LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕುಮಾರಣ್ಣ ಬಾಂಬು ಹಾಕುವ ಟೈಮು ಬಂದೇಬಿಡ್ತಾ?

ಕುಮಾರಣ್ಣ ಬಾಂಬು ಹಾಕುವ ಟೈಮು ಬಂತು ಜೆಡಿಎಸ್ ನಾಯಕ,ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಈ ವಾರ ಬಾಂಬು ಸಿಡಿಸಲಿದ್ದಾರೆಯೇ?ಮತ್ತು ಅದರ‌ ಹೊಡೆತಕ್ಕೆ‌ ಕರ್ನಾಟಕದ ರಾಜಕೀಯ ಚಿತ್ರ ಬದಲಾಗಲಿದೆಯೇ? ಇಂತದೊಂದು ಪ್ರಶ್ನೆ‌ ಇದೀಗ ಎಲ್ಲರ‌ ಕೌತುಕಕ್ಕೆ‌ ಕಾರಣವಾಗಿದೆ.ಮತ್ತು ಸೆಪ್ಟೆಂಬರ್ 12 ನೇ ತಾರೀಕನ್ನು ಎದುರು ನೋಡುವಂತೆ ಮಾಡಿದೆ. ಅಂದ ಹಾಗೆ ಇಂತಹದೊಂದು‌ವಕೌತುಕ ಮೂಡಿಸಿರುವ ಕುಮಾರಸ್ವಾಮಿ ಅವರು ಸಧ್ಯಕ್ಕೆಅಮೇರಿಕ ಪ್ರವಾಸದಲ್ಲಿದ್ದಾರೆ.ಸಧ್ಯದ ಮಾಹಿತಿಯ ಪ್ರಕಾರ ಸೆಪ್ಟೆಂಬರ್ 11 ರ ರಾತ್ರಿ ಇಲ್ಲವೇ ಸೆಪ್ಟೆಂಬರ್ 12 ರಂದು ವಾಪಸ್ ಆಗಲಿದ್ದಾರೆ. ಹೀಗೆ ಬಂದ ತಕ್ಷಣ ಅವರು ಸಿಡಿಸುವ ಬಾಂಬು ಕರ್ನಾಟಕದ ರಾಜಕೀಯ ಸ್ವರೂಪವನ್ನು ಬದಲಿಸುವುದು ಮಾತ್ರವಲ್ಲ,ಇಡೀ ದೇಶವೇ ನಿಬ್ಬೆರಗಾಗುವಂತೆ ಮಾಡಲಿದೆ. ಅವರ ಆಪ್ತ ಮೂಲಗಳ ಪ್ರಕಾರ,ಹೀಗೆ ಬಾಂಬು ಸಿಡಿಸಲಿರುವ ಕುಮಾರಸ್ವಾಮಿ ಜನರೊಂದಿಗೆ ಸೇರಿ ನೇರವಾಗಿ ಬೀದಿಗಿಳಿಯಲಿದ್ದಾರೆ ಮತ್ತು ನಿರ್ಣಾಯಕ ಹೋರಾಟಕ್ಕೆ ಸಜ್ಜಾಗಲಿದ್ದಾರೆ. ಆದರೆ ಈ ಕ್ಷಣದವರೆಗೂ ರಹಸ್ಯವಾಗಿ ಉಳಿದಿರುವ ವಿಷಯವೆಂದರೆ ಕುಮಾರಸ್ವಾಮಿ ಸಿಡಿಸಲಿರುವ ಆ ಬಾಂಬು ಯಾವುದು ಎನ್ನುವುದು. ದಶಕಗಳ ಕಾಲ ವಿವಾದದ ನೆತ್ತಿಯ ಮೇಲೆ ಇದ್ದ ನೈಸ್ ಯೋಜನೆಯನ್ನು ಮೂರು ರಾಜ್ಯದ ಪ್ರಭಾವಿಗಳು ಟೇಕ್ ಓವರ್ ಮಾಡಿರುವ ವಿಷಯವನ್ನು ಸಮಗ್ರ ದಾಖಲೆಗಳೊಂದಿಗೆ ಕುಮಾರಸ್ವಾಮಿ ಬಹಿರಂಗಪಡಿಸಲಿದ್ದಾರೆಯೇ? ಆಂಧ್ರ, ತೆಲಂಗಾಣ ಮತ್ತು ಕರ್ನಾಟಕದ ಮೂವರು ಸೇರಿ ನೈಸ್ ಯೋಜನೆಯನ್ನು ಟೇಕ್ ಓವರ್ ಮಾಡಿರುವ ಕುರಿತು ಅವರು ಮಂಡಿಸಲಿರುವ ದಾಖಲೆ ಘಟಸ್ಪೋಟಕ್ಕೆ ಕಾರಣವಾಗಬಹುದೇ? ಅಥವಾ ಬಿಡದಿ ಟೌನ್ ಷಿಪ್ ಯೋಜನೆಗೆ ಸರ್ಕಾರ ರೈತರ ಭೂ ಸ್ವಾಧೀನ‌ಮಾಡಿಕೊಳ್ಳುವುದರ ಹಿಂದೆ‌ ಇದ್ದಾರೆ ಎನ್ನಲಾದ ದಿಲ್ಲಿ ನಾಯಕರೊಬ್ಬರ ಹೆಸರನ್ನು ಕುಮಾರಸ್ವಾಮಿ ಬಹಿರಂಗಪಡಿಸಬಹುದೇ?ಎಂಬುದು ರಾಜಕೀಯ ವಲಯಗಳ ಸಧ್ಯದ ಕುತೂಹಲ. ಈ ಕುತೂಹಲಕ್ಕೆ ಈ ವಾರ ಉತ್ತರ ಸಿಗುತ್ತದಾ?ಅಥವಾ ಬಾಂಬು ಸಿಡಿಯುವ ಮುಹೂರ್ತ ಮುಂದಕ್ಕೆ ಹೋಗುತ್ತದಾ ಎಂಬುದು ಸಧ್ಯದ ಕುತೂಹಲ.

 ವಿಜಯ ಯಾತ್ರೆ ಲಾಭ ಯಾರಿಗೆ? 

ಈ ಮಧ್ಯೆ ನಾಗೇಂದ್ರ ಎಪಿಸೋಡು ಮತ್ತು ರಾಜ್ಯ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಬಳ್ಳಾರಿ ಪಾದಯಾತ್ರೆ ಮಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಚ ಬಿ.ವೈ.ವಿಜಯೇಂದ್ರ ಖುಷಿಯಾಗಿದ್ದಾರಂತೆ. ಕಾರಣ, ಬಳ್ಳಾರಿ ಪಾದಯಾತ್ರೆ ಆರಂಭಿಸಿದ ನಂತರ ಪ್ರತಿದಿನ ಪಕ್ಷದ ರಾಷ್ಟ್ರೀಯ ನಾಯಕರು ಅವರಿಗೆ ಫೋನು ಮಾಡಿ ಪ್ರೋತ್ಸಾಹದ ಮಾತುಗಳನ್ನು ಆಡುತ್ತಿದ್ದಾರೆ. ಅದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಇರಬಹುದು,ಕೇಂದ್ರ ಸಚಿವ ಜೆ.ಪಿ.ನಡ್ಡಾ ಇರಬಹುದು.ಒಟ್ಟಿನಲ್ಲಿ ಮಾತನಾಡಿರುವ ಎಲ್ಲರೂ;'ಪಕ್ಷದ ಸಾರಥ್ಯವನ್ನು ನೀವು ಬಹು ಚೆನ್ನಾಗಿ ನಿರ್ವಹಿಸುತ್ತಿದ್ದೀರಿ'ಎಂದಿದ್ದಾರಂತೆ.ಇದರರ್ಥ?ಈ ಜಾಗದಲ್ಲಿ ನೀವು ಮುಂದುವರಿಯುತ್ತೀರಿ ಅಂತ ತಾನೇ? ಅಂದ ಹಾಗೆ ಈ ಪಾದಯಾತ್ರೆ ವಿಜಯೇಂದ್ರ ಅವರ ಒನ್ ಮ್ಯಾನ್ ಷೋ ಎಂಬಂತೆ ಮ್ಯಾನೇಜು ಮಾಡಲಾಗುತ್ತಿದೆ ಅಂತ ಕೆಲ ನಾಯಕರು ಕೊಸಕೊಸ ಎನ್ನುತ್ತಿದ್ದಾರಾದರೂ, ಹೊಸ ತಲೆಮಾರಿನ ರಾಜಕಾರಣಕ್ಕೆ ಅದೇ ಅನಿವಾರ್ಯ ಸೂತ್ರ ಅಂತ ವರಿಷ್ಟರು ಹೇಳಿದ್ದಾರಂತೆ. ಇದಕ್ಕೆ ಪೂರಕವಾಗಿ ಪಾದಯಾತ್ರೆ ಸಂದರ್ಭದಲ್ಲಿ ನಡೆದ ಒಂದು ಎಪಿಸೋಡಿನ ಕಡೆ ಬೆಟ್ಟು ತೋರಿಸುತ್ತಿರುವವರು;:'ಲಿಂಗಸುಗೂರಿನಲ್ಲಿ ರಾಜ್ಯ ಬಿಜೆಪಿಯ ಟಾಪ್ ಲೀಡುಗಳು ಸೇರಿದ್ದಾಗ ಏನಾಯಿತು?ಬಹುತೇಕರು ವಿಜಯೇಂದ್ರ ಅವರ ಬಳಿ:'ನಮ್ಮಿಂದ ಸುಧೀರ್ಘ ಕಾಲ ನಡೆಯಲು ಆಗುವುದಿಲ್ಲ.ಹೀಗಾಗಿ ವೇದಿಕೆಗಳಿದ್ದಾಗ ನಮ್ಮನ್ನು ಕರೆಯಿರಿ.ನೀವು ಪಾದಯಾತ್ರೆ ಮುಂದುವರಿಸಿ ಅಂತ ಹೇಳಲಿಲ್ಲವೇ?ಅಂತ ಕೇಳುತ್ತಿದ್ದಾರೆ. ಅರ್ಥಾತ್,ಇಡೀ ಪಾದಯಾತ್ರೆಯ ಷೋ ಅನ್ನು ಹೆಗಲ ಮೇಲೆ ಹೊತ್ಗುಕೊಂಡ ವಿಜಯೇಂದ್ರ ಸಹಜವಾಗಿಯೇ ಪಕ್ಷಾಧ್ಯಕ್ಷರಾಗಿ ಮುಂದುವರೆಯುವುದು ನ್ಯಾಯ ಎಂಬುದು ಇವರ ವಾದ. 

ಕೈ ಪಾಳಯದಲ್ಲಿ ಬಣ ಸಂಘರ್ಷ?

ಇನ್ನು ಮೂರು ತಿಂಗಳ ಕಾಲ ತಣ್ಣಗಿದ್ದ ರಾಜ್ಯ ಕಾಂಗ್ರೆಸ್ ನಲ್ಲಿ ಬಣ ಸಂಘರ್ಷ ಶುರುವಾಗುವ ಲಕ್ಷಣಗಳು ಕಾಣುತ್ತಿವೆ.ಇದಕ್ಕೆ ಅಪೆಕ್ಸ್ ಬ್ಯಾಂಕ್ ಮತ್ತು ಕೆಎಂಎಫ್ ಗಳೇ ಮುಖ್ಯ ಕಾರಣ. ಅಂದ ಹಾಗೆ ಈ ತಿಂಗಳ ಹತ್ತರಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕಾಗಿ ನಡೆಯುವ ಚುನಾವಣೆಯಲ್ಲಿ ಸಿದ್ದರಾಮಯ್ಯ ಬಣದ ಕ್ಯಾಂಡಿಡೇಟ್ ಆಗಿ ರಾಜಣ್ಣ ಕಣಕ್ಕಿಳಿಯಲಿದ್ದಾರೆ. ಮಾಜಿ ಸಚಿವರಾಗಿರುವ ಕೆ.ಎನ್.ರಾಜಣ್ಣ ಅವರಿಗೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ಕೊಡುವುದಾಗಿ ಭರವಸೆ ನೀಡಲಾಗಿತ್ತು.ಹೀಗಾಗಿ ಅವರೇ ಈ ಜಾಗಕ್ಕೆ ಬರಬೇಕು ಅಂತ ಸಿದ್ದರಾಮಯ್ಯ ಅವರು ಸುರ್ಜೇವಾಲಾ ಅವರಿಗೆ ಫೋನು ಮಾಡಿ ಹೇಳಿದ್ದಾರೆ ಎಂಬುದು ಮೂಲಗಳ ಮಾತು. ಆದರೆ, ಮುಖ್ಯಮಂತ್ರಿ ಡಿ.ಕೆ‌.ಶಿವಕುಮಾರ್ ಅವರು ಈ ಜಾಗಕ್ಕೆ ತಮ್ಮ ಸಂಬಂಧಿ ರವಿಯವರನ್ನು ತರಲು ಸಜ್ಜಾಗಿದ್ದರೆ,ಮಾಜಿ ಸಚಿವ ಶಿವಾನಂದಪಾಟೀಲ್ ಕೂಡಾ ರೇಸಿಗಿಳಿಯಲು ಸಜ್ಜಾಗಿದ್ದಾರೆ. ಇನ್ನು ಬಿಜೆಪಿಯಿಂದ ಹೊರಬಿದ್ದಿರುವ ಶಿವರಾಂ ಹೆಬ್ಬಾರ್ ಕೂಡಾ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷಗಿರಿ ತಮಗೆ ಬೇಕು ಎನ್ನುತ್ತಿದ್ದರೆ ಬೆಳ್ಳಿ ಪ್ರಕಾಶ್ ಅವರ ಹೆಸರೂ ರೇಸಿನಲ್ಲಿ ಕಾಣಿಸಿಕೊಂಡಿದೆ. ಇನ್ನು ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಬೆಂಬಲಿಗರಾದ ರಾಘವೇಂದ್ರ ಹಿಟ್ನಾಳ್ ಅವರ ಹೆಸರನ್ನು ಸಿದ್ಧರಾಮಯ್ಯ ಮುಂದೆ ಬಿಟ್ಟಿದ್ದರೆ,ಸಹೋದರ ಡಿ.ಕೆ.ಸುರೇಶ್ ಅವರಿಗೆ ಕೆಎಂಎಫ್ ಅಧ್ಯಕ್ಷಗಿರಿ ದಕ್ಕಲಿ ಅಂತ ಡಿ.ಕೆ.ಶಿವಕುಮಾರ್ ಬಯಸುತ್ತಿದ್ದಾರೆ. ಪರಿಣಾಮ?ಈ ಎರಡು ಸಂಸ್ಥೆಗಳ ಅಧ್ಯಕ್ಷಗಿರಿ ರಾಜ್ಯ ಕಾಂಗ್ರೆಸ್ ನಲ್ಲಿ ಬಣ ಬಡಿದಾಟಕ್ಕೆ ಅಧಿಕೃತ ಚಾಲನೆ ನೀಡಬಹುದು ಎಂಬುದು ಸದ್ಯದ ಅನುಮಾನ.

 ಜಮೀರ್ ರಾಜೀನಾಮೆ ಕೊಡ್ತಾರಾ

ಈ ಮಧ್ಯೆ ರಾಜ್ಯ ಸಚಿವ ಸಂಪುಟಕ್ಕೆ ಮೈನರ್ ಸರ್ಜರಿ ಕೆಲಸಕ್ಕೆ ಸಮಸ್ಯೆ ಎದುರಾಗಿದೆ. ಕಾರಣ?ಇವತ್ತು ಬಸವರಾಜ ಶಿವಣ್ಣನವರ್,ಲಕ್ಷ್ಮೀ ಹೆಬ್ಬಾಳ್ಕರ್,ಅನ್ನಪೂರ್ಣ ತುಕಾರಾಂ,ಎಂ.ಕೃಷ್ಣಪ್ಪ,ಕನೀಜ್ ಫಾತಿಮಾ ಸೇರಿದಂತೆ ಹಲವರು ಮಂತ್ರಿಗಿರಿಗೆ ಪೈಪೋಟಿ ನಡೆಸುತ್ತಿದ್ದು ಮೈನರ್ ಸರ್ಜರಿಯ ಕಾಂಬಿನೇಷನ್ನು ಬ್ಯಾಲೆನ್ಸ್ ಅಗಲು ಕನಿಷ್ಟ ಮೂರು‌ ಜನರನ್ನು ಮಂತ್ರಿ ಮಂಡಲಕ್ಕೆ ಸೇರಿಸಬೇಕು. ಆದರೆ ನಾಗೇಂದ್ರ ರಾಜೀನಾಮೆಯ ನಂತರ ಸಂಪುಟದಲ್ಲಿ ಎರಡು ಸ್ಥಾನಗಳು ಮಾತ್ರ ಖಾಲಿ ಇದ್ದು,ಇನ್ನೂ ಒಂದು ಸೀಟು ಖಾಲಿಯಾಗಬೇಕಿದೆ. ಹೀಗೆ ಖಾಲಿ ಅಗಬಹುದಾದ ಒಂದು ಸೀಟು ಎಂದರೆ ವಸತಿ ಸಚಿವ ಜಮೀರ್ ಅಹ್ಮದ್ ಅವರದು ಎಂಬುದು ಕಾಂಗ್ರೆಸ್ ಪಾಳಯದ ಲೆಕ್ಕಾಚಾರ.ಎಷ್ಟೇ ಆದರೂ ಜಮೀರ್ ಅಹ್ಮದ್ ಸಂಪುಟದಲ್ಲಿರುವುದು ಮಾಜಿ ಸಿಎಂ ಸಿದ್ಧರಾಮಯ್ಯ ಅವರಿಗೆ ಬೇಕಾಗಿಲ್ಲ.ಇನ್ನು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ವಿಚಾರಣೆಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಇ.ಡಿ ಕೋರಿದ ಫೈಲು ಪೆಂಡಿಂಗ್ ಇದೆ. ಹೀಗೆ ಪೆಂಡಿಂಗ್ ಇರುವ ಪೈಲಿಗೆ ಜೀವ ಬಂದರೆ ಜಮೀರ್ ಕೆಳಗಿಳಿಯುವುದು ಅನಿವಾರ್ಯವಾಗುತ್ತದೆ.ಅ ಮೂಲಕ ಸಂಪುಟಕ್ಕೆ ಮೈನರ್ ಸರ್ಜರಿ ಮಾಡುವುದು ಸುಲಭವಾಗುತ್ತದೆ ಎಂಬುದು ಕೈ ಪಾಳಯದ ಲೆಕ್ಕಸಮಾಚಾರ. ಮುಂದೇನಾಗುತ್ತದೋ ನೋಡಬೇಕು.

ಪರಿಷತ್ ದಂಗಲ್ ಹೀಗಿದೆ

 ಇನ್ನು ವಿಧಾನಪರಿಷತ್ತಿನ ಐದು ನಾಮ ನಿರ್ದೇಶಿತ ಸ್ಥಾನಗಳಿಗೆ ಒಂದು ಡಜನ್ ಹೆಸರುಗಳು ಕೇಳಿ ಬರುತ್ತಿದ್ದು,ಕನ್ನಡದ ಖ್ಯಾತ ನಟ, ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ಅವರ ಹೆಸರು ಫ್ರಂಟ್ ಲೈನಿನಲ್ಲಿದೆ. ಹೀಗೆ ರವಿಚಂದ್ರನ್ ಅವರ ಹೆಸರು ತೇಲಿ ಬರಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ನೇರ ಕಾರಣ. ಅಂದ ಹಾಗೆ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ದಿಕ್ಕು,ದಿಸೆ ಬದಲಿಸಿದವರು,ಇಡೀ ದೇಶವೇ ಕನ್ನಡ ಚಿತ್ರರಂಗದ ಕಡೆ ನೋಡುವಂತೆ ಮಾಡಿದವರು ರವಿಚಂದ್ರನ್.ಅವರು ಪರಿಷತ್ತಿಗೆ ಬಂದರೆ ನಿಜಕ್ಕೂ ಶೋಭೆ. ಸೂಕ್ಷ್ಮ ಮನಸ್ಸಿನ, ಹೇಳುವುದನ್ನು ನಿರ್ಭಿಡೆಯಾಗಿ ಹೇಳುವ ರವಿಚಂದ್ರನ್ ಅವರಿಗೆ ವಾಸ್ತವವಾಗಿ ಪರಿಷತ್ ಸದಸ್ಯರಾಗುವ ಇಚ್ಚೆ ಇರಲಿಲ್ಲವಂತೆ. ಹೀಗಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ತಮ್ಮ ಎದುರು ಈ ಪ್ರಸ್ತಾಪವಿಟ್ಟಾಗ:'ನೀವೇ ಮುಖ್ಯಮಂತ್ರಿಯಾಗಿರುವಾಗ ನನಗೇಕೆ ಈ ಹುದ್ದೆ?ಅಂತ ಪ್ರಶ್ನಿಸಿದ್ದರಂತೆ. ಆದರೆ, ಪಟ್ಟು ಬಿಡದ ಡಿ.ಕೆ.ಶಿವಕುಮಾರ್ ಅವರು;'ನಾನು ಮುಖ್ಯಮಂತ್ರಿಯಾಗಿರುವಾಗ ನೀವು ಪರಿಷತ್ತಿನಲ್ಲಿರಬೇಕು' ಎಂದಿದ್ದಾರೆ ಅನ್ನುವುದು ಮೂಲಗಳ ಮಾತು. ಇದೇ ರೀತಿ ಸಿದ್ಧರಾಮಯ್ಯ ಅವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರ ಹೆಸರೂ ರೇಸಿನಲ್ಲಿದೆ.ರಾಜಕೀಯದ ದಾಳ ಮತ್ತು ಆಡಳಿಯಷಾಹಿಯ ಆಳವನ್ನು ಬಲ್ಲ ಕೆ.ವಿ.ಪ್ರಭಾಕರ್ ವಿಧಾನಪರಿಷತ್ತಿಗೆ ಬಂದರೆ ಜನರಿಗೆ ಒಳ್ಳೆಯದನ್ನು ಮಾಡಬಲ್ಲರು. ಇನ್ಙು ಪರಿಷತ್ತಿಗೆ ಚಿಮ್ಕೋಡು,ರಮೇಶ್ ಬಾಬು,ಕಾಂತಾ ನಾಯಕ್,ಮಂಜುಳಾ ನಾಯ್ಡು ಸೇರಿದಂತೆ ಹಲವು ಹೆಸರುಗಳು ಕೇಳಿ ಬರುತ್ತಿದ್ದು,ಸಧ್ಯದಲ್ಲೇ ದಿಲ್ಲಿಯಲ್ಲಿ ಅಂತಿಮ ಪಟ್ಟಿ ರೆಡಿ ಆಗಲಿದೆ.

ಲಾಸ್ಟ್ ಸಿಪ್!

ಬಿಜೆಪಿ ಮತ್ತು ಆರೆಸ್ಸೆಸ್ಸಿಗರಿಗೆ ವಿಧಾನಸಭೆಯ ಪ್ರತಿಪಕ್ಷ ನಾಯಕ ಅರ್.ಅಶೋಕ್ ಅವರು ತಾಕತ್ ಕೀ ದವಾ ಕೊಟ್ಟಿದ್ದಾರೆ. ಅಂದ ಹಾಗೆ ವಿರೋಧಿಗಳು ಬಿಜೆಪಿ ಮತ್ತು ಅರೆಸ್ಸೆಸ್ಸಿಗರನ್ನು ಟೀಕಿಸಲು'ನೀವು ಮನುವಾದಿಗಳು ಅಂತ ಜರಿಯುತ್ತಾರೆ. ಈ ಜರಿಯುವಿಕೆಗೆ ಬಿಜೆಪಿ ಮತ್ತು ಆರೆಸ್ಸೆಸ್ಸಿಗರು ಪ್ರತಿಯುತ್ತರ ನೀಡುವುದು ಕಡಿಮೆ. ಆದರೆ ಮೊನ್ನೆ ಮಾತನಾಡುವಾಗ ಅರ್.ಅಶೋಕ್ ಅವರು:'ರೀ ಯಾರ್ರೀ ಅದು ಮನು?ಎಲ್ಲಿ ನೋಡಿದರೂ ಮನು,ಮನು ಅನ್ನುತ್ತಾರೆ. ಮನು ಯಾರೆಂದೇ ನನಗೆ ಗೊತ್ತಿಲ್ಲ.ನೀವು ಬೇಕಿದ್ರೆ ದಾರಿಯಲ್ಲಿ ಹೋಗುವವರನ್ನು ಮನು ಯಾರು ಅಂತ ಕೇಳಿ ನೋಡಿ.ಅವರಿಗೂ ಗೊತ್ತಿಲ್ಲ'ಎಂದು ಬಿಟ್ಟಿದ್ದಾರೆ. ಹೀಗೆ ಐತಿಹಾಸಿಕವಾಗಿ ತಾವು ಎದುರಿಸುತ್ತಿದ್ದ ಟೀಕೆಗಳಿಗೆ ಅಶೋಕ್ 'ಏಕ್ ಮಾರ್ ದೋ ತುಕಡಾ' ಅನ್ನುವಂತೆ ಬಾರಿಸಿದ್ದನ್ನು ನೋಡಿ ಬಿಜೆಪಿ ಮತ್ತು ಆರೆಸ್ಸಿಸ್ಸಿಗರೇ ಧಿಗ್ಭ್ರಾಂತರಾಗಿದ್ದಾರಂತೆ. ಅಂದ ಹಾಗೆ ಮನು ಯಾರೆಂದು ನಮಗೆ ಗೊತ್ತು ಎಂದರೆ ತಾನೇ ಸಮಸ್ಯೆ?ಬದಲಿಗೆ ಮನು ಯಾರೆಂದೇ ನಮಗೆ ಗೊತ್ತಿಲ್ಲ ಅಂದರೆ ಬಹುಕಾಲದ ಪ್ರಾಬ್ಲಮ್ಮೇ ಬಿಜೆಪಿ,ಆರೆಸ್ಸೆಸ್ಸಿಗೆ ಇಲ್ಲವಾದಂತಾಯಿತು ಅಲ್ಲವೇ?

  • ಅರ್.ಟಿ.ವಿಠ್ಠಲಮೂರ್ತಿ, ಹಿರಿಯ ಪತ್ರಕರ್ತ
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕುಮಾರಣ್ಣ ಬಾಂಬು ಹಾಕುವ ಟೈಮು ಬಂದೇಬಿಡ್ತಾ?ಶಿಕ್ಷಕರಿಂದಾಗಿಯೇ ರಾಜ್ಯದ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ: ಸಚಿವ ಮಧು ಬಂಗಾರಪ್ಪ ಬಣ್ಣನೆಕಳಂಕಿತ ಪಶುವೈದ್ಯಾಧಿಕಾರಿ ಮೇಲೆ ಕ್ರಮ ಕೈಕೊಂಡು,ಅಕಳಂಕಿತರಿಗೆ ನ್ಯಾಯ ನೀಡಿ: ಡಾ.ಹನುಮಂತಪ್ಪಗೊಲ್ಲ ಸಮುದಾಯ ಸಂಘಟಿತರಾಗಲು ಶ್ರೀನಿವಾಸ್ ಕರೆಭಾರತ ಕಲಾಗ್ರಾಮ ಸಂಸ್ಥೆಯಿಂದ ಗುರು ಸಮರ್ಪಣಾ ಕಾರ್ಯಕ್ರಮAEE ಗ್ರೇಡ್ 1 ಹುದ್ದೆಗಳ ಅಕ್ರಮ ಪ್ರಕರಣ:ನನಗೆ ಗೊತ್ತಿಲ್ಲ.. ಗೊತ್ತಿಲ್ಲಾ.. ಎಂದ ಸಚಿವ ಪ್ರಿಯಾಂಕ್ ಖರ್ಗೆಗೆ 10 ಪ್ರಶ್ನೆ ಕೇಳಿದ ಹೆಚ್.ಡಿ.ಕೆಮೆಡ್ ಜಿನೋಮ್ ನಿಂದ ಭಾರತದಲ್ಲಿ ಸುಧಾರಿತ ನಿಖರ ಕ್ಯಾನ್ಸರ್ ಆರೈಕೆಗೆ ಆಂಕೋಟ್ರ್ಯಾಕ್ ಎಂ.ಆರ್.ಡಿ ಬಿಡುಗಡೆರಾಮಯ್ಯ ಮೆಮೋರಿಯಲ್ ಆಸ್ಪತ್ರೆಯಿಂದ ಅಂಗಾಂಗ ದಾನ ಜಾಗೃತಿ ಅಭಿಯಾನ; ಸಚಿವ ಯುಟಿ ಖಾದರ್ ಚಾಲನೆವಿಮಾನ ಚಾಲನಾ ತರಬೇತಿ ಅಕಾಡೆಮಿ ಸ್ಥಾಪನೆಗೆ ಕಾರ್ವರ್ ಏವಿಯೇಷನ್ ಆಸಕ್ತ: ಎಂ ಬಿ ಪಾಟೀಲನೂರು ಕೇಸ್ ದಾಖಲಿಸಿದರೂ ರಾಹುಲ್ ಗಾಂಧಿ ಹೆದರಲ್ಲ: ಸಿಎಂ ಡಿ ಕೆ ಶಿವಕುಮಾರ್