ಬೆಂಗಳೂರು: ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು “ಕೃಷಿ-ಮಾಧ್ಯಮ ಸಂಭ್ರಮ ಮತ್ತು ಸಂವಾದ” ಕಾರ್ಯಕ್ರಮ ನಡೆಯಿತು. ಚಲುವರಾಯಸ್ವಾಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೃಷಿ ಇಲಾಖೆಯ ಸಾಧನೆಗಳು, ಹೊಸ ಯೋಜನೆಗಳು ಹಾಗೂ ರೈತಪರ ಕಾರ್ಯಕ್ರಮಗಳ ಕುರಿತು ವಿವರಿಸಿದರು. ವಿದ್ಯಾರ್ಥಿಗಳು ಹಾಗೂ ರೈತರು ಕೇಳಿದ ಹಲವು ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದರು.
ಕೃಷಿ ಇಲಾಖೆ ಹಾಗೂ ಬೆಂಗಳೂರು ಪ್ರೆಸ್ ಕ್ಲಬ್ ಸಂಯುಕ್ತವಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಕೃಷಿ ಮತ್ತು ಆಹಾರ ಸಂಸ್ಕರಣಾ ಕ್ಷೇತ್ರದ ಪ್ರಗತಿ, ಭವಿಷ್ಯದ ಅವಕಾಶಗಳು ಹಾಗೂ ತಂತ್ರಜ್ಞಾನ ಬಳಕೆ ಕುರಿತು ಸಂವಾದ ನಡೆಯಿತು. ಇದೇ ವೇಳೆ ಕೆಐಟಿಐ ಯೋಜನೆಯ ಫಲಾನುಭವಿಗಳ ಆಹಾರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿತ್ತು.
ಸಚಿವರು ಮಾತನಾಡಿ, 2026-27ರ ಮುಂಗಾರು ಹಂಗಾಮಿಗೆ ಸರ್ಕಾರ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಿದರು. ಪೂರ್ವ ಮುಂಗಾರು ಅವಧಿಯಲ್ಲಿ ರಾಜ್ಯದಲ್ಲಿ ಸಾಮಾನ್ಯ ಮಳೆಗಿಂತ ಶೇ.11ರಷ್ಟು ಕಡಿಮೆ ಮಳೆಯಾಗಿದೆ. ಆದರೂ ಮುಂಗಾರು ಹಂಗಾಮಿನಲ್ಲಿ 150 ಲಕ್ಷ ಟನ್ ಆಹಾರ ಧಾನ್ಯ ಉತ್ಪಾದನೆ ಗುರಿ ಇಡಲಾಗಿದ್ದು, 82.48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ಬೆಳೆಸುವ ಯೋಜನೆ ರೂಪಿಸಲಾಗಿದೆ ಎಂದರು.
ಈಗಾಗಲೇ 55,900 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆದಿದ್ದು, ರೈತರಿಗೆ ಅಗತ್ಯವಿರುವ ಬೀಜ ಮತ್ತು ರಸಗೊಬ್ಬರಗಳ ಪೂರೈಕೆ ಸಮರ್ಪಕವಾಗಿದೆ ಎಂದು ತಿಳಿಸಿದರು. ಮುಂಗಾರು ಹಂಗಾಮಿಗೆ 4.71 ಲಕ್ಷ ಕ್ವಿಂಟಾಲ್ ಬೀಜ ಬೇಡಿಕೆ ಇದ್ದು, 5.46 ಲಕ್ಷ ಕ್ವಿಂಟಾಲ್ ಬೀಜ ಲಭ್ಯವಿದೆ. ಇದೇ ರೀತಿ 30.05 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆಗೆ ಅನುಗುಣವಾಗಿ ಜಿಲ್ಲಾವಾರು ಪೂರೈಕೆ ವ್ಯವಸ್ಥೆ ಮಾಡಲಾಗಿದೆ ಎಂದರು. ಕಳೆದ ಮೂರು ವರ್ಷಗಳಲ್ಲಿ ಕೃಷಿಯನ್ನು ಲಾಭದಾಯಕವಾಗಿಸಲು ಹಲವಾರು ಮಹತ್ವದ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಸಚಿವರು ಹೇಳಿದರು.
ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯಡಿ 173 ಕೋಟಿ ರೂ. ವೆಚ್ಚದಲ್ಲಿ 524 ಹಾರ್ವೆಸ್ಟರ್ ಹಬ್‌ಗಳನ್ನು ಸ್ಥಾಪಿಸಲಾಗಿದ್ದು, ರೈತರಿಗೆ ದೇಶದಲ್ಲೇ ಅತಿ ಹೆಚ್ಚು ಸಹಾಯಧನ ನೀಡಲಾಗಿದೆ ಎಂದರು. ನಶಿಸುತ್ತಿರುವ ಸ್ಥಳೀಯ ಬೆಳೆ ತಳಿಗಳನ್ನು ಸಂರಕ್ಷಿಸಲು ಸುಮಾರು 2100 ದೇಶಿ ತಳಿಗಳನ್ನು ಸಂಗ್ರಹಿಸಿ ಕೃಷಿ ವಿಶ್ವವಿದ್ಯಾಲಯಗಳ ಮೂಲಕ ಅಧ್ಯಯನ ನಡೆಸಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕನ್ನು ರಾಜ್ಯದ ಮೊದಲ ಸಾವಯವ ತಾಲ್ಲೂಕಾಗಿ ರೂಪಿಸಲಾಗುತ್ತಿದೆ ಎಂದರು.
ಪ್ರೆಸ್ ಕ್ಲಬ್ ಆವರಣದಲ್ಲಿ ಸಿರಿಧಾನ್ಯ ಹಾಗೂ ಸಾವಯವ ಪದಾರ್ಥಗಳ ಪ್ರದರ್ಶನವನ್ನು ಕೃಷಿ ಸಚಿವ ಚಲುವರಾಯಸ್ವಾಮಿ ಉದ್ಘಾಟಿಸಿದರು. 
ಈ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ನ ಅಧ್ಯಕ್ಷರಾದ ಆರ್. ಶ್ರೀಧರ್, ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ್, ಬೆಳ್ಳಿತಟ್ಟೆ, ಉಪಾಧ್ಯಕ್ಷರಾದ ಮೋಹನ್ ಕುಮಾರ್, ಖಜಾಂಚಿ ಶರಣಬಸಪ್ಪ ಸೇರಿದಂತೆ ಪ್ರೆಸ್ ಕ್ಲಬ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.