LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಂತರ್ ಇಲಾಖೆಗಳ ಸಮನ್ವಯದೊಂದಿಗೆ ಕೆಲಸ ಮಾಡಿ: ಕೃಷ್ಣ ಬೈರೇಗೌಡ

ಬೆಂಗಳೂರು :  ಬೆಂಗಳೂರು ನಗರದ ಅಭಿವೃದ್ಧಿ ಹಾಗೂ ನಾಗರಿಕರಿಗೆ ಗುಣಮಟ್ಟದ ಸೇವೆ ಒದಗಿಸುವ ದೃಷ್ಟಿಯಿಂದ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ ನಗರದಲ್ಲಿ ವ್ಯವಸ್ಥಿತ ಬದಲಾವಣೆ ತರಬೇಕು ಎಂದು *ಕಾರ್ಯಕಾರಿ ಸಮಿತಿಯ ಅಧ್ಯಕ್ಷರು ಹಾಗೂ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ* ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.news_1782314415_0_819.webp

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿವಿಧ ಇಲಾಖೆಗಳನ್ನೊಳಗೊಂಡ ಕಾರ್ಯಕಾರಿ ಸಮಿತಿಯ ಸದಸ್ಯರೊಂದಿಗೆ ವಿಕಾಸಸೌಧದ ಕೊಠಡಿ ಸಂಖ್ಯೆ 222ರಲ್ಲಿ ಇಂದು ನಡೆದ ಮಹತ್ವದ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಗರದ ನಾಗರಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳು ಹಲವು ವರ್ಷಗಳಿಂದ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.

ಪಾಲಿಕೆ, ಜಲಮಂಡಳಿ, ಬಿಎಂಟಿಸಿ, ಮೆಟ್ರೋ, ಕೆಪಿಟಿಸಿಎಲ್, ಬೆಸ್ಕಾಂ, ಕೆ-ರೈಡ್ ಸೇರಿದಂತೆ ವಿವಿಧ ಇಲಾಖೆಗಳು ಸಮನ್ವಯವಿಲ್ಲದೆ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿರುವುದು ನಗರದ ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ. ಒಂದೆಡೆ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡ ಕೆಲವೇ ತಿಂಗಳಲ್ಲಿ ಮತ್ತೊಂದು ಇಲಾಖೆ ಅದೇ ರಸ್ತೆಯನ್ನು ಅಗೆಯುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುವುದಲ್ಲದೆ, ಹಣವೂ ವ್ಯರ್ಥವಾಗುತ್ತಿದೆ. ಇಂತಹ ಪರಿಸ್ಥಿತಿ ಮರುಕಳಿಸದಂತೆ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದರು.

ನಗರದ ಅಭಿವೃದ್ಧಿಗೆ ಇಲಾಖೆಗಳ ನಡುವೆ ಸಮನ್ವಯ ಅತ್ಯಗತ್ಯ ಎಂಬುದನ್ನು ಮನಗಂಡು ಮಾನ್ಯ ಮುಖ್ಯಮಂತ್ರಿಗಳು ಜಿಬಿಎ ರಚಿಸಿದ್ದು, ಅದರ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳನ್ನು ಒಗ್ಗೂಡಿಸುವ ವ್ಯವಸ್ಥೆಯನ್ನು ಕಾಯ್ದೆಯಲ್ಲಿ ಕಲ್ಪಿಸಲಾಗಿದೆ. ಕಳೆದ 30-40 ವರ್ಷಗಳಿಂದ ಮುಂದುವರಿದಿರುವ ಸಮನ್ವಯದ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದಲೇ ವಿವಿಧ ಇಲಾಖೆಗಳ ಮುಖ್ಯಸ್ಥರನ್ನು ಒಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದರು.

ಈ ಕಾರ್ಯಕಾರಿ ಸಮಿತಿಯ ಮೂಲಕ ಪ್ರತಿ ಎರಡು ತಿಂಗಳಿಗೊಮ್ಮೆ ಸಭೆ ನಡೆಸಿ, ಇಲಾಖಾವಾರು ಸಮಸ್ಯೆಗಳು, ಪ್ರಗತಿಯಲ್ಲಿರುವ ಯೋಜನೆಗಳು ಹಾಗೂ ಪರಸ್ಪರ ಸಹಕಾರ ಅಗತ್ಯವಿರುವ ವಿಷಯಗಳ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು. ಅಗತ್ಯವಿದ್ದಲ್ಲಿ ಪ್ರತಿ ತಿಂಗಳೂ ಕಾರ್ಯಕಾರಿ ಸಮಿತಿಯ ಸಭೆ ನಡೆಸಲಾಗುವುದು ಎಂದು ಹೇಳಿದರು.

ಮಾರ್ಚ್ ತಿಂಗಳಲ್ಲಿ ಮೊದಲ ಸಭೆ ನಡೆದಿದ್ದು, ಇಂದು ಎರಡನೇ ಸಭೆ ನಡೆಸಲಾಗಿದೆ. ಯಾವುದೇ ಯೋಜನೆ ಅಥವಾ ಕಾಮಗಾರಿ ಕೈಗೆತ್ತಿಕೊಳ್ಳುವ ಮೊದಲು ಸಂಬಂಧಿತ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುವುದು ಕಡ್ಡಾಯವಾಗಬೇಕು ಎಂಬ ಉದ್ದೇಶದಿಂದ ಜಿಬಿಎ ಕಾಯ್ದೆಯಲ್ಲಿ ಈ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಒಂದು ಅಥವಾ ಎರಡು ಸಭೆಗಳಿಂದಲೇ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ಹೇಳುವುದಿಲ್ಲ. ಬೃಹತ್ ಮೂಲಸೌಕರ್ಯ ಯೋಜನೆಗಳು, ಮೆಟ್ರೋ ಕಾಮಗಾರಿ, ಲಾಸ್ಟ್ ಮೈಲ್ ಸಂಪರ್ಕ, ರಸ್ತೆ ಅಭಿವೃದ್ಧಿ ಸೇರಿದಂತೆ ಹಲವು ವಿಷಯಗಳಲ್ಲಿ ಸಮಗ್ರ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ನಿರಂತರ ಸಭೆಗಳನ್ನು ನಡೆಸಲಾಗುವುದು. ಇಲಾಖೆಗಳ ನಡುವಿನ ಸಮನ್ವಯವನ್ನು ಹೆಚ್ಚಿಸಲು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದೇನೆ ಎಂದು ಹೇಳಿದರು.

ವರ್ಷಗಳಿಂದ ಮುಂದುವರಿದಿರುವ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯನ್ನು ನಿವಾರಿಸುವುದು ಸುಲಭದ ಕೆಲಸವಲ್ಲ. ಆದರೆ ಎಲ್ಲ ಇಲಾಖೆಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ನಗರದ ಅಭಿವೃದ್ಧಿಯಲ್ಲಿ ಗಮನಾರ್ಹ ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟರು.

*ಟೀಮ್ ಆಗಿ ಕೆಲಸ ಮಾಡಿ:*

ನಗರದಲ್ಲಿನ ಇಲಾಖೆಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವ ಮನೋಭಾವದಿಂದ ಹೊರಬಂದು ಒಂದೇ ತಂಡದಂತೆ ಕೆಲಸ ಮಾಡಬೇಕು. ತಂಡವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ನಗರದಲ್ಲಿ ಪರಿಣಾಮಕಾರಿ ಬದಲಾವಣೆ ತರಲು ಹಾಗೂ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಲು ಸಾಧ್ಯವಾಗುತ್ತದೆ. ಆಡಳಿತ ವ್ಯವಸ್ಥೆಯಲ್ಲಿ ಅಗತ್ಯವಾದ ಪರಿವರ್ತನೆ ತಂದು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

*ಜಿಐಎಸ್ ಆಧಾರಿತ ಡ್ಯಾಶ್‌ಬೋರ್ಡ್ ರಚನೆ:*

ನಗರದಲ್ಲಿನ ವಿವಿಧ ಇಲಾಖೆಗಳು ಕೈಗೆತ್ತಿಕೊಂಡಿರುವ ಕಾಮಗಾರಿಗಳು, ಅಭಿವೃದ್ಧಿ ಯೋಜನೆಗಳು, ರಸ್ತೆಗಳ ಮಾಹಿತಿ, ಬೀದಿ ದೀಪಗಳು, ಜಲಮಂಡಳಿ ಮೂಲಸೌಕರ್ಯ, ಪ್ರಗತಿಯಲ್ಲಿರುವ ಕಾಮಗಾರಿಗಳು ಸೇರಿದಂತೆ ಎಲ್ಲಾ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಲಭ್ಯವಾಗುವಂತೆ ಜಿಐಎಸ್ ಆಧಾರಿತ ಡ್ಯಾಶ್‌ಬೋರ್ಡ್ ಅಭಿವೃದ್ಧಿಪಡಿಸಲು ಸೂಚನೆ ನೀಡಿದ್ದೇನೆ. ಸಾರ್ವಜನಿಕರು ಹಾಗೂ ಅಧಿಕಾರಿಗಳು ಸಮಗ್ರ ಮಾಹಿತಿಯನ್ನು ಒಂದೇ ಸ್ಥಳದಲ್ಲಿ ಪಡೆಯಲು ಅನುಕೂಲವಾಗುವಂತೆ ಈ ವ್ಯವಸ್ಥೆಯನ್ನು ಶೀಘ್ರದಲ್ಲೇ ಕಾರ್ಯರೂಪಕ್ಕೆ ತರಲು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲಾಗಿದೆ ಎಂದು ಹೇಳಿದರು.

*ಪಾದಚಾರಿಗಳ ಮರಣ ಸರಿಯೇ?:*

ನಗರದಲ್ಲಿ ಪಾದಾಚಾರಿ ಒತ್ತುವರಿ ತೆರವಿನಿಂದ ಬಡವರು ಸಂಕಷ್ಟಕ್ಕೀಡಾಗುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರಲ್ಲಿ ಪಾದಾಚಾರಿ ಮಾರ್ಗ ಒತ್ತುವರಿಯಿಂದ ಅಪಘಾತಕ್ಕೆ ಕನಿಷ್ಠ 300 ಜನ ಸಾವನ್ನಪ್ಪುತ್ತಿದ್ದಾರೆ. ಇದು ಸರಿನಾ? ಇವರ ಸಾವಿಗೆ ಯಾರು ಹೊಣೆ? ಮೃತರ ಕುಟುಂಬಗಳಿಗೆ ನೀವೇನು ಉತ್ತರ ನೀಡುತ್ತೀರಿ? ವಯೋವೃದ್ಧರು ರಸ್ತೆಯಲ್ಲಿ ನಡೆಯಲು ಪಡುವ ಪಡಿಪಾಟಲಿನ ಬಗ್ಗೆ ನಿಮಗೆ ತಿಳಿದಿಲ್ಲವೇ? ಎಂದು ಬೇಸರ ಹೊರಹಾಕಿದರು. 

ಈ ವಿಚಾರವನ್ನು ಎಷ್ಟು ಸಾರಿ ಹೇಳಿದರೂ ಹಲವರು ಅರ್ಥವಾಗದವರಂತೆಯೇ ಪ್ರತಿಕ್ರಿಯಿಸುತ್ತಿದ್ದಾರೆ. ಅಸಲಿಗೆ ನಗರದ ಶೇ.20 ರಷ್ಟು ರಸ್ತೆಗಳಲ್ಲಿ ಮಾತ್ರ ನಾವು ಒತ್ತುವರಿ ತೆರವು ಮಾಡುತ್ತಿದ್ದೇವೆ, ಉಳಿದ ರಸ್ತೆಗಳಲ್ಲಿ ರಸ್ತೆಬದಿ ವ್ಯಾಪಾರಿಗಳು ಬದುಕು ಕಟ್ಟಿಕೊಳ್ಳಲು ಸ್ವತಂತ್ರ್ಯರು ಎಂದು ತಿಳಿಸಿದರು. 

ಸಭೆಯಲ್ಲಿ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಮುಖ್ಯ ಆಯುಕ್ತ ಮಹೇಶ್ವರ್ ರಾವ್, ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್ ಹಾಗೂ ನಿತೀಶ್, ಬಿಡಿಎ ಆಯುಕ್ತ ಮಣಿವಣ್ಣನ್, ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಜಲಮಂಡಳಿ ಅಧ್ಯಕ್ಷೆ ಮಂಜುಳಾ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್, ನಗರ ಪಾಲಿಕೆ ಆಯುಕ್ತ ರಮೇಶ್ ಡಿ.ಎಸ್., ಪೊಮ್ಮಲ್ ಸುನೀಲ್ ಕುಮಾರ್, ಜಿ. ಜಗದೀಶ್, ರಮೇಶ್ ಕೆ.ಎನ್., ಡಾ. ರಾಜೇಂದ್ರ ಕೆ.ವಿ., ಕೆ-ರೈಡ್ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಸಿಂಗ್ ಹಾಗೂ ಅಗ್ನಿಶಾಮಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಲವ್ ಜಿಹಾದ್’ ತಡೆಗೆ ಹಿಂದೂ ಧರ್ಮ, ಸಂಸ್ಕೃತಿ ನಿಷ್ಠೆಯಿಂದ ಪಾಲಿಸುವುದು ಅತ್ಯಗತ್ಯ! - ಸದ್ಗುರು ಸ್ವಾತಿ ಖಾಡ್ಯೆಎಸ್ ಟಿಪಿ‌ ಘಟಕಗಳಲ್ಲಿ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿ: ಜಲಮಂಡಳಿ ಅಧ್ಯಕ್ಷರಾದ ಎನ್.ಮಂಜುಳ ಕರೆವಚನ ಸಾಹಿತ್ಯವನ್ನು ಬೆಳಕಿಗೆ ತಂದಿದ್ದೇ ಫ.ಗು.ಹಳಕಟ್ಟಿ: ಎಂ ಬಿ ಪಾಟೀಲಜುಲೈ 4ರಂದು ನಡೆಯಬೇಕಿದ್ದ "ನನ್ನ ಇ-ಖಾತಾ, ನನ್ನ ಹಕ್ಕು" ಅಭಿಯಾನ ರದ್ದು – ಮಹೇಶ್ವರ್ ರಾವ್ಅಂತರ್ ಇಲಾಖೆಗಳ ಸಮನ್ವಯದೊಂದಿಗೆ ಕೆಲಸ ಮಾಡಿ: ಕೃಷ್ಣ ಬೈರೇಗೌಡಪ್ರಯಾಣಿಕರ ಹಿತದೃಷ್ಟಿಯಿಂದ ಸರ್ಕಾರಿ ಬಸ್ಸಿನ ಕಿಟಕಿಗಳಿಗೆ ಕಬ್ಬಿಣದ ಸರಳು ಅಳವಡಿಸಲು ಪತ್ರಪ್ರಯಾಣಿಕರ ಗಮನಿಸಿ, ಯುಪಿಐ ಪಾವತಿ ಮಾಡುವಾಗ ಇಟಿಎಂನಲ್ಲಿನ (ETM) ಡೈನಾಮಿಕ್ ಕ್ಯೂಆರ್ (QR) ಕೋಡ್ ಮಾತ್ರ ಸ್ಕ್ಯಾನ್ ಮಾಡಿಪಾದಚಾರಿಗಳ ಸುಗಮ ಸಂಚಾರಕ್ಕೆ ಒತ್ತುವರಿ ತೆರವು ಅನಿವಾರ್ಯ: ಜಗದೀಶ್ ರಾಮನಗರದಲ್ಲಿ SIR ನಿಯಮ ಉಲ್ಲಂಘನೆ; ಚುನಾವಣಾ ಆಯೋಗದ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕೆಂಡಾಮಂಡಲ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಮುಖಂಡರೊಂದಿಗೆ ಹೆಚ್.ಡಿ. ಕುಮಾರಸ್ವಾಮಿ ಮಹತ್ವದ ಸಮಾಲೋಚನೆ