ಹಿಮಾಚಲ ಪ್ರದೇಶ/ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೌಕರರು ಸಂಯುಕ್ತ ಭಾರತೀಯ ಖೇಲ್ ಫೌಂಡೇಶನ್ (SBKF) ಆಯೋಜಿಸಿದ್ದ 14ನೇ ರಾಷ್ಟ್ರೀಯ ಕ್ರೀಡಾಕೂಟ–2026ರಲ್ಲಿ ಕಬಡ್ಡಿ ಹಾಗೂ ವಾಲಿಬಾಲ್ ಎರಡೂ ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಳಿಸಿ ಕರ್ನಾಟಕ ರಾಜ್ಯ ಹಾಗೂ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ಈ ಕ್ರೀಡಾಕೂಟವು 2026ರ ಜೂನ್ 5 ರಿಂದ 7ರವರೆಗೆ ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆದಿದ್ದು, ದೇಶದ ವಿವಿಧ ರಾಜ್ಯಗಳ ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಕಬಡ್ಡಿ ಸ್ಪರ್ಧೆಯಲ್ಲಿ 13 ರಾಜ್ಯಗಳ ತಂಡಗಳು ಭಾಗವಹಿಸಿದ್ದು, ಅಂತಿಮ ಪಂದ್ಯದಲ್ಲಿ ಕರ್ನಾಟಕ– ಬೆಂ.ಮ.ಸಾ.ಸಂಸ್ಥೆಯ ತಂಡವು ತಮಿಳುನಾಡು ರಾಜ್ಯ ತಂಡವನ್ನು ಸೋಲಿಸಿ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡಿತು.
ವಾಲಿಬಾಲ್ ಸ್ಪರ್ಧೆಯಲ್ಲಿ 14 ರಾಜ್ಯಗಳ ತಂಡಗಳು ಭಾಗವಹಿಸಿದ್ದು, ಅಂತಿಮ ಪಂದ್ಯದಲ್ಲಿ ಕರ್ನಾಟಕ–ಬೆಂ.ಮ.ಸಾ.ಸಂಸ್ಥೆ ತಂಡವು ಹಿಮಾಚಲ ಪ್ರದೇಶ ರಾಜ್ಯ ಪೊಲೀಸ್ ತಂಡವನ್ನು ಸೋಲಿಸಿ ಪ್ರಥಮ ಸ್ಥಾನ ಗಳಿಸಿತು.
ಸಂಯುಕ್ತ ಭಾರತೀಯ ಖೇಲ್ ಫೌಂಡೇಶನ್ (SBKF) ದೇಶದಲ್ಲಿ ಕ್ರೀಡೆ, ದೈಹಿಕ ಸದೃಢತೆ, ನಾಯಕತ್ವ, ತಂಡ ಮನೋಭಾವ ಹಾಗೂ ಸಾಮಾಜಿಕ ಕಲ್ಯಾಣವನ್ನು ಉತ್ತೇಜಿಸುವ ಉದ್ದೇಶದಿಂದ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸುತ್ತಿರುವ ಪ್ರತಿಷ್ಠಿತ ಸಂಸ್ಥೆಯಾಗಿದೆ.

ಈ ಸಾಧನೆಗಾಗಿ ವಿಜೇತ ಸಂಸ್ಥೆಯ ಕ್ರೀಡಾಪಟುಗಳನ್ನು ಇಂದು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕೆ.ಬಿ. ಶಿವಕುಮಾರ್, ಭಾ.ಆ.ಸೇ ಹಾಗೂ ಶ್ರೀ ಅಬ್ದುಲ್ ಅಹದ್, ಭಾ.ಪೊ.ಸೇ, ಡಿಐಜಿಪಿ ಮತ್ತು ನಿರ್ದೇಶಕರು (ಭ&ಜಾ ರವರು ಸಂಸ್ಥೆಯ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಮ್ಮುಖದಲ್ಲಿ ಅಭಿನಂದಿಸಿ ವಿಜೇತ ಆಟಗಾರರನ್ನು ಅಭಿನಂದಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.