LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಲೋಹಿಯಾ ಅವರ ಚಿಂತನೆಗಳನ್ನು ಜಾರಿಗೆ ತರಲು ಗ್ಯಾರಂಟಿ ಯೋಜನೆಗಳ ಮೂಲಕ ಪ್ರಯತ್ನ: ಮಾಜಿ ಸಿಎಂ ಸಿದ್ದರಾಮಯ್ಯ

ಅಸಮಾನತೆ, ಜಾತೀಯತೆ ತೊಡೆದುಹಾಕದೆ ಸಮಸಮಾಜ ನಿರ್ಮಾಣ ಸಾಧ್ಯವಿಲ್ಲ, ಸಾಮಾಜಿಕ ಮತ್ತು ಆರ್ಥಿಕವಾಗಿ ಶಕ್ತಿ ತುಂಬಿದಾಗ ಮಾತ್ರ ಜಾತಿ ವ್ಯವಸ್ಥೆಯಲ್ಲಿ ಬದಲಾವಣೆ ಸಾಧ್ಯ, ನಂಜುಂಡಸ್ವಾಮಿ ಅವರ ಪ್ರೇರಣೆಯಿಂದ ರಾಜಕೀಯ ಪ್ರವೇಶಿಸಿದೆ; ಲೋಹಿಯಾ ಚಿಂತನೆ ನನ್ನ ರಾಜಕೀಯ ಬದುಕಿನ ಮೇಲೆ ಪ್ರಭಾವ ಬೀರಿದೆ.

ಬೆಂಗಳೂರು : ಸಮಾಜದಲ್ಲಿನ ಅಸಮಾನತೆ ಮತ್ತು ಜಾತೀಯತೆಯನ್ನು ತೊಡೆದುಹಾಕದೆ ಸಮಸಮಾಜ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಎಲ್ಲರಿಗೂ ಸಮಾನ ಅವಕಾಶಗಳು ದೊರೆಯಬೇಕು. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಶಕ್ತಿ ತುಂಬಿದಾಗ ಮಾತ್ರ ಶತಮಾನಗಳಿಂದ ಜಡತ್ವಕ್ಕೆ ಒಳಗಾಗಿರುವ ಜಾತಿ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಸಾಧ್ಯ. ಈ ನಿಟ್ಟಿನಲ್ಲಿ ರಾಮ ಮನೋಹರ ಲೋಹಿಯಾ ಅವರ ಚಿಂತನೆಗಳನ್ನು ತಮ್ಮ ಆಡಳಿತದಲ್ಲಿ ಜಾರಿಗೆ ತರಲು ಪ್ರಯತ್ನಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.news_1791829243_2_173.webp

ನಟರಾಜ್ ಹುಳಿಯಾರ್ ಅವರು ರಚಿಸಿರುವ "ಡಾಕ್ಟರ್ ಸಾಹೇಬ್" ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾವು ಕಾಂಗ್ರೆಸ್ ಪಕ್ಷದಲ್ಲಿದ್ದರೂ ಲೋಹಿಯಾ ಅವರ ಸಮಾಜವಾದಿ ಚಿಂತನೆಗಳನ್ನು ಆಡಳಿತದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿದ್ದೇನೆ. ಅಧಿಕಾರ ವಿಕೇಂದ್ರೀಕರಣ, ಲಿಂಗ ತಾರತಮ್ಯ ನಿವಾರಣೆ, ಸಾಮಾಜಿಕ ಸಮಾನತೆ ಮತ್ತು ಅವಕಾಶ ವಂಚಿತ ಸಮುದಾಯಗಳಿಗೆ ನ್ಯಾಯ ಒದಗಿಸುವುದು ಸಮಾಜವಾದಿ ಚಿಂತನೆಯ ಪ್ರಮುಖ ಆಶಯಗಳಾಗಿವೆ ಎಂದರು.

ಲೋಹಿಯಾ ಅವರು ಕಾಂಗ್ರೆಸ್‌ಯೇತರ ಸರ್ಕಾರಗಳ ರಚನೆಯ ಕುರಿತು ಬಲವಾದ ನಿಲುವು ಹೊಂದಿದ್ದರು. ಅವರಿಗೆ ಕರ್ನಾಟಕದೊಂದಿಗೂ ನಿಕಟ ಸಂಬಂಧವಿತ್ತು. 1951ರಲ್ಲಿ ಅವರು ಕಾಗೋಡಿಗೆ ಭೇಟಿ ನೀಡಿದ್ದರು. ಅವರ ಚಿಂತನೆಗಳಿಂದ ಪ್ರಭಾವಿತರಾದ ಅನೇಕ ಸಮಾಜವಾದಿಗಳು ಕರ್ನಾಟಕದಲ್ಲಿದ್ದಾರೆ. ರಾಜಕೀಯ, ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಹಲವರು ಲೋಹಿಯಾ ಅವರ ವಿಚಾರಗಳಿಂದ ಪ್ರೇರಣೆ ಪಡೆದಿದ್ದಾರೆ ಎಂದು ಸಿದ್ದರಾಮಯ್ಯ ಅವರು ಸ್ಮರಿಸಿದರು.

ಸೀತಾರಾಮ್, ಕಿಶನ್ ಪಟ್ನಾಯಕ್, ಬಿ.ಆರ್. ಪಾಟೀಲ್, ಬಿ.ಎಲ್. ಶಂಕರ್ ಸೇರಿದಂತೆ ಅನೇಕ ಸಮಾಜವಾದಿ ಚಿಂತಕರ ಒಡನಾಟವನ್ನು ಉಲ್ಲೇಖಿಸಿದ ಅವರು, ಸಾಹಿತಿಗಳಾದ ತೇಜಸ್ವಿ, ಅನಂತಮೂರ್ತಿ ಮತ್ತು ರಾಮದಾಸ್ ಅವರಂತಹವರ ಮೇಲೆಯೂ ಸಮಾಜವಾದಿ ಚಿಂತನೆಗಳ ಪ್ರಭಾವವಿತ್ತು ಎಂದರು.

ತಮ್ಮ ರಾಜಕೀಯ ಬದುಕಿನ ಆರಂಭವನ್ನು ನೆನಪಿಸಿಕೊಂಡ ಸಿದ್ದರಾಮಯ್ಯ ಅವರು, 1971ರಲ್ಲಿ ಮೈಸೂರಿನ ಶಾರದಾ ವಿಲಾಸ್ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಪ್ರೊಫೆಸರ್ ನಂಜುಂಡಸ್ವಾಮಿ ಅವರ ಪರಿಚಯವಾಯಿತು. ಅವರು ವಿದ್ಯಾರ್ಥಿಗಳೊಂದಿಗೆ ದೇಶದ ರಾಜಕೀಯ, ಸಮಾಜ ಮತ್ತು ಸಾಮಾಜಿಕ ಬದಲಾವಣೆಗಳ ಕುರಿತು ಚರ್ಚೆ ನಡೆಸುತ್ತಿದ್ದರು. ಆ ಚರ್ಚೆಗಳು ತಮ್ಮ ಮೇಲೆ ಪ್ರಭಾವ ಬೀರಿದವು ಎಂದು ಹೇಳಿದರು.

ನಂಜುಂಡಸ್ವಾಮಿ ಅವರು ರಾಜಕೀಯಕ್ಕೆ ಬರಲು ಪ್ರೇರೇಪಿಸಿದರು. ಅವರಿಂದಲೇ ಸಮಾಜವಾದಿ ಯುವಜನ ಸಭಾದ ಸದಸ್ಯನಾದೆ. ರಾಮ ಮನೋಹರ ಲೋಹಿಯಾ ಅವರ ವಿಚಾರಗಳನ್ನು ನಂಜುಂಡಸ್ವಾಮಿ ಅವರು ಪರಿಚಯಿಸಿದರು. ಲೋಹಿಯಾ ಸಂಪಾದಕರಾಗಿದ್ದ "Mankind" ಪತ್ರಿಕೆಯ ಕನ್ನಡ ಆವೃತ್ತಿ "ಮಾನವ" ಪತ್ರಿಕೆಯನ್ನು ಮೈಸೂರಿನಲ್ಲಿ ಮಾರಾಟ ಮಾಡುತ್ತಿದ್ದೆ. ಈ ಅನುಭವಗಳು ತಮ್ಮ ರಾಜಕೀಯ ಚಿಂತನೆ ರೂಪುಗೊಳ್ಳಲು ನೆರವಾದವು ಎಂದು ತಿಳಿಸಿದರು.

1972ರಲ್ಲಿ ವಕೀಲನಾದ ಬಳಿಕ 1977ರವರೆಗೆ ಸಮಾಜವಾದಿ ಪಕ್ಷದಲ್ಲಿದ್ದೆ. ನಂತರ ಜನತಾ ಪಕ್ಷದ ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ತಾಲೂಕು ಮಟ್ಟದ ಸಂಘಟನೆಯಲ್ಲಿಯೂ ಕೆಲಸ ಮಾಡಿದೆ. 1980ರಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದಾಗ ಎದುರಿಸಿದ ಆರ್ಥಿಕ ಸಂಕಷ್ಟಗಳನ್ನೂ ನೆನಪಿಸಿಕೊಂಡರು. ಸಮಾಜವಾದಿ ನಾಯಕರು ಹಾಗೂ ಸ್ನೇಹಿತರು ನೆರವು ನೀಡಿದ್ದರೂ ಚುನಾವಣೆಯ ಕೊನೆಯ ದಿನಗಳಲ್ಲಿ ಹಣದ ಕೊರತೆ ಎದುರಿಸಬೇಕಾಯಿತು. ಅಂತಿಮವಾಗಿ 1983ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನಸಭೆಗೆ ಆಯ್ಕೆಯಾದೆ ಎಂದು ತಮ್ಮ ರಾಜಕೀಯ ಪಯಣವನ್ನು ವಿವರಿಸಿದರು.news_1791829242_1_142.webp

ಜನತಾ ಪಕ್ಷ ವಿಭಜನೆಯಾಗದೆ ಉಳಿದಿದ್ದರೆ ಕರ್ನಾಟಕದಲ್ಲಿ ಅದರ ರಾಜಕೀಯ ನೆಲೆ ಮತ್ತಷ್ಟು ಬಲವಾಗಿ ಮುಂದುವರಿಯಬಹುದಿತ್ತು ಎಂಬುದು ತಮ್ಮ ಅಭಿಪ್ರಾಯವಾಗಿದೆ ಎಂದು ಹೇಳಿದರು.

ಲೋಹಿಯಾ ಅವರು ಹಿಂದುಳಿದವರು, ದಲಿತರು, ಮಹಿಳೆಯರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರಿಗೆ ರಾಜಕೀಯ ಪಕ್ಷಗಳು ಹಾಗೂ ಸರ್ಕಾರಗಳಲ್ಲಿ ಸಮರ್ಪಕ ಪ್ರಾತಿನಿಧ್ಯ ದೊರೆಯಬೇಕು ಎಂಬ ಆಶಯ ಹೊಂದಿದ್ದರು. ಈ ಸಮುದಾಯಗಳಿಗೆ ಅವಕಾಶ ಕಲ್ಪಿಸುವ ಮೂಲಕವೇ ಸಾಮಾಜಿಕ ನ್ಯಾಯದ ಗುರಿ ಸಾಧಿಸಲು ಸಾಧ್ಯ. ಸಮಾನ ಅವಕಾಶಗಳು ದೊರೆಯದ ಸಮಾಜದಲ್ಲಿ ನಿಜವಾದ ಸಮಾನತೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು.

ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳನ್ನು ಉಲ್ಲೇಖಿಸಿದ ಅವರು, ಎಲ್ಲರಿಗೂ ಸಾಮಾಜಿಕ ಮತ್ತು ಆರ್ಥಿಕ ಶಕ್ತಿ ದೊರೆಯಬೇಕು. ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಜನರಿಗೆ ಅವಕಾಶಗಳನ್ನು ಕಲ್ಪಿಸದೆ ಜಾತೀಯತೆಯನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಅವಕಾಶ ವಂಚಿತ ಸಮುದಾಯಗಳಿಗೆ ಶಿಕ್ಷಣ, ಆರ್ಥಿಕ ಸಬಲೀಕರಣ ಮತ್ತು ಸಾಮಾಜಿಕ ಪ್ರಾತಿನಿಧ್ಯ ದೊರೆಯಬೇಕು ಎಂದರು.

ಲೋಹಿಯಾ ಅವರ ಚಿಂತನೆಯಲ್ಲಿ ಜಾತಿ ಮತ್ತು ವರ್ಗದ ನಡುವಿನ ಸಂಬಂಧಕ್ಕೆ ಮಹತ್ವವಿದೆ. ವರ್ಗದಲ್ಲಿ ಚಲನೆ ಸಾಧ್ಯವಾದರೂ ಜಾತಿ ವ್ಯವಸ್ಥೆ ಸಾಮಾಜಿಕ ಚಲನೆಯನ್ನು ನಿರ್ಬಂಧಿಸುತ್ತದೆ. ಈ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕಾದರೆ ಜನರಿಗೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಶಕ್ತಿ ತುಂಬಬೇಕು. ಈ ಉದ್ದೇಶದಿಂದಲೇ ತಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಮೂಲಕ ಅಸಮಾನತೆಯನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗಿದೆ ಎಂದು ಹೇಳಿದರು.news_1791829244_3_587.webp

ಗ್ಯಾರಂಟಿ ಯೋಜನೆಗಳು ಸಮಾಜದಲ್ಲಿನ ಆರ್ಥಿಕ ಅಂತರವನ್ನು ಕಡಿಮೆ ಮಾಡುವ ಪ್ರಯತ್ನದ ಭಾಗವಾಗಿವೆ ಎಂಬುದು ತಮ್ಮ ನಂಬಿಕೆ. ಅಸಮಾನತೆ ಕಡಿಮೆಯಾದಾಗ ಮಾತ್ರ ಸಮಾನತೆಯ ಸಮಾಜ ನಿರ್ಮಾಣಕ್ಕೆ ಅಗತ್ಯವಾದ ಪರಿಸ್ಥಿತಿ ಸೃಷ್ಟಿಯಾಗುತ್ತದೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.

ಬಸವಣ್ಣನವರ ವಚನವನ್ನು ಉಲ್ಲೇಖಿಸಿದ ಅವರು, “ಇವನಾರವ ಇವನಾರವ ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆನಿಸಯ್ಯ” ಎಂಬ ಸಮಾನತೆಯ ಸಂದೇಶಕ್ಕೆ ಸುಮಾರು 850 ವರ್ಷಗಳ ಇತಿಹಾಸವಿದ್ದರೂ ಜಾತಿ ವ್ಯವಸ್ಥೆ ಇನ್ನೂ ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ ಎಂದು ವಿಷಾದಿಸಿದರು.

ಸಮಾಜದಲ್ಲಿ ಜಾತಿ ವ್ಯವಸ್ಥೆ ಮುಂದುವರಿಯಲು ಅದರಲ್ಲಿರುವ ಜಡತ್ವವೇ ಪ್ರಮುಖ ಕಾರಣವಾಗಿದೆ. ಅಸ್ಪೃಶ್ಯರು, ದಲಿತರು, ಆದಿವಾಸಿಗಳು ಮತ್ತು ಬಡವರಿಗೆ ಸಮಾನ ಅವಕಾಶಗಳು ದೊರೆಯದಿರುವುದರಿಂದ ಅಸಮಾನತೆ ಮುಂದುವರಿದಿದೆ. ಅವಕಾಶಗಳಿಂದ ವಂಚಿತರಾದವರನ್ನು ಅವರ ಸಾಮರ್ಥ್ಯದ ಆಧಾರದಲ್ಲಿ ಅಳೆಯಲು ಸಾಧ್ಯವಿಲ್ಲ. ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿದಾಗ ಮಾತ್ರ ಸಾಮಾಜಿಕ ಬದಲಾವಣೆ ಸಾಧ್ಯ ಎಂದು ಹೇಳಿದರು.

ಸಮಾಜವಾದಿ ಚಿಂತನೆಯ ಜೊತೆಗೆ ಅಂಬೇಡ್ಕರ್, ಜಯಪ್ರಕಾಶ್ ನಾರಾಯಣ್ ಮತ್ತು ವಿನೋಬಾ ಭಾವೆ ಅವರ ವಿಚಾರಗಳನ್ನೂ ಅರ್ಥಮಾಡಿಕೊಳ್ಳಬೇಕು. ಸಮಾಜದ ಒಳನೋಟವನ್ನು ಅರಿಯದೆ ಸಾಮಾಜಿಕ ಬದಲಾವಣೆಯ ಆಶಯವನ್ನು ಸಾಕಾರಗೊಳಿಸಲು ಸಾಧ್ಯವಿಲ್ಲ. ಇಂತಹ ಚಿಂತನೆಗಳು ಜನರಲ್ಲಿ, ವಿಶೇಷವಾಗಿ ಯುವಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಅಭಿಪ್ರಾಯಪಟ್ಟರು.

ನಟರಾಜ್ ಹುಳಿಯಾರ್ ಅವರು ಕೇವಲ ಕಥೆ, ಕಾದಂಬರಿ ಮತ್ತು ಕವಿತೆಗಳನ್ನು ಬರೆಯುವ ಸಾಹಿತಿಯಲ್ಲ. ಸಮಾಜವನ್ನು ಆಳವಾಗಿ ಅರ್ಥಮಾಡಿಕೊಳ್ಳುವ ಚಿಂತಕರೂ ಹೌದು. ಸಮಾಜದ ಒಳನೋಟವನ್ನು ಗ್ರಹಿಸಿ ಲೋಹಿಯಾ ಅವರ ಚಿಂತನೆಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಅವರು ಈ ಪುಸ್ತಕವನ್ನು ರಚಿಸಿದ್ದಾರೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.

ಈ ಪುಸ್ತಕದ ರಚನೆಗೆ ಮೂರು ವರ್ಷಗಳ ಕಾಲ ಶ್ರಮಿಸಿರುವ ನಟರಾಜ್ ಹುಳಿಯಾರ್ ಅವರನ್ನು ಅಭಿನಂದಿಸಿದ ಅವರು, ಪುಸ್ತಕವು ಜನರಲ್ಲಿ, ವಿಶೇಷವಾಗಿ ವಿದ್ಯಾರ್ಥಿಗಳು, ಯುವಕರು ಮತ್ತು ಮಹಿಳೆಯರಲ್ಲಿ ಸಾಮಾಜಿಕ ಬದಲಾವಣೆಯ ಕುರಿತು ಚಿಂತನೆ ಮೂಡಿಸಲಿ ಎಂದು ಆಶಿಸಿದರು.

ಸಮಾಜದಲ್ಲಿ ಅವಕಾಶ ವಂಚಿತರಾಗಿರುವವರಿಗೆ ಸಮಾನ ಅವಕಾಶಗಳನ್ನು ಕಲ್ಪಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಲೋಹಿಯಾ ಅವರ ಕನಸಿನ ಸಮಸಮಾಜವನ್ನು ನಿರ್ಮಿಸಲು ಯುವಜನರು, ವಿದ್ಯಾರ್ಥಿಗಳು ಮತ್ತು ಮಹಿಳೆಯರು ಈ ಚಿಂತನೆಗಳನ್ನು ಅರ್ಥಮಾಡಿಕೊಂಡು ಸಾಮಾಜಿಕ ನ್ಯಾಯದ ದಿಕ್ಕಿನಲ್ಲಿ ಪ್ರಯತ್ನಿಸಬೇಕು ಎಂದು ಕರೆ ನೀಡಿದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿದ್ದು ಕೋಟೆಗೆ ಜಮೀರ್ ಎಂಟ್ರಿಯಾದರು!ಡಾ. ಸುಧಾ ಯಾದವ್ ಅವರು ಕರ್ನಾಟಕದ ನೂತನ ರಾಜ್ಯಪಾಲರುಲೋಹಿಯಾ ಅವರ ಚಿಂತನೆಗಳನ್ನು ಜಾರಿಗೆ ತರಲು ಗ್ಯಾರಂಟಿ ಯೋಜನೆಗಳ ಮೂಲಕ ಪ್ರಯತ್ನ: ಮಾಜಿ ಸಿಎಂ ಸಿದ್ದರಾಮಯ್ಯ ಆಕಾಶ್ INVICTUS ನಿಂದ- ಎಂಜಿನಿಯರಿಂಗ್ 2.0 ಅನ್ನು ಪ್ರಾರಂಭಿಸಿಗಾರ್ಡನ್ ಸಿಟಿ ವಿಶ್ವವಿದ್ಯಾಲಯದಲ್ಲಿ ಕೈಗಾರಿಕಾ ಆಧಾರಿತ Modular M.Tech ಕಾರ್ಯಕ್ರಮಸಮಾಜ ಸೇವೆಯನ್ನು ಗುರುತಿಸಿ ಡಾ. ರಾಮಚಂದ್ರ ಹೂಡಿ ಚಿನ್ನಿ ಅವರಿಗೆ ಉತ್ತಮ ನಾಯಕ ಪ್ರಶಸ್ತಿ ಪ್ರಧಾನಸೂಡಾ ನೂತನ ಅಧ್ಯಕ್ಷ ಮಧುಸೂದನ್ ಅವರನ್ನು ಅಭಿನಂದಿಸಿದ ಸಚಿವ ಮಧು ಬಂಗಾರಪ್ಪಮೋದಿ ಹೆಸರಿನ ರಾಜಕೀಯ ಸರಕು ಖಾಲಿ; ಈಗ SIR ಮೂಲಕ ಮತದಾರರ ಹೆಸರು ಡಿಲೀಟ್ ಮಾಡುವ ಹುನ್ನಾರ: ಸಚಿವ ಮಧು ಬಂಗಾರಪ್ಪ ಆರೋಪಸೊರಬದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ; ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಭಾನುವಾರ “ಮಾಣಿಕ್ಯ ಸಂಭ್ರಮ ೨೦೨೬” ಪ್ರಶಸ್ತಿ ಪ್ರದಾನ