
ಈ ಸಂಬಂಧ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದವರು, ದೇಶದ 17 ರಾಜ್ಯದಲ್ಲಿ, 4 ಕೇಂದ್ರಾಡಳಿತ ಪ್ರದೇಶದಲ್ಲಿ ಮಡಿವಾಳ ಸಮಾಜವು ಪರಿಶಿಷ್ಠ ಜಾತಿಯಲ್ಲಿರುವ ಕಾರಣ, ಮಡಿವಾಳ ಸಮಾಜದ ಹಲವು ದಶಕಗಳ ಹೋರಾಟಕ್ಕೆ 2009 ರಲ್ಲಿ ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದ ಮನವಿಗೆ ಒಪ್ಪಿ ಅಂದಿನ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಮಡಿವಾಳ ಸಮಾಜದ ಕುಲಶಾಸ್ತ್ರ ಅಧ್ಯಯನ ಮಾಡಲು ಪ್ರೊ. ಡಾ. ಅನ್ನಪೂರ್ಣರವರುನ್ನು ನೇಮಕ ಮಾಡಿದರು ಅದರಂತೆ ದಿನಾಂಕ 19-12-2009, ಪ್ರೊ. ಡಾ.ಅನ್ನಪೂರ್ಣರವರು ಕರ್ನಾಟಕ ರಾಜ್ಯವನ್ನು ಪ್ರವಾಸ ಮಾಡಿ ಮಡಿವಾಳ ಸಮಾಜವನ್ನು ಪರಿಶಿಷ್ಠ ಜಾತಿಗೆ ಸೇರಿಸವಂತೆ ಕುಲಶಾಸ್ತ್ರ ಅಧ್ಯಯನ ಮಾಡಿ 2011ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದರು.
2011 ರಿಂದ ಪ್ರತಿ ವರ್ಷವು ಸತತವಾಗಿ ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘವು ಅಧಿಕಾರದಲ್ಲಿದ್ದಂತಹ ಎಲ್ಲಾ ಸರ್ಕಾರಕ್ಕೂ ಮನವಿ ಮಾಡಿಕೊಂಡು ಬಂದಿರುತ್ತದೆ. 2022ರಲ್ಲಿ ಅಂದಿನ ಸಮಾಜಕಲ್ಯಾಣ ಮಂತ್ರಿಗಳು ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಕಡತ ಸಂಖ್ಯೆ SWD-505 SLP-22 ಕಡತವನ್ನು ಸಚಿವ ಸಂಪುಟಕ್ಕೆ ತರಲು ಒಪ್ಪಿದರು ಹಾಗೂ ಮುಖ್ಯಮಂತ್ರಿಗಳ ಅನುಮೋದನೆ ಮಾಡುವುದು ಬಾಕಿ ಇತ್ತು. ಅಷ್ಟರಲ್ಲಿ ಕಡತವನ್ನು ನಿಷ್ಕ್ರಿಯೆಗೊಳಿಸಿರುವುದು ಸಮಾಜಕ್ಕೆ ಮಾಡಿರುವ ಅನ್ಯಾಯವಾಗಿದೆ ಎಂದರು.
2025ರಲ್ಲಿ ಸಮಾಜದ ಜಗದ್ಗುರು ಡಾ. ಶ್ರೀ ಶ್ರೀ ಬಸವಮಾಚಿದೇವ ಸ್ವಾಮಿಜಿ ಹಾಗೂ ಶ್ರೀ ಶ್ರೀ ಮುಕ್ತಾನಂದ ಸ್ವಾಮಿಜಿ ಇವರುಗಳ ಸಾನಿಧ್ಯದಲ್ಲಿ, ಉತ್ತರ ಕರ್ನಾಟಕ ಮಡಿವಾಳರ ಸಂಘದ ಸಹಭಾಗಿತ್ವದಲ್ಲಿ 19 ಮಂತ್ರಿಗಳು 137 ಶಾಸಕರುಗಳಿಂದ ಸರ್ಕಾರಕ್ಕೆ ಶಿಫಾರಸ್ಸು ಪತ್ರಗಳನ್ನು ಸಂಗ್ರಹಿಸಿ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರಿಗೆ ಮನವಿ ಸಲ್ಲಿಸಿದ್ದೇವೆ. ಆದ್ದರಿಂದ ಮುಂಬರುವ ಅದಿವೇಶನದಲ್ಲಿ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ದಿನಾಂಕ 16-03-2026 ಸೋಮವಾರದಂದು ಬೆಳಿಗ್ಗೆ 8ರಿಂದ ಫ್ರೀಡಂ ಪಾರ್ಕ್‌ಲ್ಲಿ ಉತ್ತರ ಕರ್ನಾಟಕ ಮಡಿವಾಳರ ಸಂಘದ ಸಹಭಾಗಿತ್ವದಲ್ಲಿ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಂಡಿದ್ದು, ರಾಜ್ಯದ ಎಲ್ಲಾ ಜಿಲ್ಲಾ, ತಾಲ್ಲೂಕು, ಹೋಬಳಿ, ಗ್ರಾಮದಿಂದ ಸುಮಾರು 5000 ಕ್ಕಿಂತ ಹೆಚ್ಚಿನ ಮಡಿವಾಳ ಬಂಧುಗಳು ಆಗಮಿಸಿ ಹೋರಾಟ ಯಶಸ್ವಿ ಮಾಡಬೇಕೆಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಕೆ ಮಲ್ಲೇಶ್ ಕಾರ್ಯಾಧ್ಯಕ್ಷ ಚಂದ್ರಕಾಂತಯಂ ಉಪಾಧ್ಯಕ್ಷರಾದ ಬಿ ಬಸವ ಶೆಟ್ಟಿ ರವೀಂದ್ರ ಹಿರಣ್ಯಪ್ಪ ಕುಂಜರಿ ಕುಮಾರಸ್ವಾಮಿ ಖಜಂಚಿ ಧನರಾಜ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸಮಾಜದ ಬಾಂಧವರು ಇದೇ ವೇಳೆ ಉಪಸ್ಥಿತರಿದ್ದರು.