
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ವಿತ್ತೀಯ ಕಾರ್ಯನೀತಿ ಸಂಸ್ಥೆಯು ಐದು ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಖಾತರಿ (ಗ್ಯಾರಂಟಿ) ಯೋಜನೆಗಳ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಾತ್ಮಕ ಕುರಿತು ಕೈಗೊಂಡಿರುವ ಅಧ್ಯಯನಗಳ ಫಲಿತಾಂಶಗಳನ್ನು ಮತ್ತು ಕಾರ್ಯನೀತಿ ಸಲಹೆಗಳನ್ನು ಭಾಗೀದಾರ (Stakeholders) ಸರ್ಕಾರಿ ಇಲಾಖೆಗಳೊಂದಿಗೆ ಹಾಗೂ ಶೈಕ್ಷಣಿಕ ಸಂಸ್ಥೆಗಳ ತಜ್ಞರೊಂದಿಗೆ ಹಂಚಿಕೊಳ್ಳಲು ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದರೂ ನಾವು ಕೈಗೊಳ್ಳುವ ಜನಗಣತಿ ಹಾಗೂ ಇತರೆ ಅಧ್ಯಯನಗಳನ್ನು ಪರಿಶೀಲಿಸಿದಾಗ ಸಂವಿಧಾನದಲ್ಲಿ ಹೇಳಲಾಗಿರುವ ಹಕ್ಕು ಹಾಗೂ ಗುರಿಗಳನ್ನು ನಾವು ಇನ್ನೂ ಸಾಧಿಸಬೇಕಾಗಿದೆ. ಬಡತನ ನಿರ್ಮೂಲನೆ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಮೊದಲನೆಯದಾಗಿದ್ದು, ಕರ್ನಾಟಕ ದೇಶದಲ್ಲಿಯೇ ಅತ್ಯಂತ ಹೆಚ್ಚಿನ ತಲಾ ಆದಾಯ ಹೊಂದಿರುವ ರಾಜ್ಯವಾಗಿದೆ. ಇದು ಸಾಧ್ಯವಾಗಿರುವುದು ಗ್ಯಾರಂಟಿ ಯೋಜನೆಗಳಿಂದ ಎಂದರು.
ಹಸಿವು ಮುಕ್ತ, ಪೌಷ್ಟಿಕ ಆಹಾರ ಕೂಡ ಸುಸ್ಥಿರ ಅಭಿವೃದ್ಧಿಯ ಗುರಿಗಳಾಗಿದ್ದು, ಗ್ಯಾರಂಟಿ ಯೋಜನೆಗಳು ಹಾಗೂ ಇತರೆ ಯೋಜನೆಗಳ ಸಂಯೋಜನೆಯಿಂದ ರಾಜ್ಯದ ಅಪೌಷ್ಟಿಕತೆ ಮಟ್ಟ ಸುಧಾರಿಸಿದೆ. ಯುವನಿಧಿ ಮೂಲಕ ಗುಣಮಟ್ಟದ ಶಿಕ್ಷಣವನ್ನು ಅರ್ಥಪೂರ್ಣವಾಗಿದೆ. ಕೌಶಲ್ಯ ತರಬೇತಿ ಹಾಗೂ ಹಣಕಾಸಿನ ನೆರವು ಒದಗಿಸುವ ಮೂಲಕ ಶೇಕಡ ನೂರರಷ್ಟು ಉದ್ಯೋಗವನ್ನು ಖಾತ್ರಿ ಪಡಿಸಲಾಗುತ್ತಿದೆ ಎಂದರು.
ಸುಸ್ಥಿರ ಅಭಿವೃದ್ಧಿ ಗುರಿಯಲ್ಲಿ ಲಿಂಗ ಸಮಾನತೆಯೂ ಒಂದಾಗಿದೆ. ಸರ್ಕಾರ ಮಹಿಳಾ ಆಧಾರಿತ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಿರುವ ಕಾರಣ ಎರಡು ವರ್ಷಗಳಲ್ಲಿ ಮಹಿಳಾ ಸಹಭಾಗಿತ್ವ 37% ಗೆ ಏರಿಕೆಯಾಗಿದೆ. ಮಹಿಳೆಯರಿಗೆ ಹೊಣೆಗಾರಿಕೆ ಹಾಗೂ ಸಂಪನ್ಮೂಲಗಳನ್ನು ಒದಗಿಸಿದರೆ ಇಡೀ ಕುಟುಂಬ ಹಾಗೂ ಸಮಾಜವನ್ನು ನಿಭಾಯಿಸುತ್ತಾರೆ ಎನ್ನುವುದನ್ನು ಇದು ರುಜುವಾತು ಮಾಡಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಎಷ್ಟರ ಮಟ್ಟಿಗೆ ಅನುಷ್ಟಾನಗೊಂಡಿವೆ ಎಂಬುದನ್ನು ಪ್ರತಿಷ್ಠಿತ ಸಂಸ್ಥೆಗಳು ನಡೆಸಿದ ಸಂಶೋಧನೆಗಳ ವರದಿಯು ತಿಳಿಸಿದೆ ಎಂದರು.

ಕಾರ್ಯಕ್ರಮದ ಪ್ರಧಾನ ಭಾಷಣ ಮಾಡಿದ ಚೆನ್ನೈನ ಎಂ.ಎಸ್ ಸ್ವಾಮಿನಾಥನ್ ಸಂಶೋಧನಾ ಸಂಸ್ಥೆಯ ಅಧ್ಯಕ್ಷರಾದ ಡಾ. ಸೌಮ್ಯ ಸ್ವಾಮಿನಾಥನ್ ಅವರು ಗ್ಯಾರಂಟಿ ಯೋಜನೆಗಳು ಜನರನ್ನು ಸೋಮಾರಿಗಳಾಗಿ ಮಾಡುತ್ತದೆ ಎಂಬುದು ಸುಳ್ಳು. ಈ ಯೋಜನೆಗಳಿಂದ ಬರುತ್ತಿರುವ ಹಣವನ್ನು ಜನರು ಮಕ್ಕಳ ವಿದ್ಯಾಭ್ಯಾಸಕ್ಕೆ, ಆರೋಗ್ಯ ಕಾಪಾಡಿಕೊಳ್ಳಲು, ಮನೆಯ ಅಗತ್ಯ ವಸ್ತುಗಳನ್ನು ಖರೀದಿಸಲು ಬಳಸುತ್ತಿರುವುದು ಸಮೀಕ್ಷೆಯಿಂದ ಸಾಭೀತಾಗಿದೆ. ಶಕ್ತಿ ಯೋಜನೆಯು ಸರ್ಕಾರವು ಮಹಿಳೆಯರಿಗೆ ಸ್ವಾತಂತ್ರ್ಯ ನೀಡಿರುವುದನ್ನು ತೋರಿಸುತ್ತದೆ. ಅನ್ನ ಭಾಗ್ಯವು ಬಡಜನರ ಹಸಿವನ್ನು ನಿವಾರಿಸಿದೆ. ಯುವನಿಧಿ ಯೋಜನೆಯು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಜೊತೆಗೆ ಉದ್ಯೋಗವನ್ನು ಅರಸಲು ನೆರವಾಗುತ್ತಿದೆ.
ಸಾರ್ವಜನಿಕರ ಮುಂದೆ ಸಂಶೋಧನೆಗಳನ್ನು ಹಂಚಿಕೊಳ್ಳುತ್ತಿರುವ ಕರ್ನಾಟಕ ಸರ್ಕಾರದ ನಡೆ ಪಾರದರ್ಶಕತೆ, ಕಲಿಕೆ ಹಾಗೂ ಉತ್ತರದಾಯಿತ್ವದೆಡೆಗೆ ಸರ್ಕಾರದ ಬದ್ಧತೆಯನ್ನು ಬಿಂಬಿಸುತ್ತದೆ. ಸಂಶೋಧನೆಗಳು ವರದಿಗಳಾಗಿ ಉಳಿಯದೇ ಜನರನ್ನು ತಲುಪುದು ಮುಖ್ಯ ಎಂದರು.
ಒಟ್ಟಿನಲ್ಲಿ ಮಹಿಳೆಯರ ಸವಾರ್ಂಗೀಣ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿರುವ ಸರ್ಕಾರವು ಗ್ರಾಮೀಣ ಭಾಗದ ರೈತ ಮಹಿಳೆಯರು ಕೃಷಿಯಲ್ಲಿ ಬಳಸಲು ಅನುಕೂಲವಾಗುವಂತಹ ಯಂತ್ರೋಪಕರಣಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಮುಂದಾಗಬೇಕು. ಈಗಿರುವ ಬಹುಪಾಲು ಕೃಷಿ ಯಂತ್ರೋಪಕರಣಗಳು ಪುರುಷ ರೈತರು ಬಳಸುವಂತಿವೆ. ರೈತರು ತಮ್ಮ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳುವ ಉದ್ದೇಶದಿಂದ ಅತಿಯಾಗಿ ಔಷಧಗಳನ್ನು ಸಿಂಪಡಣೆ ಮಾಡುತ್ತಿರುವುದರಿಂದ ಆರೋಗ್ಯದ ಮೇಲೆ ಪರಿಣಾಮವಾಗುತ್ತಿರುವುದರಿಂದ ಕೃಷಿ ವಿಶ್ವವಿದ್ಯಾನಿಲಯಗಳು ಅವರಿಗೆ ಸರಿಯಾದ ಮಾರ್ಗದರ್ಶ ನ ನೀಡುವುದು ಸೂಕ್ತ ಎಂದು ಅವರು ಸಲಹೆ ನೀಡಿದರು.
ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ತಲುಪಲು ಇನ್ನೂ ನಾಲ್ಕು ವರ್ಷಗಳು ಬಾಕಿ ಇದ್ದರೂ ಬಹುತೇಕ ದೇಶಗಳು ಇವುಗಳನ್ನು ತಲುಪುವಲ್ಲಿ ಹಿಂದುಳಿದಿವೆ. ಶೇ 30 ರಷ್ಟು ಸೂಚಕಗಳನ್ನು ಮಾತ್ರ ತಲುಪಿವೆ ಎಂದರು.
ಕೋವಿಡ್ ನಂತರದಲ್ಲಿ ಹವಾಮಾನ ಬದಲಾವಣೆ, ಆಹಾರ ಮತ್ತು ಪೌಷ್ಟಿಕತೆ, ಮುಂತಾದವುಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಸಾಧನೆಯಾಗಿಲ್ಲ. ಹವಾಮಾನ ಬದಲಾವಣೆಯಿಂದಾಗಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಮಾನವನ ಹಸ್ತಕ್ಷೇಪದಿಂದ ಜಾಗತಿಕ ತಾಪಮಾನ 2.5% ಏರಿಕೆಯಾಗುತ್ತಿರುವುದು ಆತಂಕಕಾರಿ ಸಂಗತಿ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಉಮಾ ಮಹದೇವನ್ ಮತ್ತು ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ರಿತೇಶ ಕುಮಾರ್ ಸಿಂಗ್ ಕರ್ನಾಟಕ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಉಪಾಧ್ಯಕ್ಷರುಗಳಾದ ಮೆಹರೂಜ್ ಖಾನ್, ಪುಷ್ಪ ಅಮರನಾಥ್, ದಿನೇಶ್ ಗೂಳಿಗೌಡ ಅವರು ಹಾಜರಿದ್ದರು.