ಬೆಂಗಳೂರು: ಹೋಂಡಾ ಮೋಟಾರ್ಸ್ ಕಂಪನಿಯು ರಾಜ್ಯವನ್ನು ತೊರೆದು ಬೇರೆಲ್ಲೊ ಹೋಗುತ್ತಿದ್ದಾರೆ ಎನ್ನುವ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆ ಕಪೋಲಕಲ್ಪಿತ ಮತ್ತು ರಾಜಕೀಯ ದುರುದ್ದೇಶದಿಂದ ಕೂಡಿದೆ. ಇಂತಹ ಸಂವೇದನಾರಹಿತ ಹೇಳಿಕೆಗಳು ಕರ್ನಾಟಕದ ಕೈಗಾರಿಕಾ ಬೆಳವಣಿಗೆಗೆ ಮಾರಕವಾಗಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಕುಮಾರಸ್ವಾಮಿ ಅವರ ಆರೋಪಕ್ಕೆ ಸಂಬಂಧಿಸಿದಂತೆ ಅವರು ಭಾನುವಾರ ವಿವರವಾಗಿ ಪ್ರತ್ಯುತ್ತರ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಚಿವರು, 'ಹೋಂಡಾ ಕಂಪನಿಗೆ
ಕೋಲಾರ ಜಿಲ್ಲೆಯ ನರಸಾಪುರದಲ್ಲಿ 135 ಎಕರೆ ಜಾಗವನ್ನು 2011ರಿಂದ ಹಂತಹಂತವಾಗಿ ನೀಡಲಾಗಿದೆ. ಅಲ್ಲಿ, 2013ರಿಂದಲೂ ದ್ವಿಚಕ್ರ ವಾಹನಗಳನ್ನು ತಯಾರಿಸುತ್ತಿದ್ದು, ಸದ್ಯ ದಿನಕ್ಕೆ 10 ಸಾವಿರ ವಾಹನಗಳ ಉತ್ಪಾದನೆ ಆಗುತ್ತಿವೆ. 7,800ಕ್ಕೂ ಹೆಚ್ಚಿನ ಉದ್ಯೋಗ ಸೃಷ್ಟಿ ಕೂಡ ಆಗಿದೆ. ಇದಲ್ಲದೆ ದೊಡ್ಡಬಳ್ಳಾಪುರ ತಾಲ್ಲೂಕಿನ ಆದಿನಾರಾಯಣ ಹೊಸಹಳ್ಳಿಯಲ್ಲಿ 35 ಎಕರೆ ಜಾಗದಲ್ಲಿ ಬಿಡಿ ಭಾಗಗಳ ದಾಸ್ತಾನು ಹಾಗೂ ಸರಬರಾಜು ಘಟಕ ಹೊಂದಿದ್ದು, ಇಡೀ ದಕ್ಷಿಣ ಭಾರತಕ್ಕೆ ಇಲ್ಲಿಂದ ಪೂರೈಕೆ ಮಾಡುತ್ತಿದೆ. ಹೀಗಾಗಿ ರಾಜ್ಯದ ಜತೆ ಆ ಕಂಪನಿ ಉತ್ತಮ ಸಂಬಂಧ ಹೊಂದಿದೆ ಎಂಬುದನ್ನು ಕುಮಾರಸ್ವಾಮಿ ತಿಳಿದು ಜವಾಬ್ದಾರಿಯಿಂದ ಮಾತನಾಡಬೇಕು ಎಂದು ಅವರು ತಿರುಗೇಟು ನೀಡಿದ್ದಾರೆ
'ಹೋಂಡಾ ಕಂಪನಿಯು ಇ.ವಿ. ದ್ವಿಚಕ್ರವಾಹನ ತಯಾರಿಕೆಗೆ ಒಲವು ಹೊಂದಿದ್ದು, ಮುಂದಿನ ದಿನಗಳಲ್ಲಿ ನರಸಾಪುರದ ಕ್ಯಾಂಪಸ್ ನಲ್ಲೇ ಅದನ್ನು ವಿಸ್ತರಿಸಲಿದೆ. ಹೋಂಡಾ ಕಂಪನಿಯ ವಿಚಾರದಲ್ಲಿ ಸರಕಾರದ ಕಡೆಯಿಂದ ಯಾವ ಲೋಪವೂ ಆಗಿಲ್ಲ. ಆ ಸಂಸ್ಥೆ ಕೂಡ ಆ ರೀತಿಯ ಅಭಿಪ್ರಾಯ ಹೊಂದಿಲ್ಲ. ಇಂತಹ ಸಂದರ್ಭಗಳಲ್ಲಿ ಕುಮಾರಸ್ವಾಮಿಯವರು ನಮ್ಮ ರಾಜ್ಯದವರೇ ಆಗಿ ಈ ರೀತಿ ಮಾತನಾಡುತ್ತಿರುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ವಾಸ್ತವದಲ್ಲಿ ಅವರೇ ನಮ್ಮ ರಾಜ್ಯಕ್ಕೆ ಹೆಚ್ಚಿನ ಉದ್ಯಮಗಳು ಬರುವಂತೆ ಮಾಡಬೇಕು. ಅದು ಬಿಟ್ಟು ಎಲ್ಲ ಕಂಪನಿಗಳು ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಒಡಿಶಾ ರಾಜ್ಯಗಳಿಗೆ ಹೋಗುತ್ತಿವೆ ಎಂದು ಹುಯಿಲೆಬ್ಬಿಸುವುದರಿಂದ ಅವರದೇ ರಾಜ್ಯದ ಹಿತ ಬಲಿ ಕೊಟ್ಟಂತಾಗುವುದಿಲ್ಲವೇ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.