ಬೆಂಗಳೂರು : ರಿಯಲ್ ಎಸ್ಟೇಟ್ ಮಾಫಿಯಾ ಮಾಡಲು ಸರ್ಕಾರ ರೈತರ ಫಲವತ್ತಾದ ಭೂಮಿಯನ್ನು ಕಸಿಯುತ್ತಿದೆ. ಅಭಿವೃದ್ಧಿ ಹೆಸರಲ್ಲಿ ರೈತರ ಮರಣಶಾಸನ ಬರೆಯಲು ಹೊರಟಿದೆ. ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಮಾತಾಡುತ್ತಿದ್ದೀರಾ? ನೇರವಾಗಿ ಸಿಎಂ ಡಿಕೆ ಶಿವಕುಮಾರ್ ಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದರು.
ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿ ಜೆಡಿಎಸ್ ಪಕ್ಷದ ವತಿಯಿಂದ ಮಂಗಳವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು.
ಜಿಲ್ಲೆಯ 4 ಶಾಸಕರಿಗೆ ಆಶೀರ್ವಾದ ಮಾಡಿ ಸಚಿವ ಸ್ಥಾನ ನೀಡಿದ್ದಾರೆ. ಆದರೆ ಜನರ ಕಷ್ಟ ಕೇಳುವ ಕೆಲಸ ಸಚಿವರು ಮಾಡುತ್ತಿಲ್ಲ. ಈ ಯೋಜನೆ ರೂಪುಗೊಂಡಾಗ ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗಿರಲಿಲ್ಲ. ಸಿಎಂ ಕುರ್ಚಿ ನೋಡಿ ಹೊಟ್ಟೆಕಿಚ್ಚು ಪಡುವ ಜಾಯಮಾನ ನಮ್ಮದಲ್ಲ ಎಂದು ಸ್ಪಷ್ಟಪಡಿಸಿದರು.
*ನಾವು ಅಭಿವೃದ್ಧಿ ವಿರೋಧಿಗಳಲ್ಲ*
ನಾವು ಅಭಿವೃದ್ಧಿ ವಿರೋಧಿಗಳಲ್ಲ. ಉಪನಗರ ಯೋಜನೆ ಮಾಡಲೇಬೇಕೆಂದಿದ್ದರೆ ಕೆಐಎಡಿಬಿಯಲ್ಲಿ ಲಭ್ಯವಿರುವ ಬರಡು ಭೂಮಿಯನ್ನು ಬಳಸಿಕೊಳ್ಳಿ. ಅಲ್ಲಿ ಸ್ಮಾರ್ಟ್ ಸಿಟಿ ಮಾಡಲು ನಾವು ಸಿದ್ಧ. ಆದರೆ ಸಣ್ಣ, ಅತಿ ಸಣ್ಣ ರೈತರ ಹೈನುಗಾರಿಕೆ, ಕೃಷಿ ಭೂಮಿ ಕಸಿಯಬೇಡಿ ಎಂದು ಆಗ್ರಹಿಸಿದರು.
3 ಕೋಟಿವರೆಗೆ ಪರಿಹಾರ ಕೊಡುವುದಾಗಿ ಹೇಳುತ್ತಿದ್ದಾರೆ. ಆದರೆ ರೈತರ ಬದುಕು, ಜೀವನೋಪಾಯ ಹಾಳಾಗುತ್ತಿದೆ. ದಯವಿಟ್ಟು ಅವರನ್ನು ಬದುಕಲು ಬಿಡಿ" ಎಂದು ನಿಖಿಲ್ ಕುಮಾರಸ್ವಾಮಿ ಅವರು ಮನವಿ ಮಾಡಿದರು.
*ಇದು ಕುಮಾರಸ್ವಾಮಿ ಅವರ ಕೂಸಲ್ಲ*
ಇದು ಕುಮಾರಸ್ವಾಮಿ ಅವರ ಕನಸಿನ ಕೂಸು ಎಂಬ ಸಚಿವ ಎಚ್.ಸಿ.ಬಾಲಕೃಷ್ಣ ಅವರ ಹೇಳಿಕೆಗೆ ತಿರುಗೇಟು ನೀಡಿದ ನಿಖಿಲ್, "2006 ರಲ್ಲಿ ಯೋಜನೆ ಪ್ರಸ್ತಾಪವಾದಾಗ ಕುಮಾರಸ್ವಾಮಿ ಅವರು ರೈತರೊಂದಿಗೆ 3 ಸಭೆ ನಡೆಸಿದರು. ರೈತ ಮಹಿಳೆಯೊಬ್ಬರು ವಿರೋಧಿಸಿದಾಗ 2007ರ ಆಗಸ್ಟ್ 1 ರಂದು ವಿಧಾನಸಭೆಯಲ್ಲಿ ಯೋಜನೆ ಕೈಬಿಟ್ಟಿರುವುದಾಗಿ ಘೋಷಿಸಿದರು. ಅದರ ದಾಖಲೆ ಇಂದಿಗೂ ಇದೆ. ಆದ್ದರಿಂದ ಇದು ಕುಮಾರಸ್ವಾಮಿ ಅವರ ಕೂಸಲ್ಲ ಎಂದು ಹೇಳಿದರು.
*ಸರ್ಕಾರದ ದ್ವಂದ್ವ ನೀತಿ ಆರೋಪ*
ನೀವು ಮುಖ್ಯಮಂತ್ರಿಯಾಗುವುದಕ್ಕೂ ಮುಂಚಿನಿಂದಲೂ ಅಂದರೆ ಕಳೆದ 526 ದಿನಗಳಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೂ ಅವರ ಅಹವಾಲನ್ನು ಕೇಳಿಲ್ಲ. ಒಕ್ಕಲುತನ ಮಾಡುವ ರೈತರ ರಕ್ಷಣೆಗಾಗಿ ನಮ್ಮ ಕುಟುಂಬ ಒತ್ತು ನೀಡಿ ಪ್ರತಿಭಟನೆಗೆ ಬೆಂಬಲ ನೀಡಿದೆ" ಎಂದರು.
ಕಾಂಗ್ರೆಸ್‌ನ ಸತ್ಯಶೋಧನಾ ಸಮಿತಿಯ 200 ಪುಟದ ವರದಿಯೇ ಟೌನ್‌ಶಿಪ್‌ಗೆ ವಿರೋಧ ವ್ಯಕ್ತಪಡಿಸಿದೆ. ಆ ವರದಿಗೆ ಬೆಲೆಯೇ ಇಲ್ಲವೇ? ಮತ್ತೆ ಏಕೆ ಪರಿಶೀಲನಾ ಸಮಿತಿ ಬೇಕು? GBDA ಪ್ರಾಧಿಕಾರ ರಚಿಸಿ 2025 ರಲ್ಲಿ ಅಧಿಸೂಚನೆ ಹೊರಡಿಸಿದ್ದಾರೆ. ದೇವೇಗೌಡರು ಸತ್ಯಾಗ್ರಹ ಎಚ್ಚರಿಕೆ ನೀಡಿದ ಮರುದಿನ ಪರಿಶೀಲನಾ ಸಮಿತಿ ಮಾಡುವುದಾಗಿ ಹೇಳಿ, ಅದೇ ದಿನ ಅಂತಿಮ ಅಧಿಸೂಚನೆ ಹೊರಡಿಸಿದ್ದಾರೆ. ಇದು ಸರ್ಕಾರದ ದ್ವಂದ್ವ ನೀತಿಗೆ ಸಾಕ್ಷಿ" ಎಂದು ಆರೋಪಿಸಿದರು.
ಒತ್ತಾಯಪೂರ್ವಕವಾಗಿ ರೈತರಿಂದ ಭೂಸ್ವಾಧೀನ ಮಾಡಿಕೊಳ್ಳುವುದನ್ನು ಕೈಬಿಡಬೇಕು" ಎಂದು ಒತ್ತಾಯಿಸಿದರು.
*ದೇವೇಗೌಡರಿಗೆ ರೈತರೇ ಮೊದಲು*
93 ವರ್ಷದ ಮಾಜಿ ಪ್ರಧಾನಿ ದೇವೇಗೌಡರು ಬೆಳಗ್ಗೆ ಡಯಾಲಿಸಿಸ್ ಇದ್ದರೂ *"ರೈತರು ಮೊದಲು, ಆ ನಂತರ ಆಸ್ಪತ್ರೆಗೆ ಹೋಗುತ್ತೇನೆ"* ಎಂದು ಹೋರಾಟಕ್ಕೆ ಬಂದಿದ್ದಾರೆ ಎಂದು ನಿಖಿಲ್ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರು, ಮಾಜಿ ಹಾಗೂ ಹಾಲಿ ಶಾಸಕರು, ಸಂಸದರು, ಪಕ್ಷದ ಜಿಲ್ಲಾಧ್ಯಕ್ಷರು ಮತ್ತು ರೈತ ಮುಖಂಡರು, ಸಹಸ್ರಾರು ಸಂಖ್ಯೆಯಲ್ಲಿ ರೈತರು ಉಪಸ್ಥಿತರಿದ್ದರು.