
ಪೂರ್ವ ಹಾಗೂ ದಕ್ಷಿಣ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಬೆಳ್ಳಂದೂರು ಕೆರೆ ಬಫರ್ ವಲಯದಲ್ಲಿ ರಸ್ತೆ ನಿರ್ಮಾಣವಾದಲ್ಲಿ ಈ ಭಾಗದ ಸಂಚಾರ ದಟ್ಟಣೆ ಇನ್ನಷ್ಟು ಮಟ್ಟಿಗೆ ನಿವಾರಣೆಯಾಗಲಿದೆ. ಈ ನಿಟ್ಟಿನಲ್ಲಿ ಕೆರೆ ಬಫರ್ ವಲಯದಲ್ಲಿ ಯಾವೆಲ್ಲ ಜಾಗಗಳು ಬರಲಿವೆ ಎಂಬುದನ್ನು ಪರಿಶೀಲಿಸಿ, ರಸ್ತೆ ನಿರ್ಮಾಣ ಸಾಧ್ಯತೆಯ ಕುರಿತು ಸಮೀಕ್ಷೆ ನಡೆಸಿ ವರದಿ ನೀಡುವಂತೆ ಸೂಚಿಸಿದರು.
ಬೆಳ್ಳಂದೂರು ಕೆರೆ ಬಂಡ್ ರಸ್ತೆಯಲ್ಲಿ ಸಂಚಾರ ದಟ್ಟಣೆ ನಿವಾರಣೆ ಮಾಡುವ ಉದ್ದೇಶದಿಂದ ಸಾರ್ವಜನಿಕರ ಓಡಾಟ ಹಾಗೂ ವಿಶ್ರಾಂತಿ ಪಡೆಯುವುದು ಒಳಗೊಂಡಂತೆ ಸುಮಾರು 1 ಕಿ.ಮೀ ಉದ್ದದ ರಸ್ತೆಯನ್ನು 24 ಮೀ. ಅಗಲದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಕಾಮಗಾರಿ ಶೀಘ್ರವಾಗಿ ಪೂರ್ಣಗೊಂಡಲ್ಲಿ ಈ ಭಾಗದಲ್ಲಿ ಉಂಟಾಗುವ ಸಂಚಾರ ದಟ್ಟಣೆ ಗಣನೀಯವಾಗಿ ಕಡಿಮೆಯಾಗಲಿದೆ. ಆದ್ದರಿಂದ ಕಾಮಗಾರಿಗೆ ವೇಗ ನೀಡಿ ನಿಗದಿತ ಅವಧಿಯಲ್ಲಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
*1.4 ಕಿ.ಮೀ ಬಫರ್ ರಸ್ತೆ ನಿರ್ಮಾಣಕ್ಕೆ ಕ್ರಮ:*
ವಿಂಡ್ ಟನಲ್ ರಸ್ತೆಗೆ ಪರ್ಯಾಯ ಮಾರ್ಗವಾಗಿ 1.4 ಕಿ.ಮೀ ಉದ್ದದ ಬಫರ್ ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಬಫರ್ ರಸ್ತೆ ನಿರ್ಮಾಣಕ್ಕೆ ಗುರುತಿಸಿರುವ ಜಾಗವು ಹೆಚ್.ಎ.ಎಲ್‌ಗೆ ಸೇರಿದ್ದು, ರಸ್ತೆ ನಿರ್ಮಾಣಕ್ಕೆ ಹೆಚ್.ಎ.ಎಲ್ ಅಧಿಕಾರಿಗಳು ಸಹಮತ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದ್ದು, ರಸ್ತೆ ನಿರ್ಮಾಣಕ್ಕೆ ಸರ್ಕಾರದ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ತ್ವರಿತವಾಗಿ ಕಾಮಗಾರಿ ಪ್ರಾರಂಭಿಸುವಂತೆ ಸೂಚನೆ ನೀಡಿದರು.
*ಬಫರ್ ರಸ್ತೆ ಕಾಮಗಾರಿ ಪರಿಶೀಲನೆ:*

ಈಜೀಪುರ ಒಳವರ್ತುಲ ರಸ್ತೆಯಿಂದ ಸರ್ಜಾಪುರ ಹೊರವರ್ತುಲ ರಸ್ತೆಯವರೆಗೆ 2.6 ಕಿ.ಮೀ ಉದ್ದದ ಬಫರ್ ರಸ್ತೆ ಕಾಮಗಾರಿಯನ್ನು ಪರಿಶೀಲಿಸಲಾಯಿತು. ಬಫರ್ ರಸ್ತೆಯ ಬದಿಯಲ್ಲಿ ರಕ್ಷಣಾ ಇಲಾಖೆಗೆ ಸೇರಿದ ಜಾಗವಿದ್ದು, ಆ ಭಾಗದಲ್ಲಿ ಆರ್.ಸಿ.ಸಿ ತಡೆಗೋಡೆ ನಿರ್ಮಿಸಲಾಗಿದೆ. ಜೆಸಿಬಿ, ಇಟಾಚಿ ಹಾಗೂ ಬುಲ್ಡೋಜರ್‌ಗಳ ಬಳಕೆಯಿಂದ ಕಚ್ಚಾ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿರುವುದನ್ನು ಪರಿಶೀಲಿಸಿ, ಕಾಮಗಾರಿಗೆ ಇನ್ನಷ್ಟು ವೇಗ ನೀಡಿ ಶೀಘ್ರವಾಗಿ ರಸ್ತೆ ನಿರ್ಮಾಣ ಪೂರ್ಣಗೊಳಿಸುವಂತೆ ಬಿ-ಸ್ಮೈಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈಜೀಪುರ–ಸರ್ಜಾಪುರ ಬಫರ್ ರಸ್ತೆಯನ್ನು 24 ಮೀ. ಅಗಲದಲ್ಲಿ ನಿರ್ಮಿಸಲಾಗುತ್ತಿದ್ದು, ಈ ಕಾಮಗಾರಿಗೆ ಸುಮಾರು 44 ಕೋಟಿ ರೂ. ವೆಚ್ಚವಾಗಲಿದೆ. ರಸ್ತೆ ನಿರ್ಮಾಣವಾದ ನಂತರ ಈಜೀಪುರದಿಂದ ಸರ್ಜಾಪುರ ರಸ್ತೆಗೆ ನೇರ ಸಂಚಾರ ಸಾಧ್ಯವಾಗಲಿದ್ದು, ಇದರಿಂದ ಈ ಭಾಗದಲ್ಲಿ ಸಂಚಾರ ದಟ್ಟಣೆ ಗಮನಾರ್ಹವಾಗಿ ಕಡಿಮೆಯಾಗಲಿದೆ.
ಈ ಸಂದರ್ಭದಲ್ಲಿ ಪೂರ್ವ ನಗರ ಪಾಲಿಕೆ ಆಯುಕ್ತರಾದ ರಮೇಶ್ ಡಿ.ಎಸ್., ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್, ಬಿಸ್ಮೆಲ್ ತಾಂತ್ರಿಕ ನಿರ್ದೇಶಕರಾದ ಬಿ.ಎಸ್. ಪ್ರಹ್ಲಾದ್, ನಗರ ಯೋಜನಾ ವಿಭಾಗದ ಅಪರ ನಿರ್ದೇಶಕರಾದ ಗಿರೀಶ್, ಮುಖ್ಯ ಅಭಿಯಂತರರಾದ ಲೋಕೇಶ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.