LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಜುಲೈ 1 ರಿಂದ “ಸುರಕ್ಷಿತ ಪಾದಚಾರಿ ಮಾರ್ಗ ಅಭಿಯಾನ” ಆರಂಭ : ಕೃಷ್ಣ ಬೈರೇಗೌಡ

ಜುಲೈ 10 ರಿಂದ ವಾರಸುದಾರರಿಲ್ಲದ ವಾಹನಗಳ ತೆರವು ಕಾರ್ಯಾಚರಣೆ ಆರಂಭ,  ಜುಲೈ 1 ರಿಂದ ಆದ್ಯತಾ ರಸ್ತೆಗಳಾದ ಆರ್ಟಿರಿಯಲ್ ಹಾಗೂ ಸಬ್-ಆರ್ಟಿರಿಯಲ್ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳ ಮೇಲೆ ವ್ಯಾಪಾರಕ್ಕೆ ಅವಕಾಶವಿಲ್ಲ*  *ವೈಜ್ಞಾನಿಕ ರೀತಿಯಲ್ಲಿ ಬಾಕ್ಸ್ ಕಟಿಂಗ್ ಮೂಲಕ ರಸ್ತೆ ಗುಂಡಿಗಳನ್ನು ಮುಚ್ಚಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ

ಬೆಂಗಳೂರು: ಜಿಬಿಎ ವ್ಯಾಪ್ತಿಯ ಪಾದಚಾರಿ ಮಾರ್ಗಗಳಲ್ಲಿ ಉಂಟಾಗಿರುವ ಒತ್ತುವರಿಗಳನ್ನು ಅಂಗಡಿ ಮಾಲೀಕರು  ಸ್ವಯಂಪ್ರೇರಿತವಾಗಿ ತೆರವುಗೊಳಿಸಿಕೊಳ್ಳಲು ಜುಲೈ 1 ರವರೆಗೆ ಅವಕಾಶ ನೀಡಲಾಗುವುದು. ಜುಲೈ 1ರ ನಂತರ “ಸುರಕ್ಷಿತ ಪಾದಚಾರಿ ಮಾರ್ಗ ಅಭಿಯಾನ”ವನ್ನು ಆರಂಭಿಸಲಾಗುವುದು ಎಂದು *ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ* ಅಧಿಕಾರಿಗಳಿಗೆ ಸೂಚನೆ ನೀಡಿದರು.news_1782314415_0_819.webp

ಜಿಬಿಎ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಹಾಗೂ ದುರಸ್ತಿ ಕಾಮಗಾರಿಗಳ ಕುರಿತು ಇಂದು ನಡೆದ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾದಚಾರಿ ಮಾರ್ಗದಲ್ಲಿ ನಡೆಯುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು ಎಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದ್ದು, ಅದನ್ನು ಅನುಷ್ಠಾನಗೊಳಿಸಲು ಎಲ್ಲಾ ರಾಜ್ಯಗಳ ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ. ಅದರಂತೆ, ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಕೂಡ ಈ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಹಲವು ನಿರ್ದೇಶನಗಳನ್ನು ನೀಡಲಾಗಿದೆ ಎಂದು ಹೇಳಿದರು.

ನಗರದಲ್ಲಿ ಸುಮಾರು 13 ಸಾವಿರ ಕಿ.ಮೀ ರಸ್ತೆ ಜಾಲವಿದ್ದು, ಆರ್ಟಿರಿಯಲ್ ಹಾಗೂ ಸಬ್-ಆರ್ಟಿರಿಯಲ್ ರಸ್ತೆಗಳಂತಹ ಆದ್ಯತಾ ರಸ್ತೆಗಳಾದ ಸುಮಾರು 2,000 ಕಿ.ಮೀ ವ್ಯಾಪ್ತಿಯಲ್ಲಿ ಪಾದಚಾರಿಗಳ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವ ಎಲ್ಲಾ ಅಡೆತಡೆಗಳನ್ನು ತೆರವುಗೊಳಿಸಲು ಆಂದೋಲನ ಮಾದರಿಯಲ್ಲಿ “ಸುರಕ್ಷಿತ ಪಾದಚಾರಿ ಮಾರ್ಗ ಅಭಿಯಾನ” ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದರು.

*ಒತ್ತುವರಿಗಳನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸಲು ಅವಕಾಶ:*

ನಗರದಾದ್ಯಂತ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲಾಗುವುದು. ಅನೇಕ ಅಂಗಡಿಗಳು ತಮ್ಮ ಸಾಮಗ್ರಿಗಳು, ನಾಮಫಲಕಗಳು ಹಾಗೂ ಇತರೆ ವಸ್ತುಗಳನ್ನು ಪಾದಚಾರಿ ಮಾರ್ಗಗಳ ಮೇಲೆ ಇರಿಸುವುದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ. ಆದ್ದರಿಂದ ಅಂಗಡಿ ಮಾಲೀಕರಿಗೆ ಜುಲೈ 1ರವರೆಗೆ ಸ್ವಯಂಪ್ರೇರಿತವಾಗಿ ಒತ್ತುವರಿಗಳನ್ನು ತೆರವುಗೊಳಿಸಿಕೊಳ್ಳಲು ಅವಕಾಶ ನೀಡಲಾಗುತ್ತಿದೆ. ಆ ಬಳಿಕವೂ ಒತ್ತುವರಿ ಮುಂದುವರಿದಲ್ಲಿ ಪಾಲಿಕೆಯಿಂದಲೇ ತೆರವುಗೊಳಿಸಿ, ನಿಯಮಾನುಸಾರ ದುಭಾರಿ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.news_1782314415_2_429.webp

*ಪಾದಚಾರಿ ಮಾರ್ಗಗಳು ಸಾರ್ವಜನಿಕರ ಆಸ್ತಿ:*

ಪಾದಚಾರಿ ಮಾರ್ಗಗಳು ನಗರದ ಸುಮಾರು 1.5 ಕೋಟಿ ಜನರ ಆಸ್ತಿಯಾಗಿದ್ದು, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ತಮ್ಮ ವ್ಯಾಪಾರ ಚಟುವಟಿಕೆಗಳನ್ನು ತಮ್ಮ ಜಾಗದ ಮಿತಿಯಲ್ಲಿಯೇ ನಡೆಸಬೇಕು. ಸುರಕ್ಷಿತ ಪಾದಚಾರಿ ಮಾರ್ಗಗಳ ನಿರ್ಮಾಣ ಜನರ ಬಹುದಿನಗಳ ಬೇಡಿಕೆಯಾಗಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಗೌರವಿಸಿ ಎಲ್ಲರೂ ಒತ್ತುವರಿಗಳನ್ನು ತೆರವುಗೊಳಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.

*ಅಪಘಾತಗಳಲ್ಲಿ ಶೇ.30 ಪಾದಚಾರಿಗಳ ಸಾವು:*

ನಗರದಲ್ಲಿ ಪ್ರತಿವರ್ಷ ಸುಮಾರು 1,000 ಮಂದಿ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದು, ಅವರಲ್ಲಿ ಸುಮಾರು ಶೇ.30ರಷ್ಟು ಪಾದಚಾರಿಗಳೇ ಆಗಿದ್ದಾರೆ. ಸುರಕ್ಷಿತ ಹಾಗೂ ಸುಗಮ ಪಾದಚಾರಿ ಮಾರ್ಗಗಳು ಲಭ್ಯವಿದ್ದರೆ ಇಂತಹ ಅನೇಕ ಅಪಘಾತಗಳನ್ನು ತಡೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದರು.

*ಪಾದಚಾರಿ ಮಾರ್ಗಗಳಲ್ಲಿ ಪಾರ್ಕಿಂಗ್‌ಗೆ ಅವಕಾಶವಿಲ್ಲ:*

ಪಾದಚಾರಿ ಮಾರ್ಗಗಳು ಸಾರ್ವಜನಿಕರ ಸಂಚಾರಕ್ಕಾಗಿ ನಿರ್ಮಿಸಲಾಗಿದ್ದು, ವಾಹನ ನಿಲುಗಡೆಗಾಗಿ ಅಲ್ಲ. ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಪಾದಚಾರಿ ಮಾರ್ಗಗಳಲ್ಲಿ ವಾಹನಗಳನ್ನು ನಿಲ್ಲಿಸಿದರೆ ಯಾವುದೇ ಮುಲಾಜಿಲ್ಲದೆ ಟೋಯಿಂಗ್ ಮೂಲಕ ತೆರವುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

*ವಾರಸುದಾರರಿಲ್ಲದ ವಾಹನಗಳ ತೆರವಿಗೆ ಕ್ರಮ:*

ಜುಲೈ 1 ರಿಂದ ನಗರದಾದ್ಯಂತ ವಾರಸುದಾರರಿಲ್ಲದೆ ರಸ್ತೆ ಬದಿಯಲ್ಲಿ ನಿಂತಿರುವ ವಾಹನಗಳಿಗೆ ನೋಟಿಸ್ ಸ್ಟಿಕ್ಕರ್ ಅಂಟಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸ್ಟಿಕ್ಕರ್ ಅಂಟಿಸಿದ ಬಳಿಕ 7 ದಿನಗಳ ಕಾಲಾವಕಾಶ ನೀಡಲಾಗುವುದು. ನಂತರವೂ ವಾಹನಗಳನ್ನು ತೆರವುಗೊಳಿಸದಿದ್ದಲ್ಲಿ ಜುಲೈ 10ರಿಂದ ಟೋಯಿಂಗ್ ಮೂಲಕ ತೆರವುಗೊಳಿಸಿ ಹರಾಜು ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.news_1782314415_3_111.webp

*ಪಾದಚಾರಿ ಮಾರ್ಗಗಳ ದುರಸ್ತಿಗೆ ₹70 ಕೋಟಿ:*

ನಗರದ ಐದು ಪಾಲಿಕೆಗಳ ವ್ಯಾಪ್ತಿಯ ಸುಮಾರು 2,000 ಕಿ.ಮೀ ಪಾದಚಾರಿ ಮಾರ್ಗಗಳಲ್ಲಿ ಕಂಡುಬರುವ ನ್ಯೂನತೆಗಳನ್ನು ಸರಿಪಡಿಸಲು ₹70 ಕೋಟಿ ಅನುದಾನ ಮೀಸಲಿಡಲಾಗಿದೆ. ಸ್ಲ್ಯಾಬ್‌ಗಳು, ಕರ್ಬ್ ಸ್ಟೋನ್‌ಗಳು, ಲೆವೆಲ್ ವ್ಯತ್ಯಾಸಗಳು ಸೇರಿದಂತೆ ಅಗತ್ಯ ದುರಸ್ತಿ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.

*ಪ್ರಮುಖ ರಸ್ತೆಗಳಲ್ಲಿ ವ್ಯಾಪಾರಕ್ಕೆ ಅವಕಾಶವಿಲ್ಲ:*

ಜುಲೈ 1ರಿಂದ ಆರ್ಟಿರಿಯಲ್ ಹಾಗೂ ಸಬ್-ಆರ್ಟಿರಿಯಲ್ ರಸ್ತೆಗಳ ಪಾದಚಾರಿ ಮಾರ್ಗಗಳು ಮತ್ತು ಪ್ರಮುಖ ರಸ್ತೆಗಳಲ್ಲಿ ತಳ್ಳುಗಾಡಿಗಳ ಮೂಲಕ ವ್ಯಾಪಾರ ಮಾಡಲು ಅವಕಾಶ ಇರುವುದಿಲ್ಲ. ನಿಯಮ ಉಲ್ಲಂಘಿಸಿದಲ್ಲಿ ತಳ್ಳುಗಾಡಿಗಳನ್ನು ವಶಪಡಿಸಿಕೊಂಡು ದಂಡ ವಿಧಿಸಲಾಗುವುದು. ಇತರೆ ಅನುಮತಿತ ಪ್ರದೇಶಗಳಲ್ಲಿ ಮಾತ್ರ ವ್ಯಾಪಾರ ನಡೆಸಬಹುದು ಎಂದು ಹೇಳಿದರು.

*ಬಾಕ್ಸ್ ಕಟಿಂಗ್ ಮೂಲಕ ರಸ್ತೆ ಗುಂಡಿ ಮುಚ್ಚಲು ಸೂಚನೆ:*

ನಗರದ ರಸ್ತೆ ಗುಂಡಿಗಳನ್ನು ವೈಜ್ಞಾನಿಕ ವಿಧಾನದಲ್ಲಿ ಬಾಕ್ಸ್ ಕಟಿಂಗ್ ಮಾಡಿ, ಜೆಲ್ಲಿ ತುಂಬಿ, ಡಾಂಬರೀಕರಣ ನಡೆಸಿ ರಸ್ತೆ ಮಟ್ಟಕ್ಕೆ ಸಮನಾಗಿ ದುರಸ್ತಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ, ರಸ್ತೆ ಗುಂಡಿ ಮುಚ್ಚುವ ಕಾರ್ಯವನ್ನು ಹೆಚ್ಚು ಪರಿಣಾಮಕಾರಿಯಾಗಿ ನಡೆಸಲು ಮುಂದಿನ ದಿನಗಳಲ್ಲಿ ಆಧುನಿಕ ಯಂತ್ರೋಪಕರಣಗಳ ಬಳಕೆಗೆ ಆದ್ಯತೆ ನೀಡುವಂತೆ ಸೂಚಿಸಲಾಗಿದೆ ಎಂದರು.

*ಸಿಗ್ನಲ್ ಹಾಗೂ ಜಂಕ್ಷನ್‌ಗಳ ದುರಸ್ತಿಗೆ ಆದ್ಯತೆ:*

ನಗರದ ಪ್ರಮುಖ ಜಂಕ್ಷನ್‌ಗಳು ಹಾಗೂ ಸಿಗ್ನಲ್‌ಗಳಲ್ಲಿ ತುರ್ತು ದುರಸ್ತಿ ಕಾರ್ಯಗಳನ್ನು ಕೈಗೊಳ್ಳಬೇಕು. ರಸ್ತೆ ಗುಂಡಿಗಳು, ರಸ್ತೆ ಮೇಲ್ಮೈ ಹಾನಿ ಸೇರಿದಂತೆ ಇತರೆ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಸೂಚಿಸಲಾಗಿದೆ. ಸಿಗ್ನಲ್‌ಗಳ ಸಮೀಪ ಅಳವಡಿಸಿರುವ ಅನಗತ್ಯ ಹಂಪ್‌ಗಳನ್ನು ತೆರವುಗೊಳಿಸುವಂತೆಯೂ ಸೂಚಿಸಲಾಗಿದೆ ಎಂದು ಹೇಳಿದರು.

*ಸಿಗ್ನಲ್ ಸಮೀಪ ವಾಹನ ನಿಲುಗಡೆಗೆ ನಿರ್ಬಂಧ:*

ನಗರದ ಸಿಗ್ನಲ್‌ಗಳಿಂದ 75 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಬಸ್ ಅಥವಾ ಇತರೆ ವಾಹನಗಳ ನಿಲುಗಡೆಗೆ ಅವಕಾಶ ನೀಡಬಾರದು. ಈ ಕುರಿತು ಸಂಚಾರಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಆದೇಶ ಹೊರಡಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ಆಯುಕ್ತರಾದ ರಮೇಶ್ ಡಿ.ಎಸ್., ಪೊಮ್ಮಲ್ ಸುನೀಲ್ ಕುಮಾರ್, ಜಿ. ಜಗದೀಶ್, ರಮೇಶ್ ಕೆ.ಎನ್., ಡಾ. ರಾಜೇಂದ್ರ ಕೆ.ವಿ., ಸಂಚಾರ ಪೊಲೀಸ್ ವಿಭಾಗದ ಜಂಟಿ ಆಯುಕ್ತರಾದ ಕಾರ್ತಿಕ್ ರೆಡ್ಡಿ, ಅಪರ ಆಯುಕ್ತರು, ಮುಖ್ಯ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇವನಹಳ್ಳಿ ಭೂಸ್ವಾಧೀನ: ಎಕರೆಗೆ ₹2.70 ಕೋಟಿ ಪರಿಹಾರಕ್ಕೆ ಶಿಫಾರಸುTB ಡ್ಯಾಂ ಗೆ ಕ್ರಸ್ಟಿಗೆ ಅಳವಡಿಕೆ ನೀರು ಪೋಲಾಗುವುದನ್ನು ತಡೆಗಟ್ಟ ಅಧಿಕಾರಿವರ್ಗರಸ್ತೆ ಡಾಂಬರಿಕರಣದ ಗುಣಮಟ್ಟ ಕಾಯ್ದುಕೊಂಡು ಕಾಮಗಾರಿ ನಿರ್ವಹಿಸಿ:  ವೆಂಕಟಾಚಲಪತಿಜುಲೈ 1 ರಿಂದ “ಸುರಕ್ಷಿತ ಪಾದಚಾರಿ ಮಾರ್ಗ ಅಭಿಯಾನ” ಆರಂಭ : ಕೃಷ್ಣ ಬೈರೇಗೌಡದೇಶಿಯ ಉಕ್ಕು ಉದ್ಯಮಕ್ಕೆ ಡಿಜಿಟಲ್ ಸ್ಪರ್ಶ; ವಾರ್ಷಿಕ 400 ದಶಲಕ್ಷ ಟನ್ ಉತ್ಪಾದನೆಯತ್ತ ಭಾರತಮಾವು ಬೆಳೆಗಾರರ ಸಂಕಷ್ಟ; ಕೇಂದ್ರದ ಕೃಷಿ ಸಚಿವರನ್ನು ಭೇಟಿಯಾದ ಹೆಚ್.ಡಿ.ಕುಮಾರಸ್ವಾಮಿಆಡುಗೋಡಿಯ ಸರ್ಕಾರಿ ಮಾದರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಿಟ್ ವಿತರಣೆಪೋಸ್ಟರ್ ಅಭಿಯಾನ ನಮಗೂ ಬರುತ್ತೆ, ಪುಂಡಪೋಕರಿಗಳ ಪೋಸ್ಟರ್‌ಗಳಿಗೆ ನಾನು ಉತ್ತರಿಸಲ್ಲಕಬ್ಬನ್ ಪಾರ್ಕ್ ನಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಪುನರಾರಂಭಬೆಳಗಾವಿಯಲ್ಲಿ 15 ದಿನಗಳ ಅಭಿನಯ ಸಹಿತ ರಂಗಸಂಗೀತ ತರಬೇತಿ ಶಿಬಿರ