LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಫೋನ್ ಕದ್ದಾಲಿಕೆ; ಸಿಎಂ ಸಿದ್ದರಾಮಯ್ಯ ಸುಳ್ಳಿಗೆ ತಿರುಗೇಟು ಕೊಟ್ಟ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ

ಬೆಂಗಳೂರು : ಫೋನ್ ಕದ್ದಾಲಿಕೆ ಬಗ್ಗೆ ತಮ್ಮ ಹೇಳಿಕೆಯನ್ನು ಗ್ರಹಿಸದೆ ತಮ್ಮ ಮೇಲೆ ವಿನಾಕಾರಣ ಆರೋಪ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು ನೇರವಾಗಿ ಸಿಎಂ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನಾನು ಎರಡು ಸಲವೂ ಅಧಿಕಾರ ಕಳೆದುಕೊಂಡವನು. ಇತಿಹಾಸ ಎಂದಿಗೂ ಮೌನವಾಗಿರುವುದಿಲ್ಲ ಎಂಬುದು ನಿಮಗೂ ಗೊತ್ತಿರಲಿ. ನೀವೂ ಚರಿತ್ರೆಯಿಂದ ಪಾರಾಗಲು ಆಗದು ಸಿದ್ದರಾಮಯ್ಯನವರೇ? ನಾನು ಪೋನ್ ಕದ್ದಾಲಿಕೆ ಮಾಡಿದ್ದಿದ್ದರೆ ಹೇಗಾದರೂ ಸರಿ, ಅಧಿಕಾರ ಉಳಿಸಿಕೊಳ್ಳುತ್ತಿದ್ದೆ. ಹಾಗೆ ಮಾಡಿದ್ದಿದ್ದರೆ ಸಿದ್ದವನದಲ್ಲಿ ಕೂತು ಯಾವ ಕಬ್ಬೆಕ್ಕು ಕರಾಮತ್ತು ನಡೆಸಿತು ಎನ್ನುವುದನ್ನು ಪತ್ತೆ ಹಚ್ಚುತ್ತಿದ್ದೆ. ಅದು ನನಗೆ ಬೇಕಿರಲಿಲ್ಲ, ಕಳೆದುಕೊಂಡಿದ್ದರ ಬಗ್ಗೆಯೂ ನನಗೆ ಚಿಂತೆ ಇಲ್ಲ. ಆದರೆ, ಆ ಪಾಪಪ್ರಜ್ಞೆ ನಿಮ್ಮನ್ನು ಕಾಡುತ್ತಿದೆ, ಸದಾ ನೆರಳಿನಂತೆ! ಕದ್ದಾಲಿಕೆ ನನ್ನ ಗುಣವಲ್ಲ, ಅದೇನಿದ್ದರೂ ಕಾಂಗ್ರೆಸ್ ಪಕ್ಷದ್ದೇ ಆವಿಷ್ಕಾರ! ಅದೇ ನಿಮಗೆ ಬಂದಿರುವ ಸಂಸ್ಕಾರ!! ಎಂದು ಕೇಂದ್ರ ಸಚಿವರು ಮುಖ್ಯಮಂತ್ರಿ ಮೇಲೆ ಹರಿಹಾಯ್ದಿದ್ದಾರೆ.

ಈ ನಡುವೆ ನೀವು ಬಹಳ ಪುರುಸೊತ್ತಾಗಿದ್ದೀರಿ ಎಂದು ಭಾವಿಸಿದ್ದೇನೆ. ಕೆಲಸ ಮಾಡುವುದು ಬಿಟ್ಟು ಕೌಂಟರ್ ಕೊಡುವುದರಲ್ಲಿ ಹೆಚ್ಚು ಬ್ಯುಸಿಯಾಗಿದ್ದೀರಿ! ಕುಂಬಳಕಾಯಿ ಕಳ್ಳ ಎಂದರೆ ನಾನೇ.. ನಾನೇ.. ಹೆಗಲು ಮುಟ್ಟಿ ನೋಡಿಕೊಂಡರೆ ನಾನೇನು ಮಾಡಲಿ? ಫೋನ್ ಕದ್ದಾಲಿಕೆ ಬಗ್ಗೆ ಮಾಧ್ಯಮಗಳೇ ಮಾತನಾಡುತ್ತಿವೆ. ಆ ಬಗ್ಗೆ ನಾನು ಪ್ರತಿಕ್ರಿಯಿಸಿದ್ದೇನೆ, ಅಷ್ಟೇ. ಮುಖ್ಯಮಂತ್ರಿಗಳೇ, ನಿಮ್ಮ ಪುಂಖಾನುಪುಂಖ ಪುರಾಣ ನೋಡಿದರೆ ನಿಮಗೆ ಆಡಳಿತಕ್ಕಿಂತ ಮತ್ತೊಬ್ಬರನ್ನು ಆಡಿಕೊಳ್ಳುವುದರಲ್ಲೇ ಹೆಚ್ಚು ಮುತುವರ್ಜಿ, ಆಸಕ್ತಿ ಇದ್ದಂತಿದೆ ಎಂದು ಟಾಂಗ್ ನೀಡಿದ್ದಾರೆ.

*ಕುರ್ಚಿ ಕಾಳಗದ ಮುಂದುವರಿದ ಭಾಗವೇ ಫೋನ್ ಕದ್ದಾಲಿಕೆ:*

ಪ್ರತಿಪಕ್ಷಗಳು ತಮ್ಮ ಕೆಲಸ ತಾವು ಮಾಡುತ್ತಿವೆ. ಜನರು ದಯೆ ತೋರಿ ನಿಮಗೆ 140 ಸೀಟು ಕೊಟ್ಟರೆ ಆಡಳಿತ ನಡೆಸುವುದು ಬಿಟ್ಟು ಹಾದಿಬೀದಿಯಲ್ಲಿ ಕಚ್ಚಾಡುತ್ತಿದ್ದೀರಿ. ನಿಮ್ಮ ಪಕ್ಷದಲ್ಲಿನ ಕುರ್ಚಿ ಕಾಳಗದ ಮುಂದುವರಿದ ಭಾಗವೇ ಫೋನ್ ಕದ್ದಾಲಿಕೆ ಎನ್ನುವ ಅನುಮಾನ ಪ್ರತಿಪಕ್ಷಗಳದ್ದು ಮತ್ತು ಮಾಧ್ಯಮಗಳದ್ದು. ಪ್ರಶ್ನಿಸುವ ಜಾಗದಲ್ಲಿ ಪ್ರತಿಪಕ್ಷಗಳಿವೆ, ಉತ್ತರಿಸಿ. ವಿಷಯಾಂತರ ಬಿಟ್ಟು ಸತ್ಯ ಹೇಳಿ. ಸತ್ಯ ನಿಮ್ಮನೆ ದೇವ್ರು ಅಲ್ಲವೇ? ಸತ್ಯಮೇವ ಜಯತೇ ನಿಮ್ಮ ಸಿದ್ದಸ್ಲೋಗನ್! ಕಥೆ ಕಟ್ಟಿ ಕಾಲಹರಣ ಮಾಡುತ್ತಿರೇಕೆ? ಎಂದು ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ನಾನು ಎರಡು ಸಣ್ಣ ಅವಧಿಗೆ ಮುಖ್ಯಮಂತ್ರಿ ಆಗಿದ್ದೆ. ಸ್ವತಂತ್ರ ಸರಕಾರವೂ ನನ್ನದಲ್ಲ. ಕದ್ದಾಲಿಸುವ ಕರ್ಮ ನನಗೇಕೆ? ನಿಮ್ಮಂತೆ ಸಿದ್ದವನದಲ್ಲಿ ಕೂತು ಮನೆಹಾಳು ಮಾಡೋದಕ್ಕೆ ಶಾಸಕರಿಗೆ ಬ್ರೈನ್ ವಾಶ್ ಮಾಡುವ ಹೀನ ಜಾಯಮಾನ ನನ್ನದಲ್ಲ. ನಿಮ್ಮ ಮೊದಲ ಐದು ವರ್ಷದ ಸರಕಾರವೂ.. ಈಗಿನ ನಿಮ್ಮ ಗುಪ್ತಚರವೂ ರಾಜಕಾರಣವನ್ನು ನಾನು ಕಂಡಿರುವುದೇ ಅಲ್ಲವೇ? ಎಂದು ಅವರು ಕುಟುಕಿದ್ದಾರೆ.

*ಕಾಂಗ್ರೆಸ್ ನಲ್ಲಿನ ಆಂತರಿಕ ಪ್ರಜಾಪ್ರಭುತ್ವದ ವ್ಯಾಸ, ತ್ರಿಜ್ಯದ ಬಗ್ಗೆ ಅಳತೆ ಮಾಡುವ ತೆವಲು ನನಗಿಲ್ಲ:*

ನಿಮ್ಮ ಪಕ್ಷದಲ್ಲಿರುವ ಆಂತರಿಕ ಪ್ರಜಾಪ್ರಭುತ್ವದ ವ್ಯಾಸ, ತ್ರಿಜ್ಯದ ಬಗ್ಗೆ ಅಳತೆ ಮಾಡುವ ತೆವಲು ನನಗಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ನೂರು ವರ್ಷ ತುಂಬಿದರೂ ಇನ್ನೂ ನಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ.. ಇದೆ.. ಇದೆ.. ಎಂದು ಹೇಳಿಕೊಳ್ಳುವ ಕರ್ಮ ನಿಮ್ಮದು? ರಾಷ್ಟ್ರದ ಮೇಲೆ ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವದ ಕುತ್ತಿಗೆಗೆ ಕುಣಿಕೆ ಬಿಗಿದ ಸರ್ವಾಧಿಕಾರಿ ಕಾಂಗ್ರೆಸ್ ನಲ್ಲಿ ಪ್ರಜಾಪ್ರಭುತ್ವದ ಬೇರುಗಳೇ ಇಳಿದಿಲ್ಲ. ರಾಜಕೀಯ ಲಾಭಕ್ಕೆ ಮಹಾತ್ಮ ಗಾಂಧಿ, ರಾಜಕೀಯ ಸ್ವಾರ್ಥಕ್ಕೆ ಪ್ರಜಾಪ್ರಭುತ್ವ, ರಾಜಕೀಯ ಫಸಲಿಗೆ ಸಾಮಾಜಿಕ ನ್ಯಾಯ.. ಇದೇ ನಿಮ್ಮ ರಾಜನೀತಿ. ಹೀಗಾಗಿಯೇ ಭಾರತವು ಕಾಂಗ್ರೆಸ್ ಮುಕ್ತ ಭಾರತ ಆಗುತ್ತಿದೆ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

*ಪ್ರಜಾಪ್ರಭುತ್ವ ಎಂದರೆ ಶಾಸಕರು ಬೀದಿಯಲ್ಲಿ ಮುಖ್ಯಮಂತ್ರಿಯನ್ನು ಬೈಯ್ಯುವುದಲ್ಲ:*

ಪ್ರಜಾಪ್ರಭುತ್ವ ಎಂದರೆ ಜನರಿಂದ, ಜನರಿಗಾಗಿ, ಜನರಿಗೋಸ್ಕರ ನಡೆಯುವ ಆಡಳಿತ ವ್ಯವಸ್ಥೆ ಎಂದು ನಂಬಿದ್ದೇನೆ. ಪ್ರಜಾಪ್ರಭುತ್ವ ಎಂದರೆ ಶಾಸಕರು ಗುಂಪುಗಾರಿಕೆ ನಡೆಸುವುದಲ್ಲ. ಶಾಸಕರು ಮುಖ್ಯಮಂತ್ರಿಯನ್ನು ಬೀದಿಯಲ್ಲಿ ಬೈಯುವುದಲ್ಲ, ಅದೇ ಶಾಸಕರು ಡಿಸಿಎಂಗೆ ಹಾದಿ ಬೀದಿಯಲ್ಲಿ ಅವಾಜ್ ಹಾಕುವುದಲ್ಲ. ಒಮ್ಮೆ ಸಿಎಂ ಆಗಿ ಪ್ರಮಾಣ ಸ್ವೀಕರಿಸಿದ ಮೇಲೆ ಐದೂ ವರ್ಷ ನಾನೇ ಸಿಎಂ.. ನಾನೇ ಸಿಎಂ.. ಎಂದು ಅಲುವತ್ತುಕೊಳ್ಳುವುದಲ್ಲ. ಸಾಕ್ಷಾತ್ ವಿಧಾನಸಭೆಯಲ್ಲಿಯೇ 'ಕುರ್ಚಿ ಬೇಕಿದ್ದರೆ ಒದ್ದು ಕಿತ್ತುಕೊಳ್ಳಬೇಕು' ಎಂದು ದರ್ಪ ತೋರುವುದಲ್ಲ. ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಮಾಧ್ಯಮವನ್ನು ಜಾಹೀರಾತು ಹೆಸರಿನಲ್ಲಿ ಬೆದರಿಸುವುದು, ಬ್ಲ್ಯಾಕ್ ಮೇಲ್ ಮಾಡುವುದಲ್ಲ.. ಅಧಿಕಾರದ ಲಾಲಸೆಗೆ ಸಮಾಜವನ್ನು ಜಾತಿವಾರು, ಧರ್ಮವಾರು ಒಡೆದು ಆಳುವುದಲ್ಲ, ಆಶ್ರಯ ಕೊಟ್ಟು ರಾಜಕೀಯ ಬದುಕು ಕಟ್ಟಿಕೊಟ್ಟ ಪಕ್ಷಗಳಿಗೇ ಹಳ್ಳ ತೊಡುವುದಲ್ಲ.. ಎಂದು ಮುಖ್ಯಮಂತ್ರಿಗೆ ತಿರುಗೇಟು ನೀಡಿದ್ದಾರೆ ಕೇಂದ್ರ ಸಚಿವರು.

ಇದಲ್ಲ ಪ್ರಜಾಪ್ರಭುತ್ವ, ಇದಲ್ಲ ಆಂತರಿಕ ಪ್ರಜಾಪ್ರಭುತ್ವ.. ನಿಮಗೆ ಅರ್ಥವಾಯಿತಾ ಸಿದ್ದರಾಮಯ್ಯನವರೇ? ನಿಮ್ಮಿಬ್ಬರ (ನೀವೂ ನಿಮ್ಮ ಡಿಸಿಎಂ) ಕುಚುಕು ಕುಚುಕುಗೆ ನಮಗೇನು ಸಂಕಟವಿಲ್ಲ. ಆದರೆ ನಿಮ್ಮೊಳಗೆ ಹುದುಗಿದ್ದ ಅಸಹನೆಯ ಜ್ವಾಲಾಮುಖಿ ಅದೆಷ್ಟೋ ಬಾರಿ ವೇದಿಕೆಗಳ ಮೇಲೆಯೇ ಸ್ಫೋಟಿಸಿದೆ. ರಾಜ್ಯದ ಜನರು ನೋಡಿ ಕೃತಾರ್ಥರಾಗಿದ್ದಾರೆ. ಎದುರಿಗೆ ನಗುವುದು, ಬೆನ್ನ ಹಿಂದೆ ಚೂರಿ ಹಾಕುವಷ್ಟು ನಿಮ್ಮಬ್ಬರ ಕುಚುಕು ಬಗ್ಗೆ ಜನತೆಗೆ ಗೊತ್ತಿಲ್ಲದ್ದು ಏನೂ ಇಲ್ಲವೇನೋ? ನಿಮ್ಮ ಸ್ನೇಹ ಚಿರಾಯುವಾಗಲಿ ಹಾಗೂ ನಿಮ್ಮ ಸ್ನೇಹಿತನಿಗಾಗಿ ನಿಮ್ಮ ವಚನ ಉಳಿಸಿಕೊಳ್ಳಿ ಮಿಸ್ಟರ್ ಅಗ್ರಿಮೆಂಟ್ ರಾಮಯ್ಯ.. ಎಂದು ಸಿದ್ದರಾಮಯ್ಯ ಅವರ ಕಾಲೆಳೆದಿದ್ದಾರೆ ಕೇಂದ್ರ ಸಚಿವರು.

ನಿಮಗೆ ಅಂಟಿರುವ ಕಳಂಕಕ್ಕೆ ನರೇಂದ್ರ ಮೋದಿ ಅವರನ್ನು ಏಕೆ ಎಳೆದು ತರುತ್ತೀರಿ? ನಿಮ್ಮ ತಟ್ಟೆಯನ್ನೊಮ್ಮೆ ನೋಡಿಕೊಳ್ಳಿ. ರಾಜ್ಯದಲ್ಲಿ ನೀನೇನು ಮಾಡುತ್ತಿದ್ದೀರಿ ಎನ್ನುವುದು ಎಲ್ಲರೂ ಬಲ್ಲರು. ಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಟೀಮ್ (SIT) ಏನೇನು ಮಾಡುತ್ತಿದೆ ಎಂಬುದು ನನಗೂ ಗೊತ್ತಿದೆ. ಅಧಿಕಾರ ದುರ್ಬಳಕೆ, ಪ್ರತಿಪಕ್ಷಗಳ ವಿರುದ್ಧ ಸೇಡು ಸಾಧನೆ ನಿಮ್ಮ ನೈಜಗುಣ. ಅಷ್ಟು ಅವಗುಣಗಳನ್ನು ಮೈಮೇಲೆ ಹೇರಿಕೊಂಡು ಇನ್ನೊಬ್ಬರನ್ನು ನಿಂದಿಸುವುದೇಕೆ? ಇಂದು ಅವರು ಕೇಳಿದ್ದಾರೆ.

ನನ್ನ ಜತೆ ನೇರ ಸಂಘರ್ಷಕ್ಕೆ ಬಂದಾಗಲೆಲ್ಲ ನೀವು ದೇವೇಗೌಡರನ್ನು ಎಳೆದು ತರುತ್ತೀರಿ. ದೇವೇಗೌಡರು ನಿಮ್ಮ ರಾಜಕೀಯ ಗುರು, ನಿಮ್ಮನ್ನು ಗುರುತಿಸಿ ಬೆಳೆಸಿದವರು. ಅದಕ್ಕಾಗಿ ಎಷ್ಟೋ ನಾಯಕರ ವಿರೋಧ ಕಟ್ಟಿಕೊಂಡರು. ಅದೂ ನಿಮಗೂ ಗೊತ್ತಿದೆ. ಆದರೆ, ಸಮಯಕ್ಕೆ ಕಾಯುತ್ತಿದ್ದ ನೀವು ಗುರುವಿಗೆ ಗುನ್ನ ಇಟ್ಟಿರಿ. ಅಷ್ಟರ ಮಟ್ಟಿಗೆ ನಿಮ್ಮ ಕಪಟತನ, ಕುಟಿಲತೆಯನ್ನು ಸ್ವಯಂ ಸ್ಮರಣೆ ಮಾಡುತ್ತಿದ್ದೀರಿ, ಸಂತೋಷ ಎಂದು ಸಚಿವರು ಲೇವಡಿ ಮಾಡಿದ್ದಾರೆ.

ದೆಹಲಿಯಲ್ಲಿ ದೇವೇಗೌಡರು ಅಧಿಕಾರ ಕಳೆದುಕೊಂಡಾಗ ನೀವು ಯಾವ ಪಕ್ಷದಲ್ಲಿದ್ದಿರಿ ಎನ್ನುವುದನ್ನು ಅರೆಕ್ಷಣ ನೆನಪು ಮಾಡಿಕೊಳ್ಳಿ. ನಿಮಗೂ ಆತ್ಮಸಾಕ್ಷಿ ಎನ್ನುವುದು ಇರಬೇಕಲ್ಲಾ? ಆಗ ನಿಮ್ಮ ನಾಲಿಗೆಯಿಂದ ಉದುರಿದ್ದ ಸರಣಿ ನುಡಿಮುತ್ತುಗಳನ್ನು ಒಮ್ಮೆ ಪುನಾಸ್ಮರಣೆ ಮಾಡಿಕೊಳ್ಳಿ? ಅವತ್ತು ಅದೇ ಸೀತಾರಾಂ ಕೇಸರಿ ಬಗ್ಗೆ ತಾವು ಏನೇನು ಹೇಳಿದಿರಿ? ಆ ನಂತರದ ಕಾಲದಲ್ಲಿ ಶ್ರೀಮತಿ ಸೋನಿಯಾ ಗಾಂಧಿ ಅವರನ್ನು ಅದೆಷ್ಟು ವಾಚಾಮಗೋಚರ ನಿಂದಿಸಿದ್ದಿರಿ ಎಂಬುದನ್ನು ಜ್ಞಾಪಕ ಮಾಡಿಕೊಳ್ಳಿ ಎಂದು ಕುಮಾರಸ್ವಾಮಿ ಹಳೆಯ ಸಂದರ್ಭಗಳನ್ನು ಕೆದಕಿದ್ದಾರೆ.

ಸಿದ್ದರಾಮಯ್ಯನವರೇ.., ದೇವೇಗೌಡರು ಅಧಿಕಾರವನ್ನು ವಿರೋಚಿತವಾಗಿ ತ್ಯಜಿಸಿದರು. ರಾಜೀನಾಮೆ ಘೋಷಿಸಿದ ಮರುಕ್ಷಣದಲ್ಲೇ ಸಂಸತ್ತಿನಲ್ಲಿಯೇ ವಾಜಪೇಯಿ ಅವರು ಮುಕ್ತ ಬೆಂಬಲ ಕೊಡುತ್ತೇವೆ ಎಂದರೂ ಆ ಅಧಿಕಾರ ಬೇಡವೆಂದು ವಿನಯದಿಂದ ಧಿಕ್ಕರಿಸಿದರು. ಅವರ ಗರಡಿಯಲ್ಲಿ ಪಳಗಿ, ಈಗಲೂ ಬೆಳಗುತ್ತಿರುವ ನೀವೂ ಅಂಥ ಕೆಚ್ಚನ್ನು, ವಿರೋಚಿತ ತ್ಯಾಗವನ್ನು ಒಮ್ಮೆ ಪ್ರದರ್ಶಿಸಿ. ನಿಮ್ಮ ಕುಚುಕು ಗೆಳೆಯನ ಮೇಲೆ ಪ್ರೀತಿ ತೋರಿಸಿ.. ಅದಕ್ಕೆ ನಿಮಗೆ ಗುಂಡಿಗೆ ಸಾಲುತ್ತಿಲ್ಲವೇ? ಸಿದ್ದರಾಮಯ್ಯನವರೇ, ಸೋತರೆ ಸೋಲಬೇಕು ಬಾಹುಬಲಿಯಂತೆ! ನಾನು ಸೋತಿದ್ದೇನೆ, ಓಡಿ ಹೋಗಿಲ್ಲ. ನಾನು ರಣಹೇಡಿಯಂತೆ ಪಲಾಯನ ಮಾಡುವುದಿಲ್ಲ, ನೆನಪಿರಲಿ ಎಂದು ಹೇಳಿದ್ದಾರೆ.
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ