ಹಾಸನ : ಕನ್ನಡ ಸಾಹಿತ್ಯ ಪರಂಪರೆ ಮೆಲುಕು ಹಾಕುವ, ಕನ್ನಡ ಸಾಹಿತ್ಯ ವಿವಿಧ ಪ್ರಕಾರಗಳನ್ನು ಗುರುತಿಸಿ ಗೌರವಿಸುವ ಹಾಗೂ ರಾಜ್ಯ ಹೊರ ರಾಜ್ಯಗಳ ಕವಿಗಳನ್ನು ಪ್ರೋತ್ಸಾಹಿಸುವ, ಹೊಸ ಕೃತಿಗಳನ್ನು ಪ್ರಕಟಿಸುವ ಹಿನ್ನೆಲೆಯಲ್ಲಿ ಮಾಣಿಕ್ಯ ಪ್ರಕಾಶನ ಪ್ರತಿವರ್ಷದಂತೆ ೨೦೨೬ ಅಕ್ಟೋಬರ್ ೧೧ ಭಾನುವಾರ ನಗರದ ಸಂಸ್ಕೃತ ಭವನದಲ್ಲಿ ಬೆಳಗ್ಗೆ ೧೦ ಗಂಟೆಗೆ ಹನ್ನೊಂದನೇ ವರ್ಷದ ವಾರ್ಷಿಕೋತ್ಸವ ನಿಮಿತ್ತ “ಮಾಣಿಕ್ಯ ಸಂಭ್ರಮ ೨೦೨೬” ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಅವರು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಇತಿಹಾಸ & ಪ್ರಾಕ್ತನಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಸಾಹಿತಿ ಡಾ. ಹಸೀನಾ ಎಚ್.ಕೆ.ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದು, ಆದಿಕವಿಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ರಾಯಚೂರಿನ ಉಪಕುಲಪತಿಯವರಾದ ಡಾ. ಶಿವಾನಂದ ಕೆಳಗಿನಮನಿ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಹಾಸನ ಜಿಲ್ಲಾ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ.ಕೃಷ್ಣೇಗೌಡ, ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು, ಪೂರ್ಣಪ್ರಜ್ಞಾ ಇನ್ಫಾಸ್ಟçಕ್ಚರ್ ಮಾಲೀಕರಾದ ಕೆ.ಆರ್. ಲಕ್ಷ್ಮೀಕಾಂತ್, ಮೈಸೂರಿನ ಪ್ರಸಿದ್ಧ ಸಾಹಿತಿ ಟಿ. ಸತೀಶ್ ಜವರೇಗೌಡ, ಭೀಮವಿಜಯ ಪತ್ರಿಕೆಯ ಸಂಪಾದಕ ನಾಗರಾಜ್ ಹೆತ್ತೂರು, ಸಮಾಜ ಸೇವಕ ಗಣೇಶ್ ತಮ್ಲಾಪುರ, ಆಲೂರು ತಾಲ್ಲೂಕು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ವರದರಾಜು ಡಿ.ಎಂ, ಸಮಾಜ ಸೇವಕ ವೈ.ಎಸ್. ರಮೇಶ್, ಸಾಂಸ್ಕೃತಿಕ ಸಂಘಟಕ ಜಾವಗಲ್ ಪ್ರಸನ್ನಕುಮಾರ್, ನಾಗರಾಜ್ ದೊಡ್ಡಮನಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
*ರಾಜ್ಯ ಹಾಗೂ ಹೊರ ರಾಜ್ಯಗಳ ಆಯ್ದ ೨೮ ಕೃತಿಗಳಿಗೆ ೨೦೨೬ರ ದತ್ತಿ ಪುರಸ್ಕಾರ ಹಾಗೂ ಮಾಣಿಕ್ಯ ಪ್ರಕಾಶನದ ವಾರ್ಷಿಕ ಪ್ರಶಸ್ತಿಗಳ ಪ್ರದಾನ*
ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು ಮಾತನಾಡಿ ೨೦೨೬ ನೇ ಸಾಲಿನ ದತ್ತಿ ಪ್ರಶಸ್ತಿಗಾಗಿ ಕರೆಕೊಟ್ಟಾಗ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ೩೫೦ ಕ್ಕೂ ಹೆಚ್ಚು ಕೃತಿಗಳು ಸ್ಪರ್ಧೆಗೆ ಬಂದಿದ್ದವು ಹಿರಿಯ ಸಾಹಿತಿಗಳ ತಂಡ ಎರಡು ತಿಂಗಳುಗಳ ಕಾಲ ಮೌಲ್ಯಮಾಪನ ಮಾಡಿ ೧೩ ದತ್ತಿಗಳಿಗೆ ೨೮ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಹಾಸನ ಹಿರಿಯ ಸಾಹಿತಿ ಎನ್. ಶೈಲಜಾ ಹಾಸನ ದತ್ತಿ ಪ್ರಶಸ್ತಿ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು ದತ್ತಿ ದಾನಿಗಳಾದ ಉಡುಪಿಯ ಪ್ರಭಾವತಿ ಶೆಡ್ತಿ, ಹಾಸನದ ಸಿ.ಎನ್. ನೀಲಾವತಿ, ಮುಂಬಯಿಯ ಡಾ. ವಿಶ್ವೇಶ್ವರ ಎನ್. ಮೇಟಿ, ಮುಂಬಯಿಯ ಡಾ. ಅಮರೇಶ ಪಾಟೀಲ, ರಾಯಚೂರಿನ ರೇಷ್ಮಾ ಕಂದಕೂರು, ಉತ್ತರ ಕನ್ನಡದ ಶಿವಲೀಲಾ ಹುಣಸಗಿ, ದಕ್ಷಿಣ ಕನ್ನಡದ ಫ್ಲಾವಿಯಾ ಅಲ್ಬುಕರ್ಕ್, ಶಿವಮೊಗ್ಗದ ಸೈಯದ್ ಮುಹಿಬುಲ್ಲ ಖಾದ್ರಿ, ಹಾಸನದ ಸುರೇಶ್ ಪಿಡಬ್ಲೂಡಿ, ಹಾಸನದ ಡಿ.ಸುಜಲಾದೇವಿ, ಆಲೂರಿನ ದೇಸು ಆಲೂರು, ಕಾರ್ಲೆಯ ಹರಿಣಿ ಆರ್ ಸೇರಿದಂತೆ ರಾಜ್ಯ ಹಾಗೂ ಹೊರರಾಜ್ಯಗಳ ಸಾಹಿತ್ಯ ಸಾಧಕರು ಭಾಗವಹಿಸಲಿದ್ದಾರೆ. ಬೆಳಗಿನ ಅವಧಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ೧೨ ಸಾಧಕರನ್ನು ಗುರುತಿಸಿ ಗೌರವಿಸಲಾಗುತ್ತದೆ.
ರಾಜ್ಯಮಟ್ಟದ ಹೊಯ್ಸಳ ಸಾಂಸ್ಕೃತಿಕ ಪ್ರಶಸ್ತಿಗೆ ಮುಂಬಯಿಯ ಎನ್.ಬಿ.ಸವಳಸಂಗ, ಹಾಸನದ ಬಸವ ತತ್ತ್ವ ಪ್ರಚಾರಕ ಆರ್.ಇ. ಸೋಮಶೇಖರ, ಜಾವಗಲ್ಲಿನ ಸಮಾಜ ಸೇವಕ ಮೊಹಮ್ಮದ್ ಫೈರೋಜ್ ಗಾಂಧಿ, ಸಕಲೇಶಪುರದ ಚಲನಚಿತ್ರ ನಿರ್ದೇಶಕ ಅರುಣ್‌ಗೌಡ ಕರಡಿಗಾಲ, ಮುದ್ದೆಬಿಹಾಳದ ಝಾಕೀರ್ ನಬೀಸಾ, ಹಾಸನದ ಪೌರ ಕಾರ್ಮಿಕರಾದ ದೀಪು ಅವರುಗಳು ಭಾಜನರಾಗಿದ್ದಾರೆ. ರಾಜ್ಯಮಟ್ಟದ ಹೊಯ್ಸಳ ಸಾಹಿತ್ಯ ಪ್ರಶಸ್ತಿಗೆ ಬೆಳಗಾವಿಯ ಆರ್.ಎಸ್. ಪಾಟೀಲ, ಹಾಸನದ ವಾಣಿಘಟ್ಟಿ, ಹಾಸನದ ಬಾ.ನಂ. ಲೋಕೇಶ, ಚಾಮರಾಜನಗರದ ನಂದಿನಿ ಪ್ರಮೋದ್, ಮೈಸೂರಿನ ಎಸ್. ಶಿಶಿರಂಜನ್, ಧಾರವಾಡದ ಆರ್.ಎಂ. ಗೋಗೇರಿ ಅವರುಗಳು ಭಾಜನರಾಗಿದ್ದಾರೆ ಎಂದರು.
*ರಾಜ್ಯ ಹಾಗೂ ಹೊರರಾಜ್ಯ ಸಾಹಿತಿಗಳ ಐದು ಕೃತಿಗಳ ಲೋಕಾರ್ಪಣೆ ಹಾಗೂ ಅಂತರಾಜ್ಯಮಟ್ಟದ ಕವಿಗೋಷ್ಠಿ*
ಪತ್ರಕರ್ತ ಹಾಗೂ ಸಾಹಿತಿ ನಾಗರಾಜ್ ಹೆತ್ತೂರು ಮಾತನಾಡಿ ಮಧ್ಯಾಹ್ನ ಅವಧಿಯಲ್ಲಿ ಜಿಲ್ಲೆಯ ಹಿರಿಯ ಸಾಹಿತಿಗಳಾದ ಜಯಂತಿ ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕೃತಿ ಲೋಕಾರ್ಪಣೆ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಹಾಸನ ತಾಲ್ಲೂಕು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಅಧ್ಯಕ್ಷೆ ಕೆ.ಸಿ.ಗೀತಾ ಆಶಯ ನುಡುಗಳನ್ನಾಡಲಿದ್ದು ಸಂಭ್ರಮದಲ್ಲಿ ಕರ್ನಾಟಕ ಸೇರಿದಂತೆ ಆಂದ್ರ, ಚೆನ್ನೈ, ಮಹಾರಾಷ್ಟçದಿಂದ ೧೫೦ ಕ್ಕೂ ಹೆಚ್ಚು ಕವಿಗಳು ಈ ಸಂಭ್ರಮದಲ್ಲಿ ಭಾಗವಹಿಸಲಿದ್ದಾರೆ. ಮುಂಬಯಿಯ ಡಾ. ವಿಶ್ವೇಶ್ವರ ಮೇಟಿಯವರ “ಹಳ್ಳಿ ಎಂಬ ಬಳ್ಳಿ” ಸಂಶೋಧನಾ ಕೃತಿಯನ್ನು ಹಿರಿಯ ಸಾಹಿತಿ ಬಿ.ಎಂ. ಭಾರತಿ ಹಾದಿಗೆ ಅವರು ಲೋಕಾರ್ಪಣೆ ಮಾಡಿ ಮಾತನಾಡಲಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಹಿರಿಯ ಸಾಹಿತಿ ಎಸ್.ಜಿ.ಕಡೇಮನಿಯವರ “ಸಾಲು ಹಣತೆಗಳು” ಕೃತಿಯನ್ನು ರಾಜೇಶ್ವರಿ ಹುಲ್ಲೇನಹಳ್ಳಿಯವರು ಲೋಕಾರ್ಪಣೆ ಮಾಡಿ ಮಾತನಾಡಲಿದ್ದಾರೆ. ಉತ್ತರಕನ್ನಡ ಹಳಿಯಾಳ ತಾಲ್ಲೂಕಿನ ಭಾರತಿ ಕೆ.ನಲವಡೆಯವರ “ಭಾವಸೆಲೆ” ಕೃತಿಯನ್ನು ಸಾಹಿತಿ ವಾಸು ಸಮುದ್ರವಳ್ಳಿಯವರು ಲೋಕಾರ್ಪಣೆ ಮಾಡಿ ಮಾತನಾಡಲಿದ್ದಾರೆ. ಹಾಸನದ ಕವಯಿತ್ರಿ ಗಿರಿಜಾ ನಿರ್ವಾಣಿಯವರ “ಕರಿಮುಗಿಲು” ಕವನ ಸಂಕಲನವನ್ನು ಚೆನ್ನೈನ ಸಾಹಿತಿ ರಶ್ಮಿ ಚಂಗಚಂಡ ಅವರು ಲೋಕಾರ್ಪಣೆ ಮಾಡಿ ಮಾತನಾಡಲಿದ್ದಾರೆ. ಹಾಸನದ ಎಚ್.ಜಿ. ನೀಲಮ್ಮರವರ ಸಂಪಾದಿತ ಕೃತಿ “ಬದುಕು ಹಾಡಿದ ಹಾಡು” ಕೃತಿಯನ್ನು ಜನನಿ ಫಂಡೇಷನ್ನಿನ ಅಧ್ಯಕ್ಷೆ ಎಚ್.ಎಸ್. ಭಾನುಮತಿಯವರು ಲೋಕಾರ್ಪಣೆ ಮಾಡಿ ಮಾತನಾಡಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ೧. ಕೊಟ್ರೇಶ್ ಎಸ್. ಉಪ್ಪಾರ್, ಸಂಸ್ಥಾಪಕ ಅಧ್ಯಕ್ಷರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ.), ಬೆಂಗಳೂರು.
೨. ರವಿ ನಾಕಲಗೂಡು, ಜಿಲ್ಲಾ ಮಾಜಿ ಗೌರವಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಹಾಸನ.
೩. ನಾಗರಾಜ್ ಹೆತ್ತೂರು, ಪತ್ರಕರ್ತ ಹಾಗೂ ಸಾಹಿತಿ, ಹಾಸನ.
೪. ಗಣೇಶ್ ತಮ್ಲಾಪುರ, ಸಮಾಜ ಸೇವಕರು, ಹಾಸನ.
೫. ವರದರಾಜು ಡಿ.ಎಂ. ಅಧ್ಯಕ್ಷರು, ಸರಕಾರಿ ನೌಕರರ ಸಂಘ, ಆಲೂರು.
೬. ಎಚ್.ಎಸ್. ಭಾನುಮತಿ, ಜಿಲ್ಲಾ ಉಪಾಧ್ಯಕ್ಷರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಹಾಸನ.
೭. ಕೆ.ಸಿ. ಗೀತಾ, ತಾಲ್ಲೂಕು ಅಧ್ಯಕ್ಷರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಹಾಸನ. ಇವರು ಭಾಗವಹಿಸಿದರು.