ಬೆಂಗಳೂರು : ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಕೈಗೆತ್ತಿಕೊಂಡಿರುವ ವೈಟ್ ಟಾಪಿಂಗ್ ಕಾಮಗಾರಿಗಳಿಗೆ ವೇಗ ನೀಡಲು *ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್* ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಬಿಎ ವ್ಯಾಪ್ತಿಯಲ್ಲಿ ಬಿ-ಸ್ಮೈಲ್ ವತಿಯಿಂದ ಕೈಗೆತ್ತಿಕೊಂಡಿರುವ ವೈಟ್ ಟಾಪಿಂಗ್ ಹಾಗೂ ಸಂಚಾರಯುಕ್ತ (ಬಫರ್) ರಸ್ತೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಇಂದು ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ 1,700 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಎಲ್ಲ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಪರಿಶೀಲಿಸಿ, ಅವುಗಳನ್ನು ಪರಿಹರಿಸಿಕೊಂಡು ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
*ಶೇ. 51 ರಷ್ಟು ಕಾಮಗಾರಿ ಪೂರ್ಣ:*
800 ಕೋಟಿ ರೂ. ವೆಚ್ಚದಲ್ಲಿ 58.60 ಕಿ.ಮೀ ಉದ್ದದ ವೈಟ್ ಟಾಪಿಂಗ್ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಇದರಲ್ಲಿ 28.18 ಕಿ.ಮೀ ಉದ್ದದ ರಸ್ತೆಗೆ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಂಡಿದೆ. ಈವರೆಗೆ ಶೇ. 56.1 ರಷ್ಟು ಪ್ರಗತಿ ಸಾಧಿಸಲಾಗಿದೆ. ಅಲ್ಲದೆ, 900 ಕೋಟಿ ರೂ. ವೆಚ್ಚದಲ್ಲಿ 66.28 ಕಿ.ಮೀ ಉದ್ದದ ರಸ್ತೆಗೆ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಇದರಲ್ಲಿ 26.40 ಕಿ.ಮೀ ಕಾಮಗಾರಿ ಪೂರ್ಣಗೊಂಡಿದ್ದು, ಶೇ. 46.43 ರಷ್ಟು ಪ್ರಗತಿ ಸಾಧಿಸಲಾಗಿದೆ. ಒಟ್ಟು 1700 ಕೋಟಿ ರೂ. ವೆಚ್ವದ ಕಾಮಗಾರಿ ಪೈಕಿ ಶೇ. 51 ರಷ್ಟು ಪ್ರಗತಿ ಸಾಧಿಸಲಾಗಿದೆ. ಬಾಕಿ ಇರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ ನೀಡಿದರು.
*ರಸ್ತೆಗಳ ಅಗಲೀಕರಣಕ್ಕೆ ಕ್ರಮವಹಿಸಿ:*
ನಾಗವಾರ, ಟ್ಯಾನರಿ, ದಿಣ್ಣೂರು ಹಾಗೂ ಹಾಲಿಡೇ ವಿಲೇಜ್ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳುವ ಮುನ್ನ ರಸ್ತೆ ಅಗಲೀಕರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಆಯಾ ನಗರ ಪಾಲಿಕೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಅಗಲೀಕರಣಕ್ಕೆ ಅಗತ್ಯವಿರುವ ಜಾಗಗಳಿಗೆ ಟಿಡಿಆರ್ (TDR) ನೀಡುವ ಮೂಲಕ ತ್ವರಿತಗತಿಯಲ್ಲಿ ರಸ್ತೆ ಅಗಲೀಕರಣ ಕಾರ್ಯ ಪೂರ್ಣಗೊಳಿಸಿ ಬಳಿಕ ವೈಟ್ ಟಾಪಿಂಗ್ ಕಾಮಗಾರಿ ಕೈಗೊಳ್ಳುವಂತೆ ಸೂಚನೆ ನೀಡಿದರು.
*ರಸ್ತೆ ಗುಂಡಿಗಳನ್ನು ಮುಚ್ಚಿ:*
ನಗರದಲ್ಲಿ ಎಲ್ಲೆಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದೆಯೋ, ಆ ರಸ್ತೆಗಳಲ್ಲಿ ಯಾವುದೇ ಗುಂಡಿಗಳು ಇಲ್ಲದಂತೆ ನೋಡಿಕೊಳ್ಳಬೇಕು. ಇನ್ನೂ ಕಾಮಗಾರಿ ಪ್ರಾರಂಭವಾಗದ ರಸ್ತೆಗಳಲ್ಲಿ ರಸ್ತೆ ಗುಂಡಿಗಳನ್ನು ತಕ್ಷಣ ಮುಚ್ಚಿ, ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
*ಸಂಚಾರಯುಕ್ತ (ಬಫರ್) ರಸ್ತೆ ಕಾಮಗಾರಿಗಳಿಗೆ ವೇಗ ನೀಡಿ:*
ಜಿಬಿಎ ವ್ಯಾಪ್ತಿಯಲ್ಲಿ 68 ಕಿ.ಮೀ ಉದ್ದದ 9 ಸಂಚಾರಯುಕ್ತ (ಬಫರ್) ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಸಂಬಂಧ ನಡೆಯುತ್ತಿರುವ ಕಾಮಗಾರಿಗಳಿಗೆ ವೇಗ ನೀಡಿ, ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಮುಖ್ಯ ಅಭಿಯಂತರರಾದ ಮಾಲತಿ, ಮಾದೇಶ್, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.