ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಸರ್ಕಾರದ ಆದೇಶದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನಾಗಿ ಪುನರ್ ರಚಿಸಿ ಸದರಿ ಪ್ರಾಧಿಕಾರದ ಅಡಿಯಲ್ಲಿ ಐದು ಪ್ರತ್ಯೇಕ ಬೆಂಗಳೂರು ನಗರ ಪಾಲಿಕೆಗಳನ್ನಾಗಿ ರಚಿಸಲಾಗಿರುತ್ತದೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಸ್ವತ್ತುಗಳಿಂದ ಸ್ವೀಕರಿಸಲಾಗುವ ಆಸ್ತಿತೆರಿಗೆಯನ್ನು ಪಾಲಿಕೆಯಲ್ಲಿ ಸಾರ್ವಜನಿಕರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಅಥವಾ ನಿರ್ವಹಿಸಲು ಉಪಯೋಗಿಸಲಾಗುತ್ತದೆ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2025 ರ ಅಡಿಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ಸ್ವತ್ತುಗಳು ಪ್ರತಿಯೊಂದು ಆರ್ಥಿಕ ಸಾಲಿನಲ್ಲಿ ಆಸ್ತಿತೆರಿಗೆ ಪಾವತಿ ಮಾಡಬೇಕಾಗಿರುತ್ತದೆ, ಆಸ್ತಿತರಿಗೆ ಪಾವತಿಸದ ಪ್ರಕರಣಗಳಲ್ಲಿ ಆಸ್ತಿತೆರಿಗೆ ವಸೂಲಿ ಮಾಡುವ ಕಾರ್ಯವಿಧಾನವನ್ನು ಆಸ್ತಿತೆರಿಗೆ ನಿರ್ಧರಣೆ, ವಸೂಲಾತಿ ಮತ್ತು ನಿರ್ವಹಣೆ ನಿಯಮಗಳು 2024 ರ ಅಡಿಯಲ್ಲಿ ಅಧಿಸೂಚಿಸಲಾಗಿರುತ್ತದೆ.
ಸದರಿ ಕಾಯ್ದೆ ಹಾಗೂ ನಿಯಮಗಳಲ್ಲಿ ತಿಳಿಸಿರುವಂತೆ ಆಸ್ತಿತೆರಿಗೆ ಸುಸ್ತಿದಾರರಿಗೆ ಕಾರಣಕೇಳಿ ಪತ್ರ, ಆಸ್ತಿತೆರಿಗೆ ಬೇಡಿಕೆ ಪತ್ರಜಾರಿ ಮಾಡಲಾಗಿದ್ದು, ಸಾಕಷ್ಟು ಕಾಲಾವಕಾಶವನ್ನು ನೀಡಲಾದ ನಂತರದಲ್ಲೂ ಬೇಬಾಕಿ ಉಳಿಸಿಕೊಂಡ ಪ್ರಕರಣಗಳ ಮಾಲೀಕರಿಗೆ ನಿಯತಕಾಲಿಕವಾಗಿ ಮೊಬೈಲ್ ಸಂದೇಶಗಳ ಮೂಲಕ ತಮ್ಮ ಸ್ವತ್ತಿನ ಆಸ್ತಿತೆರಿಗೆಯನ್ನು ಪಾವತಿಸಲು ತಿಳಿಸಲಾಗಿರುತ್ತದೆ.
ಮುಂದುವರೆದು, ಸಾಕಷ್ಟು ಅವಕಾಶಗಳನ್ನು ನೀಡಿದ ನಂತರ ಗುರುತಿಸಲಾಗಿರುವ ಆಸ್ತಿ ತೆರಿಗೆಯನ್ನು ಪಾವತಿಸದ ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಜಯನಗರ ವಲಯ ವ್ಯಾಪ್ತಿಯಲ್ಲಿನ ಒಟ್ಟು 98 ಸ್ವತ್ತುಗಳನ್ನು ಕಾಯ್ದೆ ಹಾಗೂ ನಿಯಮಗಳನ್ನಯ ಹರಾಜು ಪ್ರಕ್ರಿಯೆಗೆ (Distress Sale) ಒಳಪಡಿಸಲು ತೀರ್ಮಾನಿಸಲಾಗಿರುತ್ತದೆ. ಸದರಿ 98 ಸ್ವತ್ತುಗಳಿಂದ ದಕ್ಷಿಣ ನಗರ ಪಾಲಿಕೆಗೆ ರೂ. 1,55,86,841/- ಗಳು ಬಾಕಿ ಕಂದಾಯ ಬರಬೇಕಾಗಿರುತ್ತದೆ.
ಮುಂದುವರೆದು, ದಿನಾಂಕ: 21-02-2026 ರಂದು ವಲಯ ಜಂಟಿ ಆಯುಕ್ತರು (ಜಯನಗರ ವಲಯ) ರವರ ಅಧ್ಯಕ್ಷತೆಯಲ್ಲಿ ಆಸ್ತಿತೆರಿಗೆ ಸುಸ್ತಿದಾರರೆಂದು ಗುರುತಿಸಲಾಗಿರುವ ಸ್ವತ್ತುಗಳಿಂದ ಹರಾಜಿನ ಮೂಲಕ ಬೇಬಾಕಿ ಆಸ್ತಿತರಿಗೆ ವಸೂಲಾತಿ ಮಾಡಲಾಗುವುದು. ಪಾಲಿಕೆ ವಾಣಿಜ್ಯ ಕಛೇರಿಗಳ ಕಟ್ಟಡ, 2ನೇ ಮಹಡಿ, 9ನೇ ಮುಖ್ಯರಸ್ತೆ, 2ನೇ ಬ್ಲಾಕ್ ಜಯನಗರ ಇಲ್ಲಿನ ಸಭಾಂಗಣದಲ್ಲಿ ಹರಾಜು ಪ್ರಕ್ರಿಯೆಯನ್ನು ನಡೆಸಲಾಗುತ್ತಿದ್ದು, ಅಂತಹ ಸ್ವತ್ತುಗಳ ಮಾಹಿತಿಯನ್ನು ಅದೇ ಕಟ್ಟಡದಲ್ಲಿನ ವಲಯ ಜಂಟಿ ಆಯುಕ್ತರು (ಜಯನಗರ ವಲಯ) ಕಛೇರಿಯ ಸೂಚನಾ ವಲಕದಲ್ಲಿ ಪ್ರಚುರಪಡಿಸಲಾಗಿದೆ.
ಹರಾಜು ಪ್ರಕ್ರಿಯೆಯ ಮುನ್ನ ಪಟ್ಟಿಯಲ್ಲಿನ ಸ್ವತ್ತಿಗೆ ಸಂಪೂರ್ಣ ಆಸ್ತಿತೆರಿಗೆ ಪಾವತಿಸಿದಲ್ಲಿ ಹರಾಜಿನಿಂದ ಕೈಬಿಡಲಾಗುವುದು ಎಂದು ಈ ಮೂಲಕ ತಿಳಿಸಿದೆ.