ಬೆಂಗಳೂರು: ಬೆ.ಮ.ಸಾ.ಸಂಸ್ಥೆ ಸಿಬ್ಬಂದಿಯ ಅಪಘಾತ ವಿಮಾ ಪರಿಹಾರ ರೂ. 1.00 ಕೋಟಿಗೆ ಹೆಚ್ಚಳ; ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಒಪ್ಪಂದ ನವೀಕರಣ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ತನ್ನ ನೌಕರರ ಕಲ್ಯಾಣ ಮತ್ತು ಸಾಮಾಜಿಕ ಭದ್ರತೆಗೆ ಸದಾ ಬದ್ಧವಾಗಿದ್ದು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಹಯೋಗದೊಂದಿಗೆ ನೌಕರರ ಅಪಘಾತ ವಿಮಾ ಪರಿಹಾರ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಿದೆ.
ಸಂಸ್ಥೆಯು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ 2023ರಲ್ಲಿ ಮಾಡಿಕೊಂಡಿದ್ದ ಮೂರು ವರ್ಷಗಳ ಒಡಂಬಡಿಕೆಯನ್ನು ಮುಂದುವರಿಸಿ, ಪರಿಷ್ಕೃತ ನೂತನ ಒಪ್ಪಂದಕ್ಕೆ ದಿನಾಂಕ: 08.10.2026 ರಂದು ಸಹಿ ಹಾಕಲಾಯಿತು. ಈ ಹಿಂದೆ ಅಪಘಾತದಲ್ಲಿ ಮೃತಪಟ್ಟ ನೌಕರರ ನಾಮನಿರ್ದೇಶಿತರಿಗೆ ನೀಡಲಾಗುತ್ತಿದ್ದ ರೂ. 50.00 ಲಕ್ಷ ವಿಮಾ ಮೊತ್ತವನ್ನು ಇದೀಗ ರೂ. 1.00 ಕೋಟಿಗೆ ಹೆಚ್ಚಿಸಲಾಗಿದೆ.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ರಘುನಂದನ ಮೂರ್ತಿ, ಭಾ.ಆ.ಸೇ. ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಎಚ್.ಟಿ. ವಾಸಪ್ಪ ರವರು ಮೂರು ವರ್ಷಗಳ ಅವಧಿಯ ಈ ನೂತನ ಒಡಂಬಡಿಕೆಗೆ ಸಹಿ ಮಾಡಿದರು.
ಈ ಸಮಯದಲ್ಲಿ ಬೆಂ.ಮ.ಸಾ.ಸಂಸ್ಥೆಯ ನಿರ್ದೇಶಕರು (ಭ&ಜಾ) ರವರಾದ ಶ್ರೀ ಅಬ್ದುಲ್ ಅಹದ್, ಭಾ.ಪೊ.ಸೇ, ಶ್ರೀ ಪಿ.ವೈ ನಾಯಕ್, ಮುಖ್ಯ ಕಾರ್ಮಿಕ ಮತ್ತು ಕಲ್ಯಾಣ ಅಧಿಕಾರಿಗಳು ಮತ್ತು ಶ್ರೀಮತಿ ಮಂಜುಶ್ರೀ.ಆರ್, ಮುಖ್ಯ ಲೆಕ್ಕಾಧಿಕಾರಿ ಮತ್ತು ಆರ್ಥಿಕ ಸಲಹೆಗಾರರು ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಯೂನಿಯನ್ ಬ್ಯಾಂಕ್‌ನಲ್ಲಿ ವೇತನ ಖಾತೆ ಹೊಂದಿರುವ ಸಂಸ್ಥೆಯ ನೌಕರರಿಗೆ ದೊರೆಯುವ ಪ್ರಮುಖ ಸೌಲಭ್ಯಗಳು:
*ಅಪಘಾತ ವಿಮೆ (ವೈಯಕ್ತಿಕ ಅಪಘಾತ ಸೇರಿದಂತೆ): ವೇತನ ಖಾತೆ ಹೊಂದಿರುವ ನೌಕರರು ಅಪಘಾತದಿಂದ ಮೃತಪಟ್ಟಲ್ಲಿ, ಅವರ ನಾಮನಿರ್ದೇಶಿತರಿಗೆ ರೂ. 1.00 ಕೋಟಿ ವಿಮಾ ಪರಿಹಾರ.*
ನೈಸರ್ಗಿಕ / ಇನ್ನಿತರೆ ಕಾರಣಗಳಿಂದ ಸಾವು ಸಂಭವಿಸಿದಲ್ಲಿ:
ಮಾಸಿಕ ವೇತನ ರೂ. 25,000/-ಕ್ಕಿಂತ ಕಡಿಮೆ ಇರುವ ನೌಕರರಿಗೆ: ರೂ. 5.00 ಲಕ್ಷ
ಮಾಸಿಕ ವೇತನ ರೂ. 25,000/-ಕ್ಕಿಂತ ಹೆಚ್ಚಿರುವ ನೌಕರರಿಗೆ: ರೂ. 10.00 ಲಕ್ಷ
*ಶಾಶ್ವತ ಭಾಗಶಃ ಅಂಗವಿಕಲತೆ (PPD):*
ರೂ. 25,000/-ಕ್ಕಿಂತ ಕಡಿಮೆ ವೇತನ ಪಡೆಯುವವರಿಗೆ: ರೂ. 1.00 ಕೋಟಿ ವಿಮೆ ಹಾಗೂ ರೂಪೇ ಪ್ಲಾಟಿನಂ ಡೆಬಿಟ್ ಕಾರ್ಡ್ ಮೂಲಕ ರೂ. 4.00 ಲಕ್ಷ ಪರಿಹಾರ.
ರೂ. 25,000/-ಕ್ಕಿಂತ ಹೆಚ್ಚು ವೇತನ ಪಡೆಯುವವರಿಗೆ: ರೂ. 1.00 ಕೋಟಿ ವಿಮೆ ಹಾಗೂ ರೂಪೇ ಪ್ಲಾಟಿನಂ ಡೆಬಿಟ್ ಕಾರ್ಡ್ ಮೂಲಕ ರೂ. 15.00 ಲಕ್ಷ ಪರಿಹಾರ.
*ಶಾಶ್ವತ ಸಂಪೂರ್ಣ ಅಂಗವಿಕಲತೆ (PTD):*
ರೂ. 25,000/-ಕ್ಕಿಂತ ಕಡಿಮೆ ವೇತನ ಪಡೆಯುವವರಿಗೆ: ರೂ. 1.00 ಕೋಟಿ ವಿಮೆ ಹಾಗೂ ರೂಪೇ ಪ್ಲಾಟಿನಂ ಡೆಬಿಟ್ ಕಾರ್ಡ್ ಮೂಲಕ ರೂ. 4.00 ಲಕ್ಷ ಪರಿಹಾರ.
ರೂ. 25,000/-ಕ್ಕಿಂತ ಹೆಚ್ಚು ವೇತನ ಪಡೆಯುವವರಿಗೆ: ರೂ. 1.00 ಕೋಟಿ ವಿಮೆ ಹಾಗೂ ರೂಪೇ ಪ್ಲಾಟಿನಂ ಡೆಬಿಟ್ ಕಾರ್ಡ್ ಮೂಲಕ ರೂ. 15.00 ಲಕ್ಷ ಪರಿಹಾರ.
*ಮೆಡಿಕ್ಲೈಮ್ ಸೌಲಭ್ಯ*: ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದ ಸಂದರ್ಭದಲ್ಲಿ ವಾರ್ಷಿಕವಾಗಿ ಗರಿಷ್ಠ ರೂ. 30,000/- ವರೆಗೆ ನೆರವು.