
ಬೆಂಗಳೂರಿನ ಪ್ರಸ್ಕಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದವರು, ಮುಂಬರುವ ಗ್ರೇಟರ್ ಬೆಂಗಳೂರು ಚುನಾವಣೆಯಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ತನ್ನ 'ಮಿಷನ್ 50' ಅಭಿಯಾನವನ್ನು ಪ್ರಾರಂಭಿಸಿರುವ ಪಕ್ಷವು, ಕನಿಷ್ಠ 50 ವಾರ್ಡ್‌ಗಳಲ್ಲಿ ಜಯಗಳಿಸುವ ವಿಶ್ವಾಸ ವ್ಯಕ್ತಪಡಿಸಿದೆ. ಸ್ಥಳೀಯ ಜನ ಸಮುದಾಯಗಳು ತಮ್ಮ ನೆರೆಹೊರೆಯ ಮತ್ತು ನಗರದ ಭವಿಷ್ಯದ ಮೇಲೆ ನೇರ ಪರಿಣಾಮ ಬೀರುವ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳುವಂತಹ 'ನಾಗರಿಕ ನೇತೃತ್ವದ ಆಡಳಿತ'ದ ಹೊಸ ಅಧ್ಯಾಯವನ್ನು ಆರಂಭಿಸುವುದಾಗಿ ಬಿಎನ್‌ಪಿ ಭರವಸೆ ನೀಡಿದೆ.
ರಾಜಕೀಯ ಪಕ್ಷಗಳಿಗೆ ಪರ್ಯಾಯ ಆಡಳಿತ ವ್ಯವಸ್ಥೆ;
ಸಮಾಜದ ಮುಖಂಡರು, ವೃತ್ತಿಪರರು, ನಗರ ತಜ್ಞರು, ಉದ್ಯಮಿಗಳು ಮತ್ತು ತಳಮಟ್ಟದ ಸಂಘಟಕರನ್ನು ಒಳಗೊಂಡಿರುವ ಬಿಎನ್‌ಪಿ, ಸಾಂಪ್ರದಾಯಿಕ ರಾಜಕೀಯ ಪಕ್ಷಗಳಿಗೆ ಪರ್ಯಾಯವಾಗಿ 'ಆಡಳಿತಕ್ಕೆ ಮೊದಲ ಆದ್ಯತೆ' ನೀಡುವ ವೇದಿಕೆಯಾಗಿ ಗುರುತಿಸಿಕೊಂಡಿದೆ. ಕಾರ್ಪೊರೇಶನ್‌ನ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಪ್ರಭಾವ ಬೀರಲು ಮತ್ತು 'ಏರಿಯಾ ಸಭಾ'ಗಳ ಮೂಲಕ ಪ್ರಾದೇಶಿಕ ಮಟ್ಟದಲ್ಲಿ ಹೊಣೆಗಾರಿಕೆಯನ್ನು ಸಾಂಸ್ಥಿಕ ಮಟ್ಟಕ್ಕೆ ಏರಿಸಲು ಕನಿಷ್ಠ 50 ವಾರ್ಡ್‌ಗಳಲ್ಲಿ ಗೆಲುವು ಸಾಧಿಸುವುದು ಅತ್ಯಗತ್ಯ ಎಂದು ಪಕ್ಷವು ನಂಬಿದೆ.
ಗ್ರೇಟರ್ ಬೆಂಗಳೂರು ಚುನಾವಣೆಗಾಗಿ 'ಮಿಷನ್ 50' ಅಭಿಯಾನ

ಬೆಂಗಳೂರು ನವನಿರ್ಮಾಣ ಪಕ್ಷದ 'ಮಿಷನ್ 50' ಅಭಿಯಾನದ ಮೂಲ ಉದ್ದೇಶವು 74ನೇ ಸಂವಿಧಾನ ತಿದ್ದುಪಡಿಯಲ್ಲಿ ಉಲ್ಲೇಖಿಸಲಾದ 'ಏರಿಯಾ ಸಭಾ'ಗಳನ್ನು ಪುನಶ್ಚೇತನಗೊಳಿಸುವುದು ಮತ್ತು ಸಬಲೀಕರಿಸುವುದಾಗಿದೆ. ಈ ಹಿಂದಿನ ಸರ್ಕಾರಗಳು ಈ ವ್ಯವಸ್ಥೆಯನ್ನು ದುರ್ಬಲಗೊಳಿಸಿದ ಅಥವಾ ನಿರ್ಲಕ್ಷಿಸಿದ ನಂತರ, ಬಿಎನ್‌ಪಿ ಇದನ್ನು ತನ್ನ ನಾಗರಿಕ ನೇತೃತ್ವದ ಆಡಳಿತ ಮಾದರಿಯ ಅಡಿಪಾಯವನ್ನಾಗಿ ಮಾಡಿಕೊಂಡಿದೆ.
ನಗರವನ್ನು ನಡೆಸುವ ವಿಧಾನದಲ್ಲಿ ಮೂಲಭೂತ ಸೌಕರ್ಯಗಳ ಬದಲಾವಣೆ ಆಗಬೇಕಾದ ಅಗತ್ಯವನ್ನು ಒತ್ತಿಹೇಳುತ್ತಾ, "ಬೆಂಗಳೂರು ಜಾಗತಿಕ ಆರ್ಥಿಕ ಶಕ್ತಿಯಾಗಿ ಬೆಳೆದಿದ್ದರೂ ಈ ನಗರವನ್ನು 19ನೇ ಶತಮಾನದ ಮನಸ್ಥಿತಿಯಿಂದ ಆಳಲಾಗುತ್ತಿದೆ. ನಾವು 2026ರ ಬಹು ನಿರ್ಣಾಯಕ ಹಂತದಲ್ಲಿದ್ದೇವೆ, ಆದರೆ ಇದೀಗ ಜಿಬಿಎ ಆಗಿ ಬದಲಾಗುತ್ತಿರುವ ಪ್ರಕ್ರಿಯೆಯು ಸ್ಪಷ್ಟತೆಗಿಂತ ಹೆಚ್ಚಾಗಿ ಗೊಂದಲವನ್ನೇ ಸೃಷ್ಟಿಸುತ್ತಿದೆ. ಬಿಎನ್‌ಪಿಯಲ್ಲಿ ನಾವು ಕೇವಲ ಹೊಸ ಕಾನೂನುಗಳಿಂದ ಪರಿಹಾರ ಸಿಗುವುದಿಲ್ಲ, ಬದಲಿಗೆ ಹೊಸ ಪೀಳಿಗೆಯ ನಾಯಕರ ಅಗತ್ಯವಿದೆ ಎಂಬುದನ್ನು ನಂಬುತ್ತೇವೆ. ನಾವು ಸಾರ್ವಜನಿಕ ಸೇವೆಗೆ ಕಾರ್ಪೊರೇಟ್ ಶಿಸ್ತನ್ನು ತರುತ್ತಿದ್ದೇವೆ. ಇಲ್ಲಿ ಪ್ರತೀ ಯೋಜನೆಗೂ ಕಟ್ಟುನಿಟ್ಟಾದ ಗಡುವು ಇರುತ್ತದೆ, ಪ್ರತಿ ಅಧಿಕಾರಿಯೂ ಹೊಣೆಗಾರರಾಗಿರುತ್ತಾರೆ ಮತ್ತು ಸಶಕ್ತ ಏರಿಯಾ ಸಭಾಗಳ ಮೂಲಕ ಪ್ರತೀ ನಾಗರಿಕನಿಗೂ ಧ್ವನಿ ಇರುವಂತೆ ನೋಡಿಕೊಳ್ಳಲಾಗುತ್ತದೆ. ನಾವು ಇಲ್ಲಿ ಹಳೆಯ ಕಾಲದ 'ರಾಜಕೀಯ' ಮಾಡಲು ಬಂದಿಲ್ಲ. ನಾವು ನಮ್ಮ ಮನೆಯಂತಿರುವ ಈ ನಗರವನ್ನು ವೃತ್ತಿಪರ ರೀತಿಯಲ್ಲಿ ಮತ್ತು ಪಾರದರ್ಶಕವಾಗಿ ಬೆಳೆಸುವ ಉದ್ದೇಶದಿಂದ ಬಂದಿದ್ದೇವೆ" ಎಂದು ಹೇಳಿದರು.
BNP 75 ಕ್ಕೂ ಹೆಚ್ಚು ವಾರ್ಡ್ಗಳಲ್ಲಿ ತಂಡಗಳನ್ನು ಹಾಗೂ ಏರಿಯಾ ಸಭಾಧ್ಯಕ್ಷರ ನೇಮಕ
ಬಿಎನ್‌ಪಿ ಈಗಾಗಲೇ 75ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ವಾರ್ಡ್ ತಂಡಗಳನ್ನು ಮತ್ತು ಏರಿಯಾ ಸಭಾ ನಾಯಕತ್ವವನ್ನು ರೂಪಿಸುತ್ತಿದ್ದು, ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ನಾಗರಿಕ ಸಮಸ್ಯೆಗಳನ್ನು ಗುರುತಿಸುವುದು, ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುವುದು, ಕಾಮಗಾರಿಗಳ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಅವುಗಳನ್ನು ಸತತವಾಗಿ ಅನುಸರಿಸುವುದು ಸೇರಿದಂತೆ ವರ್ಷಪೂರ್ತಿ ಕಾರ್ಯನಿರ್ವಹಿಸುತ್ತಿದೆ. ಬಿಎನ್‌ಪಿ, ಏರಿಯಾ ಸಭಾಗಳನ್ನು ಕೇವಲ ಸಲಹಾ ವೇದಿಕೆಗಳಾಗಿ ನೋಡದೆ, ಜನಪ್ರತಿನಿಧಿಗಳ ನೇತೃತ್ವದ ಆಡಳಿತದ ಸಕ್ರಿಯ ಘಟಕಗಳಾಗಿ ಪರಿಗಣಿಸುತ್ತದೆ. 1,000ಕ್ಕೂ ಹೆಚ್ಚು ಸಕ್ರಿಯ ಸದಸ್ಯರು, 50,000ಕ್ಕೂ ಹೆಚ್ಚು ಸ್ವಯಂಸೇವಕರು ಮತ್ತು ಬೆಂಬಲಿಗರ ವಿಶಾಲ ನೆಲೆಯನ್ನು ಹೊಂದಿರುವ ಬಿಎನ್‌ಪಿಗೆ ಇತ್ತೀಚಿನ ತಿಂಗಳುಗಳಲ್ಲಿ 1,000ಕ್ಕೂ ಹೆಚ್ಚು ಹೊಸ ನಾಗರಿಕರು ಸೇರ್ಪಡೆಗೊಳ್ಳುತ್ತಿದ್ದಾರೆ. ಇದು ಪಕ್ಷದ 'ನಾಗರಿಕ ಮೊದಲು' ಎಂಬ ದೃಷ್ಟಿಕೋನದ ಮೇಲೆ ಜನರಿಗೆ ಹೆಚ್ಚುತ್ತಿರುವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ. ವಿಕೇಂದ್ರೀಕೃತ ವಾರ್ಡ್ ಮಟ್ಟದ ಆಡಳಿತ, ದೈನಂದಿನ ಸಮಸ್ಯೆಗಳನ್ನು ಸ್ಥಳೀಯವಾಗಿಯೇ ಪರಿಹರಿಸುವುದು ಮತ್ತು 'ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆ'ಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಟೆಂಡರ್, ಬಜೆಟ್ ಮತ್ತು ಅನುಷ್ಠಾನದಲ್ಲಿ ಪಾರದರ್ಶಕತೆಯನ್ನು ಸಾಧ್ಯವಾಗಿಸುವುದು ಪಕ್ಷದ ಪ್ರಮುಖ ಆದ್ಯತೆಗಳಾಗಿವೆ.
ಗಂಭೀರವಾದ ಆರ್ಥಿಕ ಮತ್ತು ಆಡಳಿತಾತ್ಮಕ ಸವಾಲುಗಳನ್ನು ಎದುರಿಸುತ್ತಿದೆ. ಕರ್ನಾಟಕದ ಆರ್ಥಿಕತೆಗೆ ಶೇಕಡ 40ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತಿದ್ದರೂ, ನಗರದ ಪಾಲಿಕೆಗಳಿಗೆ ಹಣಕಾಸಿನ ಸ್ವಾಯತ್ತತೆ ಇಲ್ಲ. ಹೊಸದಾಗಿ ರಚನೆಯಾಗಿರುವ ಜಿಬಿಎಗೆ ಚುನಾಯಿತ ಮೇಯರ್ ಬದಲಿಗೆ ಮುಖ್ಯಮಂತ್ರಿಯವರೇ ಅಧ್ಯಕ್ಷರಾಗಿರುವುದು ಹೊಣೆಗಾರಿಕೆಯ ಬಗ್ಗೆ ಆತಂಕ ಮೂಡಿಸಿದ್ದು, ಇದು ಅಧಿಕಾರವು ರಾಜ್ಯ ಮಟ್ಟದಲ್ಲೇ ಕೇಂದ್ರಿಕೃತವಾಗುವಂತೆ ಮಾಡುತ್ತದೆ. ನಗರವು ಪ್ರಸ್ತುತ ಅಧಿಕಾರ ವಿಕೇಂದ್ರೀಕರಣದ ಬದಲು ಅಧಿಕಾರ ವಿಭಜನೆಯಿಂದಾಗಿ ಆಡಳಿತಾತ್ಮಕ ಸಂಕಷ್ಟವನ್ನು ಎದುರಿಸುತ್ತಿದೆ. ನಗರವನ್ನು ಐದು ಹೊಸ ಮಹಾನಗರ ಪಾಲಿಕೆಗಳಾಗಿ ವಿಭಜಿಸಿರುವುದರಿಂದ, ಇಲ್ಲಿನ ನಿವಾಸಿಗಳು ಮತ್ತು ಉದ್ಯಮಿಗಳು ವ್ಯಾಪಾರ ಪರವಾನಗಿ ಹಾಗೂ ಆಸ್ತಿ ತೆರಿಗೆಗಾಗಿ 'ಹಲವು ಹಂತದ ಅನುಮೋದನೆ' ಮತ್ತು ವಿಭಿನ್ನ ವಲಯದ ನಿಯಮಗಳನ್ನು ಎದುರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದರ ಜೊತೆಗೆ, ಜಲಮಂಡಳಿ, ಸಾರಿಗೆ ಮತ್ತು ಇಂಧನ ಇಲಾಖೆಗಳಂತಹ ರಾಜ್ಯ ನಿಯಂತ್ರಿತ ಸಂಸ್ಥೆಗಳ ನಡುವೆ ಸಮನ್ವಯದ ಕೊರತೆಯಿದೆ. ಈ ಕಾರಣದಿಂದಾಗಿಯೇ ಹೊಸದಾಗಿ ನಿರ್ಮಿಸಿದ ರಸ್ತೆಗಳನ್ನು ಇತರ ಕಾಮಗಾರಿಗಳಿಗಾಗಿ ಪದೇ ಪದೇ ಅಗೆಯಲಾಗುತ್ತಿದೆ" ಎಂದು ಹೇಳಿದರು.
ಚುನಾಯಿತ ಪಾಲಿಕೆ ಸದಸ್ಯರು ದೀರ್ಘಕಾಲದವರೆಗೆ ಕಾರ್ಯನಿರ್ವಹಿಸಿದೇ ಇರುವುದರಿಂದ ಬೆಂಗಳೂರನ್ನು ಕಾಡುತ್ತಿರುವ ಹಲವು ಸಮಸ್ಯೆಗಳನ್ನು ಬಿಎನ್‌ಪಿ ಪಟ್ಟಿ ಮಾಡಿದೆ. ಮೂಲಸೌಕರ್ಯ ಮತ್ತು ಸುಗಮ ಸಂಚಾರ ವ್ಯವಸ್ಥೆಗಳು ನಿರ್ಲಕ್ಷ್ಯಕ್ಕೊಳಗಾಗಿವೆ. 'ನಮ್ಮ ಮೆಟ್ರೋ' ಜಾಲವು ವಿಸ್ತರಣೆಯಾಗಿದೆಯಾದರೂ, ಕೊನೆಯ ಹಂತದ ಸಂಪರ್ಕ ವ್ಯವಸ್ಥೆಯು ಇಂದಿಗೂ ಸಮಸ್ಯೆಯಾಗಿಯೇ ಉಳಿದಿದೆ. ನಿರಂತರ ಸಂಚಾರ ದಟ್ಟಣೆ ಮತ್ತು 'ಗುಂಡಿಗಳ ಕಾಟ' ನಗರವನ್ನು ಕಾಡುತ್ತಲೇ ಇದೆ. ಅವೈಜ್ಞಾನಿಕ ಚರಂಡಿ ವ್ಯವಸ್ಥೆಯಿಂದಾಗಿ ವೈಟ್ ಟಾಪಿಂಗ್‌ನಂತಹ ಬೃಹತ್ ಹೂಡಿಕೆ ಯೋಜನೆಗಳೂ ಸಹ ವಿಫಲವಾಗುತ್ತಿವೆ.
ನಗರೀಕರಣದಿಂದ ನಗರದಲ್ಲಿ ಜ್ವಲಂತ ಸಮಸ್ಯೆಗಳು ಉದ್ಭವ
ಅವಿವೇಕದ ನಗರೀಕರಣದಿಂದ ರಾಜಕಾಲುವೆಗಳು ಒತ್ತುವರಿಯಾಗುತ್ತಿದ್ದು, ನಗರವು ನೀರಿನ ಅಭಾವ ಮತ್ತು ಅಕಾಲಿಕ ಪ್ರವಾಹ ಎರಡನ್ನೂ ಎದುರಿಸುವ ಹಂತಕ್ಕೆ ತಲುಪಿದೆ. ತ್ಯಾಜ್ಯ ನಿರ್ವಹಣೆಯು ಇಂದಿಗೂ ಹಳೆಯ 'ಸಂಗ್ರಹಿಸುವ ಮತ್ತು ಸುರಿಯುವ' ಮಾದರಿಯಲ್ಲೇ ನಡೆಯುತ್ತಿದ್ದು, ವೈಜ್ಞಾನಿಕ ಮರುಬಳಕೆಯ ಪದ್ಧತಿ ಅಳವಡಿಕೆಗೆ ಬದಲಾಗುವಲ್ಲಿ ವಿಫಲವಾಗಿದೆ.
ಈ ಕುರಿತು ನರಸಿಂಹನ್, "ಬಿಎನ್‌ಪಿಯ ವಿಶ್ವಾಸಾರ್ಹತೆ ಇರುವುದು ಭರವಸೆಗಳಲ್ಲಿ ಅಲ್ಲ, ಬದಲಾಗಿ ನಾವು ಮಾಡುವ ಕೆಲಸದಲ್ಲಿ. ಚುನಾಯಿತ ಪ್ರತಿನಿಧಿಗಳು ಇಲ್ಲದಿದ್ದರೂ ಸಹ, ಪಕ್ಷ ಬೆಂಬಲಿತ ನಾಗರಿಕ ತಂಡಗಳು ರಸ್ತೆ ಗುಂಡಿಗಳು, ಚರಂಡಿ ಸಮಸ್ಯೆಗಳು, ಹಾಳಾದ ಪಾದಚಾರಿ ಮಾರ್ಗಗಳು, ಬೀದಿ ದೀಪದ ತೊಂದರೆಗಳು, ಇ-ಖಾತಾ ಸಮಸ್ಯೆಗಳು, ರಸ್ತೆ ಸುರಕ್ಷತೆ ಮತ್ತು ಕೆರೆ ಮಾಲಿನ್ಯ ಸೇರಿದಂತೆ ಪ್ರತಿದಿನ ಹತ್ತಕ್ಕೂ ಹೆಚ್ಚು ನಾಗರಿಕ ಸಮಸ್ಯೆಗಳನ್ನು ಪರಿಹರಿಸುತ್ತಿವೆ. ಲಂಚ ನೀಡದೆ ನಾಗರಿಕರ ನೇತೃತ್ವದಲ್ಲಿ ಸಿ.ವಿ. ರಾಮನ್ ನಗರದ ಸ್ಕೈವಾಕ್ ನಿರ್ಮಿಸಿರುವುದು, ಉತ್ತರಹಳ್ಳಿ ಕೆರೆಯ ಪುನಶ್ಚೇತನ ಕಾರ್ಯಗಳು ಮತ್ತು ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಪಾದಚಾರಿ ಮಾರ್ಗಗಳನ್ನು ನಿರಂತರವಾಗಿ ಕಾರ್ಯನಿರ್ವಹಿಸುವಂತೆ ಮಾಡುವ ಕಾರ್ಯಪಡೆಗಳನ್ನು ರಚಿಸಿರುವುದು ಇದಕ್ಕೆ ಉತ್ತಮ ಉದಾಹರಣೆಗಳಾಗಿವೆ. ಅಲ್ಲದೆ, ನಗರಾದ್ಯಂತ ಅವೈಜ್ಞಾನಿಕವಾಗಿ ಹೆಚ್ಚಿಸಲಾಗಿದ್ದ ಆಸ್ತಿ ತೆರಿಗೆ ನೋಟಿಸ್‌ಗಳ ವಿರುದ್ಧ ಪಕ್ಷವು ಪ್ರತಿಭಟನೆಗಳನ್ನು ನಡೆಸಿ, ಸಾವಿರಾರು ನಿವಾಸಿಗಳು ತೆರಿಗೆ ತಿದ್ದುಪಡಿ ಮಾಡಿಸಿಕೊಳ್ಳಲು ಮತ್ತು ಆರ್ಥಿಕ ನೆರವು ಪಡೆಯಲು ಸಹಾಯ ಮಾಡಿದೆ" ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ BNP ಪದಾಧಿಕಾರಿಗಳು, ಹಾಗೂ ಕಾರ್ಯಕರ್ತರು ಇದೆ ವೇಳೆ ಉಪಸ್ಥಿತರಿದ್ದರು.