ಬೆಂಗಳೂರು: ರಾಜ್ಯದಲ್ಲಿ ಒಂದೆಡೆ ನಿರುದ್ಯೋಗ, ಬೆಲೆ ಏರಿಕೆ, ರೈತರ ಸಂಕಷ್ಟ, ಮಹಿಳೆಯರ ಮೇಲಿನ ದೌರ್ಜನ್ಯ, ಮಾದಕ ವಸ್ತುಗಳ ಹಾವಳಿ ಹಾಗೂ ಯುವಜನತೆಯ ಭವಿಷ್ಯದ ಕುರಿತು ಗಂಭೀರ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲೇ, ಕಾಂಗ್ರೆಸ್ ಸರ್ಕಾರವು 579 ಹೊಸ ಮದ್ಯ ಮಾರಾಟ ಮಳಿಗೆಗಳಿಗೆ ಅನುಮತಿ ನೀಡಲು ಮುಂದಾಗಿರುವುದು ಅತ್ಯಂತ ಕಳವಳಕಾರಿ ಬೆಳವಣಿಗೆಯಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ಉಷಾ ಮೋಹನ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸುದೀರ್ಘವಾಗಿ ಮಾತನಾಡಿ " 1993ರಲ್ಲಿ ಅಂದಿನ ಮುಖ್ಯಮಂತ್ರಿ ಬಂಗಾರಪ್ಪ ಅವರ ಆಡಳಿತಾವಧಿಯಲ್ಲಿ ವ್ಯಾಪಕವಾಗಿ ಮದ್ಯದ ಪರವಾನಗಿಗಳನ್ನು ನೀಡಿದ ನಂತರ, ರಾಜ್ಯದ ಮಹಿಳಾ ಸಂಘಟನೆಗಳು, ಸಾಮಾಜಿಕ ಹೋರಾಟಗಾರರು ಮತ್ತು ನಾಗರಿಕ ಸಮಾಜದ ನಿರಂತರ ವಿರೋಧದ ಹಿನ್ನೆಲೆಯಲ್ಲಿ ಯಾವುದೇ ಸರ್ಕಾರಗಳು ಈ ರೀತಿಯ ನಿರ್ಧಾರಗಳನ್ನು ಕೈಗೊಳ್ಳಲು ಹಿಂದೇಟು ಹಾಕಿದ್ದವು. ಆದರೆ, ಇಂದಿನ ಕಾಂಗ್ರೆಸ್ ಸರ್ಕಾರವು ಆ ಎಲ್ಲ ಸಾಮಾಜಿಕ ಕಾಳಜಿಗಳನ್ನು ಗಾಳಿಗೆ ತೂರಿ, ಆದಾಯದ ಹೆಸರಿನಲ್ಲಿ ಕನ್ನಡಿಗರ ಬದುಕನ್ನೇ ಮದ್ಯದ ದಾಸ್ಯಕ್ಕೆ ತಳ್ಳುವ ಕೆಲಸ ಮಾಡುತ್ತಿದೆ "
" ಒಂದು ರಾಜ್ಯದ ಆರ್ಥಿಕತೆಯು ಉದ್ಯಮ, ಹೂಡಿಕೆ, ಉದ್ಯೋಗ ಸೃಷ್ಟಿ ಮತ್ತು ಉತ್ಪಾದನಾ ವಲಯಗಳ ಮೇಲೆ ನಿಲ್ಲಬೇಕೇ ಹೊರತು, ಜನರನ್ನು ಮತ್ತಷ್ಟು ಮದ್ಯ ವ್ಯಸನಕ್ಕೆ ದೂಡಿ ಅಬಕಾರಿ ಆದಾಯದ ಮೇಲೆ ನಿಂತಿರಬಾರದು. ದುರಂತವೆಂದರೆ, ಇಂದು ಕರ್ನಾಟಕ ಸರ್ಕಾರವು ಕೇವಲ ಅಬಕಾರಿ ಆದಾಯವನ್ನೇ ಜೀವನಾಡಿಯನ್ನಾಗಿ ಮಾಡಿಕೊಂಡಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಸರ್ಕಾರದ ಆಡಳಿತ ವೈಫಲ್ಯವಷ್ಟೇ ಅಲ್ಲ, ಸಮಾಜದ ಭವಿಷ್ಯದ ಮೇಲಿನ ನಿರ್ಲಕ್ಷ್ಯದ ಪರಮಾವಧಿಯಾಗಿದೆ.
ರಾಜ್ಯದ ಸಾಮಾಜಿಕ ಸ್ಥಿತಿಗತಿಗಳು ಈಗಾಗಲೇ ಅಪಾಯಕಾರಿ ಹಂತವನ್ನು ತಲುಪುತ್ತಿವೆ. ಮದ್ಯಪಾನದಿಂದ ಕುಟುಂಬಗಳು ಬೀದಿಗೆ ಬರುತ್ತಿವೆ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ, ಯುವಕರು ತಮ್ಮ ಬದುಕಿನ ದಿಕ್ಕು ತಪ್ಪುತ್ತಿದ್ದಾರೆ, ಮಕ್ಕಳ ಶಿಕ್ಷಣದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಹೊಣೆಗಾರಿಕೆ ಮದ್ಯದ ಅಂಗಡಿಗಳನ್ನು ಹೆಚ್ಚಿಸುವುದಲ್ಲ, ಬದಲಾಗಿ ವ್ಯಸನಮುಕ್ತ ಸಮಾಜ ನಿರ್ಮಾಣದತ್ತ ಹೆಜ್ಜೆ ಇಡುವುದಾಗಿರಬೇಕು. ಈ ರೀತಿಯ ಬೆಳವಣಿಗೆಗಳನ್ನು ಯಾವುದೇ ನಾಗರಿಕ ಸಮಾಜ ಒಪ್ಪಲು ಸಾಧ್ಯವಿಲ್ಲ "
" ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಿ.ಎಲ್-7 ಪರವಾನಗಿಗಳ ವಿತರಣೆಯಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಆದರೆ, ಆ ಪ್ರಕರಣದ ಕುರಿತು ಇಂದಿನ ಕಾಂಗ್ರೆಸ್ ಸರ್ಕಾರ ಯಾವುದೇ ತನಿಖೆಯನ್ನು ನಡೆಸಲಿಲ್ಲ. ಈಗ ಕಾಂಗ್ರೆಸ್ ಸರ್ಕಾರವೇ 579 ಹೊಸ ಪರವಾನಗಿಗಳ ವಿತರಣೆಗೆ ಮುಂದಾಗಿರುವಾಗ, ಬಿಜೆಪಿ ಸಹ ಮೌನ ವಹಿಸಿರುವುದು ಜನರಲ್ಲಿ ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಈ ಮೌನವೇ ಎರಡೂ ರಾಷ್ಟ್ರೀಯ ಪಕ್ಷಗಳ ನಡುವಿನ ಒಳ ಒಪ್ಪಂದ ಮತ್ತು ಈ ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರದಲ್ಲಿ ಅವರ ಪಾಲುದಾರಿಕೆಯನ್ನು ಸೂಚಿಸುತ್ತಿದೆ "
" 579 ಮದ್ಯದ ಅಂಗಡಿಗಳ ಪರವಾನಗಿ ವಿತರಣೆಯಲ್ಲಿ ಕನಿಷ್ಠ ₹2,000 ಕೋಟಿ ರೂಪಾಯಿಗಳ ಬೃಹತ್ ಹಗರಣ ನಡೆದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಸರ್ಕಾರವು ಪಾರದರ್ಶಕತೆಯನ್ನು ಪಾಲಿಸಬೇಕಾದರೆ, ಈ ಸಂಪೂರ್ಣ ಪ್ರಕ್ರಿಯೆಯನ್ನು ಸಾರ್ವಜನಿಕರ ಮುಂದೆ ಬಹಿರಂಗಪಡಿಸಿ, ನ್ಯಾಯಾಂಗ ಅಥವಾ ಉನ್ನತ ಮಟ್ಟದ ಸ್ವತಂತ್ರ ತನಿಖೆಗೆ ಒಳಪಡಿಸಬೇಕು.
ಮಹಿಳೆಯರ ಮತ ಪಡೆದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವೇ ಇಂದು ಮಹಿಳಾ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿರುವುದು ಅತ್ಯಂತ ವಿಷಾದನೀಯ. ಪ್ರತಿ ಹೊಸ ಮದ್ಯದ ಅಂಗಡಿಯ ಹಿಂದೆ ಒಂದು ಕುಟುಂಬದ ಕಣ್ಣೀರು, ಒಬ್ಬ ಮಹಿಳೆಯ ನೋವು ಮತ್ತು ಒಬ್ಬ ಮಗುವಿನ ಕಸಿದುಕೊಳ್ಳಲ್ಪಟ್ಟ ಭವಿಷ್ಯ ಅಡಗಿದೆ ಎಂಬುದನ್ನು ಸರ್ಕಾರ ಮರೆಯಬಾರದು " ಎಂದು ಉಷಾ ಮೋಹನ್ ಆಕ್ರೋಶ ವ್ಯಕ್ತಪಡಿಸಿದರು.
" ಈ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷವು ರಾಜ್ಯಪಾಲರಿಗೆ ಅಧಿಕೃತ ದೂರು ಸಲ್ಲಿಸಲಿದ್ದು, ತಕ್ಷಣ ಮಧ್ಯಪ್ರವೇಶಿಸಿ 579 ಮದ್ಯದ ಪರವಾನಗಿಗಳ ವಿತರಣೆಯನ್ನು ಸ್ಥಗಿತಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸುತ್ತಿದೆ. ಜೊತೆಗೆ, ಈ ಸಂಪೂರ್ಣ ಪ್ರಕ್ರಿಯೆಯ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.
ಕನ್ನಡಿಗರ ಆರೋಗ್ಯ, ಮಹಿಳೆಯರ ಸುರಕ್ಷತೆ ಮತ್ತು ಮುಂದಿನ ಪೀಳಿಗೆಯ ಭವಿಷ್ಯವನ್ನು ಬಲಿಕೊಟ್ಟು ಸರ್ಕಾರ ನಡೆಸುವ ರಾಜಕಾರಣವನ್ನು ಕರ್ನಾಟಕದ ಜನತೆ ಎಂದಿಗೂ ಕ್ಷಮಿಸುವುದಿಲ್ಲ "
ಎಂದು ಉಷಾ ಮೋಹನ್ ಕಿಡಿ ಕಾರಿದ್ದಾರೆ.