LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅನುಷ್ಠಾನಕ್ಕೆ ಬಂದ ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದ

ರಾಜ್ಯದಿಂದ  ರಫ್ತಾಗುವ ಹಲವು ಉತ್ಪನ್ನಗಳ ಮೇಲಿನ ಸುಂಕ ಸೊನ್ನೆಗೆ ಇಳಿಕೆ, ರಾಜ್ಯಕ್ಕೆ ಬರಲಿವೆ ಬ್ರಿಟಿಷ್ ವಿ.ವಿ.ಗಳು, ಶಾಲಾ ಕ್ಯಾಂಪಸ್ ಗಳು, ರಾಜ್ಯದ ಬಿಟಿ, ಕಾಫಿ, ಸಾಂಬಾರ ಪದಾರ್ಥ, ಜವಳಿ, ಫಾರ್ಮಾ ವಲಯಗಳಿಗೆ ಶುಕ್ರದೆಸೆ: ಎಂ ಬಿ ಪಾಟೀಲ, ಸರಕಾರದ್ದು ಚಾರಿತ್ರಿಕ ಹೆಜ್ಜೆ; ರಾಜ್ಯದ ಆರ್ಥಿಕತೆಗೆ ಉದ್ಯಮಿಗಳ ಕೊಡುಗೆ ನಿರ್ಣಾಯಕ.

ಬೆಂಗಳೂರು: ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಬುಧವಾರದಿಂದ ಅನುಷ್ಠಾನಕ್ಕೆ ಬಂದಿದೆ. ಇದರಿಂದ ರಾಜ್ಯದ ಜೈವಿಕ ತಂತ್ರಜ್ಞಾನ, ಫಾರ್ಮಸುಟಿಕಲ್ಸ್, ಜವಳಿ ಮತ್ತು ಗಾರ್ಮೆಂಟ್ಸ್, ಸಮುದ್ರ ಉತ್ಪನ್ನಗಳು, ಎಂಜಿನಿಯರಿಂಗ್ ಉತ್ಪನ್ನಗಳು ಮತ್ತು ಮಷಿನರಿ, ಚಿಕ್ಕಮಗಳೂರು ಮತ್ತು ಕೊಡಗಿನ ಉತ್ಕೃಷ್ಟ ಕಾಫಿ ಹಾಗೂ ಸಾಂಬಾರ ಪದಾರ್ಥಗಳ ವಲಯಕ್ಕೆ ಭಾರೀ ಲಾಭವಾಗಲಿದೆ. ಉದ್ಯಮಿಗಳು ಈ ಸದವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡು, ರಾಜ್ಯದ ಕೈಗಾರಿಕಾ ಬೆಳವಣಿಗೆಗೆ ಹೆಗಲು ಕೊಡಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.news_1784288599_4_640.webp

ಭಾರತ-ಯು.ಕೆ. ನಡುವಿನ ಈ ಚಾರಿತ್ರಿಕ ಒಪ್ಪಂದವು ಕಳೆದ ವರ್ಷದ ಜುಲೈ 25ರಂದು ಆಖೈರಾಗಿತ್ತು. ಒಪ್ಪಂದ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿ ಉದ್ದಿಮೆದಾರರಿಗೆ ಏರ್ಪಡಿಸಿದ್ದ ಸಂತೋಷ ಕೂಟದಲ್ಲಿ ಅವರು ಮಾತನಾಡಿದರು.

ಈ ಒಪ್ಪಂದದಿಂದಾಗಿ ಭಾರತದ ಶೇ.99ರಷ್ಟು ಉತ್ಪನ್ನಗಳು ಸುಂಕರಹಿತವಾಗಿ ಬ್ರಿಟನ್ ಮಾರುಕಟ್ಟೆ ಪ್ರವೇಶಿಸಲಿವೆ ರಾಜ್ಯವು ಮುಂಚೂಣಿಯಲ್ಲಿರುವ ಎಲ್ಲಾ ವಲಯಗಳೂ ಈ ಒಪ್ಪಂದದ ವ್ಯಾಪ್ತಿಯಲ್ಲಿವೆ. ಆದ್ದರಿಂದ ನಾವು ಯುನೈಟೆಡ್ ಕಿಂಗ್ಡಮ್ ನ ವಿಶ್ವವಿದ್ಯಾಲಯಗಳು ಮತ್ತು ನಮ್ಮಲ್ಲಿನ ಉದ್ಯಮಗಳ ನಡುವೆ ಹೆಚ್ಚು ಹೆಚ್ಚು ಸಹಭಾಗಿತ್ವಕ್ಕೆ ಮುಂದಾಗಲಿದ್ದೇವೆ. ಇದರಿಂದ ಕೌಶಲ್ಯಾಭಿವೃದ್ಧಿ, ಸಂಶೋಧನೆ ಮತ್ತು ಜಂಟಿ ನಾವೀನ್ಯತೆಗೆ ಪ್ರೋತ್ಸಾಹ ಸಿಗಲಿದೆ. ಅಲ್ಲಿಂದ ನಮ್ಮಲ್ಲಿಗೆ ಬರುವ ಶೇ.90ರಷ್ಟು ಉತ್ಪನ್ನಗಳಿಗೂ ಯಾವುದೇ ಸುಂಕ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.

ಈ ಒಪ್ಪಂದದ ವ್ಯಾಪ್ತಿಯಲ್ಲಿ ಬರುವ ಮೋಡ್-1 ಸೇವೆಯಿಂದ ಬೆಂಗಳೂರು ಕೇಂದ್ರಿತ ಐಟಿ ಉದ್ಯಮಕ್ಕೆ ಭಾರೀ ಲಾಭ ಸಿಗಲಿದೆ. ಮುಂದಿನ ದಿನಗಳಲ್ಲಿ ಬ್ರಿಟನ್ನಿನ ಹಲವು ಕಂಪನಿಗಳು ಬೆಂಗಳೂರು ಮತ್ತು ಮೈಸೂರಿನಲ್ಲಿ ತಮ್ಮ‌ ಜಿಸಿಸಿ ಕೇಂದ್ರಗಳನ್ನು ಸ್ಥಾಪಿಸಲಿವೆ. ಏರೋಸ್ಪೇಸ್ ವಲಯದಲ್ಲಿ ಬೆಂಗಳೂರು ನಗರದ ಜತೆಗೆ ಬೆಳಗಾವಿಗೆ ಪ್ರಯೋಜನವಾಗಲಿದೆ ಎಂದು ಅವರು ವಿವರಿಸಿದ್ದಾರೆ.

ಮುಕ್ತ ವ್ಯಾಪಾರ ಒಪ್ಪಂದದಿಂದ ನಮ್ಮ ಏರೋಸ್ಪೇಸ್ ಉತ್ಪನ್ನಗಳ ಮೇಲಿನ ಸುಂಕವು ಶೇ.11ರಿಂದ ಸೊನ್ನೆಗೆ, ಆಟೋಮೋಟಿವ್ ಮೇಲಿನ ಸುಂಕವು ಶೇ.110ರಿಂದ ಸೊನ್ನೆಗೆ, ಎಲೆಕ್ಟ್ರಿಕಲ್ ಮಷಿನರಿ ಮೇಲಿನ ಸುಂಕ ಶೇ.22ರಿಂದ ಸೊನ್ನೆಗೆ ಮತ್ತು ವೈದ್ಯಕೀಯ ಉಪಕರಣಗಳ ಮೇಲಿನ ಸುಂಕವು ಶೇ.13.75ರಿಂದ ಸೊನ್ನೆಗೆ ಇಳಿಯಲಿದೆ. ಇನ್ನು ಕೆಲವು ಉತ್ಪನ್ನಗಳ ಮೇಲಿನ ಸುಂಕವು 5-6 ವರ್ಷಗಳಲ್ಲಿ ಸೊನ್ನೆಗೆ ಬರಲಿದೆ ಎಂದು ಅವರು ವಿವರಿಸಿದ್ದಾರೆ.news_1784288597_0_879.webp

ಇದಲ್ಲದೆ ಎಣ್ಣೆಬೀಜಗಳು, ಕಾಳುಮೆಣಸು, ಏಲಕ್ಕಿ, ಬ್ಯಾಡಗಿ ಮತ್ತು ದೇವನೂರು ಮೆಣಸಿನಕಾಯಿ ಮುಂತಾದ ಸಾಂಬಾರ ಪದಾರ್ಥಗಳು, ಸಿರಿಧಾನ್ಯಗಳು, ಹೂವು, ಹಣ್ಣು, ತರಕಾರಿ, ಮೀನು, ತೆಂಗು, ಮಾವು, ನಿಂಬೆ, ಮಲ್ಲಿಗೆ, ಚೆಂಡುಹೂವು, ಕೊಡಗು ಮತ್ತು ಚಿಕ್ಕಮಗಳೂರಿನ ಉತ್ಕೃಷ್ಟ ಕಾಫಿ, ಹಾಸನ, ಬೀದರ್ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ ತಯಾರಾಗುವ ಸಂಸ್ಕರಿತ ಕೃಷಿ ಮತ್ತು ಆಹಾರ ಉತ್ಪನ್ನಗಳ ರಫ್ತಿಗೆ ಇನ್ನು ಮುಂದೆ ಬ್ರಿಟನ್ ಮಾರುಕಟ್ಟೆಯಲ್ಲಿ ಸುಂಕದ ಹೊರೆ ಇರುವುದಿಲ್ಲ ಎಂದು ಅವರು ನುಡಿದಿದ್ದಾರೆ.

ಸಣ್ಣ ಕೈಗಾರಿಕೆಗಳಿಗೂ ಈ ಒಪ್ಪಂದದಿಂದ ಲಾಭವಾಗಲಿದೆ. ಈ‌ ನಿಟ್ಟಿನಲ್ಲಿ ನಮ್ಮ ರಾಜ್ಯದ ಕಾಫಿ ಬೆಳೆಗಾರರು, ಗಾರ್ಮೆಂಟ್ಸ್ ಮಾಲೀಕರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ರಫ್ತುದಾರರಿಗೆ ಹೆಚ್ಚಿನ ತಿಳಿವಳಿಕೆ ಮೂಡಿಸಲು ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ರಾಜ್ಯವು ಏರೋಸ್ಪೇಸ್, ರಕ್ಷಣೆ, ಆಧುನಿಕ ತಯಾರಿಕ, ವಿದ್ಯುತ್ ಚಾಲಿತ ವಾಹನಗಳ ಕ್ಷೇತ್ರ, ಶುದ್ಧ ಇಂಧನ, ಸೆಮಿಕಂಡಕ್ಟರ್, ಡೀಪ್-ಟೆಕ್ ಮತ್ತು ಜಿಸಿಸಿ ಕ್ಷೇತ್ರಗಳಲ್ಲೂ ಬ್ರಿಟನ್ ಜತೆ ಸಹಭಾಗಿತ್ವದ ಉಪಕ್ರಮಗಳನ್ನು ತೆಗೆದುಕೊಳ್ಳಲಿದೆ. ಬ್ರಿಟನ್ನಿನ ಹೂಡಿಕೆದಾರರನ್ನು ಸೆಳೆಯಲು ಅಲ್ಲಿಗೆ ಹೋಗಿ ರೋಡ್ ಶೋಗಳನ್ನು ನಡೆಸಲಾಗುವುದು ಎಂದು ಪಾಟೀಲ ವಿವರಿಸಿದ್ದಾರೆ.news_1784288599_2_243.webp

ಬೆಂಗಳೂರಿನಲ್ಲಿ ಈಗಾಗಲೇ ಬ್ರಿಟನ್ ಮೂಲದ ರೋಲ್ಸ್ ರಾಯ್ಸ್, ಬಿಎಇ ಸಿಸ್ಟಮ್ಸ್, ಟೆಸ್ಕೊ, ಎ ಆರ್ ಎಂ, ಎಚ್ಎಸ್ಬಿಸಿ ಮುಂತಾದ ಕಂಪನಿಗಳು ನೆಲೆಯೂರಿವೆ. ಇವುಗಳಲ್ಲಿ 30 ಸಾವಿರಕ್ಕೂ ಹೆಚ್ಚು ಜನ ಉದ್ಯೋಗಿಗಳಿದ್ದಾರೆ. ಟೆಸ್ಕೊ ಕಂಪನಿಯು ತನ್ನ ಹೊಸ ವಿಸ್ತರಣಾ ಕೇಂದ್ರವನ್ನು ತೆರೆಯುತ್ತಿದ್ದು, ಅಲ್ಲಿ 15 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ. ರೋಲ್ಸ್ ರಾಯ್ಸ್ ಕೂಡ ರಾಜ್ಯದಲ್ಲಿ ಬಂಡವಾಳ ಹೂಡಲು ಉತ್ಸುಕವಾಗಿದೆ. ಈಗಿನ ಮುಕ್ತ ವ್ಯಾಪಾರ ಒಪ್ಪಂದವು ಇವುಗಳಿಗೆ ವೇಗವರ್ಧಕವಾಗಿ ಕೆಲಸ ಮಾಡಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಬೆಂಗಳೂರಿನಲ್ಲಿರುವ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಚಂದ್ರು ಅಯ್ಯರ್ ಮಾತನಾಡಿ, ಬ್ರಿಟನ್ನಿನ ಲಿವರ್‌ಪೂಲ್, ಲ್ಯಾಂಕಾಸ್ಟೈರ್, ಬರ್ಕ್ ಬೆಕ್, ಇಂಪೀರಿಯಲ್ ಕಾಲೇಜು ವಿ.ವಿ.ಗಳು ರಾಜ್ಯದಲ್ಲಿ ತಮ್ಮ‌ ಕ್ಯಾಂಪಸ್ ಆರಂಭಿಸಲಿವೆ. ಜತೆಗೆ ಕಿಂಗ್ಸ್ ಕ್ಯಾಂಟರಬರಿ ಮತ್ತು ಆರ್.ಜಿ.ಎಸ್ ಗಿಲ್ಡ್ ಫೋರ್ಡ್ ಶಾಲೆಗಳು ಕೂಡ ಇಲ್ಲಿ ಆರಂಭವಾಗಲಿವೆ ಎಂದು ಹೇಳಿದ್ದಾರೆ.

ಬೆಂಗಳೂರು ಮತ್ತು ಲಂಡನ್ ನಡುವೆ ಈಗ ವಾರದಲ್ಲಿ 34 ನೇರ ವಿಮಾನಸೇವೆ ಇದೆ. ಮುಂಬರುವ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗಲಿದೆ ಎಂದು ನುಡಿದರು.

ಈ ಒಡಂಬಡಿಕೆಯಿಂದ ಭಾರತ ಮತ್ತು ಯು.ಕೆ. ನಡುವಿನ ವ್ಯಾಪಾರ ವಹಿವಾಟು ಪ್ರತೀ ವರ್ಷವೂ 25 ಬಿಲಿಯನ್ ಪೌಂಡ್ ಹೆಚ್ಚಳವಾಗಲಿದ್ದು, 2030ರ ಹೊತ್ತಿಗೆ 100 ಬಿಲಿಯನ್ ಪೌಂಡ್ ಮಟ್ಟಕ್ಕೆ ಬೆಳೆಯಲಿದೆ ಎಂದು ಅಯ್ಯರ್ ತಿಳಿಸಿದ್ದಾರೆ.news_1784288370_0_917.webp

ಇದಕ್ಕೂ ಮೊದಲು ಅಯ್ಯರ್ ಅವರು ನಗರದ ವೈಟ್ ಫೀಲ್ಡ್ ನಲ್ಲಿರುವ ಇನ್-ಲ್ಯಾಂಡ್ ಕಂಟೇನರ್ ಡಿಪೋದಿಂದ ಬ್ರಿಟನ್ನಿಗೆ ಹೊರಟ ಜಿಂದಾಲ್ ಕಂಪನಿಯ ಅಲ್ಯುಮಿನಿಯಂ ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳ ನಿರ್ಯಾತಕ್ಕೆ ಹಸಿರು ನಿಶಾನೆ ತೋರಿದರು. ಈ ಸಂದರ್ಭದಲ್ಲಿ ವಿದೇಶಾಂಗ ವಾಣಿಜ್ಯ ವ್ಯವಹಾರಗಳ ಜಂಟಿ ಮಹಾನಿರ್ದೇಶಕಿ ಡೋನಾ ಘೋಷ್ ಮತ್ತು ಕಸ್ಟಮ್ಸ್ ಇಲಾಖೆಯ ಆಯುಕ್ತೆ ಸುಚೇತಾ ಶ್ರೀಜೇಶ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರಾಜ್ಯ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಖುಷ್ಬೂ ಗೋಯೆಲ್ ಚೌಧರಿ ಮುಂತಾದವರು ಉಪಸ್ಥಿತರಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅನುಷ್ಠಾನಕ್ಕೆ ಬಂದ ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದಮಮದಾಪುರ ಕೆರೆ ಮುಳುಗಡೆ ಪ್ರದೇಶ ಸ್ವಾಧೀನ: ಸಂಪುಟಕ್ಕೆ ವಿಷಯ ಮಂಡನೆಬೆಂಗಳೂರಿನ ಹೆಚ್ಎಂಟಿ ಭೂಮಿ ಕೊಳ್ಳೆ ಹೊಡೆದ ಮಹಾಪ್ರಭಾವಿ ಯಾರು? HDK ಪ್ರಶ್ನೆಕನ್ನಡಿಗರನ್ನು ಮತ್ತಷ್ಟು ಕುಡುಕರನ್ನಾಗಿಸುತ್ತೀರಾ?ಎಎಪಿ ಪ್ರಶ್ನೆಸಂಗೀತ- ಸಂವಾದದ ಗಮ್ಮತ್ತು : ಜಯನಗರದಲ್ಲಿ ಭಕ್ತಿ, ಭಾವದ ‘ರಸಂ’ ರಸದೌತಣ!ಕೃತಕ ಬುದ್ಧಿಮತ್ತೆಯು (ಎಐ) ಆ ಗುರಿಯನ್ನೇ ತಪ್ಪನ್ನಾಗಿ ಮಾಡಿದೆ : ಡಾ. ಶ್ರೀಧರ್ ಜಿಕರ್ನಾಟಕದಲ್ಲಿ ಅಕ್ರಮ ಕೇರಳ ಲಾಟರಿ ಹಾವಳಿ ತಕ್ಷಣ ನಿಲ್ಲಿಸಿಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಬೇಡ :ಲೋಖಂಡೆ ಸ್ನೇಹಲ್ ಸುಧಾಕರ್ಭೂಮಿ ಲೂಟಿಗೆ ಮತ್ತೆ ನೋಟಿಫಿಕೇಶನ್ ಹೊರಟಿಸಿದ್ದು ಪಾಶವೀಕೃತ ಎಂದ ಕೇಂದ್ರ ಸಚಿವರುಬರದ ಆಕ್ರಂದನ: ರೈತರ ನೋವನ್ನು ಆಲಿಸಿದ ಜೆಡಿಎಸ್ ಅಧ್ಯಯನ ತಂಡ