ಬೆಂಗಳೂರು :ಜಿಬಿಎ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳಿಂದ ಕೈಗೆತ್ತಿಕೊಂಡಿರುವ ಕಾಮಗಾರಿಗಳಿಗೆ ಜಿಐಎಸ್ ಮ್ಯಾಪಿಂಗ್ ಮೂಲಕ ಏಕೀಕರಣಗೊಳಿಸುವಂತೆ *ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್* ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಬಿಎ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳು ಕೈಗೆತ್ತಿಕೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಬಿಎ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ನಗರ ಪಾಲಿಕೆಗಳು, ಇಲಾಖೆಗಳು/ಸಂಸ್ಥೆಗಳು ಕೈಗೊಳ್ಳುತ್ತಿರುವ ಮತ್ತು ಕೈಗೊಳ್ಳಲಿರುವ ಯೋಜನೆಗಳನ್ನು ಒಂದೇ ವೇದಿಕೆಗೆ ತರಲು ಜಿಐಎಸ್ ಮ್ಯಾಪ್‌ನಲ್ಲಿ ಅಪ್‌ಲೋಡ್ ಮಾಡುವ ವ್ಯವಸ್ಥೆ ಕಲ್ಪಿಸಬೇಕು. ಇದರಿಂದ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ, ಕಾಮಗಾರಿಗಳನ್ನು ಏಕಕಾಲದಲ್ಲಿ ಪರಿಣಾಮಕಾರಿಯಾಗಿ ನಿರ್ವಹಿಸಲು ಅನುಕೂಲವಾಗಲಿದೆ. ಈ ಉದ್ದೇಶಕ್ಕಾಗಿ ಅಗತ್ಯ ವೇದಿಕೆ (Platform) ಸಿದ್ಧಪಡಿಸುವಂತೆ ಜಿಬಿಎ ಐಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಐಎಸ್ ಮ್ಯಾಪಿಂಗ್ ಕಾರ್ಯಕ್ಕಾಗಿ ಎಲ್ಲಾ ನಗರ ಪಾಲಿಕೆಗಳು, ಜಲಮಂಡಳಿ, ಬೆಸ್ಕಾಂ, ಕೆಪಿಟಿಸಿಎಲ್, ಮೆಟ್ರೋ, ಕೆ-ರೈಡ್ ಸೇರಿದಂತೆ ಇತರೆ ಇಲಾಖೆಗಳು ತಮ್ಮ ಕ್ರಿಯಾ ಯೋಜನೆಗಳನ್ನು ಜಿಬಿಎಗೆ ಸಲ್ಲಿಸುವಂತೆ ಸೂಚಿಸಿದರು.
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಜಿಐಎಸ್ ಮ್ಯಾಪ್‌ನಲ್ಲಿ ಕಾಮಗಾರಿಗಳ ಮಾಹಿತಿಯನ್ನು ಅಪ್‌ಡೇಟ್ ಮಾಡಿದ ನಂತರವೇ ಬಿಲ್ ಪಾವತಿಸುವ ವ್ಯವಸ್ಥೆಯನ್ನು ಜಾರಿಗೆ ತರಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
*ಹೆಬ್ಬಾಳ ಜಂಕ್ಷನ್‌ಗೆ ವಿನ್ಯಾಸ ಅಂತಿಮಗೊಳಿಸಿ:*
ಹೆಬ್ಬಾಳ ಜಂಕ್ಷನ್‌ನಲ್ಲಿ ಪಾದಚಾರಿ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸ ರೂಪಿಸಲಾಗುತ್ತಿದ್ದು, ಅದನ್ನು ಶೀಘ್ರದಲ್ಲೇ ಅಂತಿಮಗೊಳಿಸಬೇಕು. ಬಳಿಕ ಕಾಮಗಾರಿಯನ್ನು ಆರಂಭಿಸಿ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
*ರಸ್ತೆಗಳಲ್ಲಿ ನೀರು ನಿಲ್ಲದಂತೆ ಕ್ರಮವಹಿಸಿ:*
ಮಳೆಗಾಲದಲ್ಲಿ ರಸ್ತೆಗಳಲ್ಲಿ ನೀರು ನಿಲ್ಲುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತದೆ. ಆದ್ದರಿಂದ ಹೆಚ್ಚು ನೀರು ನಿಲ್ಲುವ ಪ್ರದೇಶಗಳನ್ನು ಗುರುತಿಸಿ, ಮಳೆನೀರು ರಸ್ತೆಗಳಲ್ಲಿ ನಿಲ್ಲದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
*ಲಿಫ್ಟ್‌ಗಳ ನಿರ್ವಹಣೆ ಸಮರ್ಪಕವಾಗಿರಲಿ:*
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿರುವ ಪಾದಚಾರಿ ಮೇಲ್ಸೇತುವೆಗಳಲ್ಲಿ ಎಷ್ಟು ಲಿಫ್ಟ್‌ಗಳಿವೆ, ಅವುಗಳಲ್ಲಿ ಎಷ್ಟು ಕಾರ್ಯನಿರ್ವಹಿಸುತ್ತಿವೆ ಹಾಗೂ ಎಷ್ಟು ಸ್ಥಗಿತಗೊಂಡಿವೆ ಎಂಬುದರ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಬೇಕು. ಸ್ಥಗಿತಗೊಂಡಿರುವ ಲಿಫ್ಟ್ ಗಳನ್ನು ತಕ್ಷಣ ದುರಸ್ತಿಪಡಿಸಿ, ಅವುಗಳ ನಿರ್ವಹಣೆಯನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ಸೂಚಿಸಿದರು.
*ಸಭೆಯಲ್ಲಿ ಚರ್ಚೆಯಾದ ಇತರೆ ಪ್ರಮುಖ ಅಂಶಗಳು:*
• ಹರಳೂರು ಹಾಗೂ ರೈನ್‌ಬೋ ರೆಸಿಡೆನ್ಸಿ ರಸ್ತೆಗಳ ದುರಸ್ತಿ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳಲು ಸೂಚನೆ ನೀಡಲಾಯಿತು.
• ಜಲಮಂಡಳಿಯ ಕಾಮಗಾರಿಗಳ ಪಟ್ಟಿಯನ್ನು ಸಿದ್ಧಪಡಿಸಿ ವರದಿ ಸಲ್ಲಿಸಲು ಸೂಚಿಸಲಾಯಿತು.
• ಯಲಹಂಕ ಓಲ್ಡ್ ಟೌನ್ ರೈಲ್ವೆ ಹಳಿ ಕೆಳಸೇತುವೆ ಕಾಮಗಾರಿಯನ್ನು ನವೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲು ಸೂಚಿಸಲಾಯಿತು.
• ಕಾಚರಕನಹಳ್ಳಿ ಹಾಗೂ ಪುಟ್ಟೇನಹಳ್ಳಿ ಕೆರೆ ಪ್ರದೇಶಗಳಲ್ಲಿರುವ ಕೊಳಗೇರಿ ನಿವಾಸಿಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಯಿತು.
• ಕೆ-100 ಕಾಲುವೆಯಲ್ಲಿ ಹರಿಯುವ ನೀರಿನ ಗುಣಮಟ್ಟವನ್ನು ಪರಿಶೀಲಿಸಿ ವರದಿ ಸಲ್ಲಿಸಲು ಸೂಚಿಸಲಾಯಿತು.
• ಸುರಕ್ಷಾ-75 ಯೋಜನೆಯಡಿ ಕೈಗೆತ್ತಿಕೊಂಡಿರುವ ಜಂಕ್ಷನ್ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಸೂಚಿಸಲಾಯಿತು.
ಸಭೆಯಲ್ಲಿ ವಿಶೇಷ ಆಯುಕ್ತರಾದ ಸುಷಮಾ ಗೋಡಬೋಲೆ, ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್, ಜಗದೀಶ್ ಜಿ., ರಮೇಶ್ ಕೆ.ಎನ್., ಡಾ. ರಾಜೇಂದ್ರ ಕೆ.ವಿ., ಅಪರ ಆಯುಕ್ತರು, ಮುಖ್ಯ ಅಭಿಯಂತರರು ಹಾಗೂ ಬಿಡಿಎ, ಪೊಲೀಸ್, ಅಗ್ನಿಶಾಮಕ, ಬೆಸ್ಕಾಂ, ಎನ್‌ಎಚ್‌ಎಐ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.