ಬೆಂಗಳೂರು : ಪೌರಕಾರ್ಮಿಕರಿಗೆ ಆರೋಗ್ಯ ದೃಷ್ಟಿಯಿಂದ ಹೀಟ್–ಹೆಲ್ತ್ ಪ್ರೋಟೋಕಾಲ್ ಕಿಟ್ಟು ಹಾಗೂ ಆರೋಗ್ಯದ ಬಗ್ಗೆ ತಿಳುವಳಿಕೆಯನ್ನು ನೀಡಲಾಯಿತು.

ಬೆಂಗಳೂರು ಉತ್ತರ ನಗರ ಪಾಲಿಕೆಯ *ಆಯುಕ್ತರಾದ ಶ್ರೀ ಪೊಮ್ಮಲ ಸುನೀಲ್ ಕುಮಾರ್* ಅವರ ಅಧ್ಯಕ್ಷತೆಯಲ್ಲಿ ಆರೋಗ್ಯ ಕಾಳಜಿ ತಿಳುವಳಿಕೆ ಹಾಗೂ ಕೂಲಿಂಗ್ ಕಿಟ್ ವಿತರಣೆ ಕಾರ್ಯಕ್ರಮ ಯಲಹಂಕ ನ್ಯೂಟೌನ್‌ನ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಬಿಸಿಲಿನ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು *ಬೆಂಗಳೂರು ಉತ್ತರ ನಗರ ಪಾಲಿಕೆ ವತಿಯಿಂದ C40, ಸೆನ್ಸಿಂಗ್ ಲೋಕಲ್, ಹಸಿರುದಳ ಸಂಸ್ಥೆಗಳ ಸಹಯೋಗದಲ್ಲಿ* *“ಹೀಟ್–ಹೆಲ್ತ್ ಪ್ರೋಟೋಕಾಲ್”* ಕಾರ್ಯಕ್ರಮವನ್ನು ಜಾರಿಗೆ ತರಲಾಗುತ್ತಿದ್ದು, ಇದರ ಅಂಗವಾಗಿ ಇಂದು ಎರಡನೇ ತಂಡದ ಆಶಾ ಕಾರ್ಯಕರ್ತೆಯರು, ಒಣತ್ಯಾಜ್ಯ ಸಂಗ್ರಹಣಾ ಕೇಂದ್ರಗಳ (DWCC) ಸಿಬ್ಬಂದಿ ಹಾಗೂ ಪೌರಕಾರ್ಮಿಕರಿಗೆ ಬಿಸಿಲಿನ ಪರಿಣಾಮಗಳು, ಆರೋಗ್ಯದ ಮೇಲೆ ಉಂಟಾಗುವ ತೊಂದರೆಗಳು ಹಾಗೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಅರಿವು ನೀಡಿ, ಆರೋಗ್ಯ ರಕ್ಷಣೆಗಾಗಿ ಟೆಂಪರೇಚರ್ ಮತ್ತು ಹುಮಿಡಿಟಿ ಚೆಕ್ಕರ್, ನೆಕ್ ಕಾಲರ್ ಫ್ಯಾನ್, ನೀರಿನ ಬಾಟಲ್, ಟೋಪಿ ಹಾಗೂ ಹ್ಯಾಂಡ್ ಸ್ಲೀವ್ಸ್ ಒಳಗೊಂಡ ಕೂಲಿಂಗ್ ಕಿಟ್‌ಗಳನ್ನು ವಿತರಿಸಲಾಯಿತು.
ಇದಕ್ಕೂ ಮೊದಲು 2 ವಾರ್ಡ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು, ಒಣತ್ಯಾಜ್ಯ ಸಂಗ್ರಹಣಾ ಕೇಂದ್ರಗಳ (DWCC) ಸಿಬ್ಬಂದಿ ಹಾಗೂ ಪೌರಕಾರ್ಮಿಕರಿಗೆ ಕಿಟ್ ಗಳನ್ನು ನೀಡಲಾಗಿತ್ತು. 2ನೆಯ ಹಂತದಲ್ಲಿ ವಾರ್ಡ್ 24ರ ಪೌರಕಾರ್ಮಿಕರು,
ಡಿಡಬ್ಲ್ಯೂಸಿಸಿ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು – ಅಮೃತಹಳ್ಳಿ, ಥಣಿಸಂದ್ರ ಹಾಗೂ ಅಗ್ರಹಾರ ಲೇಔಟ್ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಕೂಲಿಂಗ್ ಕಿಟ್ ವಿತರಣೆ ಮಾಡಲಾಯಿತು.

*ಆಯುಕ್ತರ ಕಿವಿಮಾತು*
ಕಾರ್ಯಕ್ರಮದಲ್ಲಿ ಮಾತನಾಡಿದ *ಆಯುಕ್ತರಾದ ಶ್ರೀ ಪೊಮ್ಮಲ ಸುನೀಲ್ ಕುಮಾರ್ ರವರು,* ಬೆಂಗಳೂರು ನಗರದಲ್ಲಿ ದಿನೇದಿನೇ ತಾಪಮಾನ ಏರಿಕೆಯಾಗುತ್ತಿರುವ ಹಿನ್ನೆಲೆ ಪೌರಕಾರ್ಮಿಕರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವ ಅಗತ್ಯವಿದೆ ಎಂದು ಹೇಳಿದರು.
ಒಂದು ಕಾಲದಲ್ಲಿ ಬೆಂಗಳೂರಿನಲ್ಲಿ ಅತ್ಯಂತ ತಂಪಾದ ವಾತಾವರಣ ಇತ್ತು. ಬೇಸಿಗೆಯಲ್ಲಿಯೂ ಚಳಿಯ ಅನುಭವವಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ಹವಾಮಾನ ಬದಲಾವಣೆಯ ಪರಿಣಾಮವಾಗಿ ಉಷ್ಣಾಂಶ ಹೆಚ್ಚಾಗಿದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಬಿಟ್ಟು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ನಗರದಲ್ಲಿ ಘನತ್ಯಾಜ್ಯ ನಿರ್ವಹಣೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅಧಿಕಾರಿಗಳು ಹಾಗೂ ಪೌರಕಾರ್ಮಿಕರು ಹೆಚ್ಚಿನ ಶ್ರಮ ವಹಿಸಬೇಕು ಎಂದು ಸೂಚಿಸಿದ ಅವರು, ಬೇಸಿಗೆಯ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಇಂತಹ ಕೂಲಿಂಗ್ ಕಿಟ್‌ಗಳನ್ನು ಸಮರ್ಪಕವಾಗಿ ಬಳಸುವಂತೆ ಸಲಹೆ ನೀಡಿದರು.
ಈ ಕಾರ್ಯಕ್ರಮಕ್ಕೆ ಸಹಕಾರ ನೀಡುತ್ತಿರುವ ಎಲ್ಲಾ ಸಂಸ್ಥೆಗಳಿಗೂ ಧನ್ಯವಾದಗಳನ್ನು ತಿಳಿಸಿದ ಆಯುಕ್ತರು, ಇಂತಹ ಯೋಜನೆಗಳು ಪೌರಕಾರ್ಮಿಕರ ಕಲ್ಯಾಣ ಹಾಗೂ ನಗರ ನಿರ್ವಹಣಾ ಕಾರ್ಯಗಳನ್ನು ಮತ್ತಷ್ಟು ಪರಿಣಾಮಕಾರಿಯನ್ನಾಗಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

*ಆರೋಗ್ಯ ಕಾಳಜಿಯ ಬಗ್ಗೆ ಮಾಹಿತಿ
ಈ ಕಾರ್ಯಕ್ರಮದಲ್ಲಿ ತಾಪಮಾನ ಹೆಚ್ಚಳದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು, ಹೀಟ್ ಸ್ಟ್ರೆಸ್ ಲಕ್ಷಣಗಳು, ತುರ್ತು ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಸುರಕ್ಷತಾ ವಿಧಾನಗಳ ಕುರಿತು ಮಾರ್ಗದರ್ಶನ ನೀಡಲಾಯಿತು.
ಈ ಸಂದರ್ಭದಲ್ಲಿ ಜಂಟಿ ಆಯುಕ್ತರಾದ ಶ್ರೀಮತಿ ಪಲ್ಲವಿ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.