ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‍ಆರ್‍ಟಿಸಿ) ತನ್ನ ಅತ್ಯುತ್ತಮ ತರಬೇತಿ ಮತ್ತು ಸಾಂಸ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಪ್ರತಿಷ್ಠಿತ 'ವಲ್ರ್ಡ್ ಎಚ್‍ಆರ್‍ಡಿ ಕಾಂಗ್ರೆಸ್ ಪ್ರಶಸ್ತಿ-2026' (Best in Training and Organisation Development) ಗೆ ಭಾಜನವಾಗಿದೆ.
2026 ನೇ ಮಾರ್ಚ್ 31 ರಂದು ಕೊಚ್ಚಿನ್‍ನಲ್ಲಿ ನಡೆದ ಸಮಾರಂಭದಲ್ಲಿ ಈ ಗೌರವವನ್ನು ಪ್ರದಾನ ಮಾಡಲಾಯಿತು.
ನಿಗಮದ ಅಭಿವೃದ್ಧಿಯಲ್ಲಿ ತರಬೇತಿ ಕಾರ್ಯಕ್ರಮಗಳ ಪರಿಣಾಮಕಾರಿ ಪಾತ್ರವನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕಳೆದ ಆರು ತಿಂಗಳಲ್ಲಿ ನಿಗಮದ 5 ತರಬೇತಿ ಕೇಂದ್ರಗಳ ಮೂಲಕ 12,000ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ವಿವಿಧ ಮಾದರಿಯ ತರಬೇತಿ ನೀಡಲಾಗಿದೆ. ಇಂಧನ ಕ್ಷಮತೆ, ಅಪಘಾತ ರಹಿತ ಚಾಲನೆ, ರಸ್ತೆ ಸುರಕ್ಷತೆ, ಸಿಮ್ಯುಲೇಟರ್ ತರಬೇತಿ ಹಾಗೂ ಆಡಳಿತ ಮಂಡಳಿ ಸಿಬ್ಬಂದಿಗಳಿಗೆ ಪುನಃಶ್ಚೇತನ ತರಬೇತಿಗಳನ್ನು ಆಯೋಜಿಸಲಾಗಿತ್ತು.
ಪ್ರಧಾನಮಂತ್ರಿ ಅನುಸೂಚಿತ ಜಾತಿ ಅಭ್ಯುದಯ ಯೋಜನೆಯಡಿ ಸಾರಿಗೆ ಇಲಾಖೆಯ ಸಹಯೋಗದೊಂದಿಗೆ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಉಚಿತ ಭಾರಿ ವಾಹನ ಚಾಲನಾ ತರಬೇತಿ ಮತ್ತು ಲೈಸೆನ್ಸ್ ವಿತರಣೆ, ಅಲ್ಪಸಂಖ್ಯಾತ ನಿರ್ದೇಶನಾಲಯದ ಸಹಯೋಗದಲ್ಲಿ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ ಲಘು ಮತ್ತು ಭಾರಿ ವಾಹನ ಚಾಲನಾ ತರಬೇತಿ ನೀಡಲಾಗುತ್ತಿದೆ. ಹೊಸದಾಗಿ ನೇಮಕಗೊಂಡ ಚಾಲಕ-ಕಂ-ನಿರ್ವಾಹಕರು, ತಾಂತ್ರಿಕ ಸಿಬ್ಬಂದಿ, ಕೆಎಸ್‍ಆರ್‍ಟಿಸಿ ಪೇದೆಗಳು ಮತ್ತು ಕಿರಿಯ ಸಹಾಯಕರಿಗೆ ವೃತ್ತಿ ಪರಿಚಯ ಹಾಗೂ ಜವಾಬ್ದಾರಿಗಳ ಬಗ್ಗೆ ವಿಶೇಷ ತರಬೇತಿ ಸೇರಿದಂತೆ ನಿಗಮದಲ್ಲಿನ ಪರಿಣಾಮಕಾರಿ ತರಬೇತಿ ಸೂಚ್ಯಂಕವನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕೊಚ್ಚಿನ್‍ನಲ್ಲಿ ನಡೆದ ಸಮಾರಂಭದಲ್ಲಿ ಕಾಲೇಜ್ ಆಫ್ ಶಿಪ್ ಟೆಕ್ನಾಲಜಿಯ ನಿರ್ದೇಶಕರಾದ ಕ್ಯಾಪ್ಟನ್ ಎಸ್.ಟಿ. ಶ್ರೀಧರನ್ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು. ನಿಗಮದ ಪರವಾಗಿ ಮಂಡಳಿ ಕಾರ್ಯದರ್ಶಿ ಹಾಗೂ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಲತಾ ಟಿ. ಎಸ್. ಮತ್ತು ಹಾಸನದ ಪ್ರಾದೇಶಿಕ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಶ್ರೀಮತಿ ಎ. ಎಸ್. ಗೀತಾಂಜಲಿ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.