ಬೆಂಗಳೂರು : ಕಳೆದ 1999-2004ರ ಅವಧಿಯಲ್ಲಿ ಬೆಂಗಳೂರಿನ ಹೆಚ್ಎಂಟಿ ಜಾಗದ ಲೂಟಿಯಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರದ ನಗರಾಭಿವೃದ್ಧಿ ಖಾತೆಯ ಸಚಿವರ ನೇರ ಪಾತ್ರವಿದೆಯೆಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆಯ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ನೇರವಾಗಿ ಆರೋಪ ಮಾಡಿದರು.
1999-2004ರ ಅವಧಿಯಲ್ಲಿ ಹೆಚ್ಎಂಟಿ ಕಂಪನಿಗೆ ಸೇರಿದ 175 ಎಕರೆ ಭೂಮಿಯ ಪರಭಾರೆ ಆಗಿದ್ದು, ಆ ಪೈಕಿ ಖಾಸಗಿ ಶಕ್ತಿಗಳು ಅಕ್ರಮವಾಗಿ ಲೂಟಿ ಹೊಡೆದು ಭವ್ಯವಾದ ಕಟ್ಟಡಗಳನ್ನು ನಿರ್ಮಾಣ ಮಾಡಿರುವ ಭೂಮಿಯ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅವರಿಂದ ವರದಿ ಬಂದ ನಂತರ ಸೂಕ್ತ ತನಿಖೆ ನಡೆಸಲಾಗುವುದು ಎಂದು ಅವರು ಘೋಷಿಸಿದರು.
ಮೇಲೆ ಉಲ್ಲೇಖ ಮಾಡಿರುವ ಅವಧಿಯಲ್ಲಿ ಲೂಟಿ ಮಾಡಲಾಗಿರುವ ಭೂಮಿಯನ್ನು ಗುರುವಾರ ಇಡೀ ದಿನ ಸ್ವತಃ ಪರಿಶೀಲನೆ ನಡೆಸಿದ ಕೇಂದ್ರ ಸಚಿವರು; ಹೆಚ್ಎಂಟಿ ಉನ್ನತಾಧಿಕಾರಿಗಳ ಸಭೆ ನಡೆಸಿ, ಗೋಲ್ಮಾಲ್ ನಡೆದಿರುವ ಭೂಮಿ ಬಗ್ಗೆ ಪರಿಪೂರ್ಣ ವರದಿ ಸಲ್ಲಿಸುವಂತೆ ಆದೇಶಿಸಿದರು.
1999-2004ರ ಅವಧಿಯಲಿ ಅಕ್ರಮವಾಗಿ ಪರಭಾರೆ ಮಾಡಲಾಗಿರುವ ಭೂಮಿಯಲ್ಲಿ ತಲೆ ಎತ್ತಿರುವ ಅಪಾರ್ಟ್ಮೆಂಟ್'ಗಳು ಹಾಗೂ ಗಗನಚುಂಬಿ ಕಟ್ಟಡಗಳ ಪ್ರದೇಶಗಳನ್ನು ಗುರುವಾರ ಇಡೀ ದಿನ ಖುದ್ದಾಗಿ ಪರಿಶೀಲಿಸಿದ ಕುಮಾರಸ್ವಾಮಿ ಅವರು, ಮುಖ್ಯವಾಗಿ ಅಕ್ವಿಲಾ ಹೈಟ್ಸ್, ಗೋವಿಯನು ಎರಿಟಿಸ್, ಪ್ರೆಸ್ಟೀಜ್ ಕೆನ್ಸಿಂಗ್ಟನ್ ಗಾರ್ಡನ್, ಕೆಕೆಆರ್ ಎಎಂಆರ್ ರುಬೆ ಅಪಾರ್ಟ್ಮೆಂಟ್ ಸೇರಿದಂತೆ ವಿವಿಧ ಭವ್ಯ ಕಟ್ಟಡಗಳು ಇರುವ ಪ್ರದೇಶಗಳನ್ನು ಮಾಧ್ಯಮ ಪ್ರತಿನಿಧಿಗಳು ಹಾಗೂ ಬೃಹತ್ ಕೈಗಾರಿಕೆ ಸಚಿವಾಲಯದ ಉನ್ನತ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.
ಕೈಗಾರಿಕೆ ಉದ್ದೇಶಕ್ಕಾಗಿ ಮೀಸಲಾಗಿದ್ದ ಹೆಚ್ಎಂಟಿ ಜಾಗವನ್ನು ಲೂಟಿ ಮಾಡುವ ಕೆಲಸದಲ್ಲಿ ಅಂದಿನ ಕಂಪನಿಯ ಅಧಿಕಾರಿಗಳು, ರಾಜ್ಯ ಸರ್ಕಾರದ ಪ್ರಭಾವಿಗಳು ಭಾಗಿಯಾಗಿದ್ದರು. ಅಕ್ರಮವಾಗಿ ಕಬಳಿಸಿರುವ ಈ ಭೂಮಿಯನ್ನು ಈಶ್ವರ ಖಂಡ್ರೆ ಅವರು ರಾಜ್ಯ ಸರ್ಕಾರಕ್ಕೆ ವಾಪಸ್ ಪಡೆಯುತ್ತಾರೆಯೇ ಎಂದು ನೇರವಾಗಿ ಪ್ರಶ್ನಿಸಿದರು ಕೇಂದ್ರ ಸಚಿವರು.
*ಬಿಡದಿ ಟೌನ್ಶಿಪ್ ಮಾಡಲು ಹೊರಟವರೇ ಅಂದು ಹೆಚ್ಎಂಟಿ ಭೂಮಿ ಲಪಟಾಯಿಸಿದರು!!*
ಜಾಗದ ಪರಿಶೀಲನೆ ನಡೆಸಿದ ನಂತರ ಕಿಕ್ಕಿರಿದ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ; ಬೆಂಗಳೂರು ನಗರವನ್ನು ಸಿಂಗಾಪುರ ಮಾಡುತ್ತೇವೆ ಎಂದು ಹೊರಟಿದ್ದವರ ಸರ್ಕಾರದಲ್ಲಿ ನಗರಾಭಿವೃದ್ಧಿ ಮಂತ್ರಿ ಆಗಿದ್ದವರ ಪ್ರಮೇಯದಿಂದ ಹೆಚ್ಎಂಟಿ ಭೂಮಿ ಖಾಸಗಿಯವರ ಪಾಲಾಗಿದೆ ಎಂದು ದೂರಿದರು.
ಈ ರಾಜ್ಯದ ಜನತೆಗೆ ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ಇವತ್ತು ಬಿಡದಿ ಟೌನ್ ಶಿಪ್ ಮಾಡುತ್ತೇನೆ ಎಂದು ಹೊರಟಿರುವ ಮಹಾನುಭಾವನೇ ಅಂದು ಹೆಚ್ಎಂಟಿ ಜಾಗ ಖಾಸಗಿ ಶಕ್ತಿಗಳ ಪಾಲಾಗಲು ಪ್ರಮುಖ ಪಾತ್ರ ವಹಿಸಿದ್ದವರು. 1999-2004ರ ಕಾಂಗ್ರೆಸ್ ಪಕ್ಷದ ಸರ್ಕಾರದಲ್ಲಿ ನಗರಾಭಿವೃದ್ಧಿ ಮಂತ್ರಿಯಾಗಿದ್ದ ವ್ಯಕ್ತಿ ಮಾಡಿರುವ ನಗರಾಭಿವೃದ್ಧಿಯ ಹಣೆಬರಹ ಇದು. ಇವತ್ತು ಪ್ರಜಾಸೇವೆ ಎಂದು ಭಜನೆ ಮಾಡುತ್ತಿರುವ ವ್ಯಕ್ತಿ ಅಂದು ಹೆಚ್‌ಎಂಟಿ ವಿಷಯದಲ್ಲಿ ಮಾಡಿರುವ ಪ್ರಜಾಸೇವೆ ಇಲ್ಲಿ ಯಾವ ರೀತಿ ಇದೆ ಎಂಬುದನ್ನು ನೋಡಿ. ಹೆಚ್ಎಂಟಿಯ ಜಾಗದಲ್ಲಿ ಅಕ್ರಮವಾಗಿ ತಲೆಯೆತ್ತಿರುವ ಖಾಸಗಿ ಅಪಾರ್ಟ್ಮೆಂಟ್'ಗಳು, ಗಗನಚುಂಬಿ ಕಟ್ಟಡಗಳಿಗೆ ಜಾಗ ಕೊಡಿಸಿದವರು ಯಾರು? ಅವುಗಳಲ್ಲಿ ಯಾರು ಯಾರು ವಾಸ ಮಾಡುತ್ತಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಭೂಮಿಯನ್ನು ನುಂಗಿ ನೀರು ಕುಡಿದ ವ್ಯಕ್ತಿಗಳ ಬಗ್ಗೆ ಸಂಪೂರ್ಣ ಮಾಹಿತಿ ಇದೆ ಎಂದು ಸಚಿವ ಕುಮಾರಸ್ವಾಮಿ ಅವರು ದಾಖಲೆ ಮತ್ತು ನಕ್ಷೆಗಳ ಸಮೇತ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
*ಈಶ್ವರ ಖಂಡ್ರೆಗೆ ಸವಾಲು ಹಾಕಿದ ಕೇಂದ್ರ ಸಚಿವರು:*
ಅರಣ್ಯ ಭೂಮಿ.. ಅರಣ್ಯ ಭೂಮಿ.. ಎಂದು ದಿನನಿತ್ಯ ಹೇಳಿಕೆ ನೀಡುವ ಮಿಸ್ಟರ್ ಈಶ್ವರ ಖಂಡ್ರೆ ಅವರೇ; ಹೆಚ್ಎಂಟಿಯ ಜಾಗದಲ್ಲಿ ಅಕ್ರಮವಾಗಿ ಕೊಳ್ಳೆ ಹೊಡೆದವರಲ್ಲಿ ಬೆಂಗಳೂರು, ಬಿಡದಿ ಪ್ರದೇಶಗಳನ್ನು ವಿಶ್ವ ದರ್ಜೆ ಪ್ರದೇಶಗಳನ್ನಾಗಿ ಮಾಡಲು ಹೊರಟಿರುವ ವ್ಯಕ್ತಿಯ ಪಾಲು ಎಷ್ಟಿದೆ ಎಂಬುದನ್ನು ಸ್ವಲ್ಪ ಹೇಳುವಿರಾ? ಎಂದು ಸಚಿವ ಕುಮಾರಸ್ವಾಮಿ ಅವರು ಕಟುವಾಗಿ ಪ್ರಶ್ನಿಸಿದರು.
ಹೆಚ್ಎಂಟಿ ಜಾಗದಲ್ಲಿ ಇಸ್ರೋ ಸೇರಿದಂತೆ ಅನೇಕ ಸಾರ್ವಜನಿಕ ಸ್ವಾಮ್ಯದ ಕಂಪನಿಗಳು ರಾಷ್ಟ್ರಕ್ಕಾಗಿ ಕೆಲಸ ಮಾಡುತ್ತಿವೆ. ಅಂತಹ ಸಂಸ್ಥೆಗಳಿಗೆ ಭೂಮಿಯನ್ನು ಕೊಟ್ಟರೆ ಅದನ್ನು ನಾನು ತಪ್ಪು ಎಂದು ಹೇಳಲು ಹೋಗುವುದಿಲ್ಲ. ಅಮೂಲ್ಯವಾದ ಭೂಮಿ ಭೂಗಳ್ಳರ ಪಾಲಾಗುವುದರ ಬದಲು ಸರ್ಕಾರಿ ಸಂಸ್ಥೆಗಳ ಪಾಲಾದರೆ ಎಷ್ಟೋ ಮೇಲು. ಅಂತಿಮವಾಗಿ ಜನರ ಸೇವೆಗಾಗಿಯೇ ಆ ಭೂಮಿ ಮೀಸಲಾಗಿರುತ್ತದೆ. ಇಲ್ಲಿ ನೋಡಿದರೆ ಖಾಸಗಿ ಪಟ್ಟಭದ್ರ ಹಿತಾಸಕ್ತಿಗಳ ಪಾಲಾಗಿರುವ ಭೂಮಿಯಲ್ಲಿ ಗಗನಚುಂಬಿ ಕಟ್ಟಡಗಳು ಅಕ್ರಮವಾಗಿ ನಿರ್ಮಾಣವಾಗಿವೆ ಎಂದು ಸಚಿವರು ಆರೋಪಿಸಿದರು.
*ಹೆಚ್ಎಂಟಿ ಭೂಮಿ ಅಕ್ರಮ ಪರಭಾರೆ ನಿಲ್ಲಿಸಿದ್ದೇ ನಾನು ಎಂದೇ HDK*
2006ರಲ್ಲಿ ನಾನು ಮುಖ್ಯಮಂತ್ರಿ ಆಗುವ ತನಕ ಹೆಚ್ಎಂಟಿ ಭೂಮಿಯನ್ನು ಮನಸೋ ಇಚ್ಛೆ ನುಂಗಿ ನೀರು ಕುಡಿದರು. ನಾನು ಅಧಿಕಾರಕ್ಕೆ ಬಂದ ಕೂಡಲೇ ಯಾವುದೇ ಕಾರಣಕ್ಕೂ ಹೆಚ್ಎಂಟಿ ಭೂಮಿ ಮಾರಾಟ ಮಾಡುವಂತಿಲ್ಲ ಹಾಗೂ ಅದನ್ನು ನೋಂದಣಿಯನ್ನು ಮಾಡುವಂತಿಲ್ಲ ಎಂದು ಕಟ್ಟಾದೇಶ ಹೊರಡಿಸಿದೆ. ಅದರ ಫಲವಾಗಿಯೇ ಇವತ್ತು ಇಷ್ಟು ಭೂಮಿ ಉಳಿದುಕೊಂಡಿದೆ. ನಿಮಗೆ ಗೊತ್ತಿರಲಿ, ಅಕ್ರಮ ಪರಭಾರೆ ಮಾಡಲಾಗಿರುವ ಜಾಗದಲ್ಲಿ ನಿರ್ಮಿಸಿರುವ ಅಪಾರ್ಟ್ಮೆಂಟ್ ಗಳಿಗೆ ಇನ್ನೂ ಖಾತೆಯೇ ಆಗಿಲ್ಲ. ಅಲ್ಲಿನ ಫ್ಲ್ಯಾಟ್ ಮಾಲೀಕರಿಗೆ ಈವರೆಗೂ ಇ- ಖಾತಾ ಆಗಿಲ್ಲ. ನನ್ನನ್ನು ಭೇಟಿಯಾಗಿದ್ದ ಪ್ಲಾಟುಗಳ ಮಾಲೀಕರು ಖಾತೆ ಮಾಡಿಸಿಕೊಡಿ ಎಂದು ಅರ್ಜಿ ಕೊಟ್ಟಿದ್ದಾರೆ. ಕಟ್ಟಡ ಕಟ್ಟಿ ಇವರಿಗೆ ಮಾರಿ ಹೋದವರು ಹೀಗೆ ಮೋಸ ಮಾಡಿದ್ದಾರೆ. ಪ್ಲಾಟ್ ಖರೀದಿ ಮಾಡಿದವರು ಈಗ ಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸಚಿವರು ಹೇಳಿದರು.
ನಾನು ಈ ಮುಖ್ಯಮಂತ್ರಿಗೆ ಹೇಳಲು ಬಯಸುತ್ತೇನೆ; ಇಲ್ಲಿ ಖಾತೆ ಮಾಡಿಕೊಡಿ ಎಂದು ಕೇಳುತ್ತಿರುವ ಫ್ಲ್ಯಾಟುಗಳ ಮಾಲೀಕರಿಗೆ ಖಾತೆ ಮಾಡಿಕೊಡಲು ಏಕೆ ಸಾಧ್ಯವಾಗುತ್ತಿಲ್ಲ? ಪಾಪ.. ಇವರಿಗೆ ಖಾತೆ ಮಾಡಿಕೊಡಪ್ಪ.. ಇದರ ಬಗ್ಗೆ ನೀವು ಮಾತನಾಡಬೇಕು. ಇಲ್ಲಿ ನಿಮ್ಮದು ಬೇನಾಮಿ ಜಮೀನು ಇದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ದಾಖಲೆಗಳು ಏನು ಹೇಳುತ್ತವೆಯೋ ಪರಿಶೀಲನೆ ಮಾಡುತ್ತೇನೆ ಎಂದು ಮಾರ್ಮಿಕವಾಗಿ ಸಿಎಂ ಡಿಕೆಶಿ ಮೇಲೆ ಚಾಟಿ ಬೀಸಿದರು ಕೇಂದ್ರ ಸಚಿವರು.
*ಕಲ್ಲು ಹೃದಯ ಇರುವವರಿಗೆ ಬೇರೆಯವರ ನೋವು ಅರ್ಥ ಆಗೋದಿಲ್ಲ:*
ಇಲ್ಲಿನ ಭೂಮಿಯನ್ನು ನೋಡಿದರೆ ಬಹಳ ನೋವಾಗುತ್ತದೆ ಎಂದು ಸಚಿವರು; ಈ ಪ್ರಕರಣಕ್ಕೆ ಸಂಬಂಧಪಟ್ಟ ನಾನು ಯಾರನ್ನು ವೈಯಕ್ತಿಕವಾಗಿ ತೆಗಳಲು ಇಚ್ಛೆಪಡುವುದಿಲ್ಲ. ಇಲ್ಲಿ ಏನೇನು ನಡೆದಿದೆಯೋ ಅಷ್ಟನ್ನೇ ಹೇಳಲು ಬಯಸುತ್ತೇನೆ. ಪ್ರಚಾರಕ್ಕಾಗಿ ನಾನು ಹೆಚ್ಎಂಟಿಗೆ ಭೇಟಿ ಕೊಡುತ್ತಿಲ್ಲ ಎಂಬುದನ್ನು ಕೆಲವರು ಅರ್ಥ ಮಾಡಿಕೊಳ್ಳಬೇಕು. ನಿನ್ನೆಯ ದಿನ ಮುಖ್ಯಮಂತ್ರಿ ಮಾತನಾಡಿದ ಸಂದರ್ಭದಲ್ಲಿ ನಮಗೆ ನೋವು ಕೊಡಬೇಡಿ ಎಂದು ಹೇಳಿಕೊಂಡಿದ್ದಾರೆ. ಅವರಿಗೆ ನೋವು ಕೊಡುವ ಉದ್ದೇಶ ಯಾರಿಗೂ ಇಲ್ಲ. ರಾಜ್ಯದಲ್ಲಿ ಸರ್ಕಾರದ ಜಮೀನನ್ನು, ಅದರಲ್ಲೂ ಕೈಗಾರಿಕೆಗಳಿಗೆ ಮೀಸಲಿಟ್ಟಿದ್ದ ಭೂಮಿಯನ್ನು ಈ ರೀತಿಯಲ್ಲಿ ಲೂಟಿ ಮಾಡುವವರನ್ನು ನೋಡಿದರೆ ನೋವಾಗುತ್ತದೆ. ಹೃದಯ ಇದ್ದವರಿಗೆ ನೋವಾಗುತ್ತದೆ. ಕಲ್ಲು ಹೃದಯ ಇದ್ದವರಿಗೆ ಇನ್ನೊಬ್ಬರ ನೋವು ಅರ್ಥವಾಗುವುದಿಲ್ಲ ಎಂದು ಕಟುವಾಗಿ ಟೀಕಿಸಿದರು.
*ಮರುಜೀವ ಕೊಡುವ ಹೊತ್ತಿನಲ್ಲಿ ಕ್ಯಾತೆ ತೆಗೆಯುತ್ತಿದ್ದಾರೆ:*
ಹೇಗಾದರೂ ಮಾಡಿ ಹೆಚ್ಎಂಟಿ ಕಾರ್ಖಾನೆಗೆ ಮರುಜೀವ ಕೊಡಬೇಕೆಂದು ನಾನು ಪ್ರಯತ್ನ ಮಾಡುತ್ತಿದ್ದರೆ, ಅದರ ಜಾಗವನ್ನು ಕೊಳ್ಳೆ ಹೊಡೆಯಲು ಕೆಲವರು ಹೊಂಚು ಹಾಕಿ ಕೂತಿದ್ದಾರೆ. ಯಾವುದೇ ಕಾರಣಕ್ಕೂ ಹೆಚ್ಎಂಟಿ ಉಳಿಯಬಾರದು ಎಂದು ರಾಜ್ಯ ಸರ್ಕಾರ ಭಾವಿಸಿದಂತಿದೆ. ಹೀಗಾಗಿ ಪುನಶ್ಚೇತನ ಪ್ಯಾಕೇಜ್ ಜಾರಿ ಬರುವುದಕ್ಕೆ ಮೊದಲೇ ಹೆಜ್ಜೆ ಹೆಜ್ಜೆಗೂ ತೊಂದರೆ ಕೊಡುತ್ತಿದೆ. ಇಲ್ಲಿರುವುದು ಅರಣ್ಯ ಭೂಮಿಯೆಂದು ವಿನಾಕಾರಣ ಅಪಪ್ರಚಾರ ಮಾಡುತ್ತಿದೆ. ಅನಗತ್ಯವಾಗಿ ಕಾಟ ಕೊಟ್ಟು ಇಡೀ ಭೂಮಿಯನ್ನು ಹೊಡೆಯುವ ಪ್ಲ್ಯಾನ್ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.
ಕುಮಾರಸ್ವಾಮಿ ಉಕ್ಕು ಕಾರ್ಖಾನೆಯನ್ನು ತರಲಿ ಎಂದು ಹೇಳಿರುವ ಮಹಾಶಯನಿಗೆ ನಾನು ಹೇಳುವುದಿಷ್ಟೇ; ಕುದುರೆಮುಖ ಕಬ್ಬಿಣ ಮತ್ತು ಅದರ ಕಾರ್ಖಾನೆಗೆ ಕಾಯಕಲ್ಪ ನೀಡುವ ಉದ್ದೇಶದಿಂದ ದೇವದಾರಿ ಗಣಿ ಯೋಜನೆಗೆ ಹಣಕಾಸು ನೆರವು ನೀಡುವ ಶಿಫಾರಸಿಗೆ ಸಂಬಂಧಿಸಿದಂತೆ ನಾನು ಉಕ್ಕು ಸಚಿವನಾದ ಮೇಲೆ ಪ್ರಪ್ರಥಮ ಸಹಿ ಹಾಕಿದೆ. ಅದೊಂದೇ ಇವರಿಗೆ ಹೊಟ್ಟೆ ಉರಿ ತಂದಿತು. ಅಂದಿನಿಂದಲೇ ನನ್ನನ್ನು ಗುರಿಯಾಗಿಸಿಕೊಂಡು ನಾನು ಮಾಡುವ ಪ್ರತಿಯೊಂದು ಕೆಲಸದ ಮೇಲೆಯೂ ಗದಾಪ್ರಹಾರ ಮಾಡಿಕೊಂಡೆ ಬರುತ್ತಿದ್ದಾರೆ ಎಂದು ಸಚಿವ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಇರುವ ಕಾರ್ಖಾನೆಗಳನ್ನು ಉಳಿಸಲು ಈ ರಾಜ್ಯ ಸರ್ಕಾರದವರು ಬಿಡುತ್ತಿಲ್ಲ. ಇನ್ನು ಹೊಸ ಕಾರ್ಖಾನೆಗಳನ್ನು ಮಾಡುವ ಪ್ರಶ್ನೆ ಇಲ್ಲಿಂದ ಬರುತ್ತದೆ. ರಾಜ್ಯ ಸರ್ಕಾರ ಪ್ರತಿಯೊಂದಕ್ಕೂ ಅಡ್ಡಿಪಡಿಸುತ್ತಿದ್ದಾರೆ ರಾಜ್ಯದ ಅಭಿವೃದ್ಧಿ ಆಗುತ್ತದೆಯೇ? ಎಂದು ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರಾರ್ಥಿಸಿದರು.
ರಾಜ್ಯ ಸರ್ಕಾರ ಮತ್ತು ಹೆಚ್ಎಂಟಿ ನಡುವೆ ನಡೆಯುತ್ತಿರುವ ಭೂ ವ್ಯಾಜ್ಯದ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತಿದೆ. ಅದರ ಪರಿವೇ ಇಲ್ಲದ ಸಚಿವರೊಬ್ಬರು ಅನಗತ್ಯವಾಗಿ ಹೆಚ್ಎಂಟಿ ಭೂಮಿಯ ವಿಚಾರದಲ್ಲಿ ಮನಸೋ ಇಚ್ಛೆ ಮಾತನಾಡುತ್ತಿದ್ದಾರೆ. ಹಾಗಾದರೆ ಈಗಾಗಲೇ ಅಕ್ರಮವಾಗಿ ಬರವರಿಯಾಗಿ ಖಾಸಗಿ ವ್ಯಕ್ತಿಗಳು ಕಟ್ಟಿಕೊಂಡಿರುವ ಗಗನಚುಂಬಿ ಕಟ್ಟಡಗಳ ಜಾಗವನ್ನು ಇದೇ ಈಶ್ವರ ಖಂಡ್ರೆ ವಾಪಸ್ ಪಡೆಯುವ ತಾಕತ್ತು ತೋರಿಸುತ್ತಾರೆಯೇ ಎಂದು ಕಟುವಾಗಿ ಸಚಿವರು ಪ್ರಶ್ನಿಸಿದರು.
ಒಂದು ಕಾಲದಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ದೊಡ್ಡ ಕೊಡುಗೆ ನೀಡಿದ ಹೆಚ್ಎಂಟಿ ಕಂಪನಿಯನ್ನು ಉಳಿಸಬೇಕು ಎನ್ನುವ ಏಕೈಕ ಉದ್ದೇಶದಿಂದ ಪುನಶ್ಚೇತನ ಪ್ಯಾಕೇಜ್ ಅನುಷ್ಠಾನಕ್ಕೆ ತರಲು ಉದ್ದೇಶಿಸಿದ್ದೇವೆ. ಹಿಂದಿನ ಅರಣ್ಯ ಸಚಿವ ಈಶ್ವರ ಖಂಡ್ರೆ 175 ಎಕರೆ ಜಾಗ ಮಾರಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಅಲ್ಲದೆ, ಅದನ್ನು ಅರಣ್ಯ ಇಲಾಖೆ ಜಾಗ ಎಂದು ಕೂಡ ಹೇಳಿದ್ದಾರೆ. ಆದರೆ ಈಶ್ವರ ಖಂಡ್ರೆ ಅವರು ತಿಳಿಯಬೇಕಾದ ವಿಚಾರಗಳು ಸಾಕಷ್ಟಿವೆ. 1958-1960 ರಲ್ಲಿಯೇ ನ್ಯಾಯಬದ್ಧವಾಗಿ ಈ ಜಾಗವನ್ನು ಖರೀದಿ ಮಾಡಿದೆ. ಈಶ್ವರ ಖಂಡ್ರೆ ಅವರು ಹೇಳುತ್ತಿರುವ ಜಾಗಕ್ಕೂ ರಾಜ್ಯ ಅರಣ್ಯ ಇಲಾಖೆಗೂ ಯಾವ ಸಂಬಂಧವೂ ಇಲ್ಲ. ಇಲ್ಲಿರುವ ಜಾಗದ ಸಂಪೂರ್ಣ ಹಕ್ಕು ಹೆಚ್ಎಂಟಿಗೆ ಮಾತ್ರ ಸೇರಿದೆ. ನಾನು ಸಚಿವನಾಗಿ ಬಂದಮೇಲೆ 15,000 ಎಕರೆ ಅರಣ್ಯ ಭೂಮಿ ಉಳಿಸಿದ್ದೇನೆ ಎಂದು ಹೇಳಿದ್ದಾರೆ. ಕೋಲಾರದ ಶ್ರೀನಿವಾಸಪುರದಲ್ಲಿ ಅವರು ಅರಣ್ಯ ಭೂಮಿಯನ್ನು ಹೇಗೆ ಉಳಿಸಿದ್ದಾರೆ ಎಂಬುದನ್ನು ಎಲ್ಲರೂ ನೋಡಿದ್ದಾರೆ ಎಂದು ಸಚಿವ ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡರು.
ಹೆಚ್ಎಂಟಿ ಕಾರ್ಖಾನೆಗೆ ಮರುಜೀವ ಕೊಡುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಅನೇಕ ಸಭೆಗಳು ನಡೆದಿದೆ. ಆದಷ್ಟು ಬೇಗ ಪ್ಯಾಕೇಜ್ ಅನುಷ್ಠಾನಕ್ಕೆ ಪ್ರಯತ್ನ ಮಾಡಲಾಗುವುದು. ಈಗಾಗಲೇ ಡಿಪಿಆರ್ ಕೂಡ ಮಾಡಿಸಲಾಗಿದೆ. ರಾಜ್ಯಕ್ಕೆ ಒಳ್ಳೆದಾಗುವ ಸಂದರ್ಭ ಬಂದರೆ ಎಲ್ಲರೂ ಒಟ್ಟಾಗಿ ಸಹಕಾರ ನೀಡಬೇಕು. ಕರ್ನಾಟಕದಲ್ಲಿ ಅಂತಹ ವಾತಾವರಣ ಸೃಷ್ಟಿಯಾಗಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದರು ಸಚಿವರು.
ಈ ಸಂದರ್ಭದಲ್ಲಿ ಬೃಹತ್ ಕೈಗಾರಿಕೆ ಸಚಿವಾಲಯದ ಜಂಟಿ ಕಾರ್ಯದರ್ಶಿ, ಪ್ರೇಮಚಂದ್ ಮೌರ್ಯ, ಹೆಚ್ಎಂಟಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಮೇಶ್ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.