ಬೆಂಗಳೂರು : ಸಚಿವರಾಗಿದ್ದ ನಾಗೇಂದ್ರ ಅವರು ಸಾರ್ವಜನಿಕ ಜೀವನದಲ್ಲಿ ನೈತಿಕ ಹೊಣೆಗಾರಿಕೆ ಹೊತ್ತು ರಾಜೀನಾಮೆ ನೀಡಿದ್ದಾರೆ. ಇದು ಬಿಜೆಪಿಯ ಗೆಲುವೂ ಅಲ್ಲ, ವಿಪಕ್ಷ ನಾಯಕರ ಹೋರಾಟದ ಗೆಲುವೂ ಅಲ್ಲ. ಇದೊಂದು ದಲಿತ ಸಮುದಾಯ ನಾಯಕರ ಮೇಲಿನ ಷಡ್ಯಂತ್ರ- ಕುತಂತ್ರಕ್ಕೆ ಸಿಕ್ಕ ಗೆಲುವು. 
ಬಿಜೆಪಿ ನಾಯಕರು ನಾಗೇಂದ್ರರ ರಾಜೀನಾಮೆಯನ್ನು “ಒಂದು ವಿಕೆಟ್ ಬಿದ್ದಿದೆ” ಎಂದು ಸಂಭ್ರಮಿಸುತ್ತಿದ್ದಾರೆ. ರಾಜಲೀಯ ಎಂದರೆ ಐಪಿಎಲ್ ಕ್ರಿಕೆಟ್ ಪಂದ್ಯವಲ್ಲ. ವಿಕೆಟ್ ಬಿದ್ದಿದೆ ಎನ್ನುವವರು ಮೊದಲು ಬಿಜೆಪಿ ತಂಡದಲ್ಲಿ ಎಷ್ಟು ಜನ ಚಾರ್ಜ್‌ಶೀಟ್ ಹಾಕಿಸಿಕೊಂಡಿದ್ದಾರೆ, ಜೈಲುವಾಸ ಅನುಭವಿಸಿದ್ದಾರೆ, ತನಿಖೆ ಎದುರಿಸುತ್ತಿದ್ದಾರೆ, ಜಾಮೀನಿನ ಮೇಲೆ ಹೊರಗಡೆ ಇದ್ದು ಎಷ್ಟು ಜನ ಬ್ಯಾಟಿಂಗ್, ಬೌಲಿಂಗ್ ಮಾಡುತ್ತಿದ್ದಾರೆ ಎಂದು ನೋಡಿಕೊಳ್ಳಲಿ. ಆರೋಪ ಮಾಡುವುದು ತನಿಖಾ ಸಂಸ್ಥೆಗಳ ಕೆಲಸ; ಅಪರಾಧಿ ಹೌದೋ ಅಲ್ಲವೋ ತೀರ್ಮಾನಿಸುವುದು ನ್ಯಾಯಾಲಯದ ಕೆಲಸ. ಬಿಜೆಪಿ ಕಚೇರಿ ನ್ಯಾಯಾಲಯವೂ ಅಲ್ಲ. ಬಿಜೆಪಿ ನಾಯಕರು ನ್ಯಾಯಧೀಶರೂ ಅಲ್ಲ ತೀರ್ಪು ಕೊಡಲು. ವಾಲ್ಮೀಕಿ ನಿಗಮದಲ್ಲಿ ಹಗರಣ ನಡೆದಿದೆ ಎಂದ ತಕ್ಷಣ ನಮ್ಮ ಸರ್ಕಾರ ಎಸ್ಐಟಿ ತನಿಖೆಗೆ ಆದೇಶ ಮಾಡಿತ್ತು. ತನಿಖೆಯಿಂದ ಸತ್ಯಾಸತ್ಯತೆ ಹೊರಗಡೆ ಬಂದು, ಅಧಿಕಾರಿಗಳ ಮೇಲೆ ಕ್ರಮಕೂಡ ತೆಗದುಕೊಂಡಿದ್ದೇವೆ. ಇದನ್ನು ಮೀರಿ ಇಡಿ ತನಿಖೆ ನಡೆಸಿದೆ. ಆದರೂ ಕೂಡ ನಾಗೇಂದ್ರ ಸಹಕಾರ ನೀಡಿದ್ದಾರೆ. ಅನಗತ್ಯವಾಗಿ ಒಬ್ಬ ದಲಿತ ಸಮುದಾಯದ ಜನಪ್ರತಿನಿಧಿಯನ್ನ ಯಾವುದೇ ಸಾಕ್ಷ್ಯ ಇಲ್ಲದೆ ಜೈಲಿಗೆ ಕಳಿಸಿದರು. ಇದಕ್ಕೆ ಕಾರಣ ಒಂದೇ ನಾಗೇಂದ್ರ ಬಿಜೆಪಿಗೆ ಸೇರಲಿಲ್ಲ ಎಂಬ ಕಾರಣವೇ ಹೊರತು ಬೇರೆ ಏನೂ ಇರಲಿಲ್ಲ. ತನಿಖೆಯಲ್ಲಿ ನಾಗೇಂದ್ರ ಅವರ ಪಾತ್ರವೇ ಇಲ್ಲ ಎಂದು ರಿಪೋರ್ಟ್ ಬಂದಿದೆ. ನಾಗೇಂದ್ರ ಅವರಿಗೆ ಜಾಮೀನು ನೀಡುವಾಗ ಕೋರ್ಟ್ ಏನು ಹೇಳಿದೆ ಎಂದು ಬಿಜೆಪಿ ನಾಯಕರು ಅರ್ಥಮಾಡಿಕೊಳ್ಳಬೇಕು. ED ತನಿಖೆಯ ಪ್ರಕಾರ ₹94.73 ಕೋಟಿ ಹಣವನ್ನು ನಾಗೇಂದ್ರ ಸ್ವೀಕರಿಸಿದ್ದಾರೆ ಅಥವಾ ಬಳಸಿದ್ದಾರೆ ಎಂಬುದನ್ನು ತೋರಿಸುವ ಸಾಕ್ಷ್ಯ ನೀಡಿಲ್ಲ ಎಂದು ವಿಶೇಷ ನ್ಯಾಯಾಲಯವೇ ಜಾಮೀನು ಆದೇಶದಲ್ಲಿ ದಾಖಲಿಸಿದೆ. SIT ಚಾರ್ಜ್‌ಶೀಟ್‌ನಲ್ಲೂ ನಾಗೇಂದ್ರ ಆರೋಪಿಯಾಗಿರಲಿಲ್ಲ.ವಾಲ್ಮೀಕಿ ಹಗರಣವನ್ನು CBI ತನಿಖೆ ಮಾಡಲಿ, ED ತನಿಖೆ ಮಾಡಲಿ, ದಾಖಲೆ ಇದ್ದರೆ ನ್ಯಾಯಾಲಯದಲ್ಲಿ ಸಾಬೀತುಪಡಿಸಲಿ. ಆದರೆ ಆರೋಪವನ್ನೇ ಶಿಕ್ಷೆಯಾಗಿ ಬಿಂಬಿಸುವ ರಾಜಕೀಯವನ್ನು ಒಪ್ಪಲು ಸಾಧ್ಯವಿಲ್ಲ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇದ್ದರೆ ಬಳ್ಳಾರಿಯಿಂದಲೇ ಚರ್ಚೆ ಮಾಡೋಣ ಬನ್ನಿ. 2011ರ ಲೋಕಾಯುಕ್ತ ಅಕ್ರಮ ಗಣಿಗಾರಿಕೆ ವರದಿ, ರೆಡ್ಡಿ ಸಹೋದರರು ಹಾಗೂ ಆ ಕಾಲದ ಬಳ್ಳಾರಿ ರಾಜಕಾರಣ ಇವೆಲ್ಲವನ್ನೂ ಕರ್ನಾಟಕದ ಜನ ಮರೆತಿಲ್ಲ. ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮೂರು ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿದ್ದರು. ನಂತರ ವಿಶೇಷ CBI ನ್ಯಾಯಾಲಯ ಶಿಕ್ಷೆಯನ್ನೂ ವಿಧಿಸಿತು ಇವರೆಲ್ಲ ಭ್ರಷ್ಟಾಚಾರದ ಕುರಿತು ಮಾತನಾಡುತ್ತಾರೆ. ಸ್ವಂತ ತಂದೆಯನ್ನೇ ಚೆಕ್ ನಲ್ಲಿ ಲಂಚ ತೆಗೆದುಕೊಂಡು ಜೈಲಿಗೆ ಕಳಿಸಿದ ಜೂನಿಯರ್ ಯಡಿಯೂರಪ್ಪ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ನೈತಿಕತೆ ಇದೆಯೇ? ಬಿ.ಎಸ್. ಯಡಿಯೂರಪ್ಪ 2011ರಲ್ಲಿ ನ್ಯಾಯಾಂಗ ಬಂಧನಕ್ಕೆ ಹೋಗಿದ್ದನ್ನು ಕರ್ನಾಟಕ ಮರೆತಿಲ್ಲ. ನಾಗೇಂದ್ರ “small fish” ಎಂದು ನೀವು ವಿಜಯೇಂದ್ರ ಹೇಳಿದ್ದಾರೆ. ಹಾಗಾದರೆ ನಿಮ್ಮ ಬಳಿ ‘big fish’ ಯಾರು ಎಂಬ ದಾಖಲೆ ಇದ್ದರೆ, ಬಿಜೆಪಿಯವರ ಭಾಷೆಯಲ್ಲಿ ಹೇಳುವುದಾದರೆ ಧಮ್ಮು, ತಾಕತ್ ಇದ್ದರೆ ಸಾಬೀತು ಮಾಡಲಿ. 2014 ನಂತರ ಕೇಂದ್ರ ತನಿಖಾ ಸಂಸ್ಥೆಗಳ ಕ್ರಮ ಎದುರಿಸುತ್ತಿದ್ದ 25 ಪ್ರಮುಖ ವಿರೋಧ ಪಕ್ಷದ ನಾಯಕರು ಬಿಜೆಪಿ ಅಥವಾ ಬಿಜೆಪಿ ನೇತೃತ್ವದ ಮೈತ್ರಿಗೆ ಹೋದರು. 23 ಪ್ರಕರಣಗಳಲ್ಲಿ ಅವರಿಗೆ ರಿಲೀಫ್ ಸಿಕ್ಕಿದೆ. ಮೂರು ಪ್ರಕರಣಗಳು ಮುಚ್ಚಲ್ಪಟ್ಟಿದೆ. ನಾಖಾವೂಂಗಾ ನಾ ಖಾನೇದೂಂಗಾ ಎಂದು ಹೇಳುತ್ತಿದ್ದ ಪ್ರಧಾನಿಗಳೇ ಭ್ರಷ್ಟಾರಿಗಳ ಜೊತೆಗೆ ಶಾಮೀಲಾಗಿದ್ದಾರೆ. ಭ್ರಷ್ಟರನ್ನೇ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಈಗ ನಾಗೇಂದ್ರ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ. ಬಿಜೆಪಿಯವರು ನಿರುದ್ಯೋಗಿಗಳು ಪಾದಯಾತ್ರೆ ಮಾಡುವುದಾದರೆ ಮಾಡಲಿ, ಆರೋಗ್ಯದ ಹಿತದೃಷ್ಟಿಯಿಂದ ಒಳ್ಳೆಯದು. ಆದರೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಬಿಜೆಪಿಯವರಿಗಿಲ್ಲ. ನಾಗೇಂದ್ರ ನಾಲ್ಕು ಬಾರಿ ಶಾಸಕರಾಗಿದ್ದವರು. ಎಸ್ಟಿ ಸಮುದಾಯದ ಬಲಿಷ್ಟ ನಾಯಕರು. ಅವರನ್ನು ಪಕ್ಷ ನಡುನೀರಿನಲ್ಲಿ ಕೈ ಬಿಡುವುದಿಲ್ಲ. ಸೂಕ್ತ ಸ್ಥಾನಮಾನ ನೀಡುತ್ತೇವೆ. ಬರದ ಬಗ್ಗೆ ಚರ್ಚೆ ಮಾಡಲು ಬಿಜೆಪಿಗೆ ಧೈರ್ಯ ಇಲ್ಲ, ಸದನದಲ್ಲಿ ಚರ್ಚೆ ಮಾಡಿದರೆ ಕೇಂದ್ರದಿಂದ ಬರುವ ಪಾಲನ್ನು ಕೇಳುತ್ತೇವೆ ಎಂದು ಬಿಜೆಪಿ ನಾಯಕರು ಚರ್ಚೆಗೆ ಬರದೆ ನಾಗೇಂದ್ರನ ವಿಷಯದಲ್ಲಿ ಕಲಾಪವನ್ನೇ ಹಾಳು ಮಾಡಿದ್ದಾರೆ. ಇಡಿ ಸಿಬಿಐ ತನಿಖಾ ಸಂಸ್ಥಗಳು ವಿರೋಧ ಪಕ್ಷದ ನಾಯಕರ ಮೇಲೆ ಮಾತ್ರ ತನಿಖೆ ನಡೆಸುತ್ತಿದೆ. ರಾಜ್ಯಪಾಲರು ತ್ರಿಶಂಕುವಿನಲ್ಲಿದ್ದಾರೆ. ರಾಜ್ಯಪಾಲರ ಕಚೇರಿ ಮೇಲೆ ಕೇಂದ್ರದವರು ಒತ್ತಡ ಹಾಕಿ ಪ್ರಾಸಿಕ್ಯೂಷನ್ ಗೆ ಪರ್ಮಿಷನ್ ಕೊಡಿಸುತ್ತಾರೆ. ಬಿಜೆಪಿ ನಾಯಕರು ಯಾರೂ ಸತ್ಯಹರಿಶ್ಚಂದ್ರರಲ್ಲ. ಆಪಾದನೆ ಬಂದ ತಕ್ಷಣ ಯಾರಾದರೂ ರಾಜೀನಾಮೆ ನೀಡಿದ್ದಾರಾ? ಬಿಜೆಪಿಯವರಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ.