
ಬೆಂಗಳೂರು: ವಿಶ್ವಬ್ಯಾಂಕ್ ನೆರವಿನಿಂದ ಕೈಗೊಳ್ಳಲಾಗುತ್ತಿರುವ ಮಳೆ ನೀರು ಕಾಲುವೆಗಳ ಅಭಿವೃದ್ಧಿ ಕಾಮಗಾರಿಗಳನ್ನು ವೇಗಗೊಳಿಸುವ ಹಾಗೂ ಕಾಮಗಾರಿಯಲ್ಲಿ ಸಮನ್ವಯಾತ್ಮಕ ಕಾರ್ಯಾಚರಣೆ ಮಾಡಿ
ಮಳೆ ನೀರು ಕಾಲುವೆ ಅಭಿವೃದಿ ಕಾಮಗಾರಿಗಳಿಗೆ ಪ್ರಥಮ ಆದ್ಯತೆಯಲ್ಲಿ ಪೂರ್ಣಗೊಳಿಸಿ ಎಂದು ಬೆಂಗಳೂರು ಪೂರ್ವ ನಗರ ಪಾಲಿಕೆ ಡಿ.ಎಸ್. ರಮೇಶ್ ತಿಳಿಸಿದರು.
ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿಶ್ವಬ್ಯಾಂಕ್ ನೆರವಿನಿಂದ ಕೈಗೊಳ್ಳಲಾಗುತ್ತಿರುವ ಮಳೆ ನೀರು ಕಾಲುವೆಗಳ ಅಭಿವೃದ್ಧಿ ಕಾಮಗಾರಿಗಳನ್ನು ವೇಗಗೊಳಿಸುವ ಹಾಗೂ ಕಾಮಗಾರಿಯಲ್ಲಿ ಸಮನ್ವಯಾತ್ಮಕ ಕಾರ್ಯಾಚರಣೆ ಖಚಿತಪಡಿಸುವ ನಿಟ್ಟಿನಲ್ಲಿ ಪೂರ್ವ ನಗರ ಪಾಲಿಕೆ *ಆಯುಕ್ತರಾದ ಡಿ.ಎಸ್. ರಮೇಶ್* ರವರು ಅಧಿಕಾರಿಗಳೊಂದಿಗೆ ಸಮನ್ವಯ ಸಭೆಯನ್ನು ನಡೆಸಿದರು.
ವಿಶ್ವಬ್ಯಾಂಕ್ ಅನುದಾನದಡಿ ನಡೆಯುತ್ತಿರುವ ಮಳೆ ನೀರು ಕಾಲುವೆಗಳ ಅಭಿವೃದ್ಧಿ ಮತ್ತು ನವೀಕರಣ ಕಾಮಗಾರಿಗಳ ಪ್ರಗತಿ ಪರಿಶೀಲನೆ, ಕಾಲುವೆಗಳ ಗಡಿ ಗುರುತಿಸುವಿಕೆ, ಒತ್ತುವರಿ ತೆರವು ಹಾಗೂ ಮುಂಗಾರು ಪೂರ್ವ ಸಿದ್ಧತೆ ಕ್ರಮಗಳನ್ನು ಸಮನ್ವಯದಿಂದ ಜಾರಿಗೊಳಿಸುವುದು ಸಭೆಯ ಮುಖ್ಯ ಉದ್ದೇಶವಾಗಿದೆ ಎಂದು ಆಯುಕ್ತರು ತಿಳಿಸಿದರು.

*ಸಭೆಯಲ್ಲಿ ನೀಡಲಾದ ನಿರ್ದೇಶನಗಳು*
* ನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿಶ್ವಬ್ಯಾಂಕ್ ಅನುದಾನದಡಿ ಕೈಗೊಳ್ಳಲಾಗುತ್ತಿರುವ ಕಾಲುವೆಗಳ ಅಭಿವೃದ್ಧಿ, ನಿರ್ವಹಣೆ, ಕಾಮಗಾರಿ ಅನುಷ್ಠಾನ ಹಾಗೂ ಪ್ರದೇಶದ ಒಟ್ಟಾರೆ ಜವಾಬ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ಯೋಜನಾ ಅನುಷ್ಠಾನ ಘಟಕದ ಅಧಿಕಾರಿಗಳಾಗಿರುತ್ತದೆ ಎಂದು ಆಯುಕ್ತರು ಸೂಚಿಸಿದರು.
* ಕಾಲುವೆಗಳ ಗಡಿ ಗುರುತಿಸುವಿಕೆ ಹಾಗೂ ಒತ್ತುವರಿ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸುವ ಮೂಲಕ ಯೋಜನಾ ಅನುಷ್ಠಾನ ಘಟಕವು ಕಾಲುವೆಗಳ ಒತ್ತುವರಿ ತೆರವುಗೊಳಿಸಿ ಅಭಿವೃದ್ಧಿ ಕಾಮಗಾರಿ ನಡೆಸುವ ಸಂಪೂರ್ಣ ಹೊಣೆಯನ್ನು ಹೊಂದಿರುತ್ತದೆ ಎಂದು ಆಯುಕ್ತರು ಸೂಚಿಸಿದರು.
* ಮುಂಗಾರು ಮಳೆಯ ಹಿನ್ನಲೆಯಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಸೇರಿದಂತೆ ತುರ್ತು ಕಾಮಗಾರಿಗಳು ಹಾಗೂ ಆದ್ಯತೆಯ ಕಾಮಗಾರಿಗಳನ್ನು ಯೋಜನಾ ಅನುಷ್ಠಾನ ಘಟಕವು ಕೂಡಲೇ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಳೆಗಾಲದ ಸಂದರ್ಭದಲ್ಲಿ ನಗರದಲ್ಲಿ ನೀರು ನಿಲ್ಲುವ ಸಮಸ್ಯೆಗಳನ್ನು ತಡೆಗಟ್ಟಲು, ಕಾಲುವೆಗಳ ಅಭಿವೃದ್ಧಿ ಕಾಮಗಾರಿಗಳನ್ನು ವೇಗವಾಗಿ ಮತ್ತು ಗುಣಮಟ್ಟದೊಂದಿಗೆ ಪೂರ್ಣಗೊಳಿಸುವುದು ಅತ್ಯಂತ ಅಗತ್ಯವಾಗಿದ್ದು, ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ, ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.
ಇಂದಿನ ಸಭೆಯಲ್ಲಿ ಅಪರ ಆಯುಕ್ತರು (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್, ಮುಖ್ಯ ಅಭಿಯಂತರರು ಕೃಷ್ಣಮೂರ್ತಿ, ಕಾರ್ಯಪಾಲಕ ಅಭಿಯಂತರರು (ಕಾಡುಗೋಡಿ ವಿಭಾಗ), ಕಾರ್ಯಪಾಲಕ ಅಭಿಯಂತರರು ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರರು (ಎಸ್‌ಡಬ್ಲ್ಯೂಡಿ ವಿಭಾಗ), ಯೋಜನಾ ಅನುಷ್ಠಾನ ಘಟಕದ ಅಧಿಕಾರಿಗಳು ಹಾಗೂ ಇನ್ನಿತರೆ ಅಧಿಕಾರಿಗಳು ಹಾಜರಿದ್ದರು.