ಬೆಂಗಳೂರು: ಯಾವುದೇ ಸ್ಪಷ್ಟ ರೋಗಲಕ್ಷಣಗಳನ್ನು ಹೊಂದಿಲ್ಲದೇ ಇದ್ದರೂ ಹೃದ್ರೋಗದ ಅಪಾಯಕಾರಿ ಅಂಶಗಳನ್ನು ಗುರುತಿಸಲು ನಿಯಮಿತ ಹೃದಯದ ಆರೋಗ್ಯ ತಪಾಸಣೆಗಳು ನೆರವಾಗುತ್ತವೆ ಎಂದು ಅಪೋಲೊ ಆಸ್ಪತ್ರೆಯ ಕರ್ನಾಟಕ ವಲಯದ ಸಿಇಒ ಅಕ್ಷಯ್ ಒಲೇಟಿ ತಿಳಿಸದರು.
ವಿಶ್ವ ಹೃದಯ ಆರೋಗ್ಯ ದಿನದ ಹಿನ್ನೆಲೆಯಲ್ಲಿ ಉಚಿತವಾಗಿ ಸಮಗ್ರ ಹೃದ್ರೋಗ ಪರೀಕ್ಷೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದವರು, ಅಪೋಲೊ ಆಸ್ಪತ್ರೆಯಲ್ಲಿ, ನಾವು ಸೇವೆ ಸಲ್ಲಿಸುವ ಸಮುದಾಯಗಳಿಗೆ ರೋಗತಡೆಯಲು ಆರೋಗ್ಯಸೇವೆಯನ್ನು ಇನ್ನಷ್ಟು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಬದ್ಧರಾಗಿದ್ದೇವೆ. ಬೆಂಗಳೂರಿನ ದೈನಂದಿನ ಜೀವನದಲ್ಲಿ ಆಟೋ ಚಾಲಕರು ಪ್ರಮುಖ ಪಾತ್ರ ವಹಿಸುತ್ತಾರೆ, ಮತ್ತು ಅವರ ಆರೋಗ್ಯವನ್ನು ರಕ್ಷಿಸುವುದು ಅವರ ಕೊಡುಗೆಯನ್ನು ಗೌರವಿಸುವ ಅರ್ಥಪೂರ್ಣ ಮಾರ್ಗವಾಗಿದೆ. ಎ.ಆರ್.ಡಿ.ಯು ಸಹಯೋಗದೊಂದಿಗೆ, ಅವರು ಸರಿಯಾದ ಸಮಯಕ್ಕೆ ಆರೋಗ್ಯ ತಪಾಸಣೆ ಮಾಡಿಕೊಳ್ಳಲು ಹಾಗೂ ಉತ್ತಮ ಹೃದಯ ಆರೋಗ್ಯಕ್ಕಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವುದು ನಮ್ಮ ಉದ್ದೇಶವಾಗಿದೆ," ಎಂದು ಹೇಳಿದರು.
ಬೆಂಗಳೂರಿನ ಆಟೋ ರಿಕ್ಷಾ ಚಾಲಕರ ಒಕ್ಕೂಟ (ನೋಂ)ದ ಅಧ್ಯಕ್ಷ ಸಿ. ಸುರೇಶ್ ಕುಮಾರ್ ಮಾತನಾಡಿ, "ನಮ್ಮ ಅನೇಕ ಸದಸ್ಯರಿಗೆ, ಚಾಲನೆಯಿಂದ ವಿರಾಮ ತೆಗೆದುಕೊಳ್ಳುವುದೆಂದರೆ ಗಳಿಕೆಯನ್ನು ಕಳೆದುಕೊಂಡಂತೆ, ಹೀಗಾಗಿ ನಿಯಮಿತ ಆರೋಗ್ಯ ತಪಾಸಣೆಗಳು ಹೆಚ್ಚಾಗಿ ಮುಂದೂಡಲ್ಪಡುತ್ತವೆ. ಈ ಶಿಬಿರವು ಅವರಿಗೆ ತಮ್ಮ ಹೃದಯದ ಆರೋಗ್ಯವನ್ನು ಅರ್ಥಮಾಡಿಕೊಳ್ಳಲು ಮತ್ತು ವೈದ್ಯಕೀಯ ಮಾರ್ಗದರ್ಶನವನ್ನು ಪಡೆಯಲು ಅವಕಾಶವನ್ನು ನೀಡಿತು. ಅವರ ಅಗತ್ಯಗಳನ್ನು ಗುರುತಿಸಿದ್ದಕ್ಕಾಗಿ ನಾವು ಅಪೋಲೊ ಆಸ್ಪತ್ರೆಗೆ ಧನ್ಯವಾದ ಅರ್ಪಿಸುತ್ತೇವೆ" ಎಂದು ಹೇಳಿದರು.
ಆದಾಗ್ಯೂ, ದೀರ್ಘ ಕೆಲಸದ ಅವಧಿ ಮತ್ತು ಪ್ರತಿನಿತ್ಯ ದುಡಿಯಬೇಕಾದ ಅನಿವಾರ್ಯತೆ ಹೊಂದಿರುವ ಆಟೋ ಚಾಲಕರಿಗೆ, ರೋಗತಡೆಯ ಆರೈಕೆ ಸಮಯ ದೊರೆಯುವುದಿಲ್ಲ. ಈ ಅಗತ್ಯವನ್ನು ಪೂರೈಸಲು, 'ವಿಶ್ವ ಹೃದಯ ದಿನ'ದ ಅಂಗವಾಗಿ ಬನ್ನೇರುಘಟ್ಟ ರಸ್ತೆಯ ಅಪೋಲೊ ಆಸ್ಪತ್ರೆಯು ಆಟೋ ರಿಕ್ಷಾ ಚಾಲಕರ ಒಕ್ಕೂಟ (ಎ.ಆರ್.ಡಿ.ಯು.) ಸಹಯೋಗದೊಂದಿಗೆ ಉಚಿತ ಹೃದಯ ತಪಾಸಣಾ ಶಿಬಿರವನ್ನು ಆಯೋಜಿಸಿತ್ತು.
ಸಮುದಾಯ ಕೃತಜ್ಞತಾ ಯೋಜನೆಯಡಿ 100 ಆಟೋ ಚಾಲಕರಿಗೆ ರಕ್ತದೊತ್ತಡ, ರಕ್ತದ ಸಕ್ಕರೆ ಪ್ರಮಾಣ ತಪಾಸಣೆ, ಲಿಪಿಡ್ ಪ್ರೊಫೈಲ್, ಇಸಿಜಿ ಹಾಗೂ ಹೃದಯ ರೋಗ ತಜ್ಞರ ಸಮಾಲೋಚನಾ ಸೇವೆಯನ್ನು ಒದಗಿಸಲಾಯಿತು.
ಆರೋಗ್ಯವಾಗಿದ್ದೇವೆ ಎಂದರೆ ಎಂದರೆ ಹೃದಯ ಸಂಬಂಧಿ ಅಪಾಯಗಳಿಂದ ಸಂಪೂರ್ಣವಾಗಿ ಮುಕ್ತರಾಗಿದ್ದೇವೆ ಎಂದರ್ಥವಲ್ಲ ಎಂದು ಬನ್ನೇರುಘಟ್ಟ ರಸ್ತೆಯ ಅಪೋಲೊ ಆಸ್ಪತ್ರೆಯ ಹೃದಯ ರೋಗ ತಜ್ಞರು ಪ್ರತಿಪಾದಿಸಿದರು. ಸುದೀರ್ಘ ಕೆಲಸದ ಅವಧಿಯಿಂದಾಗಿ ಆರೋಗ್ಯ ತಪಾಸಣೆಗೆ ಹೆಚ್ಚಿನ ಆದ್ಯತೆ ನೀಡಲಾಗದ ಆಟೋ ಚಾಲಕರಿಗೆ, ಈ ರೀತಿಯ ತಪಾಸಣೆಗಳು ಅಧಿಕ ರಕ್ತದೊತ್ತಡ ಮತ್ತು ಅಸಹಜ ಕೊಲೆಸ್ಟರಾಲ್ ನಂತಹ ಗುಪ್ತ ಅಪಾಯದ ಅಂಶಗಳನ್ನು ಯಾವುದೇ ತೊಂದರೆಗಳು ಕಾಣಿಸಿಕೊಳ್ಳುವ ಮೊದಲೇ ಪತ್ತೆ ಹಚ್ಚಲು ನೆರವಾಗುತ್ತವೆ.