ಬೆಂಗಳೂರು: ಹಾಸನದ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರೀತಿಯಲ್ಲಿ ರಾಜಿಯಾಗುವುದಿಲ್ಲ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ವಿಮಾನ ನಿಲ್ದಾಣ ಯೋಜನೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ಸ್ವಾತಂತ್ರ್ಯೋತ್ಸವದ ಸಂದರ್ಭ ಜಿಲ್ಲೆಯ ಜನತೆಗೆ ನಾನು ಆಶ್ವಾಸನೆ ಕೊಟ್ಟಿದ್ದೇನೆ. ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಅನುವು ಮಾಡಿಕೊಡಬೇಕು ಎಂದು ಅಬಕಾರಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಎಂ. ಶಿವಲಿಂಗೇಗೌಡ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವಿಕಾಸಸೌಧದಲ್ಲಿ ಇಂದು ಹಾಸನ ನಗರದ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಕಾಮಗಾರಿಯ ಪ್ರಗತಿ ಪರಿಶೀಲನೆಯ ಸಭೆಯಲ್ಲಿ ಮಾತನಾಡಿದ ಶಿವಲಿಂಗೇಗೌಡ ಅವರು, ಉಸ್ತುವಾರಿ ಸಚಿವನಾಗಿ ಹಾಸನದ ಅಭಿವೃದ್ಧಿಗೆ ಬದ್ಧನಾಗಿದ್ದೇನೆ. ನನ್ನ ಜನರಿಗೆ ಆದಷ್ಟು ಬೇಗ ವಿಮಾನ ನಿಲ್ದಾಣವನ್ನು ಕಲ್ಪಿಸಬೇಕು, ಹಾಸನದಲ್ಲಿ ವಿಮಾನ ಬಂದಿಳಿಯುವಂತಾಗಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮವು ಭೂಸ್ವಾದೀನ ಪಡೆಸಿಕೊಂಡಿರುವ 517 ಎಕರೆ ಭೂಮಿಯನ್ನು ಮೂಲಸೌಕರ್ಯ ಅಭಿವೃದ್ಧಿ, ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ತಕ್ಷಣ ಹಸ್ತಾಂತರಿಸಬೇಕು. ಯಾವುದೇ ರೀತಿಯ ಭೂವ್ಯಾಜ್ಯವಿದ್ದರೂ ಅದನ್ನು ಜಿಲ್ಲಾಡಳಿತದ ಮೂಲಕ ಪರಿಹರಿಸಿಕೊಡಲಾಗುವುದು. ಹೆಚ್ಚುವರಿ ಭೂಮಿಯ ಅವಶ್ಯಕತೆಯಿದ್ದಲ್ಲಿ ಅದನ್ನು ಪೂರೈಸಲು ಸರ್ಕಾರ ಸಿದ್ಧವಿದೆ. ಕಾಮಗಾರಿಗೆ ಅಡಚಣೆಯುಂಟಾಗುತ್ತಿರುವ ಭೂವ್ಯಾಜ್ಯವಿರುವ ಎರಡು ಗ್ರಾಮಗಳ ಸುಮಾರು 15 ಎಕರೆ ಭೂಮಿಯ ವಿಚಾರವಾಗಿ ಜಿಲ್ಲಾಧಿಕಾರಿಗೆ ಪತ್ರ ಬರೆದು ಇತ್ಯರ್ಥಪಡಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ನೆನೆಗುದಿಗೆ ಬಿದ್ದಿರುವ ವಿದ್ಯುತ್ ಸಂಪರ್ಕ ಕಾಮಗಾರಿಗೆ ಸಂಬಂಧಿಸಿ ಕೆಪಿಟಿಸಿಎಲ್ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಸಕಾಲದಲ್ಲಿ ಭೂಪರಿಹಾರ ವಿತರಿಸಿ, ವಿದ್ಯುತ್ ಸಂಪರ್ಕ್ ಕಲ್ಪಿಸಬೇಕು ಎಂದು ಸೂಚನೆ ನೀಡಿದರು.
ಇದೇ ವೇಳೆ, ವಿಮಾನ ನಿಲ್ದಾಣ ಯೋಜನೆಯಿಂದ ಭೂಮಿ ಕಳೆದುಕೊಂಡ ದ್ಯಾವಲಾಪುರಕ್ಕೆ ಅಲ್ಲಿನ ಗ್ರಾಮಸ್ಥರ ಅಪೇಕ್ಷೆಯಂತೆ ಮುಖ್ಯರಸ್ತೆಗೆ ಸಂಪರ್ಕ ಸಾಧಿಸುವ ಹೊಸ ಮಾರ್ಗವನ್ನು ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಮೂರು ಇಲಾಖೆಗಳ ಮುಖ್ಯ ಅಧಿಕಾರಿಗಳ ಜೊತೆ ಉನ್ನತ ಮಟ್ಟದ ಸಭೆ ನಡೆಸಿ ಸಾಧಕ-ಬಾಧಕಗಳನ್ನು ಪರಿಶೀಲಿಸಿದ ಬಳಿಕ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳುವ ವರೆಗೆ ವಿರಮಿಸದೆ ಎಲ್ಲರೂ ಸಹಕರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.