ಬೆಂಗಳೂರು : ಕೆಪಿಎಸ್ಸಿಯಲ್ಲಿ ನಡೆಯುತ್ತಿರುವ ಅಕ್ರಮ ನೇಮಕಾತಿ ಮತ್ತು ಮಿತಿಮೀರಿದ ಭ್ರಷ್ಟಾಚಾರದ ಕುರಿತಂತೆ ಮುಕ್ತ ಸಂವಾದದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು; ಈ ಸಂಸ್ಥೆಯನ್ನು ಸ್ವಚ್ಛಗೊಳಿಸುವುದು ಸೇರಿದಂತೆ ಭವಿಷ್ಯದಲ್ಲಿ ಉದ್ಯೋಗ ಸೃಷ್ಟಿ ಮಾಡುವ ಬಗೆ ಹಾಗೂ ಸರ್ಕಾರಿ ಉದ್ಯೋಗಗಳ ನೇಮಕದಲ್ಲಿ ತಮಗಿರುವ ಹೊಸ ಆಲೋಚನೆಯನ್ನು ಜನತೆಯ ಮುಂದೆ ಇರಿಸಿದ್ದಾರೆ. 
ನಿಮ್ಮ ತಲೆಗೆ ಸ್ವಲ್ಪ ಕೆಲಸ ಕೊಡಿ ಎಂದು ಮಾತು ಶುರು ಮಾಡಿದ ಕುಮಾರಸ್ವಾಮಿ ಅವರು; ಒಮ್ಮೆ ಒಬ್ಬರು ಸರಕಾರಿ ಉದ್ಯೋಗಕ್ಕೆ ನೇಮಕವಾದರೆ ಅವರಿಗೆ 35 ವರ್ಷ ಸೇವಾವಧಿ ಇರುತ್ತದೆ. ಆದರೆ ಪ್ರತೀ ಕುಟುಂಬಕ್ಕೆ ತಲಾ ಒಂದು ಉದ್ಯೋಗ ಕಲ್ಪಿಸುವ ಉದ್ದೇಶದಿಂದ 35 ವರ್ಷದ ಸೇವಾವಧಿ ಬದಲಿಗೆ 10ರಿಂದ 15 ಅಥವಾ 20 ವರ್ಷಕ್ಕೆ ಇಳಿಸಬೇಕು. ಇಷ್ಟು ಮಿತಿಯನ್ನು ಹಾಕುವ ಮೂಲಕ ಉದ್ಯೋಗಗಳನ್ನು ಎಲ್ಲರಿಗೂ ಕೊಡುವ ಪ್ರಯತ್ನ ಮಾಡಬಹುದು ಎಂದು ಸಚಿವರು ಹೇಳಿದರು.
ಕೆಲಸದಿಂದ ನಿವೃತ್ತಿಯಾಗುವ ಉದ್ಯೋಗಿ ನಿವೃತ್ತಿ ಆದ ನಂತರ ದೊರೆಯುವ ಪಿಂಚಣಿ ಸೇರಿದಂತೆ ಎಲ್ಲಾ ಸೌಲಭ್ಯಗಳಿಗೆ ಅರ್ಹನಾಗಿರುತ್ತಾನೆ. ಇದರಿಂದ ಉದ್ಯೋಗ ಸಿಗದೇ ಇರುವವರಿಗೆ ಅವಕಾಶ ದೊರೆಯುತ್ತದೆ ಹಾಗೂ ನಿರುದ್ಯೋಗ ನಿವಾರಣೆಯಲ್ಲಿ ದೊಡ್ಡ ಪ್ರಯತ್ನ ಮಾಡಿದಂತೆ ಆಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ನಾನು ಈ ಯೋಜನೆ ಅನುಷ್ಠಾನಕ್ಕೆ ತರುವ ಉದ್ದೇಶ ಹೊಂದಿದ್ದೇನೆ. ಯುವ ಜನರಿಗೆ ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ ಇಂಥ ಯೋಚನೆ ಕಾರ್ಯರೂಪಕ್ಕೆ ಬಂದರೆ ಹೇಗೆ ಎಂದು ನಾನು ಆಲೋಚನೆ ಮಾಡುತ್ತಿದ್ದೇನೆ. ನನ್ನ ಪ್ರಕಾರ ಪ್ರತಿ ಮನೆಗೂ ಕನಿಷ್ಠ ಒಂದು ಸರ್ಕಾರಿ ಕೆಲಸವಾದರೂ ದೊರೆಯಬೇಕು. ನನ್ನ ಆಲೋಚನೆಯನ್ನು ಜನರ ಮುಂದೆ ಇರಿಸಿದ್ದೇನೆ. ಇದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯಲಿ ಎಂದು ಸಚಿವರು ಹೇಳಿದರು.
ರಾಜ್ಯದಲ್ಲಿ ನವರಾತ್ರಿ ಹಬ್ಬದ ಸಂದರ್ಭವಿದು. ಈ ಒಳ್ಳೆಯ ಸಂದರ್ಭದಲ್ಲಿ ಯುವಜನರ ಭವಿಷ್ಯದ ಬಗ್ಗೆ ಆಲೋಚನೆ ಮಾಡುತ್ತಿದ್ದೇನೆ. ಪ್ರಾಮಾಣಿಕವಾಗಿ ಚಿಂತನೆ ಮಾಡುತ್ತಿದ್ದೇನೆ. ನೀವೆಲ್ಲರೂ ನನ್ನ ಮಾತನ್ನು ನೆನಪಿಟ್ಟುಕೊಳ್ಳಿ. ಈ ಬಗ್ಗೆ ಚರ್ಚೆ ಮಾಡಿ, ಈ ಬಗ್ಗೆ ನಿಮ್ಮೆಲ್ಲರ ಅಭಿಪ್ರಾಯ ತಿಳಿಸಿ ಎಂದು ಕುಮಾರಸ್ವಾಮಿ ಅವರು ಹೇಳಿದರು.
ನಮ್ಮಲ್ಲಿ ನಿರುದ್ಯೋಗ ಅಗಾಧ ಪ್ರಮಾಣದಲ್ಲಿ ಬೆಳೆಯುತ್ತಿದೆ. ಸರಕಾರಿ ಮಟ್ಟದಲ್ಲಿ ಸಮರ್ಥರಿಗೆ ಉದ್ಯೋಗ ನೀಡಲು ಆಗುತ್ತಿಲ್ಲ. ಕರ್ನಾಟಕ ಲೋಕಸೇವಾ ಆಯೋಗ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ. ಪಾರದರ್ಶತವಾಗಿ, ನ್ಯಾಯ ಸಮ್ಮತವಾಗಿ ಅರ್ಹರನ್ನು ಆಯ್ಕೆ ಮಾಡಿ ಸರ್ಕಾರಿ ಸೇವೆಗೆ ಕಳಿಸಬೇಕಾದ ಕೆಪಿಎಸ್ಸಿ ಭ್ರಷ್ಟಾಚಾರದ ಕೂಪವಾಗಿದೆ. ಹಣಕ್ಕಾಗಿ ಉದ್ಯೋಗವನ್ನು ಮಾರಿಕೊಳ್ಳಲಾಗುತ್ತಿದೆ. ಸಂಸ್ಥೆಯ ಅಧ್ಯಕ್ಷರು ಮತ್ತು ಸದಸ್ಯರು ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಸಂಸ್ಥೆಗೆ ಹೋಗುವ ಅಧಿಕಾರಿಗಳು ಕೂಡ ಹಣ ಮಾಡುವ ದಂಧೆಯಲ್ಲಿ ನಿರತರಾಗಿದ್ದಾರೆ ಎಂದು ಸಚಿವರು ದೂರಿದರು.
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗಳು, ಪಶುವೈದ್ಯ ಇಲಾಖೆಯ ನೇಮಕಾತಿ ಸೇರಿದಂತೆ ಅನೇಕ ನೇಮಕ ಪ್ರಕ್ರಿಯೆಗಳಲ್ಲಿ ಅಗಾಧವಾದ ಭ್ರಷ್ಟಾಚಾರ ನಡೆದಿದೆ. ಅಲ್ಲದೆ ಕೆಎಎಸ್ ಆಯ್ಕೆ ಪ್ರಕ್ರಿಯೆ ಭ್ರಷ್ಟಾಚಾರದ ಮಹಾಕೂಪವಾಗಿದೆ. ಇಲ್ಲಿ ಹಣದ ವ್ಯವಹಾರ ಸೇರಿದಂತೆ ಸ್ವಜನ ಪಕ್ಷಪಾತ, ಜಾತಿ ವ್ಯಾಮೋಹದಿಂದ ಅರ್ಹ ಅಭ್ಯರ್ಥಿಗಳಿಗೆ ವಂಚನೆ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು.
*ಕೆಪಿಎಸ್ಸಿ ಕಾರ್ಯವೈಖರಿ ಬಗ್ಗೆ ಯುವಜನರ ಆಕ್ರೋಶ*
ಈ ಸಂದರ್ಭದಲ್ಲಿ ಅನೇಕ ಉದ್ಯೋಗ ವಂಚಿತ ಅಭ್ಯರ್ಥಿಗಳು ಸಚಿವರಲ್ಲಿ ದೂರುಗಳನ್ನು ಹೇಳಿಕೊಂಡರು. ಪರೀಕ್ಷಾ ವಿಧಾನ, ತಪ್ಪು ತಪ್ಪಾಗಿ ಮುದ್ರಣವಾಗುವ ಪ್ರಶ್ನೆ ಪತ್ರಿಕೆಗಳು, ಒಂಎಂಆರ್ ಶೀಟುಗಳ ತಿದ್ದುಪಡಿ ಸೇರಿದಂತೆ ಅನೇಕ ಅಕ್ರಮಗಳನ್ನು ಎಸಗಲಾಗಿದೆ ಎಂದು ಹೇಳಿದರು.
ನಮಗೆ ಈ ಸರ್ಕಾರದ ಮೇಲೆ ನಂಬಿಕೆಯೇ ಸತ್ತುಹೋಗಿದೆ. ನೋಟಿಫಿಕೇಶನ್ ಮಾಡುತ್ತಾರೆ, ಆದರೆ ಓದುವುದಕ್ಕೆ ಸಮಯವನ್ನೇ ಕೊಡುವುದಿಲ್ಲ. ಉತ್ತರ ಕರ್ನಾಟಕದಿಂದ ಬಂದು ಬೆಂಗಳೂರಿನಲ್ಲಿ ತಿಂಗಳಾನುಗಟ್ಟಲೆ ಕಷ್ಟಪಟ್ಟು ಓದುತ್ತಿದ್ದೇವೆ. ಪೀಜಿಗಳಿಗೆ ಅಣೆಕಟ್ಟಲಾಗಿದೆ ಸಂಕಷ್ಟದಲ್ಲಿದ್ದೇವೆ. ನಮ್ಮ ಜೊತೆ ಕೆಪಿಎಸ್ಸಿ ಚೆಲ್ಲಾಟ ಆಡುತ್ತಿದೆ ಎಂದು ಉತ್ತರ ಕರ್ನಾಟಕದ ಅಭ್ಯರ್ಥಿ ಒಬ್ಬರು ಆರೋಪಿಸಿದರು.
ಯಾವಾಗ ಯಾವ ನೋಟಿಫಿಕೇಶನ್ ಆಗುತ್ತದೆ? ಅದರ ಅರ್ಹತೆ ಮತ್ತು ಮಾನದಂಡಗಳು ಏನು ಎಂಬುದು ಬಗ್ಗೆ ಕೆಪಿಎಸ್ಸಿಗೆ ಅರಿವು ಇಲ್ಲ. ಪದೇ ಪದೇ ಗೊಂದಲ ಉಂಟು ಮಾಡುತ್ತಾರೆ. ನಾವು ಪರೀಕ್ಷೆಗೆ ತಯಾರಾಗುತ್ತಿದ್ದರೆ ಯಾವುದೋ ಒಂದು ದಾಖಲೆಯನ್ನು ವೆಬ್ಸೈಟ್ನಲ್ಲಿ ಹಾಕಿ ಗೊಂದಲ ಉಂಟುಮಾಡುತ್ತಾರೆ. ಅದು ಸರಿ ಹೋಗಿ ಇನ್ನೇನು ಪರೀಕ್ಷೆ ಬರೆಯಬೇಕು ಎನ್ನುವ ಸಮಯಕ್ಕೆ ಯಾರೋ ಒಬ್ಬರು ನ್ಯಾಯಾಲಯಕ್ಕೆ ಹೋಗುತ್ತಾರೆ. ಅಲ್ಲಿಗೆ ನಾವು ಶ್ರಮಪಟ್ಟು ಓದಿದ್ಯಲ್ಲ ವ್ಯರ್ಥವಾಗುತ್ತದೆ ಎಂದು ಇನ್ನೊಬ್ಬ ಅಭ್ಯರ್ಥಿ ಅಳಲು ತೋಡಿಕೊಂಡರು. 
ಕೆಪಿಎಸ್ಸಿಯಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಜವಾಬ್ದಾರಿ ಕೊಟ್ಟರು ಯಾವುದೇ ಉಪಯೋಗ ಆಗುವುದಿಲ್ಲ. ಅಲ್ಲಿಗೂ ಗ್ಯಾನೆಂದ್ರ ಅವರಂತಹ ಅಪ್ರಾಮಾಣಿಕ ಅಧಿಕಾರಿಗಳು ಬಂದರೆ ಏನಾಗುತ್ತದೆ? ಸರ್ಕಾರದ ಮನಸ್ಥಿತಿ ಬದಲಾಗದೇ ಇರುವುದರಿಂದ ಅಧಿಕಾರಿಗಳು ಕೂಡ ಭ್ರಷ್ಟರಾಗುತ್ತಿದ್ದಾರೆ. ಇಂತಹ ವ್ಯವಸ್ಥೆಯಲ್ಲಿ ಬಡ ಮತ್ತು ಅರ್ಹ ಅಭ್ಯರ್ಥಿಗಳಿಗೆ ಅವಕಾಶಗಳು ಸಿಗುತ್ತಿಲ್ಲ. ಕೆಪಿಎಸ್ಸಿಯಲ್ಲಿ ಕೂತಿರುವ ಸದಸ್ಯರು, ಅಧ್ಯಕ್ಷರು, ಅಧಿಕಾರಿಗಳು ಮತ್ತು ಅವರ ಜೊತೆ ಸಂಬಂಧ ಹೊಂದಿರುವ ದಲ್ಲಾಳಿಗಳು ಇಡೀ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಅಭ್ಯರ್ಥಿಗಳು ಆರೋಪಿಸಿದರು.
*ಮುಖ್ಯಮಂತ್ರಿ ಹೇಳಿಕೆಗೆ ಆಕ್ಷೇಪ; ಬೆಂಗಳೂರು ಎಲ್ಲರದ್ದು*
ಉತ್ತರ ಕರ್ನಾಟಕದ ಮಂದಿ ಬೆಂಗಳೂರಿಗೆ ಬಂದು ಇಲ್ಲೇ ಇದ್ದುಬಿಡುತ್ತಾರೆ, ಇಲ್ಲಿಂದ ವಾಪಸ್ ಹೋಗುವುದೇ ಇಲ್ಲ ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಕೊಟ್ಟ ಹೇಳಿಕೆಯಿಂದ ನಮಗೆ ನೋವಾಗಿದೆ. ಇಲ್ಲಿ ಕರ್ನಾಟಕ ಎನ್ನುವುದು ಒಂದು. ನಮ್ಮ ಭಾಷೆ ಒಂದೇ. ಉತ್ತರ ಮತ್ತು ದಕ್ಷಿಣ ಎನ್ನುವ ಪ್ರಶ್ನೆಯೇ ಇಲ್ಲ. ಬೆಂಗಳೂರು ಮಹಾನಗರ ನಮ್ಮೆಲ್ಲರದ್ದು. ಯಾರೋ ಒಬ್ಬರಿಗೆ ಸೀಮಿತವಾದ ನಗರವಲ್ಲ. ಹಾಗೆ ನೋಡಿದರೆ ಬೆಂಗಳೂರು ನಗರ ಅಭಿವೃದ್ಧಿ ಹೊಂದಿದೀಯ ಹೊರತು, ಬೆಂಗಳೂರು ಅಕ್ಕಪಕ್ಕದ ಅನೇಕ ಹಳ್ಳಿಗಳು ಉತ್ತರ ಕರ್ನಾಟಕದ ಹಳ್ಳಿಗಳಂತೆ ತೀರಾ ಹಿಂದುಳಿದಿವೆ ಎಂದು ಯಾದಗಿರಿಯ ವಿದ್ಯಾರ್ಥಿನಿ ಒಬ್ಬರು ಬೇಸರ ವ್ಯಕ್ತಪಡಿಸಿದರು.
ನೋಟಿಫಿಕೇಶನ್ ಬಂದ ಮೇಲೆ ಒಂದು ಸವಾಲ್ ಆದರೆ, ರಿಸಲ್ಟ್ ಬರುವವರೆಗೂ ಅನುಭವಿಸುವ ಯಾತನೆ ಮತ್ತೊಂದು ಕಡೆ. ಅದರಲ್ಲೂ ಪರೀಕ್ಷೆ ಮತ್ತು ಎಲ್ಲಾ ಹಂತಗಳಲ್ಲೂ ತೇರ್ಗಡೆಯಾದರೂ ನೇಮಕಾತಿ ಆದೇಶ ಪತ್ರ ಪಡೆಯುವುದೇ ಎಂಬ ಮತ್ತೊಂದು ಸಂಕಷ್ಟವಾಗಿದೆ ಎಂದು ಚನ್ನಪಟ್ಟಣ ಅಭ್ಯರ್ಥಿ ಒಬ್ಬರು ಬೇಸರ ವ್ಯಕ್ತಪಡಿಸಿದರು.
ಕೆಪಿಎಸ್ಸಿಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಇನ್ನಿಲ್ಲದ ಆಕ್ರೋಶ ವ್ಯಕ್ತಪಡಿಸಿದ ಧಾರವಾಡದ ಅಭ್ಯರ್ಥಿ ಒಬ್ಬರು; ಸಾಂವಿಧಾನಿಕವಾದ ಈ ಸಂಸ್ಥೆಯ ಸುಧಾರಣೆ ಅತ್ಯಂತ ಅಗತ್ಯವಾಗಿದೆ. ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿಯಲ್ಲಿ ಬಿಗಿ ಕ್ರಮಗಳನ್ನು ಕೈಗೊಳ್ಳಬೇಕು. ಆಯ್ಕೆಗೆ ಉನ್ನತ ಮಟ್ಟದ ಪರಿಣಿತರು ಮತ್ತು ಅತ್ಯಂತ ಪ್ರಾಮಾಣಿಕರ ಸಮಿತಿ ರಚನೆ ಮಾಡಬೇಕು. ಅಕ್ರಮ ಎಸಗುವ ಅಧ್ಯಕ್ಷ ಮತ್ತು ಸದಸ್ಯರ ಪದಚ್ಯುತಿಗೆ ತಕ್ಷಣ ನಿರ್ಧಾರ ಕೈಗೊಳ್ಳುವಂತೆ ಆಗಬೇಕು. ಇವರಿಗೆ ಸಾಂವಿಧಾನಿಕ ರಕ್ಷಣೆ ಕೊಡಬಾರದು ಎಂದು ಒತ್ತಾಯ ಮಾಡಿದರು.
ಇವರೊಂದಿಗೆ ಇನ್ನೂ ಅನೇಕ ಅಭ್ಯರ್ಥಿಗಳು ಸಚಿವ ಕುಮಾರಸ್ವಾಮಿ ಅವರಿಗೆ ತಮ್ಮ ಅಳಲನ್ನು ತೋಡಿಕೊಂಡರು. ಜತೆಗೆ ಪ್ರಶ್ನೆಗಳನ್ನು ಕೇಳಿ, ಸಮರ್ಪಕ ಉತ್ತರಗಳನ್ನು ಕೂಡ ಪಡೆದುಕೊಂಡರು. ಕೆಪಿಎಸ್ಸಿ ಅಕ್ರಮದ ಕುರಿತಂತೆ ನಾವೆಲ್ಲರೂ ಕೇವಲ ಈ ಚರ್ಚೆಯ ಮೂಲಕ ವಿರಮಿಸುವುದು ಬೇಡ. ಮುಂದಿನ ದಿನಗಳಲ್ಲಿ ಬಹುದೊಡ್ಡ ಹೋರಾಟಗಳನ್ನು ಸಂಘಟಿಸೋಣ. ನಾನು ನಿಮ್ಮ ಜೊತೆ ನಿಲ್ಲುತ್ತೇನೆ ಎಂದು ಸಚಿವರು ಭರವಸೆ ನೀಡಿದರು.
ಭವಿಷ್ಯದಲ್ಲಿ ನೀವು ಹೆದರಬೇಕಾಗಿಲ್ಲ. ನಿಮ್ಮ ಕಾಳಜಿ ಮತ್ತು ಕನಸುಗಳನ್ನು ಗೌರವಿಸುವ ನಾಯಕರಿಗೆ ಮಣೆ ಹಾಕಿ. ನಿಮ್ಮ ಭಾವನೆಗಳಿಗೆ ದನಿಯಾಗುವ ವ್ಯಕ್ತಿಗಳಿಗೆ ಅವಕಾಶ ನೀಡಿ ಎಂದು ಕುಮಾರಸ್ವಾಮಿ ಅವರು ಮನವಿ ಮಾಡಿದರು.