ಕನಕಪುರ: ಬೆಂಗಳೂರು ಸೀಮೆಯ ಭಾಗವೇ ಆಗಿರುವ ಕನಕಪುರದಲ್ಲಿ ಇಲ್ಲಿನ ವೀರಶೈವ ಲಿಂಗಾಯತ ಪರಂಪರೆಯ ದೇಗುಲ ಮಠವು ಮಾಡಿರುವ ರಚನಾತ್ಮಕ ಕಾರ್ಯಗಳು ಕ್ರಾಂತಿಕಾರಕವಾಗಿವೆ. ಈ ಮಠವು ಮುಂದಿನ ದಿನಗಳಲ್ಲಿ ಈ ಪರಂಪರೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು. ಇದಕ್ಕೆ ತಮ್ಮಿಂದಾಗುವ ನೆರವನ್ನು ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಇತ್ತೀಚೆಗೆ ಶಿವೈಕ್ಯರಾದ ಮಠದ ಶ್ರೀಗಳಾಗಿದ್ದ ಮುಮ್ಮಡಿ ನಿರ್ವಾಣ ಸ್ವಾಮೀಜಿಗಳ ಪುಣ್ಯ ಸ್ಮರಣೆಯ ಪೂರ್ವಭಾವಿ ಕಾರ್ಯಕ್ರಮದಲ್ಲಿ ಅವರು ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಲಿಂಗೈಕ್ಯ ಶ್ರೀಗಳ ಗದ್ದುಗೆಗೆ ನಮನ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಸಚಿವ ಪಾಟೀಲ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಸ್ವಾಮೀಜಿಯವರ ಪುಣ್ಯೋತ್ಸವದ ಪೋಸ್ಟರ್ ಬಿಡುಗಡೆ ಮಾಡಿದರು.
ಗೌರವಾರ್ಪಣೆ ಮಾಡಿ ಮಾತನಾಡಿದ ಪಾಟೀಲ ಅವರು, ಶಿಕ್ಷಣ, ಆಶ್ರಯ, ದಾಸೋಹಗಳ ಸಮಾಜಮುಖಿ ಪರಂಪರೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಸಿದ್ಧಗಂಗಾ ಮಠಕ್ಕೆ ಭವ್ಯವಾದ ಹಿನ್ನೆಲೆ ಇದೆ. ಅಲ್ಲಿದ್ದ ಶ್ರೀ ಶಿವಕುಮಾರ ಸ್ವಾಮೀಜಿಗಳ ದೂರದೃಷ್ಟಿಯಿಂದ ಈ ಪರಿಕಲ್ಪನೆಯು ಮೇಲ್ಪಂಕ್ತಿಯಾಯಿತು ಎಂದು ಸ್ಮರಿಸಿದರು.
ಉತ್ತರ ಕರ್ನಾಟಕದಲ್ಲಿ ಶಿರಸಂಗಿ ಲಿಂಗರಾಜ ಪ್ರಭುಗಳು 1904ರಷ್ಟು ಹಿಂದೆಯೇ ಲಿಂಗಾಯತ ಮಠಗಳ ಮೂಲಕ ಶೈಕ್ಷಣಿಕ ಸಂಸ್ಥೆಗಳ ಆರಂಭಕ್ಕೆ ನಾಂದಿ ಹಾಡಿದರು. ಇದನ್ನು ಅನುಸರಿಸಿ ಕೆಎಲ್ಇ ಸೊಸೈಟಿ, ಬಿಎಲ್ ಡಿಇ ಮುಂತಾದವು ಅಸ್ತಿತ್ವಕ್ಕೆ ಬಂದವು. ಮೈಸೂರು ಭಾಗದಲ್ಲಿ ಇಲ್ಲಿನ ಮಹಾರಾಜರು ಪ್ರಗತಿಗೆ ಮುನ್ನುಡಿ ಬರೆದರು. ಸ್ಥಳೀಯವಾಗಿ ದೇಗುಲ ಮಠವು ಇಂತಹ ಹಾದಿಯಲ್ಲಿ ದಾಪುಗಾಲಿಟ್ಟಿತು ಎಂದು ಅವರು ನುಡಿದಿದ್ದಾರೆ. ದೇಗುಲ ಮಠವು ಲಿಂಗಾಯತ ಸಂಪ್ರದಾಯಕ್ಕೆ ಸೇರಿದ್ದರೂ ಜಾತ್ಯತೀತ ನೆಲೆಯಲ್ಲಿ ತನ್ನ ಚಟುವಟಿಕೆಗಳನ್ನು ನಡೆಸುತ್ತ ಬಂದಿದೆ. ಇದರಿಂದ ಕನಕಪುರದ ಪರಿಸರದಲ್ಲಿ ಇದರ ಬಗ್ಗೆ ಜನರ ವಿಶ್ವಾಸ ಅದಮ್ಯವಾಗಿದೆ. ಈ ನಿಟ್ಟಿನಲ್ಲಿ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿಗಳ ಕೊಡುಗೆ ಮೌಲಿಕವಾಗಿದೆ ಎಂದು ಅವರು ಸ್ಮರಿಸಿದರು.
ರೈಲ್ವೆ ಸಚಿವ ಸೋಮಣ್ಣ ಮಾತನಾಡಿ, ಸ್ವಾಮೀಜಿಯವರ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ಎಲ್ಲರೂ ಸಹಕರಿಸಬೇಕು ಎಂದು ಕೋರಿದರು.
ಕಾರ್ಯಕ್ರಮದಲ್ಲಿ ಮಠದ ಶ್ರೀ ಚನ್ನಬಸವ ಸ್ವಾಮೀಜಿಗಳು, ಬೆಂಗಳೂರಿನ ಮಾಜಿ ಉಪ ಮೇಯರ್ ಪುಟ್ಟರಾಜು ಸಮುದಾಯದ ಮುಖಂಡ ಮಲ್ಲಿಕಾರ್ಜುನ ಮುಂತಾದವರು ಉಪಸ್ಥಿತರಿದ್ದರು.