ಬೆಂಗಳೂರು : ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಅಭಿವೃದ್ಧಿ ಅಪರ ಆಯುಕ್ತರಾದ ಶ್ರೀ ವೆಂಕಟಾಚಲಪತಿ ರವರು ಇಂದು ಸನ್ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಅಭಿವೃದ್ದಿ ಯೋಜನೆ (CMIDP) ಹಾಗೂ ವಿಶೇಷ ಅಭಿವೃದ್ದಿ ಯೋಜನೆ (SIP) ಅನುದಾನದಡಿಯಲ್ಲಿ ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಪರಿಶೀಲಿಸಿದ ಅವರು ಕಾಮಗಾರಿಗಳ ಉತ್ತಮ ಗುಣಮಟ್ಟವನ್ನು ಕಾಪಾಡಿಕೊಂಡು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
*ಡಾಂಬರು ಪದರದ ದಪ್ಪ ಪರಿಶೀಲನೆಗಾಗಿ ಕೋರ್ ಕಟಿಂಗ್*
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಚಿಕ್ಕಪೇಟೆ ವಿಭಾಗದ ಕಿಮ್ಸ್ ಆಸ್ಪತ್ರೆ ಎದುರು ಲಾಲ್‌ಬಾಗ್ ಕೋಟೆ ರಸ್ತೆಯಲ್ಲಿ (ಶಿವಶಂಕರ ವೃತದಿಂದ ಮಿನರ್ವ ವೃತ್ದವರೆಗೆ) SIP ಅನುದಾನದಡಿಯಲ್ಲಿ ಸುಮಾರು 530 ಮೀಟರ್ ಉದ್ದದ ರಸ್ತೆಗೆ ನಡೆಯುತ್ತಿರುವ ಡಾಂಬರೀಕರಣ ಕಾಮಗಾರಿಯಲ್ಲಿ ಈಗಾಗಲೇ ಒಂದು ಬದಿ ಪೂರ್ಣಗೊಂಡಿದ್ದು ಮತ್ತೊಂದು ಬದಿ ಪ್ರಗತಿಯಲ್ಲಿರುತ್ತದೆ. ಸದರಿ ಕಾಮಗಾರಿಯನ್ನು ಪರಿಶೀಲಿಸಿದ ಅಭಿವೃದ್ದಿ ಅಪರ ಆಯುಕ್ತರು ಕೋರ್ ಕಟಿಂಗ್ ಮೂಲಕ 2 ಸ್ಥಳಗಳಲ್ಲಿ ಕಟಿಂಗ್ ಮಾಡಿ ಡಾಂಬರಿನ ಪದರದ ಗುಣಮಟ್ಟ ಹಾಗೂ ಅದರ ಅಳತೆಯನ್ನು ಪರಿಶೀಲಿಸಿದರು.
*ರಸ್ತೆ ವಿಭಜಕಗಳನ್ನು ಎತ್ತರಗೊಳಿಸಿ*
ಕಿಮ್ಸ್ ಆಸ್ಪತ್ರೆ ಎದುರು ಲಾಲ್‌ಬಾಗ್ ಕೋಟೆ ರಸ್ತೆ ಡಾಂಬರೀಕರಣ ಪರಿಶೀಲಿಸುವ ವೇಳೆ ರಸ್ತೆ ವಿಭಜಕಗಳನ್ನು ಗಮನಿಸಿದ ಅವರು ಸಂಚಾರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರಸ್ತೆ ವಿಭಜಕದ ಎತ್ತರವನ್ನು ಅಗತ್ಯವಿರುವ ಮಟ್ಟಕ್ಕೆ ಹೆಚ್ಚಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
*ರಸ್ತೆ ಬದಿಯ ಚರಂಡಿ ದುರಸ್ಥಿಗೆ ಸೂಚನೆ*
ಮಳೆಯ ನೀರು ಚರಂಡಿಗೆ ಹರಿದು ಹೋಗಲು ರಸ್ತೆಯ ಬದಿಯಲ್ಲಿನ ಕಾಲುವೆಗಳು ರಸ್ತೆ ಡಾಂಬರೀಕರಣ ವೇಳೆ ಹಾಳಾಗಿದ್ದು, ಸದರಿ ಕಾಲುವೆಗಳನ್ನು ತಕ್ಷಣ ದುರಸ್ಥಿ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
*ಪಾದಚಾರಿ ಮಾರ್ಗ ಸ್ವಚ್ಛತೆಗೆ ನಿರ್ದೇಶನ*
ಪರಿಶೀಲನೆ ವೇಳೆ ಪಾದಚಾರಿ ಮಾರ್ಗದಲ್ಲಿ ರಸ್ತೆ ನಿರ್ಮಾಣದ ಕಸ ಹಾಗೂ ಅವಶೇಷಗಳನ್ನು ಕಂಡು ತಕ್ಷಣ ತೆರವುಗೊಳಿಸಿ ಸ್ವಚ್ಛತೆ ಕಾಪಾಡುವಂತೆ ಸೂಚಿಸಲಾಯಿತು ಹಾಗೂ ಅಲ್ಲೇ ಹಾಳಾಗಿ ನಿಂತಿದ್ದ ಆಟೋ ಮತ್ತು ಭಗ್ನಾವಶೇಷಗಳನ್ನು ಕಂಡು ಸಾರ್ವಜನಿಕರ ಓಡಾಟಕ್ಕೆ ಅಡ್ಡಿಯಾಗಿರುವುದರಿಂದ ಅವುಗಳನ್ನು ಕೂಡಲೇ ತೆರವುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. 
*ಟಿ.ಮರಿಗೌಡ ರಸ್ತೆಯಲ್ಲಿನ ಚರಂಡಿಗಳ ಹೂಳು ತೆರವುಗೊಳಿಸುವಂತೆ ಸೂಚಿಸಿದರು*
ಟಿ.ಮರಿಗೌಡ ರಸ್ತೆಯಲ್ಲಿನ ಲಾಲ್‌ಬಾಗ್ ಮುಖ್ಯ ದ್ವಾರದಿಂದ ಪಶ್ಚಿಮ ದ್ವಾರದವರೆಗೆ SIP ಅನುದಾನದಡಿಯಲ್ಲಿ ಕೈಗೊಂಡಿರುವ ಸುಮಾರು 650 ಮೀಟರ್ ಉದ್ದದ ರಸ್ತೆ ಡಾಂಬರೀಕರಣವನ್ನು ಪರಿಶೀಲಿಸುವ ಸಂದರ್ಭದಲ್ಲಿ ಪಕ್ಕದಲ್ಲೇ ಇದ್ದ ಚರಂಡಿಯಲ್ಲಿ ಸಂಗ್ರಹವಾಗಿದ್ದ ಹೂಳನ್ನು ಗಮನಿಸಿ ಚರಂಡಿಯ ಹೂಳನ್ನು ತೆಗೆದು ವರದಿಯನ್ನು ಸಲ್ಲಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು ಹಾಗೂ ಅಲ್ಲೇ ರಸ್ತೆ ಬದಿಯಲ್ಲಿದ್ದ ತ್ಯಾಜ್ಯವನ್ನು ಕಂಡು ತಕ್ಷಣ ಅದನ್ನು ತೆರವುಗೊಳಿಸುವಂತೆ ಆದೇಶಿಸಿದರು.
*ವಿಲ್ಸನ್ ಗಾರ್ಡನ್ 8ನೇ ಕ್ರಾಸ್‌ನಲ್ಲಿನ ಕಾಮಗಾರಿ ಪರಿಶೀಲನೆ*
ವಿಲ್ಸನ್ ಗಾರ್ಡನ್ 8ನೇ ಕ್ರಾಸ್‌ನಲ್ಲಿ CMIDP ಅನುದಾನದಡಿಯಲ್ಲಿ ಒಂದು ಬದಿಯಲ್ಲಿ 120 ಮೀಟರ್ ನಂತೆ 2 ಬದಿಯಲ್ಲಿ ಸೇರಿ 240 ಮೀಟರ್ ಉದ್ದದ ಚರಂಡಿಯಲ್ಲಿ ಹೂಳೆತುವ ಕಾಮಗಾರಿಯ ಪರಿಶೀಲನೆ ವೇಳೆ ಚರಂಡಿಯ ಮುಚ್ಚಳವನ್ನು ತೆರೆಯಿಸಿ ಹೂಳು ತೆರವು ಕಾಮಗಾರಿಯನ್ನು ವೀಕ್ಷಿಸಿದ ಅಪರ ಆಯುಕ್ತರು, ಚರಂಡಿಯಲ್ಲಿ ನೀರು ಸುಗಮವಾಗಿ ಹರಿಯಲು ಅಡ್ಡಿಯಾಗಿರುವ ಹೂಳು ಮತ್ತು ತ್ಯಾಜ್ಯಗಳನ್ನು ಸಮರ್ಪಕವಾಗಿ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು ಹಾಗೂ ಮಳೆಗಾಲದಲ್ಲಿ ರಸ್ತೆಯಲ್ಲಿನ ನೀರು ಚರಂಡಿಗೆ ಸುಗಮವಾಗಿ ಹರಿದು ಹೋಗುವಂತೆ ರಸ್ತೆಯಲ್ಲಿ ಅಗತ್ಯ ಅಂತರಗಳಲ್ಲಿ ಶೋಲ್ಡರ್ ಡ್ರೇನ್‌ಗಳನ್ನು (Shoulder Drains) ನಿರ್ಮಿಸಿ, ಕಾಮಗಾರಿಯನ್ನು ಗುಣಮಟ್ಟದೊಂದಿಗೆ ಹಾಗೂ ಪರಿಣಾಮಕಾರಿಯಾಗಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಕೇಂದ್ರ ನಗರ ಪಾಲಿಕೆಯ ಮುಖ್ಯ ಅಭಿಯಂತರರಾದ ಶ್ರೀ ವಿಜಯ್ ಕುಮಾರ್ ಹರಿದಾಸ್, ಅಧೀಕ್ಷಕ ಅಭಿಯಂತರರಾದ ಶ್ರೀ ಚಂದ್ರಶೇಖರ್, ಕಾರ್ಯಪಾಲಕ ಅಭಿಯಂತರರಾದ ಶ್ರೀ ಪ್ರದೀಪ್ ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದರು.