ಈ ಬಗ್ಗೆ ಬೆಂಗಳೂರಿನ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದವರು ಅವರು, ಬೆಂಗಳೂರು ಮೆಟ್ರೋ ದರ ಏರಿಕೆ ಜನ ಸಾಮಾನ್ಯರಿಗೆ ಕತ್ತರಿ ಹಾಕುತ್ತಿದೆ. ಇದೊಂದು ಹಗಲು ದರೋಡೆ. ಹತ್ತು ತಿಂಗಳಲ್ಲಿ ಎರಡು ಬಾರಿ ದರ ಏರಿಸಿರುವುದು ಖಂಡನೀಯ. ಮೆಟ್ರೋ ದರ ಏರಿಕೆಗೆ ರಾಜ್ಯ ಸರ್ಕಾರವೇ ಕಾರಣ ಎಂದು ನಿಖಿಲ್ ಕುಮಾರಸ್ವಾಮಿ ಅವರು ಆರೋಪಿಸಿದರು.
BMRCLಗೆ 13 ಕೋಟಿಗೂ ಹೆಚ್ಚು ಸಾಲವಿದೆ.ಅದರ ಮರು ಪಾವತಿಗೆ ಮಾಡಬೇಕಿದೆ. ಜತೆಗೆ ಇದರ ಕಾರ್ಯಾಚರಣೆಗೆ ವೆಚ್ಚ ಕೊಡಬೇಕಿದೆ. ಟಿಕೆಟ್ ಮತ್ತು ಟಿಕೆಟ್ ಯೆತರ ಮೂಲಗಳಿಂದ ಆದಾಯ ಬರುತ್ತಿಲ್ಲ. ಈಗ ಸರ್ಕಾರದಿಂದ BMRCLಗೆ ಹಣ ಕೊಡಲು ಆಗ್ತಿಲ್ಲ ಅದಿಕ್ಕೆ ಸರ್ಕಾರ ಈ ಮೂಲಕ ವಸೂಲಿಗೆ ಇಳಿದಿದೆ.
ಪ್ರತಿ ವರ್ಷ ಸ್ವಯಂ ಚಾಲಿತವಾಗಿ ಮೆಟ್ರೋ ಪ್ರಯಾಣದರ ಏರಿಕೆಯಾಗುವ ಸೂತ್ರ ರೂಪಿಸುವಂತೆ ದರ ನಿಗದಿ ಸಮಿತಿಯನ್ನು ರಾಜ್ಯ ಸರ್ಕಾರ ಕೋರಿದೆ. ದೇಶದ ದೆಹಲಿ, ಮುಂಬೈ, ಹೈದರಾಬಾದ್ ಹಾಗೂ ಚೆನ್ನೈ ನಗರಗಳಿಂದ ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣದರ ದುಬಾರಿಯಾಗಿದೆ. ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದ್ದು, ತನ್ನ ಮೇಲಿನ ಹೊರೆಯನ್ನು ಜನರ ಮೇಲೆ ಹೊರಿಸುತ್ತಿದೆ ಎಂದು ಅವರು ನಿಖಿಲ್ ಅವರು ಟೀಕಿಸಿದರು.
ಸಾರ್ವಜನಿಕರ ಮಾಹಿತಿಗಾಗಿ ದರ ನಿಗದಿ ಸಮಿತಿಯ ವರದಿಯನ್ನು ನೀಡಿರಲಿಲ್ಲ. ಆ ವರದಿಯಲ್ಲಿ ನಗರಾಭಿವೃದ್ಧಿ ಇಲಾಖೆ, ಹಣಕಾಸು ಇಲಾಖೆ ಅಧಿಕಾರಿಗಳೇ ರಾಜ್ಯ ಸರ್ಕಾರ ಆರ್ಥಿಕ ಹೊರೆ ಭರಿಸುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಮೆಟ್ರೋ ಪ್ರಯಾಣದ ದರ ಹೆಚ್ಚಳ ಮಾಡುವಂತೆ ಪ್ರಸ್ತಾಪಿಸಿದ್ದಾರೆ. 1126 ಮಂದಿ ಪ್ರಯಾಣದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದು, ಶೇ.51ರಷ್ಟು ಮಂದಿ ಮೆಟ್ರೋ ಪ್ರಯಾಣದರ ವಿರೋಧಿಸಿದ್ದಾರೆ ಎಂದು ತಿಳಿಸಿದರು.
ಪ್ರಯಾಣಿಕರಿಂದಲ್ಲದ ಪಾರ್ಕಿಂಗ್, ಬಾಡಿಗೆ, ಜಾಹೀರಾತು ಮೂಲಕ ಸಂಗ್ರಹಿಸುವ ಆದಾಯ ಕಡಿಮೆಯಾಗಿದ್ದು, ಪ್ರಯಾಣಿಕರಿಂದ ಸಂಗ್ರಹಿಸುವ ಆದಾಯ ಹೆಚ್ಚಳವಾಗಿದೆ. ಶ್ಯಾಡೋ ಕಾಸ್ಟ್ ಸಪೋರ್ಟ್ ಅನ್ನು ರಾಜ್ಯ ಸರ್ಕಾರ ಕಳೆದ ಎರಡು ವರ್ಷದಿಂದ ನಿಲ್ಲಿಸಿದೆ. ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದ ಕಾರಣ ಎಸ್‌ಸಿಎಸ್ ಮುಂದುವರೆಸಲಾಗದು, ವಾರ್ಷಿಕ ಶೇ.5ರಷ್ಟು ಪ್ರಯಾಣ ದರ ಹೆಚ್ಚಳಕ್ಕೆ ಕೋರಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಕಳೆದ ವರ್ಷ ಶೇ.105ರಷ್ಟು ದುಪ್ಪಟ್ಟು ಮೆಟ್ರೋ ಪ್ರಯಾಣದರ ಪರಿಷ್ಕರಣೆ ಮಾಡಲಾಗಿತ್ತು. ಅಧಿಕಾರಿಗಳು ನೀಡಿರುವ ಮಾಹಿತಿ ನೋಡಿದರೆ, ರಾಜ್ಯ ಸರ್ಕಾರ ಆರ್ಥಿವಾಗಿ ದಿವಾಳಿಯಾಗಿದೆ. ತನ್ನ ಲೋಪ ಮುಚ್ಚಿಕೊಳ್ಳಲು ಜನರನ್ನು ದಾರಿತಪ್ಪಿಸುತ್ತಿದೆ ಎಂದು ಅವರು ಆರೋಪಿಸಿದರು.
ಅಧಿಕೃತ ದರ ನಿಗದಿ ಸಮಿತಿ (FFC) ವರದಿಯ ಮೂಲಕ ಕರ್ನಾಟಕ ರಾಜ್ಯ ಸರ್ಕಾರದ ಆರ್ಥಿಕ ದಿವಾಳಿತನ ಮತ್ತು ಸಾರ್ವಜನಿಕರ ಮೇಲಿನ ದಬ್ಬಾಳಿಕೆ ಬಯಲಾಗಿದೆ. ಎಫ್‌ಎಫ್‌ಸಿ ಸಭೆಗಳಲ್ಲಿ ಭಾಗವಹಿಸಿದ್ದ ರಾಜ್ಯ ಸರ್ಕಾರದ ಪ್ರತಿನಿಧಿಗಳು (ಹಣಕಾಸು ಮತ್ತು ನಗರಾಭಿವೃದ್ಧಿ ಇಲಾಖೆ), ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದರಿಂದ ಇನ್ನು ಮುಂದೆ ಮೆಟ್ರೋಗೆ ಸಬ್ಸಿಡಿ ನೀಡಲು ಸಾಧ್ಯವಿಲ್ಲ ಎಂದು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.
ತಾವು ನೀಡುತ್ತಿದ್ದ ಆರ್ಥಿಕ ನೆರವನ್ನು (Shadow Cash Support - SCS) ಹಿಂಪಡೆದಿರುವ ಸರ್ಕಾರ, ಆ ಹೊರೆಯನ್ನು ಜನರ ಮೇಲೆ ಹಾಕಲು ಪ್ರತಿ ವರ್ಷ ಮೆಟ್ರೋ ದರ ಏರಿಕೆ ಮಾಡುವಂತೆ ಪಟ್ಟು ಹಿಡಿದಿರುವುದು ವರದಿಯಲ್ಲಿ ಸಾಕ್ಷ್ಯ ಸಮೇತ ದಾಖಲಾಗಿದೆ.
*ವರದಿಯಲ್ಲಿನ ಪ್ರಮುಖ ಅಂಶಗಳು ಇಲ್ಲಿವೆ*
1. ರಾಜ್ಯ ಸರ್ಕಾರದ ಆರ್ಥಿಕ ಅಸಮರ್ಥತೆಯ ಒಪ್ಪಿಗೆ
• ನೆರವು ಸ್ಥಗಿತ (ಸೆಕ್ಷನ್ 3.2.3 ಮತ್ತು 3.2.4): ಬಿಎಂಆರ್‌ಸಿಎಲ್ ಸಾಲ ಮರುಪಾವತಿ ಮತ್ತು ನಷ್ಟ ಭರಿಸಲು ಈವರೆಗೆ ಸರ್ಕಾರ ನೀಡುತ್ತಿದ್ದ 'ಶ್ಯಾಡೋ ಕ್ಯಾಶ್ ಸಪೋರ್ಟ್' (SCS) ಅನ್ನು ನಿಲ್ಲಿಸುವುದಾಗಿ ಸರ್ಕಾರ ಹೇಳಿದೆ. ವರದಿಯ ಪ್ರಕಾರ: "ರಾಜ್ಯ ಸರ್ಕಾರದ ಪ್ರಸ್ತುತ ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಇನ್ನು ಮುಂದೆ SCS ನೀಡಲು ಸಾಧ್ಯವಾಗದೇ ಇರಬಹುದು."
• ಜನರ ಮೇಲೆ ಹೊರೆ: ಸರ್ಕಾರದ ಈ ದಿವಾಳಿತನದಿಂದಾಗಿ, ಮೆಟ್ರೋದ ಎಲ್ಲಾ ಸಾಲ ಮತ್ತು ವೆಚ್ಚಗಳನ್ನು ಪ್ರಯಾಣಿಕರ ಟಿಕೆಟ್ ದರದ ಮೂಲಕವೇ ವಸೂಲಿ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ.
2. ದರ ಏರಿಕೆಗಾಗಿ ಸರ್ಕಾರದ ಒತ್ತಡ
• ತುರ್ತು ಏರಿಕೆಗೆ ಪಟ್ಟು (ಸೆಕ್ಷನ್ 4.8 ಮತ್ತು 7.8): ಹಣಕಾಸು ಮತ್ತು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಸರ್ಕಾರದ ಮೇಲಿರುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಮೆಟ್ರೋ ದರ ಏರಿಕೆ ಮಾಡುವುದು "ಅತ್ಯಗತ್ಯ" (Imperative) ಎಂದು ಎಫ್‌ಎಫ್‌ಸಿಗೆ ತಿಳಿಸಿದ್ದಾರೆ.
• ನಿರಂತರ ಪತ್ರ ವ್ಯವಹಾರ: ದರ ಏರಿಕೆ ಸಮಿತಿಯನ್ನು ಆದಷ್ಟು ಬೇಗ ರಚಿಸುವಂತೆ ರಾಜ್ಯ ಸರ್ಕಾರವು ಬಿಎಂಆರ್‌ಸಿಎಲ್‌ಗೆ ನಿರಂತರವಾಗಿ ಪತ್ರಗಳನ್ನು ಬರೆಯುವ ಮೂಲಕ ಒತ್ತಡ ಹೇರಿರುವುದು ಬಯಲಾಗಿದೆ.
3. ವಾರ್ಷಿಕ ಸ್ವಯಂಚಾಲಿತ ದರ ಏರಿಕೆ ಸೂತ್ರ
• ಪ್ರತಿ ವರ್ಷ ಬೆಲೆ ಏರಿಕೆ (ಸೆಕ್ಷನ್ 9.5): ಸರ್ಕಾರಿ ಅಧಿಕಾರಿಗಳು ಕೇವಲ ಒಂದು ಬಾರಿಯ ಏರಿಕೆಗೆ ಸೀಮಿತವಾಗದೆ, "ವಾರ್ಷಿಕ ಸ್ವಯಂಚಾಲಿತ ದರ ಪರಿಷ್ಕರಣೆ ಸೂತ್ರ" (Annual Automatic Fare Revision Formula) ಜಾರಿಗೆ ತರಲು ಸೂಚಿಸಿದ್ದಾರೆ. ಇದರ ಅನ್ವಯ ಫೆಬ್ರವರಿ 9, 2026 ರಿಂದ ಪ್ರತಿ ವರ್ಷ ದರ ಏರಿಕೆಯಾಗಲಿದೆ.
• ಕಾಯ್ದೆಯ ದುರ್ಬಳಕೆ: ಮೆಟ್ರೋ ರೈಲ್ವೇ ಕಾಯ್ದೆಯಡಿ ಈ ಶಿಫಾರಸುಗಳು "ಕಡ್ಡಾಯ" (Binding) ಎಂಬ ಅಂಶವನ್ನು ಬಳಸಿಕೊಂಡು ಸರ್ಕಾರವು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದೆ.
4. ಸಾರ್ವಜನಿಕರ ವಿರೋಧಕ್ಕೆ ಬೆಲೆಯಿಲ್ಲ
• ಜನರ ಅಭಿಪ್ರಾಯಕ್ಕೆ ಕಡೆಗಣನೆ (ಸೆಕ್ಷನ್ 4.4): ವರದಿಯ ಪ್ರಕಾರ, ಅಭಿಪ್ರಾಯ ನೀಡಿದವರಲ್ಲಿ ಶೇ. 51 ರಷ್ಟು ಪ್ರಯಾಣಿಕರು ದರ ಏರಿಕೆಯನ್ನು ಸಂಪೂರ್ಣವಾಗಿ ವಿರೋಧಿಸಿದ್ದರು. ಆದರೂ ಜನರ ಹಿತಾಸಕ್ತಿಗಿಂತ ಸರ್ಕಾರದ ಖಜಾನೆ ತುಂಬಿಸುವುದಕ್ಕೇ ಆದ್ಯತೆ ನೀಡಲಾಗಿದೆ.
5. ಆರ್ಥಿಕ ದುರ್ಬಳಕೆಯ ಅನಾವರಣ
• ಸಾಲದ ಸುಳಿ: ಬಿಎಂಆರ್‌ಸಿಎಲ್ ಸುಮಾರು ₹13,106 ಕೋಟಿ ಸಾಲ ಹೊಂದಿದ್ದು, ಮುಂದಿನ 5 ವರ್ಷಗಳಲ್ಲಿ ಸಾವಿರಾರು ಕೋಟಿ ಮರುಪಾವತಿ ಮಾಡಬೇಕಿದೆ. ರಾಜ್ಯ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳು ಮತ್ತು ಇತರೆ ವೆಚ್ಚಗಳಿಂದಾಗಿ ದಿವಾಳಿಯಾಗಿದ್ದು, ಮೆಟ್ರೋ ಪ್ರಯಾಣಿಕರನ್ನು ಎಟಿಎಂನಂತೆ ಬಳಸಿಕೊಳ್ಳುತ್ತಿದೆ.