ಬೆಂಗಳೂರು: ಬೆಂಗಳೂರಿನ ಸುಮನಹಳ್ಳಿಯ ಎರಡು ಎಕರೆ ಪ್ರದೇಶದಲ್ಲಿ ಶ್ರೀ ವಾಲ್ಮೀಕಿ ಭವನ ನಿರ್ಮಿಸಲು ಮುಂದಿನ ವರ್ಷದ ಬಜೆಟ್ ನಲ್ಲಿ ಘೋಷಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ-2025 ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಸಮಾರಂಭದ ಉದ್ಘಾಟನೆ ನೆರವೇರಿಸಿ, ಶ್ರೀ ವಾಲ್ಮೀಕಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ವಾಲ್ಮೀಕಿ ಸಮುದಾಯದ ಅಭಿವೃದ್ಧಿಗಾಗಿ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿ ಸಾಧನೆ ಮಾಡಿದ ಐದು ಸಾಧಕರಿಗೆ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದ ವಾಲ್ಮೀಕಿ ಅವರು ವಿಶ್ವಮಾನವರಾಗಿ ಶ್ರೇಷ್ಠವಾದ ರಾಮಾಯಣದಂತಹ ಮಹಾಕಾವ್ಯವನ್ನು ರಚಿಸಿ, ಮಾನವೀಯ ಮೌಲ್ಯವನ್ನು ಎತ್ತಿ ಹಿಡಿಯುವ ಪ್ರಯತ್ನ ಮಾಡಿದರು. ಹೀಗಾಗಿ ಸಮುದಾಯದ ಪ್ರತಿಯೊಬ್ಬರು ಶಿಕ್ಷಣವನ್ನು ಪಡೆಯಬೇಕು, ಯಾರೂ ಸಹ ಶಿಕ್ಷಣದಿಂದ ವಂಚಿತರಾಗಬಾರದು ಎಂದರು ತಿಳಿಸಿದರು.
ನಮ್ಮ ಸರ್ಕಾರವು ಎಲ್ಲರಿಗೂ ಸಮಪಾಲು, ಸಮಬಾಳು ಕಲ್ಪಿಸಬೇಕು ಎನ್ನುವ ಉದ್ದೇಶದಿಂದ ಯಾವುದೇ ಸಮಾಜವಿರಲಿ, ಧರ್ಮವಿರಲಿ, ಜಾತಿಯಿರಲಿ, ಬಡವರಿರಲಿ ಎಲ್ಲರಿಗೂ ಸಮಾನ ಅವಕಾಶ, ನ್ಯಾಯ ಕಲ್ಪಿಸುವ ಉದ್ದೇಶದಿಂದ 2011ರ ಜಾತಿ ಗಣತಿಯಲ್ಲಿ ಶೇ.24.1 ರಷ್ಟು ಇದ್ದ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಜನಸಂಖ್ಯೆಗನುಗುಣವಾಗಿ ಶೇ.24.1 ರಷ್ಟು ಮೀಸಲಾತಿ ಇಡಬೇಕು ಎಂದು ಕಾನೂನು ಮಾಡಲಾಯಿತು. ಈ ಕಾಯ್ದೆಯು 2014-15 ರಿಂದ ಜಾರಿಗೆ ಬಂದಿದ್ದು, ಅಂದು 15, 894 ಕೋಟಿ ಇದ್ದದ್ದು, 2025-26 ರಲ್ಲಿ 42,017 ಕೋಟಿ ಆಗಿದೆ ಎಂದರು.
ಹೋಬಳಿಗೊಂದು ವಸತಿ ಶಾಲೆಗಳನ್ನು ಮಾಡಿದ್ದು, ಕಳೆದ ವರ್ಷ ವಸತಿ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದ ಮಕ್ಕಳು 10 Rank ಗಳಿಸಿದ್ದಾರೆ. ಇವರಲ್ಲಿ ಪರಿಶಿಷ್ಠ ಪಂಗಡದ 09 ಜನ ಸೇರಿದ್ದಾರೆ ಎಂದರು.
ವಾಲ್ಮೀಕಿ ಮತ್ತು ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ನಾನು ಮತ್ತು ಉಗ್ರಪ್ಪ ಅವರು ರಾಮಕೃಷ್ಣ ಹೆಗಡೆಯವರಿಗೆ ಮನವಿ ಮಾಡಿದ್ದೆವು. ಹೆಗಡೆಯವರು ನಮ್ಮ ಮನವಿಯನ್ನು ಶಿಫಾರಸ್ಸು ಮಾಡಿದರು. ಆಗ ಸೇರಿಸಲು ಆಗಲಿಲ್ಲ. ಚಂದ್ರಶೇಖರ್ ಅವರು ಪ್ರಧಾನಿ ಆಗಿದ್ದಾಗ ಉಗ್ರಪ್ಪ ಅವರು ದೇವೇಗೌಡರ ಮೂಲಕ ಒಪ್ಪಿಸಿ, ವಾಲ್ಮೀಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದರು.
ವಾಲ್ಮೀಕಿ, ಬೇಡ, ತಳವಾರ ಮತ್ತು ನಾಯಕ ಸಮುದಾಯಕ್ಕೆ ಮೀಸಲಾತಿ ದೊರಕಲು ಉಗ್ರಪ್ಪನವರೇ ಕಾರಣ. ಇದನ್ನು ಏತಕ್ಕೆ ತಿಳಿಸುತ್ತಿದ್ದೇನೆಂದರೆ ಎಲ್ಲರಿಗೂ ಇತಿಹಾಸ ಗೊತ್ತಾಗಲಿ ಎನ್ನುವುದು. ಈಗ ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಹೋರಾಟ ಮಾಡಿದವರು ನಾವಲ್ಲ. ಬಿಜೆಪಿಯ ಈಶ್ವರಪ್ಪ ಅವರು ಹೋರಾಟ ಮಾಡಿದರು. ಅಂದು ಮುಖ್ಯಮಂತ್ರಿಯಾಗಿದ್ದ ಬೊಮ್ಮಾಯಿ ಅವರು ಈಶ್ವರಪ್ಪ ಅವರ ಮನವಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದಾರೆ. ಆ ಶಿಫಾರಸ್ಸಿನ ಬಗ್ಗೆ ಕೆಲವು ಸ್ಪಷ್ಟನೆಗಳನ್ನು ಕೇಂದ್ರ ಕೇಳಿದೆ. ಅದಷ್ಟೇ ನಮ್ಮೆದುರುಗಿದೆ. ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದರೆ, ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಾಗಬೇಕು ಎನ್ನುವುದಕ್ಕೆ ನನ್ನ ಬೆಂಬಲ ಮತ್ತು ಸಹಮತವು ಇದೆ. 
ನಮಗೆ ಬೇಕಾದ ಹಕ್ಕು, ಅವಕಾಶಗಳನ್ನು ಸಂಘಟನೆ ಹೋರಾಟದ ಮೂಲಕ ಪಡೆದುಕೊಳ್ಳಬೇಕು. ಇದನ್ನೇ ಡಾ: ಬಿ.ಆರ್. ಅಂಬೇಡ್ಕರ್, ಬುದ್ದ, ಬಸವಣ್ಣ ಕೂಡಾ ಹೇಳಿದ್ದಾರೆ. ವಾಲ್ಮೀಕಿ ಅವರ ಬಗ್ಗೆ ಮತ್ತು ರಾಮಾಯಣವನ್ನು ಪಠ್ಯದಲ್ಲಿ ಸೇರಿಸಬೇಕು ಎಂದು ಉಗ್ರಪ್ಪ ಅವರು ಬೇಡಿಕೆ ಇಟ್ಟಿದ್ದು, ಅದನ್ನು ಸಹ ಪರಿಗಣಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ “ಸರ್ಕಾರದ ನಡೆ, ಬುಡಕಟ್ಟು ಅಭಿವೃದ್ಧಿ ಕಡೆಗೆ” ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದರು.
ದೇಶಕ್ಕೆ ಉತ್ತಮ ಮಹಾಗ್ರಂಥ ನೀಡಿದ ಮಹಾನಾಯಕರು
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಮಾತನಾಡಿ, ಇಂದು ರಾಜ್ಯಾದ್ಯಂತ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸುತ್ತಿದ್ದೇವೆ. ದೇಶಕ್ಕೆ ಉತ್ತಮ ಮಹಾಗ್ರಂಥ ನೀಡಿದ ಮಹಾನಾಯಕರು ಇವರು. ಇವರ ವಿಚಾರ ಗ್ರಂಥಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಬೇಕು. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ಸರ್ವಾಂಗೀಣ ಪ್ರಗತಿಗೆ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಸಮುದಾಯದವರು ಅದನ್ನು ಸದುಪಯೋಗ ಪಡಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದರು.
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ರಾಯಚೂರು ವಿಧಾನ ಸಭಾ ಶಾಸಕರಾದ ಬಸನಗೌಡ ದದ್ದಲ್ ಅವರು ಮಾತನಾಡಿ, ಭೂಮಿ ಖರೀದಿ ಹೊಸ ಯೋಜನೆಯನ್ನು 10 ಜಿಲ್ಲೆಗಳಲ್ಲಿ ಜಾರಿಗೆ ತಂದಿದ್ದು, ಇದು ಯಶಸ್ವಿಯಾದರೆ ಇಡೀ ರಾಜ್ಯಕ್ಕೆ ವಿಸ್ತರಿಸಲಾಗುವುದು ಎಂದರು.
ಸಮುದಾಯದ ಜನರ ಅಭಿವೃದ್ಧಿಗೆ ಸರ್ಕಾರ ನೀಡುವ ಹಣವನ್ನು ಯುವಕರು ದುರ್ಬಳಕೆ ಮಾಡಿಕೊಳ್ಳದೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಶಾಸಕರಾದ ರಿಜ್ವಾನ್ ಅರ್ಷದ್, ಶ್ರೀಮತಿ ಅನ್ನಪೂರ್ಣ, ವಿಧಾನ ಸಭೆಯ ಮುಖ್ಯ ಸಚೇತಕ ಅಶೋಕ ಮಹದೇವಪ್ಪ ಪಟ್ಟಣ, ಮಾಜಿ ಸಂಸದರಾದ ವಿ.ಎಸ್. ಉಗ್ರಪ್ಪ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರಂದೀಪ್.ಡಿ ಹಾಗೂ ಅಧಿಕಾರಿಗಳು ಮತ್ತು 2025ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತರಾದ ಕೆ. ಉಚ್ಛಂಗಪ್ಪ, ಮಳಸಿದ್ದ ಲಕ್ಷ್ಮಣ ನಾಯಿಕೋಡಿ, ನಾಗರಾಜು ಗಾಣದ ಹುಣಸೆ, ಶ್ರೀಮತಿ ಜಿ.ಕೆ. ಮುತ್ತಮ್ಮ, ತಿಪ್ಪೇಸ್ವಾಮಿ.ಪಿ ಅವರುಗಳು ಉಪಸ್ಥಿತರಿದ್ದರು.