಿಸಿದ ದೀಪಾ ಈ ಅವಧಿಯಲ್ಲಿ 14 ರಾಷ್ಟ್ರೀಯ ಚಿನ್ನದ ಪದಕ ಪಡೆದು 16 ರಾಷ್ಟ್ರೀಯ ದಾಖಲೆಗಳನ್ನು ಮತ್ತು ಮೂರು ಏಷ್ಯನ್ ದಾಖಲೆಗಳನ್ನು ನಿರ್ಮಿಸಿದ್ದಾರೆ.
ಅವರ ಮೊದಲ ಅಂತರರಾಷ್ಟ್ರೀಯ ಯಶಸ್ಸು ಜುಲೈ 2025ರಲ್ಲಿ ಜಪಾನ್‌ನ ಹಿಮೆಜಿಯಲ್ಲಿ ನಡೆದ ಏಷ್ಯಾ ಆಫ್ರಿಕಾ ಪೆಸಿಫಿಕ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಸಿಕ್ಕಿತು. ಅಲ್ಲಿ ಅವರು 22 ದೇಶಗಳ ಸ್ಪರ್ಧಾಳುಗಳ ನಡುವೆ 1 ಚಿನ್ನ, 3 ಬೆಳ್ಳಿ, 1 ಕಂಚು ಪದಕಗಳನ್ನು ಗೆದ್ದು, ಹೊಸ ಏಷ್ಯನ್ ದಾಖಲೆ ನಿರ್ಮಿಸಿದರು. ಅದೇ ವೇಳೆ ಅವರಿಗೆ “ಸ್ಟ್ರಾಂಗ್ ವುಮನ್ (ರನ್ನರ್-ಅಪ್)” ಗೌರವ ದೊರಕಿತು.
ಆಗಸ್ಟ್ 2025ರಲ್ಲಿ ನಡೆದ ಮಾಸ್ಟರ್ ನ್ಯಾಷನಲ್ಸ್‌ನಲ್ಲಿ ಅವರು “ಸ್ಟ್ರಾಂಗ್ ವುಮನ್” ಪ್ರಶಸ್ತಿಯನ್ನು ಗೆದ್ದರು . ಇದರಿಂದ ಅವರು ಏಷ್ಯಾದ ಶ್ರೇಷ್ಠ ಪವರ್‌ಲಿಫ್ಟರ್‌ಗಳಲ್ಲಿ ಒಬ್ಬರೆನಿಸಿದರು.
ವಿಶ್ವ ವೇದಿಕೆಯಲ್ಲಿ ಸಾಧನೆಯ ಶಿಖರ
ಅಕ್ಟೋಬರ್ 15, 2025, ಕೇಪ್‌ಟೌನ್‌ನಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಕ್ಲಾಸಿಕ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ದೀಪಾ ಅವರ ಉತ್ತುಂಗ ಪ್ರದರ್ಶನ ಹೀಗಿತ್ತು:
ಬೆಳ್ಳಿ ಪದಕ – ಸ್ಕ್ವಾಟ್: 162.5 ಕೆ.ಜಿ (ಏಷ್ಯನ್ ದಾಖಲೆ); ಬೆಂಚ್ ಪ್ರೆಸ್: 87.5 ಕೆ.ಜಿ; ಡೆಡ್‌ಲಿಫ್ಟ್: 182.5 ಕೆ.ಜಿ; ಒಟ್ಟು: 432.5 ಕೆ.ಜಿ
ದೀಪಾ ಅಜಯ್ ಅವರ ಈ ಸಾಧನೆ ಭಾರತದ ರಾಷ್ಟ್ರೀಯ ಓಪನ್ ದಾಖಲೆಯನ್ನು ಮುರಿದು, ಎಲ್ಲ ವಯೋಮಾನದ ಪವರ್‌ಲಿಫ್ಟರ್‌ಗಳಲ್ಲಿ ಅತಿ ಹೆಚ್ಚು ಭಾರ ಎತ್ತಿದ ಏಷ್ಯನ್ ದಾಖಲೆಯೂ ಇವರಿಗೆ ಲಭಿಸಿದೆ.