ಬೆಂಗಳೂರು: ಪೂರ್ವ ನಗರ ಪಾಲಿಕೆಯ ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್ ಅವರು ನಗರ ಪಾಲಿಕೆಯ ವಾರ್ಡ್‌ಗಳಲ್ಲಿ ನಡೆಯುತ್ತಿರುವ ರಸ್ತೆ ಬದಿಯ ಚರಂಡಿ ನಿರ್ವಹಣೆ, ರಸ್ತೆ ಅಭಿವೃದ್ಧಿ, ಡಾಂಬರೀಕರಣ ಹಾಗೂ ಸಿಸಿ ರಸ್ತೆ ಕಾಮಗಾರಿಗಳ ಸ್ಥಳ ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು.
*ಚರಂಡಿ ನಿರ್ವಹಣೆಗೆ ಆದ್ಯತೆ ನೀಡಿ*
ಇದೇ ವೇಳೆ ವಿನಾಯಕ ಲೇಔಟ್ ನಲ್ಲಿ ರಸ್ತೆ ಬದಿಯ ಚರಂಡಿ ಕಾಮಗಾರಿಯನ್ನು ಪರಿಶೀಲಿಸಿದರು. ಹಾಳಾಗಿರುವ ಸ್ಲ್ಯಾಬ್ ಗಳನ್ನು ತಕ್ಷಣ ದುರಸ್ತಿ ಮಾಡಬೇಕು. ಮಳೆ ನೀರು ಸರಾಗವಾಗಿ ಹರಿಯುವಂತೆ ಅಗತ್ಯ ರಂಧ್ರಗಳನ್ನು (ವೀಪ್ ಹೋಲ್ಸ್) ನಿರ್ಮಿಸಬೇಕು. ಹೊಸ ಚರಂಡಿ ಕಾಮಗಾರಿಯೊಂದಿಗೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ನೀರಿನ ಸರಾಗ ಹರಿವಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
*ಮಳೆಗಾಲಕ್ಕೂ ಮುನ್ನ ಕಾಮಗಾರಿ ಪೂರ್ಣಗೊಳಿಸಿ*
ಸರ್ ಎಂ.ವಿಶೇಶ್ವರಯ್ಯ ಬಡಾವಣೆಯಲ್ಲಿ ನಡೆಯುತ್ತಿರುವ ರಸ್ತೆ ಬದಿಯ ಚರಂಡಿ, ಸಿಸಿ ರಸ್ತೆ ಹಾಗೂ ಡಾಂಬರೀಕರಣ ಕಾಮಗಾರಿಗಳನ್ನು ಪರಿಶೀಲಿಸಿದ ಅಪರ ಆಯುಕ್ತರು ಮಳೆಗಾಲದ ಹಿನ್ನೆಲೆಯಲ್ಲಿ ಬಾಕಿ ಉಳಿದಿರುವ ಎಲ್ಲಾ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಈ ಮೂಲಕ ಸಾರ್ವಜನಿಕರ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಬೇಕು ಎಂದು ಸೂಚಿಸಿದರು.
*ರಸ್ತೆ ಅಭಿವೃದ್ಧಿಗೆ ಸಮನ್ವಯ ಇರಲಿ*
ಬೋವಿ ಕಾಲೋನಿಯಲ್ಲಿ ರಸ್ತೆ ಹಾಳಾಗಿರುವ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ ಅವರು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ಆದಷ್ಟು ಬೇಗ ಬಾಕಿ ಉಳಿದಿರುವ ಕುಡಿಯುವ ನೀರು ಹಾಗೂ ಒಳಚರಂಡಿ ಸಂಬಂಧಿತ ಪೈಪ್ಲೈನ್ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿಕೊಂಡು, ಕಾಮಗಾರಿಗಳು ಪೂರ್ಣಗೊಂಡ ಬಳಿಕ ಯಾವುದೇ ವಿಳಂಬವಿಲ್ಲದೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಬೇಕು. ಈ ಮೂಲಕ ಸಾರ್ವಜನಿಕರಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಬೇಕು ಎಂದು ನಿರ್ದೇಶನ ನೀಡಿದರು.
*ಚರಂಡಿಗಳಲ್ಲಿ ಸಮಗ್ರ ಹೂಳು ತೆರವು*
ಎಫ್ ಸಿ ಐ ಗೋಡೌನ್ ರಸ್ತೆ ಹಾಗೂ ರೈಲ್ವೆ ಪ್ಯಾರಲ್ ರಸ್ತೆಯ ಪಾದಚಾರಿ ಮಾರ್ಗದಲ್ಲಿನ ಕಾಬಲ್ ಸ್ಟೋನ್ಗಳನ್ನು ಸಮರ್ಪಕವಾಗಿ ಅಳವಡಿಸಿ, ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು. ರಸ್ತೆ ಬದಿಯ ಮರಗಳಿಗೆ ಸೂಕ್ತ ಟ್ರೀ ಬೇಸಿನ್ಗಳನ್ನು ನಿರ್ಮಿಸುವುದು, ತ್ಯಾಜ್ಯ ಸಾಗಣೆ ವಾಹನಗಳ ನಿಲುಗಡೆ ಸ್ಥಳದಲ್ಲಿ ಲೀಚೇಟ್ ಸಂಗ್ರಹವಾಗದಂತೆ ಅಗತ್ಯ ವ್ಯವಸ್ಥೆ ಕಲ್ಪಿಸುವುದು ಹಾಗೂ ಪರಿಸರ ಸ್ನೇಹಿ ನಿರ್ವಹಣೆ ಕೈಗೊಳ್ಳುವಂತೆ ಹಾಗೂ ಎಫ್ ಸಿ ಐ ಗೋಡೌನ್ ರಸ್ತೆ ಬದಿಯ ಚರಂಡಿಗಳಲ್ಲಿ ಸಮಗ್ರ ಹೂಳು ತೆರವು ಕಾರ್ಯ ಕೈಗೊಳ್ಳುವಂತೆ ತಿಳಿಸಿದರು.
*ಪ್ಲಾಟ್ಫಾರ್ಮ್ ರಸ್ತೆಯ ಕಾಮಗಾರಿ ಗುಣಮಟ್ಟ ಕಾಪಾಡಿ*
ಪ್ಲಾಟ್ಫಾರ್ಮ್ ರಸ್ತೆಯಲ್ಲಿ ಆರಂಭಿಕ ಹಂತದಲ್ಲಿರುವ ಕಾಮಗಾರಿಯನ್ನು ಪರಿಶೀಲಿಸಿದ ಅಪರ ಆಯುಕ್ತರು, ಗುಣಮಟ್ಟಕ್ಕೆ ಆದ್ಯತೆ ನೀಡಿ ಕಾಮಗಾರಿಯನ್ನು ಯೋಜಿತ ರೀತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
*ಎಲ್.ಎಲ್. ಎನ್ಕ್ಲೇವ್ನಲ್ಲಿ ಡಾಂಬರೀಕರಣ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ*
ಎಲ್.ಎಲ್. ಎನ್ಕ್ಲೇವ್ ಪ್ರದೇಶದಲ್ಲಿ ರಸ್ತೆ ಬದಿಯ ಚರಂಡಿ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಬಾಕಿ ಉಳಿದಿರುವ ಡಾಂಬರೀಕರಣ ಕಾಮಗಾರಿಯನ್ನು ಆದ್ಯತೆ ಮೇರೆಗೆ ತ್ವರಿತವಾಗಿ ಪೂರ್ಣಗೊಳಿಸುವಂತೆ ಅಪರ ಆಯುಕ್ತರು ಸೂಚಿಸಿದರು.
*ಮಳೆಗಾಲದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಿ*
ಪರಿಶೀಲನೆ ವೇಳೆ ಮಾತನಾಡಿದ ಅಪರ ಆಯುಕ್ತರು, ಮಳೆಗಾಲದಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾಗದಂತೆ ರಸ್ತೆ ಬದಿಯ ಚರಂಡಿಗಳಲ್ಲಿ ಮಳೆ ನೀರಿನ ಸರಾಗ ಹರಿವಿಗೆ ವ್ಯವಸ್ಥೆಗಳು ಹಾಗೂ ರಸ್ತೆ ಮೂಲಸೌಕರ್ಯ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅಪರ ಆಯುಕ್ತರ ಪರಿಶೀಲನೆ ವೇಳೆಯಲ್ಲಿ ಕೆ.ಆರ್ ಪುರ ವಿಭಾಗದ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ ಅಭಿಯಂತರರು ಹಾಗೂ ಇನ್ನಿತರೆ ಅಧಿಕಾರಿಗಳು ಹಾಜರಿದ್ದರು.