LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಜಾನುವಾರುಗಳ ಹತ್ಯೆ ಮಹಾ ಪಾಪ, ದಯಾನಂದ ಸ್ವಾಮೀಜಿ ಸರ್ಕಾರಕ್ಕೆ ಮನವಿ

ಬೆಂಗಳೂರು:, ಬಕ್ರೀದ್ ಹಬ್ಬ ಹಾಗೂ ಇನ್ನಿತರ ದಿನಗಳಲ್ಲಿ ಗೋವಂಶಾದಿ ಜಾನುವಾರುಗಳ, ಒಂಟೆಗಳ ಹತ್ಯೆ (ಗೋವು, ಎತ್ತು, ಕರು, ಹೋರಿ ಮುಂತಾದವು) ಹಾಗೂ ಇನ್ನಿತರ ಪ್ರಾಣಿಗಳ ಬಲಿಯನ್ನು ಕಾನೂನು ಮತ್ತು ನ್ಯಾಯಾಲಯಗಳ ಆದೇಶಗಳನ್ವಯ ತಡೆಗಟ್ಟಲು ಕರ್ನಾಟಕ ಸರ್ಕಾರ ಹಾಗೂ ಭಾರತ ಸರ್ಕಾರಕ್ಕೆ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ, ಗೋತೀರ್ಥ, ಸರ್ವ ಜೀವ ರಕ್ಷಾ ಧಾಮದ ಅಧ್ಯಕ್ಷ ದಯಾನಂದ ಸ್ವಾಮೀಜಿಯವರು ಆಗ್ರಹ ಮಾಡಿದರು.

ದಿನಾಂಕ 07.06.2025ರಂದು ನಡೆಯಲಿರುವ ಬಕ್ರೀದ್ ಹಬ್ಬ ಹಾಗೂ ಇನ್ನಿತರ ದಿನಗಳಲ್ಲಿ ಯಾವುದೇ ವಯಸ್ಸಿನ ಹಸು (ಗೋವು) ಕರು, ಎತ್ತು, ಹೋರಿ ಮುಂತಾದ ಗೋವಂಶಾದಿ ಜಾನುವಾರುಗಳ ಹತ್ಯೆಯನ್ನು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020 (The Karnataka Prevention of Slaughter and preservation of Cattle Act-2020) ಅಡಿಯಲ್ಲಿ ತಡೆಯಬೇಕೆಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ, ವಿಶ್ವ ಗೋರಕ್ಷಾ ಮಹಾಪೀಠ, ಗೋವಂಶ ರಕ್ಷಾ ದಳ (Cow-Cattle Protection Force-CPF), ಬಸವ ಧರ್ಮ ಜ್ಞಾನಪೀಠ ಹಾಗೂ ಗೋವಂಶ ಜಾನುವಾರು ಹತ್ಯೆ ಮುಕ್ತ ಕರ್ನಾಟಕ ನಿರ್ಮಾಣ ಸಂಘಟನೆಗಳ ಒಕ್ಕೂಟ ಕರ್ನಾಟಕ ಸರ್ಕಾರವನ್ನು ಒತ್ತಾಯಿಸುತ್ತದೆ.

ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ದಯಾನಂದ ಸ್ವಾಮೀಜಿ ಮಾತನಾಡಿ, ಕರ್ನಾಟಕ ಪ್ರಾಣಿಬಲಿಗಳ ಪ್ರತಿಬಂಧಕ ಅಧಿನಿಯಮ 1959 ಹಾಗೂ ನಿಯಮಗಳು 1975ರ ಪ್ರಕಾರ ಪ್ರಾಣಿ ಬಲಿ ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಧರ್ಮ ಮತ್ತು ದೇವರ ಹೆಸರಿನಲ್ಲಿ ಧಾರ್ಮಿಕ ಸ್ಥಳಗಳಲ್ಲಿ ಜಾತ್ರಾ ಪರಿಸರಗಳಲ್ಲಿ, ಧಾರ್ಮಿಕ ಮೆರವಣಿಗೆ, ಉತ್ಸವ, ಉರುಸ್, ಸಮಾವೇಶಗಳಲ್ಲಿ ಎಲ್ಲಿಯೂ ಯಾರೂ ಯಾವುದೇ ಪ್ರಾಣಿಗಳನ್ನು ಬಲಿ ಮಾಡುವಂತಿಲ್ಲ. ಈ ಕಾನೂನನ್ನೂ ಸಹ ಹೈಕೋರ್ಟ್ ಆದೇಶಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಕ್ರೀದ್ ಹಬ್ಬ ಹಾಗೂ ಇನ್ನಿತರ ದಿನಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸುವುದರ ಮೂಲಕ ಪ್ರಾಣಿ ಬಲಿಯನ್ನು ಸಂಪೂರ್ಣವಾಗಿ ತಡೆಗಟ್ಟಬೇಕೆಂದು ಸರ್ಕಾರಕ್ಕೆ ಮನವಿ ಮಾಡುತ್ತೇವೆ.

ಮೇಲ್ಕಂಡ ಕಾಯ್ದೆಯ ಪ್ರಕಾರ ಗೋವಂಶಾದಿ ಜಾನುವಾರುಗಳ ಹತ್ಯೆ ಶಿಕ್ಷಾರ್ಹ ಅಪರಾಧವಾಗಿದ್ದು, 3ರಿಂದ 7 ವರ್ಷಗಳವರೆಗೆ ಜೈಲುಶಿಕ್ಷೆ ಹಾಗೂ 50 ಸಾವಿರದಿಂದ 10 ಲಕ್ಷ ರೂ.ವರೆಗೆ ದಂಡ (ಜುಲ್ಮಾನೆ) ವಿಧಿಸಬಹುದಾಗಿದೆ. ಜೊತೆಗೆ ಇವುಗಳನ್ನು ಕೊಲ್ಲಲಿಕ್ಕಾಗಿ, ಮಾರಾಟ, ಖರೀದಿ, ಸಾಗಾಣಿಕೆ ಮತ್ತು ದಲ್ಲಾಳಿ ಮಾಡುವುದು ಸಹ ಶಿಕ್ಷಾರ್ಹ ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವ್ಯಾಪಕ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿ ಗೋವಂಶಾದಿ ಜಾನುವಾರುಗಳ ಹತ್ಯೆ, ಮಾರಾಟ, ಸಾಗಾಣಿಕೆ, ಖರೀದಿಯನ್ನು ತಡೆಗಟ್ಟಬೇಕೆಂದು ಕೋರುತ್ತೇವೆ. ಇವುಗಳ ಅಕ್ರಮ ಸಾಗಾಣಿಕೆಯನ್ನು ತಡೆಗಟ್ಟುವುದರ ಜೊತೆಗೆ ಈ ಗೋವಂಶಾದಿ ಜಾನುವಾರುಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ರಕ್ಷಣೆಗಾಗಿ ಸರ್ಕಾರಿ ಅಥವಾ ಖಾಸಗಿ ಗೋಶಾಲೆ, ಪಂಜರಾಪೋಳ್ ಸಂಸ್ಥೆಗಳಿಗೆ ಕಳುಹಿಸಬೇಕೆಂದು, ಜೊತೆಗೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಈ ಮೂಲಕ ವಿನಂತಿಸುತ್ತೇವೆ.

ಅದೇ ರೀತಿ ಒಂಟೆಗಳ ಹತ್ಯೆ ಮತ್ತು ಸಾಗಾಣಿಕೆಯನ್ನು ತಡೆಗಟ್ಟಿ, ತಮ್ಮ ವಶಕ್ಕೆ ತೆಗೆದುಕೊಂಡು ಅವುಗಳನ್ನೂ ಕೂಡ ಗೋಶಾಲೆಗಳಿಗೆ ಕಳುಹಿಸಬೇಕಾಗಿ ಸರ್ಕಾರಕ್ಕೆ ವಿನಂತಿ.

ಕರ್ನಾಟಕ ಪ್ರಾಣಿಬಲಿಗಳ ಪ್ರತಿಬಂಧಕ ಅಧಿನಿಯಮ 1959 ಹಾಗೂ ನಿಯಮಗಳು 1975ರ ಪ್ರಕಾರ ಪ್ರಾಣಿ ಬಲಿ ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಧರ್ಮ ಮತ್ತು ದೇವರ ಹೆಸರಿನಲ್ಲಿ ಧಾರ್ಮಿಕ ಸ್ಥಳಗಳಲ್ಲಿ ಜಾತ್ರಾ ಪರಿಸರಗಳಲ್ಲಿ, ಧಾರ್ಮಿಕ ಮೆರವಣಿಗೆ, ಉತ್ಸವ, ಉರುಸ್, ಸಮಾವೇಶಗಳಲ್ಲಿ ಎಲ್ಲಿಯೂ ಯಾರೂ ಯಾವುದೇ ಪ್ರಾಣಿಗಳನ್ನು ಬಲಿ ಮಾಡುವಂತಿಲ್ಲ. ಈ ಕಾನೂನನ್ನೂ ಸಹ ಹೈಕೋರ್ಟ್ ಆದೇಶಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಕ್ರೀದ್ ಹಬ್ಬ ಹಾಗೂ ಇನ್ನಿತರ ದಿನಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸುವುದರ ಮೂಲಕ ಪ್ರಾಣಿ ಬಲಿಯನ್ನು ಸಂಪೂರ್ಣವಾಗಿ ತಡೆಗಟ್ಟಬೇಕೆಂದು ಸರ್ಕಾರಕ್ಕೆ ಮನವಿ ಮಾಡುತ್ತೇವೆ.

ಅದೇ ರೀತಿ ಭಾರತ ಸರ್ಕಾರವೂ ಕೂಡ ಇಡೀ ದೇಶದಾದ್ಯಂತ ಗೋವಂಶಾದಿ ಜಾನುವಾರುಗಳ ಹತ್ಯೆ ಆಗುವುದನ್ನು ತಡೆಗಟ್ಟಬೇಕೆಂದು ಒತ್ತಾಯಿಸುತ್ತೇವೆ.

ಗೋವಂಶ-ಜಾನುವಾರು ಹತ್ಯೆ ಹಾಗೂ ಪ್ರಾಣಿ ಬಲಿ ತ್ಯಜಿಸಿ ಅಹಿಂಸಾತ್ಮಕವಾಗಿ
ಬಕ್ರೀದ್ ಹಬ್ಬವನ್ನು ಆಚರಿಸಲು ಮುಸ್ಲಿಂ ಬಾಂಧವರಲ್ಲಿ ಮನವಿ.


ಬಕ್ರೀದ್ ಮುಂತಾದ ಹಬ್ಬಗಳಲ್ಲಿ ಗೋವುಗಳ ವಧೆ ಮಾಡುವುದು, ಬಲಿ ನೀಡುವುದು ಅನಿವಾರ್ಯವೇನಲ್ಲ ಎಂದು ಸ್ವತಃ ಖುರಾನ್ ನಲ್ಲಿ ಉಲ್ಲೇಖವಿದ್ದು, ಪ್ರವಾದಿ ಮಹ್ಮದ್ ಪೈಗಂಬರ್ ಅವರು ‘’ಅನ್ಯ ಧರ್ಮೀಯರ ಭಾವನೆಗಳಿಗೆ ಧಕ್ಕೆ ಉಂಟಾಗುವುದಾದರೆ ಗೋವಧೆ ಮಾಡಬಾರದು. ಒಂದು ವೇಳೆ ಆ ರೀತಿ ಮಾಡಿದ್ದಲ್ಲಿ ಅಲ್ಲಾನ ಮುಂದೆ ಅವರ ವಿರುದ್ಧ ಸಾಕ್ಷಿ ಹೇಳುತ್ತೇನೆ’’ ಎಂದು ತಿಳಿಸಿದ್ದಾರೆ. ಈ ಕುರಿತು ಅನೇಕ ಮೌಲ್ವಿಗಳು ಫತ್ವಾ ಹೊರಡಿಸಿದ್ದೂ ಉಂಟು.

ಭಾರತದ ಸರ್ವೋಚ್ಛ ನ್ಯಾಯಾಲಯವೂ ಸಹ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಗೋವಂಶಾದಿ ಜಾನುವಾರುಗಳ ಹತ್ಯೆ ಮಾಡುವುದು ಅನಿವಾರ್ಯವೇನಲ್ಲ ಎಂಬುದನ್ನು ಖುರಾನ್ ಉಲ್ಲೇಖಿಸಿ ಆದೇಶ ನೀಡಿದೆ. ಭಾರತವನ್ನಾಳಿದ್ದ ಔರಂಗಜೇಬರನ್ನು ಒಳಗೊಂಡಂತೆ ಎಲ್ಲಾ ಮೊಘಲ್ ಸಾಮ್ರಾಟರು, ಕರ್ನಾಟಕದಲ್ಲಿ ಆಳ್ವಿಕೆ ನಡೆಸಿದ್ದ ಬಹಮನಿ ಸುಲ್ತಾನರು, ನವಾಬರುಗಳು ಗೋವಂಶ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದಷ್ಟೇ ಅಲ್ಲದೇ ಗೋಹಂತಕರಿಗೆ ಕಠಿಣ ಶಿಕ್ಷೆ ವಿಧಿಸಿದ್ದರು ಎಂಬ ಐತಿಹಾಸಿಕ ದಾಖಲೆಯೂ ನಮಗೆ ಲಭ್ಯವಿದೆ.

ಎಲ್ಲಾ ಧರ್ಮಗಳ ಮೂಲ ಆಶಯವೇ ಅಹಿಂಸೆ, ದಯೆ, ಕರುಣೆ, ಪ್ರೇಮ ಮತ್ತು ಮಾನವೀಯತೆ. ಸ್ವತಃ ಭಾರತ ಸಂವಿಧಾನವೂ ಸಹ ಎಲ್ಲಾ ಜೀವ ಜಂತುಗಳ-ಸಕಲ ಪ್ರಾಣಿಗಳ ಬಗ್ಗೆ ದಯೆ-ಅನುಕಂಪ ಹೊಂದಿರುವುದು ಭಾರತದ ಪ್ರತಿಯೊಬ್ಬ ನಾಗರೀಕನ ಮೂಲಭೂತ ಕರ್ತವ್ಯವೆಂದು ಘೋಷಿಸಿದೆ, ನಿರ್ದೇಶಿಸಿದೆ. 

ಈ ಮೇಲ್ಕಂಡ ಸಂದೇಶಗಳ, ದಾಖಲೆಗಳ ಹಿನ್ನೆಲೆಯಲ್ಲಿ ಎಲ್ಲಾ ಮುಸ್ಲಿಂ ಬಾಂಧವರು ಯಾವುದೇ ಗೋವಂಶಾದಿ ಜಾನುವಾರುಗಳ, ಒಂಟೆಗಳ ಹತ್ಯೆ ಮತ್ತು ಪ್ರಾಣಿಗಳ ಬಲಿಯನ್ನು ನೀಡದೇ ಅಹಿಂಸಾತ್ಮಕವಾಗಿ ಸಾತ್ವಿಕ ರೀತಿಯಲ್ಲಿ ತಮ್ಮ ಧರ್ಮಾಚರಣೆ, ಬಕ್ರೀದ್ ಮುಂತಾದ ಹಬ್ಬಗಳನ್ನು ಆಚರಿಸಬೇಕೆಂದು ಮನವಿ ಮಾಡುತ್ತೇವೆ.

ವಧೆಗಾಗಿ ಗೋವಂಶಾದಿ ಜಾನುವಾರುಗಳನ್ನು ಮಾರಾಟ ಮಾಡದಿರಲು ರೈತರಿಗೆ ಮನವಿ


ಜಗತ್ತಿಗೇ ಅನ್ನ ನೀಡುವ ಅನ್ನದಾತನೆಂದು ಗೌರವಿಸಲ್ಪಡುವ, ಅಭಿನಂದಿಸಲ್ಪಡುವ, ಜೈಕಿಸಾನ್ ಎಂದು ಕರೆಯಲ್ಪಟ್ಟಿರುವ ರೈತ ಸಮುದಾಯ ತನ್ನ ಹೆಗಲಿಗೆ ಹೆಗಲು ಕೊಟ್ಟು ಅಹರ್ನಿಶಿ ದುಡಿದು ಅನ್ನ-ಆಹಾರಕ್ಕೆ ಆಧಾರವಾದ ದವಸ-ಧಾನ್ಯಾದಿಗಳ ಬೆಳೆಗೆ, ಕೃಷಿ, ಸಾಗಾಣಿಕೆ, ಗೊಬ್ಬರ ಮುಂತಾದವುಗಳಿಗೆ ಜೊತೆಗೆ ಹೈನುಗಾರಿಕೆಯ ಮೂಲಕ ಹಾಲು, ಮೊಸರು, ಬೆಣ್ಣೆ, ತುಪ್ಪ ನೀಡಿ ನಮ್ಮೆಲ್ಲರಿಗೂ ಅಮೃತ ಸಂಜೀವಿನಿಯಾಗಿರುವ ಗೋವಂಶಾದಿ ಜಾನುವಾರುಗಳನ್ನು ವಯಸ್ಸಾಯಿತೆಂದು, ನಿಷ್ಪ್ರಯೋಜಕವೆಂದು ಕೊಲ್ಲಲು ಕಟುಕರಿಗೆ ಮಾರಾಟ ಮಾಡುವ ಘೋರ ಪಾಪಕೃತ್ಯವನ್ನು ಮಾಡಬಾರದೆಂದು ಇಡೀ ದೇಶದ ರೈತ ಸಮುದಾಯಕ್ಕೆ, ಗೋವು ಪಶುಪಾಲಕರಿಗೆ ವಿನಂತಿಸುತ್ತೇವೆ. ಜಗತ್ತಿಗೆ ಅನ್ನ ನೀಡುತ್ತಿರುವ ಅನ್ನದಾತ ರೈತ ತನಗಾಗಿ ದುಡಿದ, ತನಗೇ ಬೆನ್ನೆಲುಬಾಗಿರುವ ಗೋವಂಶಾದಿ ಜಾನುವಾರುಗಳಿಗೆ ವಯಸ್ಸಾದ ನಂತರವೂ ಒಂದಿಷ್ಟು ಹುಲ್ಲು, ನೀರು ನೀಡಿ ರಕ್ಷಣೆ ಮಾಡುವ ಉದಾರತೆಯನ್ನು ಮೆರೆಯಬೇಕೆಂದೂ, ‘’ನೀನಾರಿಗಾದೆಯೋ ಎಲೆ ಮಾನವಾ... ಹರಿ ಹರಿ ಗೋವು ನಾನು’’ ಎಂಬ ಜನಪ್ರಿಯ ಮಾರ್ಮಿಕವಾದ ಗೋವಿನ ಆರ್ತನಾದವನ್ನು ಬಿಂಬಿಸುವ ಆ ಹಾಡನ್ನು ಪ್ರತಿಯೊಬ್ಬ ರೈತನೂ ನೆನೆಸಿಕೊಂಡು, ಸ್ಮರಿಸಿಕೊಂಡು, ಅರ್ಥೈಸಿಕೊಂಡು, ಸ್ಪಂದಿಸಿ ಅವುಗಳ ಹತ್ಯೆಗೆ ಕೊನೆ ಹಾಡಬೇಕೆಂದು ಮನವಿ ಮಾಡುತ್ತೇವೆ.

ಗೋವಂಶಾದಿ ಜಾನುವಾರುಗಳ ಹತ್ಯೆಗೆ ಕೇವಲ ಮುಸಲ್ಮಾನ ಬಾಂಧವರಷ್ಟೇ ಅಪರಾಧಿಗಳೂ ಅಲ್ಲ, ಕಾರಣರೂ ಅಲ್ಲ; ಚೆನ್ನಾಗಿದ್ದಾಗ ದುಡಿಸಿಕೊಂಡು, ಹಾಲು, ಮೊಸರು, ತುಪ್ಪ ಉಂಡು ಕೊನೆಗೆ ವಯಸ್ಸಾಯಿತೆಂದು, ನಿಷ್ಪ್ರಯೋಜಕವೆಂದು ನಿರ್ಧರಿಸಿ ಕೊಲ್ಲಲಿಕ್ಕಾಗಿ ಮಾರಾಟ ಮಾಡುವ ಹಿಂದೂಗಳನ್ನು ಒಳಗೊಂಡಂತೆ ಎಲ್ಲಾ ಧರ್ಮೀಯ ರೈತರು, ಕೃಷಿಕರು , ಪಶು ಪಾಲಕರು ಕೂಡ ಮೂಲ ದೋಷಿಗಳು, ಅಪರಾಧಿಗಳೆಂಬುದು ಗಮನಾರ್ಹ. ಇದೇ ರೈತರಿಗೆ ಒಂದು ಮಹಾ ಅಭಿಶಾಪ ಎಂಬುದು ಅಷ್ಟೇ ಕಠೋರ ಸತ್ಯ. ಈ ದಿಸೆಯಲ್ಲಿ ರೈತರು ಎಚ್ಚರಗೊಂಡು ತಮ್ಮ ಪಶು ಸಂಪತ್ತನ್ನು ಕಾಪಾಡಿಕೊಳ್ಳಬೇಕೆಂದು ವಿನಂತಿಸುತ್ತೇವೆ.

ಸುದ್ದಿಗೋಷ್ಠಿಯಲ್ಲಿ ಯಾನಂದ ಸ್ವಾಮೀಜಿ, ಕೆ.ವಿ. ನರಸಿಂಹನ್, ಉತ್ತಮ್ ಚಂದ್ ಚಾಜೆಡ್, ಸುರೇಶ್ ಜಿ ರೂಣವಾಲ್, ಅಶೋಕ್ ನಾಗೋರೆ, ಸುಖ್ವೀರ್ ಜೈನ್, ಸುನಂದಾದೇವಿ, ಭರತ್ ಸೇನ್ ಕುಮಾರ್, ತ್ರಿಷಲಾ ಕೊಠಾರಿ, ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ, ಗೋತೀರ್ಥ, ಸರ್ವ ಜೀವ ರಕ್ಷಾ ಧಾಮ,ವಿಶ್ವ ಗೋರಕ್ಷಾ ಮಹಾಪೀಠ-ಗೋವಂಶ ರಕ್ಷಾ ದಳ, ಪಶು ಪ್ರಾಣಿಬಲಿ ನಿರ್ಮೂಲನಾ ಜಾಗೃತಿ ಮಹಾಸಂಘ,ಬಸವಧರ್ಮ ಜ್ಞಾನಪೀಠ ಮತ್ತು ಗೋವಂಶ-ಜಾನುವಾರು,ಹತ್ಯೆಮುಕ್ತ ಕರ್ನಾಟಕ ನಿರ್ಮಾಣ ಸಂಘಟನೆಗಳ ಒಕ್ಕೂಟ 
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ