ಬೆಂಗಳೂರು : ಗಿಡ ನೆಡುವ ಕಾರ್ಯಕ್ರಮ ಕೇವಲ ಪೇಪರ್ಕಾ ರ್ಯಕ್ರಮವಾಗಬಾರದು. ನಿಜವಾಗಿಯೂ ಗಿಡಗಳನ್ನು ನೆಟ್ಟು, ಅವುಗಳನ್ನು ಸಂರಕ್ಷಿಸಿ ಬೆಳೆಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕೆಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದಲ್ಲಿ ಜಿಬಿಎ ಅರಣ್ಯ ವಿಭಾಗದಿಂದ ಸಸಿ ನೆಡುವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಇಂದು ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಬಾರಿ ಪಾಲಿಕೆ ವತಿಯಿಂದ *64 ಸಾವಿರ ಸಸಿಗಳನ್ನು ನೆಡುವ* ಹಾಗೂ *40 ಸಾವಿರ ಸಸಿಗಳನ್ನು ನಾಗರಿಕರಿಗೆ ವಿತರಿಸುವ* ಯೋಜನೆ ರೂಪಿಸಲಾಗಿದ್ದು, ಅದಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡು ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ನಗರದಲ್ಲಿ ಈ ಹಿಂದೆ ನೆಟ್ಟ ಗಿಡಗಳ ಸಮರ್ಪಕ ದಾಖಲೆ ಹಾಗೂ ಮೇಲ್ವಿಚಾರಣೆ ಕಂಡುಬರುತ್ತಿಲ್ಲ. ಮುಂದಿನ ದಿನಗಳಲ್ಲಿ ಇಂತಹ ಪರಿಸ್ಥಿತಿ ಮರುಕಳಿಸದಂತೆ ಕ್ರಮವಹಿಸಬೇಕು. ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ನೆಟ್ಟು, ಅವುಗಳನ್ನು ಸಮರ್ಪಕವಾಗಿ ಪೋಷಿಸಿದರೆ ತಾಪಮಾನ ಹಾಗೂ ವಾಯುಮಾಲಿನ್ಯವನ್ನು ಕಡಿಮೆ ಮಾಡುವುದರ ಜೊತೆಗೆ ನಗರದ ಸೌಂದರ್ಯ ಮತ್ತು ಪರಿಸರವೂ ವೃದ್ಧಿಯಾಗಲಿದೆ. ಈ ನಿಟ್ಟಿನಲ್ಲಿ ಪಬ್ಲಿಕ್-ಪ್ರೈವೇಟ್ ಪ್ಲಾಂಟಿಂಗ್ ಪ್ರೋಗ್ರಾಂ(ಪಿಪಿಪಿಪಿ) ಮೂಲಕ ಸಾರ್ವಜನಿಕರ ಸಹಭಾಗಿತ್ವದಲ್ಲಿ ಸಸಿ ನೆಡುವ ಅಭಿಯಾನ ಕೈಗೊಳ್ಳಲು ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಬೆಂಗಳೂರಿನ ಉಳಿವಿಗಾಗಿ ಗಿಡ ನೆಡುವ ಕಾರ್ಯಕ್ರಮ ಸಹಾಯಕವಾಗಲಿದೆ. ನಗರದ ಭವಿಷ್ಯಕ್ಕಾಗಿ ಇದು ಅತ್ಯಂತ ಅಗತ್ಯ ಕಾರ್ಯಕ್ರಮವಾಗಿದೆ. ಗಿಡ ನೆಡುವ ಕಾರ್ಯಕ್ರಮ ಕೇವಲ ದಾಖಲೆಗಳಿಗೆ ಸೀಮಿತವಾಗದೆ, ನೈಜವಾಗಿ ಕಾರ್ಯರೂಪಕ್ಕೆ ಬರಬೇಕು. ಈ ಬಾರಿ ನಗರದಲ್ಲಿ ಟೊಳ್ಳಾಗಿರುವ ಅಥವಾ ಗುಣಮಟ್ಟವಿಲ್ಲದ ಸಸಿಗಳನ್ನು ನೆಡುವುದಿಲ್ಲ. *ಮಹಾಗನಿ, ಟಬೆಬಿಯಾ ರೋಸಿಯಾ, ಹೊಂಗೆ, ಬೇವು, ನೇರಳೆ* ಸೇರಿದಂತೆ ಗುಣಮಟ್ಟದ ಮರಗಳನ್ನಷ್ಟೇ ನೆಡಲಾಗುವುದು ಎಂದು ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಬಡಾವಣೆಗಳಲ್ಲಿ ಸಸಿಗಳನ್ನು ನೆಡುವುದಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಬಡಾವಣೆಗಳಲ್ಲಿ ಅಗತ್ಯವಿರುವಷ್ಟು ಸಸಿಗಳನ್ನು ನೆಟ್ಟ ನಂತರ ಉಳಿದ ಸಸಿಗಳನ್ನು ಸಾರ್ವಜನಿಕ ಸ್ಥಳಗಳು, ರಸ್ತೆ ಬದಿಗಳು, ಕೆರೆಗಳ ಸುತ್ತಮುತ್ತ ಹಾಗೂ ಉದ್ಯಾನವನಗಳಲ್ಲಿ ನೆಡಲಾಗುವುದು. *ನಿಯಮಾನುಸಾರ ಗುಂಡಿ ತೋಡಿ, 6 ಅಡಿ ಎತ್ತರದ ಸಸಿಗಳನ್ನು 12 ಅಡಿ ಅಂತರದಲ್ಲಿ* ನೆಡಬೇಕು. ನಾಗರಿಕರ ಸಹಭಾಗಿತ್ವದಲ್ಲಿ ಸಸಿಗಳನ್ನು ನೆಟ್ಟರೆ ಅವು ಬದುಕಿ ಬೆಳೆದು ಪರಿಸರದ ಅಭಿವೃದ್ಧಿಗೆ ನೆರವಾಗುತ್ತವೆ ಎಂದು ಹೇಳಿದರು.
9.64 ಕೋಟಿ ರೂ. ವೆಚ್ಚದಲ್ಲಿ ಸಸಿ ನೆಡುವ ಯೋಜನೆ:
ಪ್ರಸಕ್ತ ಸಾಲಿನಲ್ಲಿ *64,000 ಸಸಿಗಳನ್ನು ನೆಡುವ ಗುರಿ* ಹೊಂದಲಾಗಿದ್ದು, ಸಸಿ ನೆಟ್ಟ ನಂತರ ಮೂರು ವರ್ಷಗಳ ನಿರ್ವಹಣೆಯೂ ಸೇರಿದಂತೆ ಐದು ನಗರ ಪಾಲಿಕೆಗಳ ಆಯವ್ಯಯದಲ್ಲಿ *9.64 ಕೋಟಿ ರೂ.* ಮೀಸಲಿಡಲಾಗಿದೆ. ಸಸಿಗಳನ್ನು ಯಶಸ್ವಿಯಾಗಿ ನೆಟ್ಟು ನಿರ್ವಹಿಸುವ ಆಧಾರದ ಮೇಲೆ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಆನ್‌ಲೈನ್ ಮೂಲಕ ಮನವಿ ಸಲ್ಲಿಸಿ:
ನಗರದಲ್ಲಿರುವ ಬಡಾವಣೆಗಳ ನಿವಾಸಿಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ನಾಗರೀಕರು ತಮ್ಮ ಬಡಾವಣೆಗಳಲ್ಲಿ *ಕನಿಷ್ಠ 30 ಸಸಿಗಳನ್ನು* ನೆಡಲು ಅವಕಾಶವಿದ್ದಲ್ಲಿ, *ಆಗಸ್ಟ್ 10* ರೊಳಗಾಗಿ ಪಾಲಿಕೆಯ ವೆಬ್‌ಸೈಟ್ https://gbatreeplantation.com/ ಹಾಗೂ ಇ-ಮೇಲ್ [email protected] ಮೂಲಕ ಮನವಿ ಸಲ್ಲಿಸಬಹುದು. ಮನವಿಗಳ ಆಧಾರದ ಮೇಲೆ ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಸಸಿ ನೆಡಲು ಅವಕಾಶವಿದ್ದಲ್ಲಿ ಪಾಲಿಕೆಯಿಂದಲೇ ಸಸಿಗಳನ್ನು ನೆಡಲಾಗುವುದು.
ಒಂದು ತಿಂಗಳ ಕಾಲ "ಬೆಂಗಳೂರು ಹಸಿರೂರು ಅಭಿಯಾನ"
ನಗರದಲ್ಲಿ **ಆಗಸ್ಟ್ 15 ರಿಂದ ಸೆಪ್ಟೆಂಬರ್ 15** ರವರೆಗೆ ಒಂದು ತಿಂಗಳ ಕಾಲ *"ಬೆಂಗಳೂರು ಹಸಿರೂರು ಅಭಿಯಾನ"* ಹಮ್ಮಿಕೊಳ್ಳಲಾಗುವುದು. ಇದಕ್ಕಾಗಿ ಆಯಾ ನಗರ ಪಾಲಿಕೆಗಳಲ್ಲಿ ಸಸಿ ನೆಡುವ ಟೆಂಡರ್ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಟ್ರ್ಯಾಕಿಂಗ್ ವ್ಯವಸ್ಥೆ ಲಭ್ಯ:
ಪ್ರಸಕ್ತ ಸಾಲಿನಲ್ಲಿ ನೆಡಲಾಗುವ ಎಲ್ಲಾ ಸಸಿಗಳಿಗೂ **ಟ್ರ್ಯಾಕಿಂಗ್ ವ್ಯವಸ್ಥೆ** ಕಲ್ಪಿಸಲಾಗುತ್ತಿದೆ. ನಗರದಲ್ಲಿ ಎಲ್ಲೆಲ್ಲಿ ಹಾಗೂ ಎಷ್ಟು ಸಸಿಗಳನ್ನು ನೆಡಲಾಗಿದೆ ಎಂಬ ಮಾಹಿತಿಯು ಜಿಯೋ-ಲೊಕೇಷನ್ ಸಹಿತ ಪಾಲಿಕೆಯ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು, ನಾಗರಿಕರು ಕೂಡ ಅದನ್ನು ವೀಕ್ಷಿಸಬಹುದಾಗಿದೆ.
ನಾಗರಿಕರಿಗೆ 40 ಸಾವಿರ ಸಸಿ ವಿತರಣೆ:
ನಗರದಲ್ಲಿ ಪಾಲಿಕೆ ವತಿಯಿಂದ *64 ಸಾವಿರ ಸಸಿಗಳನ್ನು* ನೆಡಲಾಗುತ್ತದೆ. ಇದರ ಜೊತೆಗೆ ಸಾರ್ವಜನಿಕರು ಮನವಿ ಸಲ್ಲಿಸಿದಲ್ಲಿ ವಿತರಿಸಲು *40 ಸಾವಿರ ಸಸಿಗಳನ್ನು* ಮೀಸಲಿಡಲಾಗಿದೆ. ಬಂದಿರುವ ಮನವಿಗಳ ಸಂಖ್ಯೆಗೆ ಅನುಗುಣವಾಗಿ ಸಸಿಗಳನ್ನು ವಿತರಿಸಿ, ಉಳಿದ ಸಸಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ನೆಟ್ಟು ಪೋಷಿಸಲಾಗುವುದು ಎಂದು ತಿಳಿಸಿದರು.
ಒಂದು ಮರ ಕಡಿತಕ್ಕೆ 10 ಸಸಿಗಳನ್ನು ನೆಡಲಾಗುವುದು:
ನಗರದಲ್ಲಿ ಪಾಲಿಕೆ, ಮೆಟ್ರೋ ಸೇರಿದಂತೆ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಸಂದರ್ಭದಲ್ಲಿ ಮರಗಳನ್ನು ಕಡಿತಗೊಳಿಸುವ ಮೊದಲು, *ಒಂದು ಮರಕ್ಕೆ 10 ಸಸಿಗಳನ್ನು ನೆಡುವ* ವೆಚ್ಚವನ್ನು ಅರಣ್ಯ ವಿಭಾಗಕ್ಕೆ ಪಾವತಿಸಬೇಕು. ಈ ಸಸಿಗಳನ್ನೂ ಪ್ರಸಕ್ತ ಸಾಲಿನ ಗುರಿಯಲ್ಲಿ ಸೇರಿಸಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ವಿಶೇಷ ಆಯುಕ್ತರಾದ ಸುಷ್ಮಾ ಗೋಡಬೋಲೆ, ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಹಾಗೂ ಜಿ. ಜಗದೀಶ್, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಸಿಇಒ ಕರೀಗೌಡ, ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್, ನವೀನ್ ಕುಮಾರ್ ರಾಜು, ಉಪ ಅರಣ್ಯ ಸಂರಕ್ಷಣಾಧಿಕಾರಿ ಸುದರ್ಶನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.