
ಬೆಂಗಳೂರು : ಮಳೆಗಾಲಕ್ಕು ಮುನ್ನ ಬೆಂಗಳೂರು ಸಿಟಿಯಲ್ಲಿ ಮಳೆ ಅವಾಂತರವನ್ನು ತಪ್ಪಿಸಲು ಮುಂಜಾಗ್ರತ ಕ್ರಮಗಳನ್ನು ಜಿಬಿಐಯಿಂದ ಕೈಗೊಳ್ಳುತ್ತಿದ್ದು ಮುಂಗಾರು ಪೂರ್ವ ಸಿದ್ಧತೆ ಕಾಲುವೆಗಳಲ್ಲಿನ ಹೂಳು ಎತ್ತುವ ಕೆಲಸಕ್ಕೆ ವೇಗ ನೀಡಿ ಎಂದು ಬೆಂಗಳೂರು ಪೂರ್ವ ನಗರ ಪಾಲಿಕೆ ಡಿ.ಎಸ್. ರಮೇಶ್ ತಿಳಿಸಿದರು.
ಮುಂಗಾರು ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಕಾಮಗಾರಿ ಹಾಗೂ ಮಳೆ ನೀರು ಕಾಲುವೆಗಳ ನಿರ್ವಹಣಾ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಲು *ಆಯುಕ್ತರಾದ ಡಿ.ಎಸ್. ರಮೇಶ್* ರವರು ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಹಾಗೂ ಗುಣಮಟ್ಟದೊಂದಿಗೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
*ಗೆದ್ದಲಹಳ್ಳಿ ಕಾಮಗಾರಿ ಪರಿಶೀಲನೆ*
ಗೆದ್ದಲಹಳ್ಳಿ ಪ್ರದೇಶದಲ್ಲಿ ನಡೆಯುತ್ತಿರುವ ರೈಲ್ವೇವೆಂಟ್ ಕಾಮಗಾರಿಯನ್ನು ಪರಿಶೀಲಿಸಿದ ಆಯುಕ್ತರು, ಈಗಾಗಲೇ ಯೋಜನೆಯಂತೆ ಒಂದು ಕಾಂಕ್ರೀಟ್ ಬಾಕ್ಸ್ ಪುಶಿಂಗ್ ಕಾರ್ಯವನ್ನು ಪೂರ್ಣಗೊಳಿಸಿದ್ದು, ಉಳಿದಿರುವ ಕಾಮಗಾರಿಗಳನ್ನು ಯಾವುದೇ ವಿಳಂಬವಿಲ್ಲದೆ ಮೇ 30ರ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
*ರಾಜಕಾಲುವೆಗಳ ಸ್ವಚ್ಛತಾ ಕಾಮಗಾರಿಗಳ ಪರಿಶೀಲನೆ*
ನಗರದಲ್ಲಿ ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಲು ಕೈಗೊಳ್ಳಲಾಗುತ್ತಿರುವ ರಾಜಕಾಲುವೆಗಳಲ್ಲಿನ ಹೂಳೆತ್ತುವ ಮತ್ತು ಸ್ವಚ್ಛತಾ ಕಾರ್ಯವನ್ನು ವಿಜ್ಞಾನಪುರ, ರಾಮಮೂರ್ತಿ ನಗರ, ಕಲ್ಕೆರೆ ಪ್ರದೇಶಗಳಲ್ಲಿ ಪರಿಶೀಲಿಸಿ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಿದರು.
* ಮಳೆಗಾಲ ಆರಂಭವಾಗುವ ಮುನ್ನವೇ ಎಲ್ಲಾ ರಾಜ ಕಾಲುವೆಗಳಲ್ಲಿನ ಹೂಳು, ತ್ಯಾಜ್ಯ, ಮಣ್ಣು ಹಾಗೂ ಗಿಡಗಂಟಿಗಳನ್ನು ಯುದ್ಧೋಪಾದಿಯಲ್ಲಿ ತೆರವು ಮಾಡಿ ಕಾಲುವೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯುವಂತೆ ಸುಸ್ಥಿಯಲ್ಲಿಡಲು ಸೂಚನೆ.
* ಪ್ರಮುಖ ಕಾಲುವೆಗಳಿಗೆ ಸಂಪರ್ಕಿಸುವ ಎಲ್ಲಾ ದ್ವಿತೀಯ, ತೃತೀಯ ಕಾಲುವೆಗಳ ನಡುವೆ ಸಂಪರ್ಕ ಕಡಿತವಾಗದಂತೆ ಎಚ್ಚರ ವಹಿಸಲು ಸೂಚನೆ.
* ಕಾಲುವೆಗಳು ಮತ್ತು ರಸ್ತೆ ಬದಿ ಚರಂಡಿಗಳಲ್ಲಿ ತ್ಯಾಜ್ಯವನ್ನು ಎಸೆಯದಂತೆ ಕಟ್ಟುನಿಟ್ಟಿನ ಕ್ರಮವಹಿಸಲು ಸೂಚನೆ.
* ಕಾಲುವೆಗಳ ಸಮೀಪದಲ್ಲಿ ತ್ಯಾಜ್ಯಗಳ ಸಂಗ್ರಹ ತಪ್ಪಿಸಲು ಬ್ಲಾಕ್ ಸ್ಪಾಟ್ ಗಳಲ್ಲಿ ಮಾರ್ಷಲಗಳ ಗಸ್ತು ಹೆಚ್ಚಿಸಲು ಸೂಚನೆ.

* ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಹಾಗೂ ಆಸ್ತಿಪಾಸ್ತಿಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು.
ಮುಂಗಾರು ಮಳೆಗಾಲದ ಸಂದರ್ಭದಲ್ಲಿ ನಗರದಲ್ಲಿನ ತಗ್ಗು ಪ್ರದೇಶಗಳು, ಪ್ರಮುಖ ರಸ್ತೆಗಳು ಹಾಗೂ ಅಂಡರ್ಪಾಸ್ ಗಳಲ್ಲಿ ನೀರು ನಿಲ್ಲುವ ಸಮಸ್ಯೆ ತಡೆಯಲು ಅಗತ್ಯ ಮೂಲಸೌಕರ್ಯಗಳನ್ನು ಬಲಪಡಿಸುವುದು ಬೆಂಗಳೂರು ಪೂರ್ವ ನಗರ ಪಾಲಿಕೆಯ ಪ್ರಮುಖ ಆದ್ಯತೆಯಾಗಿದ್ದು, ಎಲ್ಲಾ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ನಾಗರಿಕರಿಗೆ ಸುರಕ್ಷಿತ ಪರಿಸರ ಒದಗಿಸಲು ಪಾಲಿಕೆ ಬದ್ಧವಾಗಿದೆ ಎಂದು ಆಯುಕ್ತರು ತಿಳಿಸಿದರು.