LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರತಿ 10 ಭಾರತೀಯ ಮಕ್ಕಳಲ್ಲಿ ಕೇವಲ ಮೂವರಿಗೆ ಮಾತ್ರ ಹೊಂದಾಣಿಕೆಯಾಗುವ ಮೂಳೆ ಮಜ್ಜೆ ದಾನಿ ಲಭ್ಯ

ಹಾಫ್ ಮ್ಯಾಚ್ ಪೀಡಿಯಾಟ್ರಿಕ್ ಕಸಿ ಚಿಕಿತ್ಸೆಯಲ್ಲಿ ಏಷ್ಯಾದಲ್ಲೇ ಮುಂಚೂಣಿಯಲ್ಲಿದ್ದು ದಾಖಲೆ ಬರೆದ ನಾರಾಯಣ ಹೆಲ್ತ್ ಸಿಟಿ • ಭಾರತದಲ್ಲೇ ಇಲ್ಲಿಯವರೆಗೆ ಅತಿ ಹೆಚ್ಚು ಅಂದರೆ 1,000ಕ್ಕೂ ಹೆಚ್ಚು ಮಕ್ಕಳ ಹಾಪ್ಲೊಐಡೆಂಟಿಕಲ್ (ಹಾಫ್ ಮ್ಯಾಚ್) ಬೋನ್ ಮ್ಯಾರೋ ಕಸಿ ನಿರ್ವಹಣೆ • ಒಟ್ಟು ಮೂಳೆ ಮಜ್ಜೆ ಕಸಿಗಳ ಸಂಖ್ಯೆ 2,500 ರ ಗಡಿ ದಾಟಿದೆ (ವಯಸ್ಕರು ಮತ್ತು ಮಕ್ಕಳಿಬ್ಬರನ್ನೂ ಒಳಗೊಂಡು)

ಬೆಂಗಳೂರು: ದೇಶದಲ್ಲಿ ಗಂಭೀರ ರಕ್ತದ ಕಾಯಿಲೆಗಳಿಂದ ಬಳಲುತ್ತಿರುವ ಪ್ರತಿ 10 ಮಕ್ಕಳ ಪೈಕಿ ಕೇವಲ ಮೂವರಿಗಷ್ಟೇ ಹೊಂದಾಣಿಕೆಯಾಗುವ ಮೂಳೆ ಮಜ್ಜೆ ದಾನಿಗಳು ಲಭ್ಯವಾಗುತ್ತಿದ್ದಾರೆ. ಇಂತಹ ಸಂಕಷ್ಟದ ಪರಿಸ್ಥಿತಿ ಇದ್ದಾಗಲೂ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯು 1,000ಕ್ಕೂ ಹೆಚ್ಚು ಮಕ್ಕಳಿಗೆ ಹಾಫ್ ಮ್ಯಾಚ್ (ಹಾಪ್ಲೊಐಡೆಂಟಿಕಲ್) ಬೋನ್ ಮ್ಯಾರೋ ಕಸಿ ಚಿಕಿತ್ಸೆ ನೆರವೇರಿಸುವ ಮೂಲಕ ಏಷ್ಯಾದಲ್ಲೇ ಅತಿ ಹೆಚ್ಚು ಪ್ರಮಾಣದ ಶಸ್ತ್ರಚಿಕಿತ್ಸೆ ನಡೆಸಿದ ಸಂಸ್ಥೆಯಾಗಿ ಹೊರಹೊಮ್ಮಿದೆ.

ಇದರೊಂದಿಗೆ, ಸಂಸ್ಥೆಯು ಒಂದೇ ಹಣಕಾಸು ವರ್ಷದಲ್ಲಿ ಬರೋಬ್ಬರಿ 228 ಮಕ್ಕಳಿಗೆ ಯಶಸ್ವಿ ಮೂಳೆ ಮಜ್ಜೆ ಕಸಿ (ಬಿಎಂಟಿ) ನೆರವೇರಿಸಿದ್ದು, ಇದು ಒಂದು ವರ್ಷದ ಅವಧಿಯಲ್ಲಿ ಜಾಗತಿಕ ಮಟ್ಟದಲ್ಲೇ ಏಕೈಕ ಆಸ್ಪತ್ರೆ ದಾಖಲಿಸಿದ ಅತ್ಯಧಿಕ ಸಂಖ್ಯೆಯಾಗಿದೆ. ಈ ಮೂಲಕ ವಯಸ್ಕರು ಹಾಗೂ ಮಕ್ಕಳ ಒಟ್ಟಾರೆ ಕಸಿ ಲೆಕ್ಕಾಚಾರದಲ್ಲಿ ಆಸ್ಪತ್ರೆಯ ಸಂಚಿತ ಚಿಕಿತ್ಸೆಗಳ ಸಂಖ್ಯೆ 2,500ರ ಗಡಿ ದಾಟಿದೆ. ಹೊಂದಾಣಿಕೆಯ ದಾನಿಯನ್ನು ಹುಡುಕುವ ಸವಾಲಿನ ಜೊತೆಗೆ ಬರುವ ಥಲಸ್ಸೆಮಿಯಾ, ಲ್ಯುಕೇಮಿಯಾ (ರಕ್ತದ ಕ್ಯಾನ್ಸರ್) ಮತ್ತು ಅಪ್ಲಾಸ್ಟಿಕ್ ಅನೀಮಿಯಾದಂತಹ ಸಂಕೀರ್ಣ ಪ್ರಕರಣಗಳನ್ನು ಸಮರ್ಥವಾಗಿ ನಿರ್ವಹಿಸಿರುವುದು ಈ ಸಾಧನೆಯ ಹಿರಿಮೆಯಾಗಿದೆ.

ರೋಗಿಗಳಲ್ಲಿ ಕೇವಲ ಶೇ. 25 ರಿಂದ 30ರಷ್ಟು ಮಕ್ಕಳಿಗೆ ಮಾತ್ರ ಒಡಹುಟ್ಟಿದವರಿಂದ ಪೂರ್ಣ ಹೊಂದಾಣಿಕೆಯ ದಾನಿಗಳು (ಎಂ ಎಸ್ ಡಿ) ಸಿಗುತ್ತಾರೆ. ಇನ್ನುಳಿದ ಶೇ. 10 ರಿಂದ 15ರಷ್ಟು ಮಂದಿಗೆ ಎಚ್‌ಎಲ್‌ಎ ಹೊಂದಾಣಿಕೆಯ ನೋಂದಣಿ ಕೇಂದ್ರಗಳ (ಎಂಯುಡಿ) ಮೂಲಕ ಹೊರಗಿನ ದಾನಿಗಳು ದೊರೆಯುವ ಸಾಧ್ಯತೆಯಿದೆ. ಆದರೆ ಬಹುಪಾಲು ರೋಗಿಗಳಿಗೆ ಪೋಷಕರಿಂದ ಶೇ. 50ರಷ್ಟು ಹೊಂದಾಣಿಕೆಯಾಗುವ ಕೋಶಗಳನ್ನು ಪಡೆದು ಮಾಡುವ ಹಾಪ್ಲೊಐಡೆಂಟಿಕಲ್ ಕಸಿಯೇ ಬದುಕಿಗೆ ಏಕೈಕ ದಾರಿಯಾಗಿರುತ್ತದೆ.

ದೇಶದ ಜನಸಂಖ್ಯೆಯ ಶೇ. 3 ರಿಂದ 4ರಷ್ಟು ಜನರು ತಲೆಸ್ಸೆಮಿಯಾ ರೊಗಕ್ಕೆ ತುತ್ತಾಗುತ್ತಿದ್ದಾರೆ, ಪ್ರತಿ ವರ್ಷ 10,000ದಿಂದ 15,000 ಮಕ್ಕಳು ಥಲಸ್ಸೆಮಿಯಾ ಮೇಜರ್ ಸಮಸ್ಯೆಯೊಂದಿಗೆ ಜನಿಸುತ್ತಿದ್ದಾರೆ. ಇದರ ಜೊತೆಗೆ ಸಾವಿರಾರು ಮಕ್ಕಳು ಅಪ್ಲಾಸ್ಟಿಕ್ ಅನೀಮಿಯಾ ಮತ್ತು ರಕ್ತದ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದು, ಇವರ ಜೀವ ಉಳಿಸಲು ಕಸಿ ಚಿಕಿತ್ಸೆ ಅತ್ಯಗತ್ಯವಾಗಿದೆ.

ಈ ಜಟಿಲ ಚಿಕಿತ್ಸಾ ಪ್ರಕ್ರಿಯೆಗೆ ವಿಶೇಷ ಚಿಕಿತ್ಸಾ ನಿಯಮಾವಳಿಗಳು, ಸುಧಾರಿತ ಲ್ಯಾಬ್ ಸೌಲಭ್ಯ ಹಾಗೂ ನಿರಂತರ ಮೇಲ್ವಿಚಾರಣೆಯ ಅಗತ್ಯವಿರುತ್ತದೆ. ಭಾರತದಲ್ಲಿ ಮಕ್ಕಳಿಗೆ ಈ ಕ್ರಾಂತಿಕಾರಿ ಚಿಕಿತ್ಸೆಯನ್ನು ಪರಿಚಯಿಸಿದ ಮುಂಚೂಣಿ ತಜ್ಞರಲ್ಲಿ ಒಬ್ಬರಾದ ನಾರಾಯಣ ಹೆಲ್ತ್ ಸಿಟಿಯ ಆಂಕಾಲಜಿ ಕೊಲಿಜಿಯಂ ಉಪಾಧ್ಯಕ್ಷ, ನಿರ್ದೇಶಕ ಹಾಗೂ ಪೀಡಿಯಾಟ್ರಿಕ್ ಹೆಮಟಾಲಜಿ, ಆಂಕಾಲಜಿ ಮತ್ತು ಮಕ್ಕಳ ಬಿಎಂಟಿ ವಿಭಾಗದ ಕ್ಲಿನಿಕಲ್ ಲೀಡ್ ಡಾ. ಸುನೀಲ್ ಭಟ್ ಅವರು ಹಾಗೂ ಅವರ ತಂಡ ಈ ಕಾರ್ಯಕ್ರಮದ ನೇತೃತ್ವ ವಹಿಸಿದೆ.

ಈ ಕುರಿತು ನಾರಾಯಣ ಹೆಲ್ತ್ ಸಂಸ್ಥಾಪಕರು ಹಾಗೂ ಅಧ್ಯಕ್ಷ ಡಾ. ದೇವಿ ಶೆಟ್ಟಿ ಅವರು ಮಾತನಾಡಿ, "ದೇಹಕ್ಕೆ ಸರಿಹೊಂದುವ ದಾನಿ ಸಿಗಲಿಲ್ಲ ಎಂಬ ಒಂದೇ ಕಾರಣಕ್ಕೆ ಯಾವುದೇ ಮಗು ರೋಗದ ವಿರುದ್ಧದ ಹೋರಾಟದಲ್ಲಿ ಸೋಲಬಾರದು. ಇದು ಕೇವಲ ವೈದ್ಯಕೀಯ ಸಮಸ್ಯೆಯಲ್ಲ, ಇಚ್ಛಾಶಕ್ತಿ ಮತ್ತು ವ್ಯವಸ್ಥೆಗೆ ಸಂಬಂಧಿಸಿದ್ದು. ಹೊಂದಾಣಿಕೆಯ ದಾನಿಯ ಕೊರತೆ ಭರವಸೆಯ ಕೊರತೆಯಾಗಬಾರದು ಎಂಬ ಸಂಕಲ್ಪದೊಂದಿಗೆ ನಾವು ಈ ವಿಭಾಗವನ್ನು ಕಟ್ಟಿದ್ದೇವೆ. ಆಸ್ಪತ್ರೆಯಿಂದ ಗುಣಮುಖರಾಗಿ ಹೊರನಡೆಯುವ ಮಕ್ಕಳೇ ನಮ್ಮ ಸೇವೆಗೆ ನಿಜವಾದ ಪ್ರೇರಣೆ" ಎಂದರು.

ನಾರಾಯಣ ಹೆಲ್ತ್ ಸಿಟಿಯ ಆಂಕಾಲಜಿ ಕೊಲಿಜಿಯಂ ಉಪಾಧ್ಯಕ್ಷ, ನಿರ್ದೇಶಕ ಹಾಗೂ ಪೀಡಿಯಾಟ್ರಿಕ್ ಹೆಮಟಾಲಜಿ, ಆಂಕಾಲಜಿ ಮತ್ತು ಮಕ್ಕಳ ಬಿಎಂಟಿ ವಿಭಾಗದ ಕ್ಲಿನಿಕಲ್ ಲೀಡ್ ಡಾ. ಸುನೀಲ್ ಭಟ್ ಅವರು ಮಾತನಾಡಿ, "ತಂದೆ-ತಾಯಿಗಳು ಯಾವಾಗಲೂ ಮಕ್ಕಳಿಗೆ ಅರ್ಧ-ಹೊಂದಾಣಿಕೆಯಾಗುವ ನೈಸರ್ಗಿಕ ದಾನಿಗಳಾಗಿರುತ್ತಾರೆ. ಒಡಹುಟ್ಟಿದವರೂ ಈ ಆಯ್ಕೆಯನ್ನು ಒದಗಿಸಬಹುದು. 1,000ಕ್ಕೂ ಹೆಚ್ಚು ಮಕ್ಕಳಿಗೆ ಈ ಚಿಕಿತ್ಸೆ ನೀಡಿರುವ ನಮ್ಮ ಅನುಭವವು ಸಂಕೀರ್ಣ ಪ್ರಕರಣಗಳನ್ನು ಸುರಕ್ಷಿತವಾಗಿ ನಿರ್ವಹಿಸುವ ಆಳವಾದ ಪರಿಣತಿಯನ್ನು ತಂದುಕೊಟ್ಟಿದೆ. ಒಂದೇ ವರ್ಷದಲ್ಲಿ 228 ಮಕ್ಕಳಿಗೆ ಮರುಜೀವ ನೀಡಿರುವುದು ಹೆಮ್ಮೆಯ ಸಂಗತಿ" ಎಂದು ತಿಳಿಸಿದರು.

ಮಕ್ಕಳಿಗೆ ಮರುಜನ್ಮ ನೀಡಿದ ಮೂರು ಪ್ರಕರಣಗಳು:

• ಶಿರಿನ್ ಪ್ರಕರಣ: ಜಮ್ಮು ಮತ್ತು ಕಾಶ್ಮೀರದ ಶಿರಿನ್ (ಹೆಸರು ಬದಲಾಯಿಸಲಾಗಿದೆ) ಎಂಬ ಪುಟ್ಟ ಬಾಲಕಿ, ನಾರಾಯಣ ಹೆಲ್ತ್ ಸಿಟಿಯಲ್ಲಿ ಮೂಳೆ ಮಜ್ಜೆ ಕಸಿಗೆ ಒಳಗಾದ 2,500 ನೇ ರೋಗಿಯಾಗಿದ್ದು, ಕುಟುಂಬದ ಅರ್ಧ-ಹೊಂದಾಣಿಕೆಯ ದಾನಿಯ ನೆರವಿನಿಂದ ಯಶಸ್ವಿ ಕಸಿಗೆ ಒಳಗಾಗಿದ್ದಾಳೆ.
• ವಿಪಿನ್: ಬಿ-ಸೆಲ್ ಅಕ್ಯೂಟ್ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾ ಮರಕಳಿಕೆಯ ಕಾರಣದಿಂದ ಬಳಲುತ್ತಿದ್ದ 11 ವರ್ಷದ ಬಾಲಕ ವಿಪಿನ್ (ಹೆಸರು ಬದಲಾಯಿಸಲಾಗಿದೆ), ತಂದೆಯವರಿಂದಲೇ ಸ್ಟೆಮ್ ಸೆಲ್ ಪಡೆದು, ನಂತರದ ಸೋಂಕು ಹಾಗೂ ಚರ್ಮದ ಸಮಸ್ಯೆಗಳನ್ನು ಯಶಸ್ವಿಯಾಗಿ ಮೆಟ್ಟಿ ನಿಂತು ಗುಣಮುಖನಾಗಿದ್ದಾನೆ.
• ಅಶುತೋಷ್: ಛತ್ತೀಸ್‌ಗಢ ಮೂಲದ 15 ವರ್ಷದ ಬಾಲಕ ಅಶುತೋಷ್ (ಹೆಸರು ಬದಲಾಯಿಸಲಾಗಿದೆ), ಜೀವಕ್ಕೆ ತೀವ್ರ ಅಪಾಯವನ್ನುಂಟುಮಾಡುವ ಗಂಭೀರ ರಕ್ತದ ಕಾಯಿಲೆಯಾದ ತೀವ್ರ ಅಪ್ಲಾಸ್ಟಿಕ್ ಅನೀಮಿಯಾದಿಂದ ಬಳಲುತ್ತಿದ್ದನು. ಸಂಪೂರ್ಣ ಹೊಂದಾಣಿಕೆಯಾಗುವ ಯಾವುದೇ ದಾನಿ ಲಭ್ಯವಿಲ್ಲದ ಕಾರಣ, ಆತನ ತಂದೆಯಿಂದಲೇ ಹಾಪ್ಲೊಐಡೆಂಟಿಕಲ್ ಸ್ಟೆಮ್ ಸೆಲ್ ಪಡೆದು ಹೊಸ ಜೀವನ ಕಂಡುಕೊಂಡಿದ್ದಾರೆ.
• ತುಮಕೂರಿನ ಮಾಯಾಂಕ್(ಹೆಸರು ಬದಲಾಯಿಸಲಾಗಿದೆ) ಕೇವಲ 7ನೇ ವಯಸ್ಸಿನಲ್ಲಿ, ಮಾಯಾಂಕ್ ಅವರಿಗೆ ಜನವರಿ 2023ರಲ್ಲಿ CALLA-ಧನಾತ್ಮಕ ಬಿ-ಕೋಶ ತೀವ್ರ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾ (B-ALL) ಇರುವುದು ಪತ್ತೆಯಾಯಿತು. ನಂತರ ಅವರು ಹಲವು ವರ್ಷಗಳ ಕಾಲ ಈ ಕಾಯಿಲೆಯ ವಿರುದ್ಧ ಧೈರ್ಯದಿಂದ ಹೋರಾಡಿದರು. ಆದರೆ, ನವೆಂಬರ್ 2025ರಲ್ಲಿ ಅವರ ಕಾಯಿಲೆಯಲ್ಲಿ ಅನಿರೀಕ್ಷಿತ ವಂಶವಾಹಿ ಬದಲಾವಣೆ ಕಂಡುಬಂದಿದ್ದು, ಅವರು ತೀವ್ರ ಮೈಲಾಯ್ಡ್ ಲ್ಯುಕೇಮಿಯಾ (AML) ಗೆ ಒಳಗಾದರು. ಇದು ಅವರ ಚಿಕಿತ್ಸಾ ಪಯಣದಲ್ಲಿ ಮತ್ತೊಂದು ಸವಾಲನ್ನು ಎದುರಿಸಬೇಕಾದ ಪರಿಸ್ಥಿತಿಯನ್ನು ತಂದಿತು. ಮಾರ್ಚ್ 4, 2026ರಂದು ಮಾಯಾಂಕ್ ಅವರು TCR ಆಲ್ಫಾ-ಬೀಟಾ ರಹಿತ ಹ್ಯಾಪ್ಲೋಐಡೆಂಟಿಕಲ್ ಸ್ಟೆಮ್ ಸೆಲ್ ಕಸಿಗೆ ಒಳಗಾದರು. ಅವರಿಗೆ ಅಗತ್ಯವಿದ್ದ 6/12 HLA ಹೊಂದಾಣಿಕೆಯ ದಾನಿಯಾಗಿ ಅವರ ತಂದೆ ಧೈರ್ಯದಿಂದ ಮುಂದೆ ಬಂದರು. ಕಸಿ ನಂತರ ಜ್ವರದೊಂದಿಗೆ ನ್ಯೂಟ್ರೋಪೀನಿಯಾ, ಮ್ಯೂಕೋಸೈಟಿಸ್ ಮತ್ತು ತೀವ್ರ ಮೂತ್ರಪಿಂಡದ ಹಾನಿ (AKI) ಸೇರಿದಂತೆ ಹಲವು ಗಂಭೀರ ಸವಾಲುಗಳನ್ನು ಅವರು ಎದುರಿಸಿದರು. ಆದಾಗ್ಯೂ, ಕಸಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿತು. 11ನೇ ದಿನದಂದು ನ್ಯೂಟ್ರೋಫಿಲ್‌ಗಳ ಚೇತರಿಕೆ ಮತ್ತು 12ನೇ ದಿನದಂದು ಪ್ಲೇಟ್‌ಲೆಟ್‌ಗಳ ಚೇತರಿಕೆ ಕಂಡುಬಂದಿತು. ಮಾಯಾಂಕ್ ಅವರ ಪಯಣವು ಕಠಿಣ ಚಿಕಿತ್ಸೆಯ ನಡುವೆಯೂ ಮಗುವಿನ ಧೈರ್ಯ,  ಬೆಂಬಲ ಮತ್ತು ವೈದ್ಯಕೀಯ ತಂಡದ ಸಮರ್ಪಣೆಯ ಮಹತ್ವವನ್ನು ತೋರಿಸುತ್ತದೆ.

ಪೂರ್ಣ ಹೊಂದಾಣಿಕೆಯ ದಾನಿ ಇರಲಿ ಅಥವಾ ಇಲ್ಲದಿರಲಿ, ಎಲ್ಲಾ ಬಗೆಯ ರಕ್ತದ ಅಸ್ವಸ್ಥತೆಗಳಿಗೂ ನಾರಾಯಣ ಹೆಲ್ತ್ ಸಿಟಿ ಸಂಸ್ಥೆಯು ಚಿಕಿತ್ಸೆ ನೀಡುತ್ತಿದ್ದು, ಈ ಸಾಧನೆಯು ಆಂತರಿಕ ದತ್ತಾಂಶ, ಐಎಸ್‌ಬಿಎಂಟಿ ರಿಜಿಸ್ಟ್ರಿ ಮತ್ತು ಬಿಎಂಟಿ+ ಸಾಫ್ಟ್‌ ವೇರ್ ಮೂಲಕ ಅಧಿಕೃತವಾಗಿ ದಾಖಲಾಗಿದೆ.

ಕಾರ್ಯಕ್ರಮದಲ್ಲಿ ವಿವಿಧ ನಮೂನೆಯ ರೋಗಗಳಿಗೆ ತುತ್ತಾದವರು ಉಪಸ್ಥಿತರಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಗರದ ರಸ್ತೆ ಸಮಸ್ಯೆಗಳ ಪತ್ತೆಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನ ಬಳಕೆ : ಆಯುಕ್ತ ಕೆ. ಎನ್. ರಮೇಶ್ಪ್ರತಿ 10 ಭಾರತೀಯ ಮಕ್ಕಳಲ್ಲಿ ಕೇವಲ ಮೂವರಿಗೆ ಮಾತ್ರ ಹೊಂದಾಣಿಕೆಯಾಗುವ ಮೂಳೆ ಮಜ್ಜೆ ದಾನಿ ಲಭ್ಯಕುಮಾರಣ್ಣ ಬಾಂಬು ಹಾಕುವ ಟೈಮು ಬಂದೇಬಿಡ್ತಾ?ಶಿಕ್ಷಕರಿಂದಾಗಿಯೇ ರಾಜ್ಯದ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ: ಸಚಿವ ಮಧು ಬಂಗಾರಪ್ಪ ಬಣ್ಣನೆಕಳಂಕಿತ ಪಶುವೈದ್ಯಾಧಿಕಾರಿ ಮೇಲೆ ಕ್ರಮ ಕೈಕೊಂಡು,ಅಕಳಂಕಿತರಿಗೆ ನ್ಯಾಯ ನೀಡಿ: ಡಾ.ಹನುಮಂತಪ್ಪಗೊಲ್ಲ ಸಮುದಾಯ ಸಂಘಟಿತರಾಗಲು ಶ್ರೀನಿವಾಸ್ ಕರೆಭಾರತ ಕಲಾಗ್ರಾಮ ಸಂಸ್ಥೆಯಿಂದ ಗುರು ಸಮರ್ಪಣಾ ಕಾರ್ಯಕ್ರಮAEE ಗ್ರೇಡ್ 1 ಹುದ್ದೆಗಳ ಅಕ್ರಮ ಪ್ರಕರಣ:ನನಗೆ ಗೊತ್ತಿಲ್ಲ.. ಗೊತ್ತಿಲ್ಲಾ.. ಎಂದ ಸಚಿವ ಪ್ರಿಯಾಂಕ್ ಖರ್ಗೆಗೆ 10 ಪ್ರಶ್ನೆ ಕೇಳಿದ ಹೆಚ್.ಡಿ.ಕೆಮೆಡ್ ಜಿನೋಮ್ ನಿಂದ ಭಾರತದಲ್ಲಿ ಸುಧಾರಿತ ನಿಖರ ಕ್ಯಾನ್ಸರ್ ಆರೈಕೆಗೆ ಆಂಕೋಟ್ರ್ಯಾಕ್ ಎಂ.ಆರ್.ಡಿ ಬಿಡುಗಡೆರಾಮಯ್ಯ ಮೆಮೋರಿಯಲ್ ಆಸ್ಪತ್ರೆಯಿಂದ ಅಂಗಾಂಗ ದಾನ ಜಾಗೃತಿ ಅಭಿಯಾನ; ಸಚಿವ ಯುಟಿ ಖಾದರ್ ಚಾಲನೆ