ಬೆಂಗಳೂರು: ಹಣಕಾಸು ಸೇವೆಗಳ ಕೌಶಲ್ಯ ತರಬೇತಿ ಒದಗಿಸುವ ಭಾರತದ ಮುಂಚೂಣಿ ಸಂಸ್ಥೆಯಾಗಿರುವ ಮಣಿಪಾಲ್ ಅಕಾಡೆಮಿ ಆಫ್ ಬಿಎಫ್ಎಸ್ಐ (ಯುನೆಕ್ಷ್ಟ್ ಲರ್ನಿಂಗ್), 1,000 ಕ್ರೆಡಿಟ್ ಆಫೀಸರ್ ಗಳಿಗೆ ತರಬೇತಿ ನೀಡಲು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (ಸಿಬಿಐ) ಜೊತೆಗಿನ ತನ್ನ ಸಹಭಾಗಿತ್ವವನ್ನು ಮುಂದುವರಿಸುತ್ತಿರುವುದಾಗಿ ಘೋಷಿಸಿದೆ.
ಮಣಿಪಾಲ್ ಅಕಾಡೆಮಿ ಆಫ್ ಬಿಎಫ್ಎಸ್ಐ ಕ್ಯಾಂಪಸ್ ನಲ್ಲಿ ನಡೆಯಲಿರುವ ಈ ವಸತಿ ತರಬೇತಿ ಕಾರ್ಯಕ್ರಮವು, ಶೈಕ್ಷಣಿಕ ಜ್ಞಾನ ಮತ್ತು ನೈಜ ಬ್ಯಾಂಕಿಂಗ್ ಪರಿಣತಿಯ ನಡುವಿನ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಈ ಮೂಲಕ ಹೊಸ ಅಧಿಕಾರಿಗಳು ತಮ್ಮ ಕೆಲಸದ ಮೊದಲ ದಿನದಿಂದಲೇ ದಕ್ಷತೆಯಿಂದ ಕಾರ್ಯನಿರ್ವಹಿಸಲು ಸಜ್ಜಾಗುವಂತೆ ತರಬೇತಿ ನೀಡಲಿದೆ.ಪ್ರಸ್ತುತ ಬ್ಯಾಚ್ ನಲ್ಲಿ ಭಾರತದ ವಿವಿಧ ಭಾಗಗಳ ಅಭ್ಯರ್ಥಿಗಳಿದ್ದು, 25 ರಾಜ್ಯಗಳ 1,000 ಕಲಿಕಾರ್ಥಿಗಳು ಇದ್ದಾರೆ. ಈ ತಂಡದಲ್ಲಿ ಪುರುಷರು ಮತ್ತು ಮಹಿಳೆಯರ ಜೊತೆಗೆ ದೃಷ್ಟಿದೋಷವುಳ್ಳ ವಿಶೇಷಚೇತನರೂ ಇರುವುದು ವಿಶೇಷ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತಮವಾದಂತಹ ಹೆಜ್ಜೆ ಇಡಲಾಗಿದೆ;
ಅಕಾಡೆಮಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸೆಂಟ್ರಲ್ ಈ ಕುರಿತು ಮಾತನಾಡಿದ ಬ್ಯಾಂಕ್ ಆಫ್ ಇಂಡಿಯಾದ ಎಂಡಿ ಮತ್ತು ಸಿಇಓ ಕಲ್ಯಾಣ್ ಕುಮಾರ್ ಅವರು, "ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಮಣಿಪಾಲ್ ಅಕಾಡೆಮಿ ಆಫ್ ಬಿಎಫ್ಎಸ್ಐ (ಎಂಎಬಿಎಫ್ಎಸ್ಐ) ನಡುವಿನ ಸಹಯೋಗವು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತಮ ಭವಿಷ್ಯವನ್ನು ನಿರ್ಮಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ತಜ್ಞ ಅಧ್ಯಾಪಕರ ಮಾರ್ಗದರ್ಶನದಲ್ಲಿ ಈ ಕಲಿಕಾರ್ಥಿಗಳಿಗೆ ಡ್ಯೂ ಡಿಲಿಜೆನ್ಸ್, ಸಾಲದ ಅನುಮೋದನೆ, ಅಂಡರ್ ರೈಟಿಂಗ್ ಪ್ರಕ್ರಿಯೆಗಳು ಮತ್ತು ವ್ಯವಹಾರ ಸಂವಹನ ಕೌಶಲ್ಯ ಇತ್ಯಾದಿ ಕಲಿಸಲಾಗುತ್ತಿದೆ. ಜೊತೆಗೆ ಪ್ರಮುಖ ಸಾಫ್ಟ್ ಸ್ಕಿಲ್ಸ್ ತರಬೇತಿ ಒದಗಿಸಲಾಗುತ್ತಿದೆ. ಸುಸ್ಥಿರ ಬೆಳವಣಿಗೆಯ ನಮ್ಮ ಉದ್ದೇಶ ಸಾಕಾರಗೊಳಿಸಲು ಮತ್ತು 2047ರ ವೇಳೆಗೆ ಭಾರತವನ್ನು 'ವಿಕಸಿತ ಭಾರತ'ವನ್ನಾಗಿ ಮಾಡುವ ಸರ್ಕಾರದ ದೃಷ್ಟಿಕೋನಕ್ಕೆ ಕೊಡುಗೆ ನೀಡಲು ಈ ವ್ಯವಸ್ಥಿತ ವಿಧಾನವು ಅತ್ಯಗತ್ಯ" ಎಂದರು.
ದಕ್ಷವಾಗಿ ಕೆಲಸ ಮಾಡುವ ಶಿಕ್ಷಣ ಕೊಡುತ್ತೇವೆ
ಈ ಸಹಭಾಗಿತ್ವದ ಬಗ್ಗೆ ಮಾತನಾಡಿದ ಮಣಿಪಾಲ್ ಅಕಾಡೆಮಿ ಆಫ್ ಬಿಎಫ್ಎಸ್ಐನ ಸಹ ಪ್ರಾಧ್ಯಾಪಕರು ಮತ್ತು ಪ್ರಭಾರ ನಿರ್ದೇಶಕರೂ ಆದ ಡಾ. ಸೌಮ್ಯದೀಪ್ ರಾಯ್ ಅವರು, "ಮಣಿಪಾಲ್ ಅಕಾಡೆಮಿ ಆಫ್ ಬಿಎಫ್ಎಸ್ಐನಲ್ಲಿ ಕಲಿತವವರು ಬ್ಯಾಂಕ್ ಶಾಖೆಯನ್ನು ಪ್ರವೇಶಿಸಿದ ಮೊದಲ ದಿನದಿಂದಲೇ ದಕ್ಷತೆಯಿಂದ ಕೆಲಸ ಮಾಡುವ ಸಾಮರ್ಥ್ಯ ಹೊಂದುವ ಶಿಕ್ಷಣವನ್ನು ನಾವು ಒದಗಿಸುತ್ತಿದ್ದೇವೆ. 114 ವರ್ಷಗಳ ಇತಿಹಾಸವಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಶಿಕ್ಷಣ ಕ್ಷೇತ್ರದಲ್ಲಿ 80 ವರ್ಷಗಳ ಇತಿಹಾಸವಿರುವ ಮಣಿಪಾಲ್ ಗ್ರೂಪ್ ಉತ್ತಮ ಉದ್ಯೋಗಿಗಳನ್ನು ರೂಪಿಸುವ ನಿಟ್ಟಿನಲ್ಲಿ ಪರಸ್ಪರ ಕೈಜೋಡಿಸಿವೆ" ಎಂದು ಹೇಳಿದರು.
ಕಳೆದ 18 ವರ್ಷಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ವೃತ್ತಿಪರರಿಗೆ ತರಬೇತಿ ನೀಡಿರುವ ಶ್ರೀಮಂತ ಪರಂಪರೆ ಹೊಂದಿರುವ ಮಣಿಪಾಲ್ ಅಕಾಡೆಮಿ ಆಫ್ ಬಿಎಫ್ಎಸ್ಐ, ಭಾರತೀಯ ಆರ್ಥಿಕ ಕ್ಷೇತ್ರದ ಈ ಕಾಲದ ಬೇಡಿಕೆಗಳಿಗೆ ಅನುಗುಣವಾಗಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾಗಾಗಿ ಅತ್ಯಂತ ಪರಿಣಾಮಕಾರಿ ಕಲಿಕಾ ಯೋಜನೆಯನ್ನು ರೂಪಿಸಿದೆ. ಈ ಕಾರ್ಯಕ್ರಮವು ಶೈಕ್ಷಣಿಕ ಶಿಸ್ತು ಮತ್ತು ಪ್ರಾಯೋಗಿಕ ಕಾರ್ಯಗಳ ಮಿಶ್ರಣವಾಗಿದ್ದು, ಸಿಮ್ಯುಲೇಶನ್ ಆಧಾರಿತ ತರಗತಿಗಳು, ಅಣಕು ಬ್ಯಾಂಕ್ ಶಾಖೆಗಳು ಮತ್ತು ಡಿಜಿಟಲ್ ಕಲಿಕಾ ವಿಧಾನಗಳನ್ನು ಒಳಗೊಂಡಿದೆ.
ಮಣಿಪಾಲ್ ಅಕಾಡೆಮಿ ಆಫ್ ಬಿಎಫ್ಎಸ್ಐ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನಡುವಿನ ಸಹಭಾಗಿತ್ವವು 11 ವರ್ಷಗಳಿಗೂ ಹೆಚ್ಚು ಕಾಲದಿಂದ ಮುಂದುವರಿಯುತ್ತಿದ್ದು, ಈವರೆಗೆ ಸುಮಾರು 2,000 ವೃತ್ತಿಪರರಿಗೆ ಒಂಬತ್ತು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಸಲ ಸಾಲ ವಿಭಾಗದಲ್ಲಿ ಪರಿಣತಿ ಒದಗಿಸುವ ಕಡೆಗೆ ಗಮನ ಹರಿಸಲಾಗಿದೆ.