ಬೆಂಗಳೂರು: BMTC ಹಾಗೂ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ಉಚಿತ ಹೃದಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. 

BMTCಯಲ್ಲಿ 40 ವರ್ಷ ಮೇಲ್ಪಟ್ಟ ಅಧಿಕಾರಿಗಳು ಮತ್ತು ನೌಕರರಿಗಾಗಿ ಹಮ್ಮಿಕೊಳ್ಳಲಾಗುತ್ತಿರುವ ಉಚಿತ ಹೃದಯ ಆರೋಗ್ಯ ತಪಾಸಣಾ ಕಾರ್ಯಕ್ರಮದ ಪ್ರಗತಿಯನ್ನು ಪರಿಶೀಲಿಸಲು ಸಂಸ್ಥೆಯ ಅಧ್ಯಕ್ಷರಾದ ವಿ.ಎಸ್.ಆರಾಧ್ಯ ರವರು ಮತ್ತು ನಿರ್ದೇಶಕರು (ಭ&ಜಾ) ಅಬ್ದುಲ್ ಅಹದ್, ಭಾ.ಪೊ.ಸೇ. ಅವರು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಅವರು ತಪಾಸಣೆಗೆ ಆಗಮಿಸಿದ್ದ ನೌಕರರೊಂದಿಗೆ ನೇರವಾಗಿ ಸಂವಾದ ನಡೆಸಿ, ಆರೋಗ್ಯದ ಮಹತ್ವ, ನಿಯಮಿತ ಆರೋಗ್ಯ ತಪಾಸಣೆಯ ಅಗತ್ಯತೆ ಹಾಗೂ ಉತ್ತಮ ಜೀವನಶೈಲಿಯ ಕುರಿತು ಮಾಹಿತಿ ಹಂಚಿಕೊಂಡರು. ಹೃದಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಆರೋಗ್ಯಕರ ಜೀವನ ಪದ್ಧತಿಗಳ ಬಗ್ಗೆ ಅವರು ನೌಕರರಿಗೆ ಮಾರ್ಗದರ್ಶನ ನೀಡಿದರು.
ಅಲ್ಲದೇ, ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ಬಿ. ದಿನೇಶ್ ಮತ್ತು ಡಾ.ಪ್ರಭಾಕರ್, ವೈದ್ಯಕೀಯ ಅಧೀಕ್ಷಕರು ರವರುಗಳೊಂದಿಗೆ ಸಭೆ ನಡೆಸಿ, ನೌಕರರಿಗೆ ನಿಯಮಿತ ಹೃದಯ ಆರೋಗ್ಯ ತಪಾಸಣೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸುವ ಕುರಿತು ಚರ್ಚಿಸಿದರು. ಬೆಂ.ಮ.ಸಾ.ಸಂ. ಮತ್ತು ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ಈ ವಿಶೇಷ ಕಾರ್ಯಕ್ರಮದಡಿ ಇದುವರೆಗೆ ಒಟ್ಟು 13500+ ನೌಕರರು ಮತ್ತು ಅಧಿಕಾರಿಗಳು ಉಚಿತ ಹೃದಯ ಆರೋಗ್ಯ ತಪಾಸಣೆಗೆ ಒಳಗಾಗಿದ್ದಾರೆ. ನೌಕರರ ಆರೋಗ್ಯ ಮತ್ತು ಕಲ್ಯಾಣಕ್ಕೆ ಸಂಸ್ಥೆಯು ನೀಡುತ್ತಿರುವ ಆದ್ಯತೆಯ ಭಾಗವಾಗಿ ಈ ಕಾರ್ಯಕ್ರಮ ಯಶಸ್ವಿಯಾಗಿದೆ.
ಬೆಂ.ಮ.ಸಾ.ಸಂ. ನೌಕರರ ಆರೋಗ್ಯ ರಕ್ಷಣೆಗೆ ಬದ್ಧವಾಗಿದ್ದು, ಭವಿಷ್ಯದಲ್ಲಿಯೂ ಇಂತಹ ಆರೋಗ್ಯ ಕಾಳಜಿ ಕಾರ್ಯಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ BMTCಯ ಉನ್ನತ ಅಧಿಕಾರಿಗಳು,ನೌಕರರು,ಸಿಬ್ಬಂದಿವರ್ಗ ಉಪಸ್ಥಿತರಿದ್ದರು.