ಬೆಂಗಳೂರು: ನೀವು ನನಗೆ ಶಾಲು ಹೂವ ಹಾಕುವುದಾದರೆ ಅದರ ಬದಲು ಅದೇ ಹಣವನ್ನು ಕಾಂಗ್ರೆಸ್ ಪಕ್ಷಕ್ಕೆ ಹಾಕಿ. ಆ ಮೂಲಕ ಪಕ್ಷದ ಖಜಾನೆ ತುಂಬಲಿ. 2001ರಲ್ಲಿ ಬೆಂಗಳೂರು ಪಾಲಿಕೆ ಚುನಾವಣೆ ನಡೆಸಲು ನನಗೆ ಜವಾಬ್ದಾರಿ ನೀಡಿದ್ದರು. ಹೊಟೇಲ್ ವೇಯ್ಟರ್, ಕಸ ಗುಡಿಸುವವರು ಸೇರಿದಂತೆ ಸಣ್ಣ ಸಮುದಾಯದವರಿಗೆ ಟಿಕೆಟ್ ಕೊಟ್ಟಾಗ ಎಲ್ಲರು ಆಶ್ಟರ್ಯವಾಗಿದ್ದರು. ಆಗ ಎಲ್ಲರೂ ಗೆದ್ದಿದ್ದರು. ನಾವು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇವೆ, ನಮಗೆ ಅಧಿಕಾರ ಸಿಗುತ್ತೋ ಇಲ್ಲವೋ ಎಂಬ ಭಾವನೆ ಬೇಡ. ಕಾರ್ಯಾಧ್ಯಕ್ಷರಾದ ಚಂದ್ರಶೇಖರ್ ಹಾಗೂ ಮಂಜುನಾಥ್ ಭಂಡಾರಿ ಅವರು ಸಮೀಕ್ಷೆ ಮಾಡಿಸಿದ್ದಾರೆ. ಹೀಗಾಗಿ ಜಿಬಿಎ ಚುನಾವಣೆಯಲ್ಲಿ ಒಳ್ಳೆಯ ಕಾರ್ಯಕರ್ತ ಗೆಲ್ಲುವ ಅರ್ಹತೆ ಇದ್ದರೆ, ಹಣವಿಲ್ಲದಿದ್ದರೂ ನಿಮಗೆ ಟಿಕೆಟ್ ಸಿಗುವುದು ಗ್ಯಾರಂಟಿ ಎಂದು ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಹೇಳಿದರು.
ಕೆಪಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ 2 ವರ್ಷ ಕಾಂಗ್ರೆಸ್ ಕಾರ್ಯಕರ್ತರ ವರ್ಷ. ಈ ಎರಡು ವರ್ಷ ರಾಜ್ಯದ ಚುನಾವಣೆ ಹಾಗೂ ನಂತರದ ಒಂದು ವರ್ಷ ಲೋಕಸಭೆ ಚುನಾವಣೆಯಲ್ಲಿ ನಾವು ಸಕ್ರಿಯವಾಗಿ ಭಾಗವಹಿಸಿ ಬಿಜೆಪಿ ಹಾಗೂ ಆಸ್ ಎಸ್ಎಸ್ ಅನ್ನು ಮಣಿಸಬೇಕಾಗುತ್ತದೆ. ಇದಕ್ಕೆ ನಿಮ್ಮೆಲ್ಲರ ಶಕ್ತಿ ಹಾಗೂ ಸಹಕಾರ ಅಗತ್ಯವಿದೆ. ನಮ್ಮ ಹೋರಾಟ ಮಾಡುತ್ತಿರುವುದು ಸೋನಿಯಾ ಗಾಂಧಿ ಅವರು. ಇಡೀ ಕಾಂಗ್ರೆಸ್ ಪಕ್ಷ ಅವರನ್ನು ಪ್ರಧಾನಮಂತ್ರಿ ಮಾಡಲು ತೀರ್ಮಾನಿಸಿದಾಗಲೂ ಅವರು ನಾನು ಈ ಹುದ್ದೆ ಸ್ವೀಕರಿಸುವುದಿಲ್ಲ, ಮನಮೋಹನ್ ಸಿಂಗ್ ಅವರನ್ನು ಪ್ರಧಾನಮಂತ್ರಿ ಮಾಡಿ ಎಂದು ತ್ಯಾಗ ಮಾಡಿರುವುದು ನಮ್ಮ ಮುಂದೆ ಇದೆ. ಅವರೇ ಕಾಂಗ್ರೆಸ್ ಪಕ್ಷವನ್ನು ಉಳಿಸಲು ತ್ಯಾಗ ಮಾಡಿರುವಾಗ, ನಾವು ಪಕ್ಷವನ್ನು ಬೆಳೆಸಲು ಎಲ್ಲರೂ ಸೇರಿ ಕೆಲಸ ಮಾಡಬೇಕು.
ಸಂವಿಧಾನ ಬದ್ಧವಾಗಿ ಕೆಲಸ ಮಾಡುವೆ:
ಕಾಂಗ್ರೆಸ್ ಪಕ್ಷದ ಸಂವಿಧಾನ ಹಾಗೂ ಸೋನಿಯಾ ಗಾಂಧಿ ಅವರ ಆಶಯದಂತೆ ಕೆಲಸ ಮಾಡುವೆ. ಮಹಿಳೆಯರಿಗೆ 33% ಅವಕಾಶ ಸಿಕ್ಕೇ ಸಿಗುತ್ತದೆ. ಯಾವುದೇ ಜಾತಿ, ಧರ್ಮ, ಭಾಷೆ ತಾರತಮ್ಯವಿಲ್ಲದೇ ಯುವಕರನ್ನು ಸೇರಿಸಿಕೊಂಡು ಮುಂದೆ ಸಾಗಬೇಕಾಗುತ್ತದೆ.
*ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಜಿ.ಸಿ. ಚಂದ್ರಶೇಖರ್*
ಕಾಂಗ್ರೆಸ್ ಪಕ್ಷದ ಕಟ್ಟಾಳು, ಸಕ್ರಿಯ ಕಾರ್ಯಕರ್ತ, ದೇವರಾಜ ಅರಸು ಅವರ ಮೊಮ್ಮಗ ಸೂರಜ್ ಹೆಗ್ಡೆ ಅವರ ನಿಧನ ನಮ್ಮೆಲ್ಲರಿಗೂ ದುಃಖ ತರಿಸುವ ವಿಚಾರ. ಅವರು ತಾಳ್ಮೆಗೆ ಮತ್ತೊಂದು ರೂಪವಾಗಿದ್ದರು. ಅಂತಹ ವ್ಯಕ್ತಿ ತಮ್ಮ ಆರೋಗ್ಯ ಸಮಸ್ಯೆ ಇದ್ದರೂ ವೈದ್ಯರ ವಿಶ್ರಾಂತಿ ಸಲಹೆ ಇದ್ದರೂ ತಮಿಳುನಾಡು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಲೇಬೇಕು ಎಂದು ಭಾಗವಹಿಸಿದರು. ಇದು ಅವರ ಬದ್ಧತೆಗೆ ಉದಾಹರಣೆ.
ಅವರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಅತ್ಯುತ್ತಮ ಸಂದೇಶ ನೀಡಿ ಹೋಗಿದ್ದಾರೆ. ಕೆಲಸದ ಜೊತೆಗೆ ಆರೋಗ್ಯವೂ ಮುಖ್ಯ. ಹೀಗಾಗಿ ಎಲ್ಲರೂ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಸಂದೇಶ ನೀಡಿದ್ದಾರೆ.
ಕೆಪಿಸಿಸಿ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಬಿ.ಕೆ. ಹರಿಪ್ರಸಾದ್ ಅವರು ಜವಾಬ್ದಾರಿ ಸ್ವೀಕಾರಕ್ಕೂ ಮುನ್ನ ಪಕ್ಷದ ಕಚೇರಿಗೆ ಸೌಜನ್ಯ ಭೇಟಿ ನೀಡಿದ್ದಾರೆ. ಕಾರ್ಯಕರ್ತನಾಗಿ, ಪ್ರಧಾನ ಕಾರ್ಯದರ್ಶಿಗಳಾಗಿ ದೇಶದ 19 ರಾಜ್ಯಗಳಿಗೆ ಉಸ್ತುವಾರಿಯಾಗಿ, 4 ಬಾರಿ ರಾಜ್ಯಸಭೆ ಸದಸ್ಯರಾಗಿ, ಎರಡನೇ ಬಾರಿ ವಿಧಾನ ಪರಿಷತ್ ಸದಸ್ಯರಾಗಿ ತಮ್ಮ ಇಡೀ ಜೀವನವನ್ನು ಕಾಂಗ್ರೆಸ್ ಪಕ್ಷಕ್ಕೆ ಸಮರ್ಪಣೆ ಮಾಡಿಕೊಂಡ ಕಾರ್ಯಕರ್ತರು ಎಂದರೆ ಅದು ಬಿ.ಕೆ. ಹರಿಪ್ರಸಾದ್ ಅವರು. ಸಂಘಟನೆ ಮೂಲಕ ಕೆಲಸ ಮಾಡಿಕೊಂಡು ಬಂದವರನ್ನೂ ಪಿಸಿಸಿ ಅಧ್ಯಕ್ಷರನ್ನಾಗಿ ಹೈಕಮಾಂಡ್ ಮಾಡಲಿದೆ ಎಂಬುದಕ್ಕೆ ಹರಿಪ್ರಸಾದ್ ಅವರು ಸ್ಪಷ್ಟ ನಿದರ್ಶನ.
ನಾನು ಕಂಡಂತೆ ಹರಿಪ್ರಸಾದ್ ಅವರು ಎಂದಿಗೂ ನನಗೆ ಇಂತಹ ಹುದ್ದೆ ಬೇಕು ಎಂದು ಕೇಳಿದವರಲ್ಲ. ಪಕ್ಷ ಕೊಟ್ಟ ಜವಾಬ್ದಾರಿ ನಿಭಾಯಿಸುತ್ತೇನೆ ಎಂಬುದು ಅವರ ಧೋರಣೆ. ನಾವೆಲ್ಲರೂ ಹರಿಪ್ರಸಾದ್ ಅವರ ಜೊತೆ ಕೆಲಸ ಮಾಡಿದ್ದೇವೆ. ಅವರನ್ನು ಪಿಸಿಸಿ ಅಧ್ಯಕ್ಷರೆಂದು ಕರೆಯುವುದಕ್ಕಿಂತ ಕಾರ್ಯಕರ್ತರ ಮಧ್ಯೆ ಬೆರೆಯುವ ನಾಯಕರಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಮಹಿಳಾ ಕಾಂಗ್ರೆಸ್ ಹೊರತಾಗಿ ಉಳಿದ ಎಲ್ಲಾ ವಿಭಾಗಗಳಲ್ಲಿ ಕೆಲಸ ಮಾಡಿರುವವರು ಎಂದರೆ ಅದು ಹರಿಪ್ರಸಾದ್ ಅವರು. ಪಕ್ಷದಲ್ಲಿ ಅವರಿಗೆ ಇಂತಹ ವಿಚಾರ ಗೊತ್ತಿಲ್ಲ ಎನ್ನುವಂತಿಲ್ಲ. ನಾಯಕರಾದವರು ಕಾರ್ಯಕರ್ತರ ಮನಸ್ಸಿನ ಅಂತರಂಗ ಅರಿತಿರಬೇಕು. ಕೆಳ ಹಂತದಿಂದ ಬೆಳೆದು ಅಧ್ಯಕ್ಷ ಸ್ಥಾನಕ್ಕೆ ಬಂದವರಿಂದ ಮಾತ್ರ ಇದು ಸಾಧ್ಯವಾಗುತ್ತದೆ. ನಾನು ಸಂಘಟನೆ ಮೂಲಕ ಬಂದಿದ್ದೇನೆ.
ಜೂ.21ರಂದು ಬಿಕೆಆರ್ ಅಧಿಕಾರ ಸ್ವೀಕಾರ
ಹರಿಪ್ರಸಾದ್ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಕಾರ್ಯಕ್ರಮವನ್ನು ಜೂ.21ರಂದು ನಡೆಸಲು ದಿನಾಂಕ ನಿಗದಿಪಡಿಸಿದ್ದೇವೆ. ನಾನು ಸರಳವಾಗಿ ಅಧಿಕಾರ ಸ್ವೀಕಾರ ಮಾಡುತ್ತೇನೆ ಎಂದು ಹೇಳಿದರು. ಆದರೆ 140 ವರ್ಷಗಳ ಇತಿಹಾಸವಿರುವ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಅಧ್ಯಕ್ಷರನ್ನು ಅಷ್ಟು ಸರಳವಾಗಿ ಮಾಡಬಾರದು ಎಂದು ನಾವು ತೀರ್ಮಾನ ಮಾಡಿದೆವು.
ಜೂ.21ರಂದು ಅರಮನೆ ಮೈದಾನದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಬೇಕು. ಹರಿಪ್ರಸಾದ್ ಅವರ ಮುಂದೆ ಸಾಕಷ್ಟು ಸವಾಲುಗಳಿದ್ದು, 2 ಉಪಚುನಾವಣೆಗಳು, ಜಿಬಿಎ ಪಾಲಿಕೆಗಳು, ಸ್ಥಳೀಯ ಸಂಸ್ಥೆಗಳ ಚುನಾವಣೆ 2 ವರ್ಷಗಳಲ್ಲಿ ವಿಧಾನಸಭೆ ಚುನಾವಣೆ ಎದುರಾಗಲಿದೆ. ಅವರ ಜೊತೆ ಎಲ್ಲಾ ಕಾರ್ಯಕರ್ತರು ನಿಂತು ಅವರನ್ನು ಬೆಂಬಲಿಸಬೇಕು. ಅವರು ನಮ್ಮ ರಾಜ್ಯದಲ್ಲಿ ಮಾತ್ರವಲ್ಲ, ಬೇರೆ ರಾಜ್ಯಗಳಲ್ಲೂ ಸಂಘಟನೆ ಮಾಡಿ ಅಪಾರ ಅನುಭವ ಹೊಂದಿದ್ದಾರೆ. ಅವರ ಕಾರ್ಯ ಯೋಜನೆಗೆ ನಾವು ಸ್ಪಂದಿಸಿ ಪಕ್ಷವನ್ನು ಅಧಿಕಾರಕ್ಕೆ ತರಲು ಇಡೀ ಪಕ್ಷ ಅವರ ಜೊತೆಗಿದೆ.
ಇಂದು ನಾವು ಜಿಬಿಎ ಚುನಾವಣೆ ತಯಾರಿ ಬಗ್ಗೆ ಚರ್ಚೆ ಮಾಡಲು ಸಭೆ ಕರೆಯಲು ತೀರ್ಮಾನಿಸಿದ್ದೆವು. ಆದರೆ ಇಂದು ಎಲ್ಲರೂ ಆಗಮಿಸಿರುವುದರಿಂದ ನಾವು ಆ ಸಭೆಯನ್ನು ಬೇರೊಂದು ದಿನ ನಡೆಸಲಾಗುವುದು.
ಹರಿಪ್ರಸಾದ್ ಹಾಗೂ ಡಿ.ಕೆ. ಶಿವಕುಮಾರ್ ಇಬ್ಬರೂ ಸಂಘಟನೆಯಿಂದ ಬಂದವರಾಗಿದ್ದು, ಇವರಿಬ್ಬರ ನೇತೃತ್ವ 2028ರ ಚುನಾವಣೆಯಲ್ಲಿ ಬಹಳ ಮಹತ್ವದ ಪಾತ್ರ ವಹಿಸಲಿದೆ. ಕಾರ್ಯಕರ್ತರನ್ನು ಒಳಿಸಿಕೊಂಡರೆ ಜನರನ್ನು ಒಲಿಸಿಕೊಳ್ಳುವುದು ಕಷ್ಟವಲ್ಲ. ಇವರಿಬ್ಬರಿಗೂ ಕಾರ್ಯಕರ್ತರು ಒಲಿದಿದ್ದಾರೆ. ಹೀಗಾಗಿ ನಾವು ಕೇವಲ ಜನಗಳ ಬಳಿ ಹೋಗಬೇಕಷ್ಟೆ. ಇವರ ಜೊತೆಗೆ ಸಿದ್ದರಾಮಯ್ಯ ಅವರ ಉದಾರತೆ, ದೊಡ್ಡತನವನ್ನು ನಾವೆಲ್ಲರೂ ಶ್ಲಾಘಿಸಬೇಕು. ಕರ್ನಾಟಕದಲ್ಲಿ ಅಧಿಕಾರ ಹಂಚಿಕೆ ಮಾಡುವಾಗ ಏನೋ ಒಂದು ಸಮಸ್ಯೆಯಾಗುತ್ತದೆ ಎಂದು ಇಡೀ ದೇಶವೇ ನೋಡುತ್ತಿತ್ತು. ಆದರೆ ಯಾವುದೇ ಸಮಸ್ಯೆಯಾಗದಂತೆ ಸಿದ್ದರಾಮಯ್ಯ ಅವರು ತಮ್ಮ ವ್ಯಕ್ತಿತ್ವವನ್ನು ಮೆರೆದಿದ್ದಾರೆ. ಅವರ ವ್ಯಕ್ತಿತ್ವ ದೇಶಕ್ಕೆ ಮಾದರಿಯಾಗಿದೆ. ಅನೇಕ ರಾಜ್ಯಗಳಲ್ಲಿ ಈ ಸಮಸ್ಯೆಯಿಂದಾಗಿ ಪಕ್ಷ ಬಿದ್ದಿರುವ ಉದಾಹರಣೆಗಳಿವೆ. ಆದರೆ ಸಿದ್ದರಾಮಯ್ಯ ಅವರು ಆ ರೀತಿ ಮಾಡದೇ, ಹೈಕಮಾಂಡ್ ಮಾತಿಗೆ ಬದ್ಧರಾಗಿ ನಡೆದಿದ್ದಾರೆ. ಅವರಿಗೆ ಕಾಂಗ್ರೆಸ್ ಪಕ್ಷದ ಪರವಾಗಿ ಕೃತಜ್ಞತೆ ಅರ್ಪಿಸುತ್ತೇನೆ.
ಹರಿಪ್ರಸಾದ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದ ಶ್ರೀಮತಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ ಹಾಗೂ ರಾಜ್ಯದ ಎಲ್ಲ ನಾಯಕರಿಗೆ ಧನ್ಯವಾದ ಅರ್ಪಿಸುತ್ತೇನೆ.
*ಕಾರ್ಯಾಧ್ಯಕ್ಷರಾದ ಮಂಜುನಾಥ್ ಭಂಡಾರಿ:*
ಒಬ್ಬ ಕಾಂಗ್ರೆಸ್ ಕಾರ್ಯಕರ್ತ, ಕಾಂಗ್ರೆಸ್ ಪಕ್ಷವೇ ನನ್ನ ಉಸಿರು ಎಂದು ಭಾವಿಸಿ ಐದು ದಶಕಗಳ ಕಾಲ ಕಾಂಗ್ರೆಸ್ ಪಕ್ಷಕ್ಕೆ ಮುಡಿಪಾಗಿಟ್ಟವರು ಬಿ.ಕೆ. ಹರಿಪ್ರಸಾದ್ ಅವರು. ಕರ್ನಾಟಕ ರಾಜ್ಯದ ಕಾಂಗ್ರೆಸ್ ಕಾರ್ಯಕರ್ತರ ಪರಿಚಯ ಯಾರಿಗಿದೆ ಎಂದರೆ ಅದು ಬಿ.ಕೆ. ಹರಿಪ್ರಸಾದ್. 45 ವರ್ಷಗಳಿಂದ ನಾನು ಅವರನ್ನು ಬಹಳ ಹತ್ತಿರದಿಂದ ಬಲ್ಲೆ. ವಿದ್ಯಾರ್ಥಿ ನಾಯಕರಾಗಿದ್ದಾಗ, ಯುವ ಕಾಂಗ್ರೆಸ್ ನಲ್ಲಿದ್ದಾಗ ಅವರು ನಮಗೆ ಮಾರ್ಗದರ್ಶನ ನೀಡುತ್ತಿದ್ದರು. ನಾವೆಲ್ಲರೂ ರಾಜ್ಯದಿಂದ ದೆಹಲಿಯಲ್ಲಿ ರಾಜಕಾರಣ ಮಾಡುವಾಗ ನಮಗೆ ಮಾರ್ಗದರ್ಶನ ನೀಡಿ ನಮ್ಮನ್ನು ನಾಯಕರನ್ನಾಗಿ ರೂಪಿಸುವ ಕೆಲಸ ಮಾಡತ್ತಿದ್ದರು. ಅವರು ನಮಗೆ ಪುಸ್ತಕಗಳನ್ನು ನೀಡಿ ಓದಲು ಹೇಳುತ್ತಿದ್ದರು.
ಒಮ್ಮೆ ಅವರ ಹೆಸರು ರಾಜ್ಯಸಭೆಯಿಂದ ಕೈಬಿಟ್ಟಾಗ ಅವರನ್ನು ಮಾತನಾಡಿಸಲು ಹೋದಾಗ ಅವರು ಯಾವುದೇ ಬೇಸರವಿಲ್ಲದೇ, ನಾಳೆ ಪಕ್ಷದ ಕೆಲಸದ ಮೇಲೆ ರಾಜಸ್ಥಾನಕ್ಕೆ ಹೋಗೋಣ ಬರುತ್ತೀರಾ ಎಂದು ಕೇಳಿದರು. ಅಧಿಕಾರ ಅವರಿಗೆ ಎಂದಿಗೂ ಮುಖ್ಯವಲ್ಲ. ಮೊನ್ನೆ ರಾತ್ರಿ ಚರ್ಚೆ ಮಾಡುವಾಗ ಹರಿಪ್ರಸಾದ್ ಅವರು ಮಂತ್ರಿ ಸ್ಥಾನಕ್ಕೆ ಒಪ್ಪಿಕೊಳ್ಳುತ್ತಾರೋ ಅಥವಾ ಅಧ್ಯಕ್ಷ ಸ್ಥಾನಕ್ಕೆ ಒಪ್ಪಿಕೊಳ್ಳುತ್ತಾರೋ ಎಂದು ಚರ್ಚೆ ಮಾಡುವಾಗ ನಾನು ಒಂದು ಮಾತು ಸ್ಪಷ್ಟವಾಗಿ ಹೇಳಿದೆ. ಸಿಎಂ ಸ್ಥಾನ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆ ಬಂದಾಗ ಅವರು ಅಧ್ಯಕ್ಷ ಸ್ಥಾನ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದೆ.
ಮೊದಲು ಪಕ್ಷ ಮುಖ್ಯ, ಆಮೇಲೆ ಅಧಿಕಾರ ಎಂದು ನಮಗೆ ಬುದ್ಧಿವಾದ ಹೇಳುತ್ತಿದ್ದವರು ಹರಿಪ್ರಸಾದ್ ಅವರು. ನಾನು ಕಾರ್ಯಾಧ್ಯಕ್ಷರಾಗುವ ಸಂದರ್ಭದಲ್ಲಿ ನೀವು ಮಂತ್ರಿಯಾಗುವುದಕ್ಕಿಂತ ಕಾರ್ಯಾಧ್ಯಕ್ಷರಾಗುತ್ತಿರುವುದು ಮುಖ್ಯ ಎಂದು ಹೇಳಿದ್ದರು. ರಾಜ್ಯದ ಯಾವುದೇ ಕ್ಷೇತ್ರಕ್ಕೆ ಹೋದರೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಲ್ಕು ಜನ ಕಾರ್ಯಕರ್ತರ ಕಾಳಜಿ ವಹಿಸುತ್ತಾರೆ.
ಗ್ರಾಮ ಪಂಚಾಯ್ತಿ ಚುನಾವಣೆ ನಮ್ಮ ಪಾಲಿಗೆ ಮುಖ್ಯವಾಗಿದೆ. ಸುಮಾರು 96 ಸಾವಿರ ಜನ ಗ್ರಾಮ ಪಂಚಾಯ್ತಿ ಸದಸ್ಯರ ಅಧಿಕಾರ ನೀಡಬೇಕಾಗಿದೆ. ಅಂತಹ ಜವಾಬ್ದಾರಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಮೇಲಿದೆ. ಅವರ ನೇತೃತ್ವದಲ್ಲಿ ನಾವು ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಬೇಕಾಗಿದೆ.
ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರ*:*
ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕಾರದ ಬಗ್ಗೆ ಕೇಳಿದಾಗ, “ಇಲ್ಲಿಯವರೆಗೂ ಬಿಜೆಪಿಯವರು ಮತಕಳ್ಳತನ ಮಾಡುತ್ತಿದ್ದರು. ಈಗ ರಾಜ್ಯಸಭೆ ಸ್ಥಾನಗಳನ್ನೇ ಕಳ್ಳತನ ಮಾಡಿ ಸೀಟ್ ಚೋರಿ ಮಾಡುತ್ತಿದ್ದಾರೆ. ಇಷ್ಟು ಕೀಳು ಮಟ್ಟಕ್ಕೆ ಬಿಜೆಪಿಯವರು ಇಳಿದಿದ್ದಾರೆ. ಇದೇನು ಹೊಸತಲ್ಲ, ಎರಡು ತಿಂಗಳ ಹಿಂದೆ ಹರಿಯಾಣದಲ್ಲಿ ರಾಜ್ಯಸಭೆ ಚುನಾವಣೆ ಮಾಡುವಾಗ 37 ಮತಗಳಲ್ಲಿ ನಮಗೆ ಅಗತ್ಯವಿದ್ದದ್ದು 31, ಆದರೆ ನಮಗೆ ಸಿಕ್ಕಿದ್ದು 27 ಮಾತ್ರ. 4 ಮತಗಳನ್ನು ಅಸಿಂಧೂಗೊಳಿಸಿದ್ದರು. 2016ರ ಚುನಾವಣೆಯಲ್ಲಿ ನಮ್ಮ 14 ಮತಗಳನ್ನು ಅಸಿಂಧೂಗೊಳಿಸಿ ಬಿಜೆಪಿ ಸದಸ್ಯರನ್ನು ಆರಿಸಿದ್ದರು. ಇದೇನು ಹೊಸತಲ್ಲ. ಪ್ರಜಾತಂತ್ರವನ್ನು ಸಂಪೂರ್ಣವಾಗಿ ನೆಲಸಮ ಮಾಡಲು ಕುತಂತ್ರ, ಷಡ್ಯಂತ್ರ ಮಾಡುತ್ತಿದ್ದಾರೆ. ಸಂವಿಧಾನ ಮೀರಿ ಕೆಲಸ ಮಾಡಲು ಮುಂದಾಗಿದ್ದಾರೆ. ನಾವು ಇದನ್ನು ಖಂಡಿಸುತ್ತೇವೆ” ಎಂದು ತಿಳಿಸಿದರು.
ಆರ್ ಎಸ್ಎಸ್ ನೋಂದಣಿ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಪ್ರಿಯಾಂಕ್ ಖರ್ಗೆ ಅವರು ಗೃಹ ಸಚಿವರು, ಸರ್ಕಾರದ ಭಾಗ, ಸಂವಿಧಾನದ ವ್ಯಾಪ್ತಿಯಲ್ಲಿ ಅವರಿಗೆ ಅಧಿಕಾರವಿದೆ. ಅವರ ಮಾತಿಗೆ ನಾನು ಸಹಮತ ವ್ಯಕ್ತಪಡಿಸುತ್ತೇನೆ” ಎಂದು ತಿಳಿಸಿದರು.