ಬೆಂಗಳೂರು: ‘ಹೊಲಗೇರಿ’ ಎಂಬ ಪದ ಬಳಕೆ ಕುರಿತಂತೆ ಉಂಟಾಗಿರುವ ವಿವಾದಕ್ಕೆ ಸಣ್ಣ ಮತ್ತು ಸಾರ್ವಜನಿಕ ಉದ್ಯಮಗಳ ಇಲಾಖೆಯ ಸಚಿವ ವಿಜಯಾನಂದ ಕಾಶಪ್ಪನವರ ಸ್ಪಷ್ಟನೆ ನೀಡಿದ್ದಾರೆ.
ತಾವು ಯಾವುದೇ ಸಮುದಾಯವನ್ನಾಗಲಿ, ನಿರ್ದಿಷ್ಟ ವ್ಯಕ್ತಿಯನ್ನಾಗಲಿ ಗುರಿಯಾಗಿಸಿಕೊಂಡು ಆ ಪದವನ್ನು ಬಳಸಿಲ್ಲ .ಹಿಂದೆ ನೇಕಾರರ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡಿದ್ದ ಕ್ರಮಗಳ ಕುರಿತು ಟೀಕಿಸುವ ಸಂದರ್ಭದಲ್ಲಿ ಈ ಪದ ಬಳಕೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಸಾಮಾಜಿಕ ಜಾಲತಾಣ ಹಾಗೂ ರಾಜಕೀಯ ವಲಯದಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ನನಗೆ ಎಲ್ಲ ಸಮುದಾಯಗಳ ಬಗ್ಗೆಯೂ ಅಪಾರವಾದ ಗೌರವವಿದೆ. ಯಾವುದೇ ಸಮುದಾಯವನ್ನಾಗಲಿ ಅಥವಾ ನಿರ್ದಿಷ್ಟ ವ್ಯಕ್ತಿಯನ್ನಾಗಲಿ ಗುರಿಯಾಗಿಸಿಕೊಂಡು ಈ ಪದವನ್ನು ಬಳಸಿಲ್ಲ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಖಂಡಿತವಾಗಿಯೂ ವಿಷಾದ ವ್ಯಕ್ತಪಡಿಸುತ್ತೇನೆ” ಎಂದು ಕಾಶಪ್ಪನವರ ಹೇಳಿದ್ದಾರೆ.
ತಮ್ಮ ಕುಟುಂಬದ ರಾಜಕೀಯ ಹಿನ್ನೆಲೆಯನ್ನೂ ಪ್ರಸ್ತಾಪಿಸಿರುವ ಅವರು, ಕಳೆದ ಐದು ದಶಕಗಳಿಂದ ಕಾಶಪ್ಪನವರ ಕುಟುಂಬ ರಾಜಕೀಯ ಕ್ಷೇತ್ರದಲ್ಲಿದ್ದು, ಎಲ್ಲ ಜಾತಿ ಮತ್ತು ಧರ್ಮಗಳನ್ನು ಸಮಾನವಾಗಿ ಕಂಡು ಬಂದಿದೆ ಎಂದು ಹೇಳಿದ್ದಾರೆ.
ಅಣ್ಣ ಬಸವಣ್ಣನವರ ಸಮಾನತೆಯ ಆಶಯವನ್ನು ಪಾಲಿಸಿಕೊಂಡು, “ಇವ ನಮ್ಮವ, ಇವ ನಮ್ಮವ” ಎಂಬ ಭಾವನೆಯೊಂದಿಗೆ ಎಲ್ಲರನ್ನೂ ಸರಿಸಮಾನವಾಗಿ ಕಂಡು ಕುಟುಂಬ ರಾಜಕಾರಣ ನಡೆಸಿಕೊಂಡು ಬಂದಿದೆ ಎಂದು ಅವರು ಹೇಳಿದ್ದಾರೆ.
ತಾವು ರಾಜಕೀಯ ಕ್ಷೇತ್ರದಲ್ಲಿ ಬೆಳೆಯುತ್ತಿರುವುದನ್ನು ಸಹಿಸಿಕೊಳ್ಳಲಾಗದ ಕೆಲ ರಾಜಕೀಯ ವಿರೋಧಿಗಳು ತಮ್ಮ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ತಮ್ಮ ಹೇಳಿಕೆಯನ್ನು ರಾಜಕೀಯವಾಗಿ ಬಳಸಿಕೊಂಡು ವಿವಾದ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.